ರಾಗಂ - ಬರಹ ಬೆರಗು
‘ನಾವು ನಮ್ಮ ಸಾಧಕರು' ಮಾಲಿಕೆಯ ೧೭ನೇ ಕೃತಿಯಾಗಿ ಹೊರಬಂದಿದೆ ಅನುಸೂಯ ಯತೀಶ್ ಅವರ ‘ರಾಗಂ-ಬರಹ ಬೆರಗು'. ಈ ಕೃತಿಯಲ್ಲಿ ಅನುಸೂಯ ಯತೀಶ್ ಅವರು ‘ರಾಗಂ’ ಅಂದರೆ ಡಾ. ರಾಜಶೇಖರ ಮಠಪತಿ ಎನ್ನುವ ಪ್ರಬುದ್ಧ ಸಂವೇದನಾಶೀಲ ಲೇಖಕರ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಕಥೆ, ಕಾವ್ಯ, ಕಾದಂಬರಿ, ಅಂಕಣ, ಅನುವಾದ, ನಾಟಕ, ಸಂಶೋಧನೆ ಮತ್ತು ವಿಮರ್ಶೆಗಳೆಂದರೆ ಒಂದು ರೀತಿಯ ಬೆರಗು ಎಂದು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ ಲೇಖಕಿಯಾದ ಅನುಸೂಯ ಯತೀಶ್. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಉಪನ್ಯಾಸಕಿ ಹಾಗೂ ಸಾಹಿತಿಯಾದ ಶೋಭಾ ಪ್ರಭು. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಇಲ್ಲಿವೆ...
“‘ರಾಗಂ ಬರಹ ಬೆರಗು” ಶ್ರೀಮತಿ ಅನುಸೂಯ ಯತೀಶ್ ಅವರ ಲೇಖನಿಯಿಂದ ಹೊರಬಂದಿರುವ ಚಾರಿತ್ರಿಕ ಮಹತ್ವದ ಕೃತಿ. ವೃತ್ತಿಯಿಂದ ಶಿಕ್ಷಕಿಯಾಗಿರುವ ಅನುಸೂಯ ಅವರು ಪ್ರವೃತ್ತಿಯಿಂದ ಕವಯತ್ರಿ, ವಿಮರ್ಶಕಿ ಹಾಗೂ ಬಹುಮುಖ್ಯವಾಗಿ ಬಹುಶ್ರುತತೆಯುಳ್ಳವರು. ನಿರಂತರ ಓದು ಎಂಬುದೇ ಜೀವಾಳವಾಗಿರುವ ಅಧ್ಯಾಪನ ವೃತ್ತಿಯಲ್ಲಿರುವ ಇವರ ಓದಿನ ವ್ಯಾಪ್ತಿ ವಿಸ್ತಾರವಾದುದು. ಓದನ್ನು ಪ್ರೀತಿಸುವ ಸಹೃದಯತೆ ಎಲ್ಲಿರುವುದೋ ಅಲ್ಲಿಯೇ ಅರ್ಥಪೂರ್ಣ ಬರಹಗಳೂ ಮೈದಳೆಯುತ್ತವೆ. ಅನುಸೂಯ ಅವರ ತೀವ್ರವಾದ ಓದಿನ ದಾಹ ಅವರ ಬರವಣಿಗೆಯನ್ನು ಮುನ್ನಡೆಸಿದೆ. ರಾಗಂ ಅವರ ಸಮಗ್ರ ಸಾಹಿತ್ಯವನ್ನು ಅವಲೋಕನ ಮಾಡುವುದೆಂದರೆ ಹತ್ತಿಪ್ಪತ್ತು ಕೃತಿಗಳ ಅಧ್ಯಯನವಲ್ಲ; ಇಂದಿಗೆ ಬರೋಬ್ಬರಿ ನೂರು ಕೃತಿಗಳೊಂದಿಗೆ ಏರ್ಪಡಿಸಿಕೊಳ್ಳಬೇಕಾದ ಸಂವಾದ. ಯಾರೇ ಬರಹಗಾರರಾಗಿರಲಿ ಅವರಿಗೆ ಇದು ನಿಜಕ್ಕೂ ಸವಾಲಿನ ಕೆಲಸ. ಇಂಥ ಸವಾಲನ್ನು ಅನುಸೂಯ ಅವರು ಧೈರ್ಯವಾಗಿ ಸ್ವೀಕರಿಸಿದ್ದಾರೆ ಮತ್ತು ಸಮರ್ಥವಾಗಿ ನಿರ್ವಹಿಸಿದ್ದಾರೆ.
