ರಸ್ತೆ ಅಪಘಾತ ಮತ್ತು ಗೋಲ್ಡನ್ ಅವರ್

ರಸ್ತೆ ಅಪಘಾತ ಮತ್ತು ಗೋಲ್ಡನ್ ಅವರ್

ನಮ್ಮ ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರಸ್ತೆಗಳ ನಿರ್ವಹಣೆ ಚೆನ್ನಾಗಿಲ್ಲದಿರುವುದರ ಜೊತೆಗೆ ಜನರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗೆಗಿನ ಅಸಡ್ಡೆ, ಅಸಹಕಾರ ಮತ್ತು ದಿವ್ಯ ನಿರ್ಲಕ್ಷದಿಂದಾಗಿ ಹೆಚ್ಚಿನ ಅಫಘಾತಗಳು ಮಾರಣಾಂತಿಕವಾಗಿ ಪರಿಣಮಿಸತೊಡಗಿದೆ. ಹೆಲ್ಮೆಟ್‌ಗಳನ್ನು ದ್ವಿಚಕ್ರ ವಾಹನ ಓಡಿಸುವವರು ಕಡ್ಡಾಯವಾಗಿ ಧರಿಸಿದಲ್ಲಿ ಶೇಕಡಾ ೮೦% ರಷ್ಟು ಪ್ರಾಣಾಪಾಯವನ್ನು ಕಡಿಮೆ ಮಾಡಬಹುದು. ಅದೇ ರೀತಿ ಕಾರು ಮತ್ತು ನಾಲ್ಕು ಚಕ್ರ ವಾಹನಗಳನ್ನು ಓಡಿಸುವವರು ಸೀಟು ಬೆಲ್ಟ್  ಧರಿಸಿದಲ್ಲಿ ಸುಮಾರು ೭೫% ರಷ್ಟು ಬಾಯಿ, ಮುಖ ಮತ್ತು ದವಡೆಗಳ ಅಪಘಾತ ಮತ್ತು ತಲೆಯ ಮೇಲಾಗುವ ಮಾರಣಾಂತಿಕ ಅಫಘಾತಗಳನ್ನು ತಡೆಯಬಹುದಾಗಿದೆ. 

ಅಫಘಾತದ ತೀವ್ರತೆಯನ್ನು ತಡೆಯಲು ಮಾಡಬೇಕಾದ ಮತ್ತು ಅನುಸರಿಸಬೇಕಾದ ನಿಯಮಗಳು:  

೧. ರಸ್ತೆ ಸುರಕ್ಷಾ ನಿಯಮಗಳನ್ನು ಚಾಚು ತಪ್ಪದೆ ಅನುಸರಿಸಬೇಕು

೨. ಸೀಟು ಬೆಲ್ಟ್ ಕಡ್ಡಾಯವಾಗಿ ಧರಿಸ ತಕ್ಕದ್ದು. 

೩. ಹೆಲ್ಮೆಟ್ ಕಡ್ಡಾಯವಾಗಿ ಧರಿಲೇಬೇಕು. ಶೋಕಿಗಾಗಿ ವಿವಿಧ ರೀತಿಯ ಹೆಲ್ಮೆಟ್ ಬೇಡ. ವ್ಶೆಜ್ಞಾನಿಕವಾಗಿ ತಲೆಗೆ ರಕ್ಷಣೆ ನೀಡುವ ಶಿರ ಕವಚ (ಹೆಲ್ಮೆಟ್) ಧರಿಸತಕ್ಕದ್ದು.     

೪. ವಾಹನ ಓಡಿಸುವಾಗ ಮೊಬೈಲ್‌ನ್ನು ಬಳಸಲೇ ಬಾರದು.

೫. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ಲೇನ್ ಪದ್ಧತಿಯನ್ನು ಖಡ್ಡಾಯವಾಗಿ ಪಾಲಿಸತಕ್ಕದ್ದು. 

೬. ಅತಿಯಾದ ವೇಗ ಅಫಘಾತಕ್ಕೆ ಕಾರಣ.

೭. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಲೇಬಾರದು 

ಜೀವನ ಎನ್ನುವುದು ಒಂದು ಪಯಣ. ನಿಮ್ಮ ಪ್ರಯಾಣವನ್ನು ಆನಂದಿಸಿ. ಆನಂದ ಎನ್ನುವುದು ನಿಮ್ಮ ಜೀವನ ಪ್ರಯಾಣದ ಅನುಭವವಾಗಿರಬೇಕೇ ಹೊರತು ಗುರಿಯಾಗಿರಬಾರದು. ಆನಂದ ಎನ್ನುವುದೇ ನಿಮ್ಮ ಜೀವನದ ಗುರಿಯಾಗಿದ್ದಲ್ಲಿ, ನೀವು ನಿಮ್ಮ ಜೀವನದ ಪಯಣವನ್ನು ಅನುಭವಿಸಲು ಸಾಧ್ಯವಾಗುವುದು. ಜೀವನದ ಪ್ರತೀ ಕ್ಷಣವನ್ನು ಅನುಭವಿಸಿ ಮತ್ತು ಆನಂದಿಸಿ. ಹಾಗೇ ಮಾಡಿದ್ದಲ್ಲಿ ನೀವು ನಿಮ್ಮವರು ಮತ್ತು ಉಳಿದವರು ಕೂಡಾ ಗುರಿ ತಲುಪಬಹುದು ಮತ್ತು ತಮ್ಮ ಜೀವನದ ಪಯಣವನ್ನು ಅನುಭವಿಸಬಹುದು. ನೀವು ರಸ್ತೆ ಸುರಕ್ಷಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸಿದಲ್ಲಿ ನಿಮ್ಮ ಜೀವನದ ಪಯಣ ಎಲ್ಲಿಂದ ಎಲ್ಲಿಗೆ ತಲುಪಬಹುದು. ಅದರ ಜೊತೆಗೆ ಉಳಿದವರ ಜೀವನದ ಪಯಣದ ದಾರಿ ಮತ್ತು ಗುರಿ ಕೂಡಾ ಬದಲಾಗಬಹುದು. ಈ ಕಾರಣದಿಂದಲೇ ನಾವೆಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸೋಣ ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ. 

ಗೋಲ್ಡನ್ ಅವರ್: ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ವಿಶ್ವದ ೧೯೯ ದೇಶಗಳಲ್ಲಿ ರಸ್ತೆ ಅಪಘಾತ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಸಾವನ್ನಪ್ಪುವ ೧೦ ಜನರಲ್ಲಿ ಕನಿಷ್ಟ ಒಬ್ಬರು ಭಾರತದವರು. ೨೦೨೦ ರಲ್ಲಿ  ಸುಮಾರು ೩,೬೬,೦೦೦ ಸಾವಿರ ರಸ್ತೆ ಅಪಘಾತಗಳು ನಡೆದಿದ್ದು ೧,೩೦,೦೦೦ ಮಂದಿ ಸಾವನ್ನಪ್ಪಿದ್ದಾರೆ ಮತ್ತು ೩,೫೦,೦೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ೨೦೨೨ ರಲ್ಲಿ ರಸ್ತೆ ಅಪಘಾತದ ಸಂಖ್ಯೆ ೪,೦೦,೦೦೦ವನ್ನು ದಾಟಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ರಸ್ತೆ ಅಪಘಾತವಾದಾಗ ಮೊದಲ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ಈ ಮೊದಲ ೬೦ ನಿಮಿಷಗಳಲ್ಲಿ ತಕ್ಷಣವೇ ಚಿಕಿತ್ಸೆ ಮತ್ತು ಪ್ರಥಮ ಚಿಕಿತ್ಸೆ ನೀಡಬೇಕು. ಹಾಗಾದಲ್ಲಿ ಸಾವು ಮತ್ತು ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಪಘಾತವಾದ ಕೂಡಲೇ ಮೆದುಳಿನ ಕಾಂಡ ಮುರಿತ, ಹೃದಯ ಸ್ತಂಭನ, ಮಹಾಪಧಮನಿ ಮತ್ತು ಇತರ ದೊಡ್ಡ ರಕ್ತನಾಳ ಸೀಳುವಿಕೆಯಿಂದ ಸಾವು ಕ್ಷಣರ್ಧದಲ್ಲಿ ಸಂಭವಿಸಬಹುದು. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಇದನ್ನು ಮೊದಲ ಟ್ರ್ರೈಮೋಡಲ್ ಪೀಕ್ ಎನ್ನುತ್ತಾರೆ. ಇನ್ನು ಎರಡನೇ ಟ್ರೈಮೋಡಲ್ ಪೀಕ್ ನಿಮಿಷಗಳಿಂದ ಒಂದು ಗಂಟೆಗಳ ಕಾಲ ಇರುತ್ತದೆ. ಈ ಸಂದರ್ಭದಲ್ಲಿ ಸಾವು ಸಂಭವಿಸಲು ಹಲವಾರು ಕಾರಣಗಳು ಇದೆ. ಮೆದುಳಿನ ಒಳಭಾಗದಲ್ಲಿ ರಕ್ತಸ್ರಾವ (ಸಬ್‌ಡ್ಯುರಲ್ ಹೆಮಟೋಮ) ಹೀಮೋಥೊರಾಕ್ಸ್, ಗುಲ್ಕ ಗ್ರಂಥಿ ಸೀಳುವಿಕೆ, ಮಾರಣಾಂತಿಕ ತೊಡೆಯ ಎಲುಬು ಮುರಿತ, ಆಂತರಿಕ ರಕ್ತಸ್ರಾವ, ಯಕೃತ್ ಸೀಳುವಿಕೆ ಮುಂತಾದ ಕಾರಣಗಳಿಂದ ರಕ್ತಸ್ರಾವ ಜಾಸ್ತಿಯಾಗಿ ರಕ್ತದೊತ್ತಡ ಕುಸಿದು ಸಾವು ಸಂಭವಿಸಬಹುದು.