ರಾಗಂ ಅವರು ನನಗೆ ಪರಿಚಯವಾದುದು ಸಹೋದ್ಯೋಗಿ ಎಂಬುದಕ್ಕಿಂತ ಹೆಚ್ಚಾಗಿ ʼಅನಾದʼದ ಬರಹಗಾರರಾಗಿ. ನಾನು ಕಂಡ ಮತ್ತು ಕಾಣುತ್ತಿರುವ ರಾಗಂ ಸರಳ, ಸಜ್ಜನ, ಸೂಕ್ಮಸಂವೇದನಾಶೀಲ ಭಾವಜೀವಿ; ತೀಕ್ಷ್ಣ ವೈಚಾರಿಕತೆಯ ಬುದ್ಧಿಜೀವಿ. ವ್ಯಕ್ತಿಯಾಗಿ ರಾಗಂ ಮಿತಭಾಷಿ; ಆದರೆ ಅವರ ಎಲ್ಲ ಮಾತುಗಳನ್ನೂ ಅವರ ಬರಹಗಳು ಆಡುತ್ತವೆ. ರಾಗಂ ಕೃತಿಗಳೊಂದಿಗಿನ ಒಡನಾಟವೆಂದರೆ ಅದೊಂದು ಯಾನ. ನಮ್ಮಿಷ್ಟಕ್ಕೆ ಎಲ್ಲಿಂದಾದರೂ ಆರಂಭಿಸಿ, ಎಲ್ಲಾದರೂ ನಿಂತು ಸಾವಧಾನದ ನಡಿಗೆ ಮಾಡಬಹುದು. ಇಲ್ಲಿ ಓದುಗನನ್ನು ಒಪ್ಪಿಸಬೇಕೆಂಬ ಗೀಳಿಲ್ಲ, ಒಪ್ಪಲೇಬೇಕೆಂಬ ಒತ್ತಾಯವಿಲ್ಲ. ನಿಜದ ಬೀಜವೊಂದನ್ನು ಮೆಲ್ಲನೆ ಬಿತ್ತಿ ವಿರಮಿಸಿಬಿಡುತ್ತವೆ. ಅಂಥ ಅನುಭವಕ್ಕೆ ನಾನು ಮೊದಲು ಒಳಗಾದುದು ʼಅನಾದʼವನ್ನು ಓದುವುದರ ಮೂಲಕ. ಅಲ್ಲಿಂದಾಚೆಗೆ ಅವರ ಅನೇಕ ಕೃತಿಗಳನ್ನು ಓದಿದ್ದೇನೆ ಅಥವಾ ಅವು ನನ್ನನ್ನು ಬಿಡದೆ ಓದಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಶ್ರೀಮತಿ ಅನುಸೂಯ ಯತೀಶ ಅವರು ಕನ್ನಡ ಅತ್ಯಂತ ಗಂಭೀರ ಲೇಖಕರೊಬ್ಬರ ಬದುಕು - ಬರಹದ ಸುತ್ತಲೂ ಅಷ್ಟೇ ಗಂಭೀರವಾದ ವಿಚಾರಗಳನ್ನು ಹರವಿದ್ದಾರೆ.
ವೃತ್ತಿಯಿಂದ ಇಂಗ್ಲಿಷ್ ಅಧ್ಯಾಪಕರಾಗಿರುವ ಮತ್ತು ಚಿಕ್ಕಂದಿನಿಂದಲೂ ತಮ್ಮ ಓದಿನ ವ್ಯಾಪ್ತಿಯನ್ನು ಕನ್ನಡ ಸಾರಸ್ವತ ಲೋಕಕ್ಕೂ ವಿಸ್ತರಿಸಿಕೊಂಡಿರುವ ರಾಗಂ ಅವರದು ಸೀಮಾತೀತ ಓದು. ಓದು ಮಾತ್ರವಲ್ಲ, ಬರಹವೂ ಸೀಮಾತೀತ. ಪ್ರಕಾರದಲ್ಲಾಗಲೀ, ವಿಚಾರದಲ್ಲಾಗಲೀ ಗಡಿ-ಗೆರೆ ಎಳೆದುಕೊಳ್ಳದ ಅನಿಕೇತನತೆ ಇಲ್ಲಿನ ವಿಶಿಷ್ಟ ಗುಣ. ಇಲ್ಲಿ ಬದುಕಿಗೂ ಗೆರೆಯಿಲ್ಲ. ಹಾಗಾಗಿಯೇ ಸಾಮಾನ್ಯ ಮನುಷ್ಯನಲ್ಲಿರುವ ಸಂಕೀರ್ಣತೆಗಳು, ವಿರೋಧಾಭಾಸಗಳು ಅವನ ಶ್ರೀಮಂತ ಅನುಭವಗ್ರಹಿಕೆಗೆ ಒದಗಿ ಬರುತ್ತದೆ. ರಾಗಂ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಸಾಹಿತ್ಯಕ್ಷೇತ್ರದಲ್ಲಿ ಕೊಂಡಿಯನ್ನು ಬೆಸೆದ ಲೇಖಕ. ನಾನು ಕಂಡಂತೆ ಉತ್ತರ ದಕ್ಷಿಣವೆನ್ನದೆ ಎಲ್ಲ ಕಡೆಯ ಲೇಖಕರನ್ನೂ ಪ್ರೋತ್ಸಾಹಿಸಿದ್ದಾರೆ. ತಾವಿದ್ದೆಡೆಯಲ್ಲೆಲ್ಲ ಸ್ನೇಹವಲಯವನ್ನು ನಿರ್ಮಿಸಿಕೊಂಡುಬಿಡುತ್ತಾರೆ. ಲೇಖಕಿ ಅನಸೂಯಾ ಅವರು ರಾಗಂ ಅವರ ಸ್ನೇಹ ಪರತೆಯನ್ನು, ವಿಚಾರ – ವಿಸ್ತಾರವನ್ನು ಪ್ರಸ್ತುತ ಕೃತಿಯಲ್ಲಿ ಸಮರ್ಥವಾಗಿ ದಾಖಲಿಸಿದ್ದಾರೆ.
“ವಿಶ್ರಾಂತಿ ಎಂದರೆ ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ, ಒಂದು ಬರಹದಿಂದ ಹೊಸದೊಂದು ಬರಹಕ್ಕೆ ಹೊರಳುವುದು” ಎಂಬ ನಂಬಿಕೆಯ ರಾಗಂ ಅವರ ಲೇಖನಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ದಣಿವರಿಯದೆ ದುಡಿದಿದೆ, ದುಡಿಯುತ್ತಿದೆ. ಪರಿವರ್ತನೆ ಜಗದನಿಯಮ. ಸಾಹಿತ್ಯ ಜಗತ್ತೂ ಇದಕ್ಕೆ ಹೊರತಾದುದಲ್ಲ. ವಸ್ತು, ವಿಚಾರ, ತಂತ್ರ ಎಲ್ಲವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬಂದಿವೆ. ಈ ಸತ್ಯದ ಅರಿವು ಲೇಖಕರನ್ನು ಯಾವುದೋ ಒಂದು ಪ್ರಕಾರಕ್ಕೆ, ಒಂದು ತಂತ್ರಕ್ಕೆ ಅಂಟಿಕೊಳ್ಳದಂಥ ಎಚ್ಚರದ ಸ್ಥಿತಿಗೆ ತಲುಪಿಸುತ್ತದೆ. ರಾಗಂ ಅವರ ಸಾಹಿತ್ಯದ ವೈವಿಧ್ಯತೆಯನ್ನು ಗಮನಿಸಿದಾಗ ಬರಹಗಾರ ತನ್ನ ಮನಃಸ್ಥಿತಿಯ ಎಚ್ಚರವನ್ನು ಕಾಯ್ದುಕೊಳ್ಳುವುದು ಎಷ್ಟು ಅಗತ್ಯ ಎಂಬುದು ಸ್ಪಷ್ಟವಾಗುತ್ತದೆ.