ಈ ಸಾವುಗಳನ್ನು ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ತಪ್ಪಿಸಬಹುದಾಗಿದೆ. ಈ ಗುಂಪಿನ ರೋಗಿಗಳ ಚಿಕಿತ್ಸೆಯಿಂದ “ಗೋಲ್ಡನ್ ಅವರ್” ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಈ ಗೋಲ್ಡನ್ ಅವರ್‌ನ ಮೊದಲ ೧೦ ನಿಮಿಷಗಳನ್ನು ಪ್ಲಾಟಿನಂ ೧೦ ನಿಮಿಷಗಳು ಎಂದೂ ಕರೆಯುತ್ತಾರೆ. ಅಪಘಾತ ಸಂಭವಿಸಿದ ೧೦ ನಿಮಿಷಗಳ ಒಳಗೆ ರೋಗಿಯನ್ನು ಸ್ಥಿರಗೊಳಿಸಿ ಆಸ್ಪತ್ರೆಗೆ ತರಬೇಕು. ಈ ೧೦ ನಿಮಿಷಗಳಲ್ಲಿ ವೈದ್ಯರು ಅಥವಾ ಸಹಾಯಕರು ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಸಂದರ್ಭಗಳಲ್ಲಿ ರಕ್ತಸ್ರಾವದಿಂದ ರೋಗಿ ಸಾವನ್ನಪ್ಪುತ್ತಾರೆ. ತಕ್ಷಣವೇ ಗುರುತಿಸಿ ಶೀಘ್ರವಾಗಿ ಆಸ್ಪತ್ರೆಗೆ ತಲುಪಿಸಿದಲ್ಲಿ ರೋಗಿಯ ಪ್ರಾಣವನ್ನು ರಕ್ಷಿಸಬಹುದಾಗಿದೆ. ಒಟ್ಟಿನಲ್ಲಿ ಅಪಘಾತವಾದ ಮೊದಲ ಒಂದು ಗಂಟೆ ಅತೀ ನಿರ್ಣಾಯಕ. ಆ ಒಂದು ಗಂಟೆಯ ಒಳಗೆ ರೋಗಿ ಆಸ್ಪತ್ರೆಗೆ ತಲುಪಿ, ರಕ್ತದೊತ್ತಡ ಸ್ಥಿರವಾದಲ್ಲಿ ಪ್ರಾಣ ಉಳಿಯಬಹುದು. ಈ ಕಾರಣದಿಂದ ರಸ್ತೆ ಅಪಘಾತಗಳ ಸಂದರ್ಭದಲ್ಲಿ ವೈದ್ಯರ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಅತೀ ಅಗತ್ಯ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಹಸ್ತ ನಿಡಬೇಕು. ಮೊಬೈಲ್ ಚಿತ್ರೀಕರಣ ಮಾಡುವುದನ್ನು ಬಿಟ್ಟು ರೋಗಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಗಾಯದ ತೀವ್ರತೆಯನ್ನು ಹೆಚ್ಚಾಗದಂತೆ ಎಚ್ಚರವಹಿಸಬೇಕು. ಸುರಕ್ಷಿತವಾಗಿ ವ್ಯವಹರಿಸಬೇಕು. ಅನಗತ್ಯವಾಗಿ ಕುತ್ತಿಗೆ ಚಲನೆ ಮಾಡಿದಲ್ಲಿ ಸ್ಟೈನಲ್ ಕಾರ್ಡ್‌ಗೆ (ಬೆನ್ನುಹುರಿ)? ಘಾಸಿಯಾಗಿ ರೋಗಿ ಜೀವನ ಪರ್ಯಂತ ಹಾಸಿಗೆ ಹಿಡಿಯುವಂತಾಗಬಹುದು.

ನಿಮಗಿದು ಗೊತ್ತೇ?

೧. ಭಾರತ ವಿಶ್ವದ ಅಪಘಾತದ ರಾಜಧಾನಿ

೨. ೧೫ರಿಂದ ೩೦ರ ವರ್ಷದ ಯುವ ಜನತೆಯ ಸಾವಿನ ಮೊದಲ ಮೂಲ ಕಾರಣ ರಸ್ತೆ ಅಪಘಾತ. 

೩. ರಸ್ತೆ ಅಪಘಾತ ಅತೀ ಸಾಮಾನ್ಯ. ಕಾರಣ ‘ಮಧ್ಯಪಾನ’

೪. ಪ್ರತೀ ೪೮ ನಿಮಿಷಕ್ಕೆ ಒಬ್ಬೊಬ್ಬರ ಸಾವಿಗೆ ಕಾರಣ ಮಧ್ಯಪಾನ ಮತ್ತು ರಸ್ತೆ ಅಪಘಾತ 

೫. ಶಿರಕವಚ ಧರಿಸಿದಲ್ಲಿ ಮುಖಾಂಗದ ಅಪಘಾತ ಪ್ರಮಾಣ ಕೇವಲ ೨೫%. ಶಿರಕವಚವಿಲ್ಲದಿದ್ದಲ್ಲಿ ಶೇಕಡಾ ೫೦% ಮಂದಿ ಮುಖಾಂಗದ ಅಪಘಾತಕ್ಕೆ ಕಾರಣವಾಗಬಹುದು.

೬.ಶಿರಕವಚ ತಲೆಗೆ ರಕ್ಷಣೆ ಕೊಡುವ ವಸ್ತುವಾಗಿರಬೇಕು ಹೊರತು ಪ್ಯಾಷನ್ ಆಗಬಾರದು. ತಲೆ ಮುಖ ಮುಚ್ಚುವ ಶಿರಕವಚ ಧರಿಸಿದಲ್ಲಿ ತಲೆಗೆ ಒಂಟಾಗುವ ಗಾಯದ ಪ್ರಾಮಾಣ ಸುಮಾರು ೧೩% ಮಾತ್ರ. ಆದರೆ ಅರ್ಧ ತಲೆ ಮುಚ್ಚುವ ಶಿರ ಕವಚದಿಂದ ತಲೆಗೆ ಗಾಯವಾಗುವ ಪ್ರಮಾಣ ಸುಮಾರು ೨೬%  ಈ ಕಾರಣದಿಂದಲೇ ಪೂರ್ತಿ ತಲೆಮುಚ್ಚುವ ಶಿರ ಕವಚ ಧರಿಸಬೇಕು.  ಅದೇ ರೀತಿ ಪೂರ್ತಿ ಶಿರ ಕವಚ ಧರಿಸಿದಲ್ಲಿ ಮುಖಾಂಗದ ಗಾಯದ ಪ್ರಮಾಣ ೭% ಮತ್ತು ಅರ್ಧ ಶಿರಕವಚ ಧರಿಸಿದಲ್ಲಿ ಮುಂಖಾಗದ ಗಾಯದ ಪ್ರಮಾಣ ೨೭% 

೭. ನಮ್ಮ ದೇಶದ ಅಪಘಾತಗಳಲ್ಲಿ ೫೫% ಅಪಘಾತಗಳಲ್ಲಿ ಚಾಲಕರು ಸೀಟ್ ಬೆಲ್ಟ್ ಧರಿಸುವುದೇ ಇಲ್ಲ. ಸೀಟ್ ಬೆಲ್ಟ್ ಧರಿಸದ ಕಾರಣ ಅಪಘಾತದ ತೀವ್ರತೆ ಅತೀ ಹೆಚ್ಚು. 

೮. ನಮ್ಮ ದೇಶದ ಅಪಘಾತ ಸಂಖ್ಯೆಗಳಲ್ಲಿ ೫೦% ಮಂದಿ ಸೀಟ್‌ಬೆಲ್ಟ್  ಧರಿಸುವುದಿಲ್ಲ ಮತ್ತು ಮಧ್ಯಪಾನ ಮಾಡಿರುತ್ತಾರೆ. 

೯. ಶೇಕಡಾ ೩೫% ಅಪಘಾತಕ್ಕೆ ಕಾರಣ, ವಾಹನ ಚಾಲನೆಯ ಸಮಯದಲ್ಲಿ ಮೊಬೈಲ್ ಬಳಕೆ 

೧೦. ಭಾರತದಲ್ಲಿ ಶೇಕಡಾ ೧೦% ದ್ವಿಚಕ್ರ ವಾಹನ ಚಾಲಕರು ಮಾತ್ರ ಶಿರ ಕವಚ ಧರಿಸುತ್ತಾರೆ. ಮತ್ತು ೩೩% ಚಾಲಕರು ಮಾತ್ರ ಸೀಟ್‌ಬೆಲ್ಟ್ ಬಳಸುತ್ತಾರೆ. 

೧೧. ೪೦-೫೦% ಪ್ರಮಾಣ ಅಫಘಾತಗಳು ರಾತ್ರಿ ಹೊತ್ತು ಸಂಭವಿಸುತ್ತದೆ.

ಕೊನೆಯ ಮಾತು : ಯಾರು ನಮ್ಮನ್ನು ಗಮನಿಸದೇ ಇರುವಾಗ ಅಂದರೆ ನಾವು ಏಕಾಂತದಲ್ಲಿರುವಾಗಲೂ  ಕೂಡಾ ನಮ್ಮ ವರ್ತನೆ ನಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಮತ್ತು ಪ್ರತಿಬಿಂಬಿಸುತ್ತದೆ ಎಂದು ಬಲ್ಲವರು ಹೇಳಿದ್ದಾರೆ. ಹಾಗಾಗಿ ಬೇರೆಯವರು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಯದಲ್ಲಿ ಅಥವಾ ಗ್ರಹಿಕೆಯಲ್ಲಿ ನಾವು ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬಾರದು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಪೋಲಿಸರು ಇರಲಿ, ಇಲ್ಲದಿರಲಿ ನಮ್ಮ ಜೀವನದ ಮತ್ತು ಇತರರ ಜೀವನದ ಮೇಲಿನ ಸುರಕ್ಷತೆಯ ದೃಷ್ಟಿಯಿಂದ ನಾವೆಲ್ಲರೂ ರಸ್ತೆ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೆ ಮಾಡಿದಲ್ಲಿ ಮಾತ್ರ ಅಫಘಾತಗಳ ಸಮಯದಲ್ಲಿ ಆಗುವ ಸಾವು ನೋವು ಮತ್ತು ಗಾಯದ ತೀವ್ರತೆಯನ್ನು ಕಡಿಮೆ ಮಾಡಬಹುದು. ಅದರಲ್ಲಿಯೇ ಭಾರತದಂತಹಾ ಮುಂದುವರಿಯುತ್ತಿರುವ ರಾಷ್ಟ್ರದ ಒಳಿತು ಮತ್ತು ಶಾಂತಿ ಅಡಗಿದೆ. ಮೊದಲೇ ಅನರಕ್ಷತೆ, ಬಡತನ, ಅಜ್ಞಾನ, ಮೂಢನಂಬಿಕೆ ಮತ್ತು ಮೂಲಭೂತ ಸೌಕರ್ಯಗಳ ಅಲಭ್ಯತೆಗಳಿಂದ ನಮ್ಮ ದೇಶದ ಪ್ರಗತಿ ಕುಂಠಿತವಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾವಂತರಾದ ನಾವು ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದಲ್ಲಿ, ಮತ್ತಷ್ಟು ಸಾವು ನೋವು ಮತ್ತು ಹಾನಿ ಉಂಟಾಗಿ ದೇಶದ ಪ್ರಗತಿಗೆ ಮಾರಕವಾಗ ಬಹುದು. ಈ ನಿಟ್ಟಿನಲ್ಲಿ ನಾವೆಲ್ಲಾ ನಮ್ಮೆಲ್ಲರ ಜವಾಬ್ದಾರಿ ಅರಿತು ನಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದಲ್ಲಿ ನಮ್ಮ ದೇಶದ ಪ್ರಗತಿಯನ್ನು ತಡೆಯುವ ಶಕ್ತಿ ಇನ್ನೊಂದಿರಲಿಕ್ಕಿಲ್ಲ. ಅದರಲ್ಲಿಯೇ ನಮ್ಮ ಒಳಿತು ಅಡಗಿದೆ. 

ಡಾ|| ಮುರಲೀ ಮೋಹನ್ ಚೂಂತಾರು, ಮಂಗಳೂರು

(ಸಂಗ್ರಹ)-ಸಂತೋಷ್ ಕುಮಾರ್ ಸುರತ್ಕಲ್