ವ್ಯಕ್ತಿತ್ವದಿಂದ ನಿರಸಗೊಂಡವನು ಕವಿಯಾಗಬಹುದು, ಆದರೆ ಎದೆಯ ದನಿಯಾಗಲಾರ. ಕವಿಗೆ ತನ್ನೊಳಗಿನ ಶಕ್ತಭಾವಗಳ ಅಭಿವ್ಯಕ್ತಿ ಎಷ್ಟು ಮುಖ್ಯವೋ ಸಾಮಾಜಿಕ ಬದ್ಧತೆಯೂ ಅಷ್ಟೇ ಮುಖ್ಯವಾಗಬೇಕು. ಕಾವ್ಯ ಕವಿಯ ದನಿಯೂ ಹೌದು, ಕವಿ ಕೊಡುವ ಭರವಸೆಯೂ ಹೌದು. “ಸಾಹಿತಿಯೊಬ್ಬ ಸಮಾಜದ ಓರೆಕೋರೆಗಳನ್ನು ಬರೆಯುವುದೆಂದರೆ ತನ್ನವರನ್ನೇ ಹೀಗಳೆಯುವುದಲ್ಲ, ಲೇವಡಿ ಮಾಡುವುದೂ ಅಲ್ಲ, ಬದಲಾಗಿ ತನ್ನ ಸುತ್ತಮುತ್ತಲಿನ ಎಲ್ಲವನ್ನು ಪ್ರೀತಿಯಿಂದ ಬಾಚಿಕೊಳ್ಳುತ್ತಾ ಪ್ರಗತಿಯಿಂದ ಪರಿವರ್ತನೆಯತ್ತ ಮುಂದುವರೆಯುವುದು” ಎನ್ನುವ ರಾಗಂ ಅವರ ಕಾವ್ಯ ವ್ಯಕ್ತಿಗತ ಅರಿವಿನಿಂದ ಆರಂಭಗೊಂಡು ಸಮಾಜಮುಖಿತ್ವದ ಕಡೆಗೆ ಹೊರಳುತ್ತದೆ. ರಾಗಂ ಅವರ ಸಾಹಿತ್ಯ ವ್ಯಕ್ತಿತ್ವ ನಿರಸನ ಮತ್ತು ಶ್ರೇಷ್ಠತೆಯ ವ್ಯಸನ ಎರಡನ್ನೂ ನಿರಾಕರಿಸುತ್ತದೆ. ಜಗತ್ತಿನ ಬಹುತೇಕ ಬರಹಗಾರರು ಈ ಎರಡರಲ್ಲಿ ಯಾವುದಾದರೂ ಒಂದರ ಕಡೆಗೇ ಹೆಚ್ಚು ಒಲಿದಿರುತ್ತಾರೆ. ಬರಹ ಪಾರದರ್ಶಕವಾಗಿರಬೇಕು, ನಿಜ. ಆದರೆ ಆ ಧಾವಂತದಲ್ಲಿ ಬದುಕು ಬೆತ್ತಲಾಗಬಾರದಲ್ಲವೇ? ರಾಗಂ ಅವರು ತಮ್ಮ ಬರಹದುದ್ದಕ್ಕೂ ಈ ಎಚ್ಚರವನ್ನು ಕಾಯ್ದುಕೊಂಡಿದ್ದಾರೆ ಎನ್ನುವುದನ್ನು ಗಮನಿಸಿರುವ ಲೇಖಕಿ ಅನಸೂಯಾ ಯತೀಶ ಅವರ ಸೂಕ್ಷ್ಮ ಓದಿಗೂ ಕೂಡ ಈ ಕೃತಿ ಸಾಕ್ಷಿಯಾಗಿದೆ.
ಬದುಕಿನ ಒಳ-ಹೊರಗುಗಳನ್ನು ಅರಿಯುವ ನಿಟ್ಟಿನಲ್ಲಿ ರಾಗಂ ಅವರ ಲೇಖನಿ ಎರಡು ಭಿನ್ನ ಹಾದಿಗಳನ್ನು ಹಿಡಿದಿವೆ. ಆಗಾಗ ಎರಡೂ ಹಾದಿಗಳೂ ಸಂಧಿಸುತ್ತಾ, ಮತ್ತೆ ದೂರ ಸರಿಯುತ್ತಾ, ಅರಿವಿನ ದಾರಿಯನ್ನು ಸವೆಸಿವೆ. ಒಳಗನ್ನು ಅರಿಯಲು ಆಧ್ಯಾತ್ಮಕ್ಕೆ ಸರಿಯುವ ಕವಿಮನಸ್ಸು ಕವಿತೆಯನ್ನು ಸೃಷ್ಟಿಸಿದೆ; ಹೊರಗನ್ನು ಅರಿಯಲು ಸಮಾಜದತ್ತ ನೋಡುವ ಕಥೆಗಾರನ ಮನಸ್ಸು ಕಥಾಲೋಕವನ್ನು ಸೃಜಿಸಿದೆ. ಅವರ ಮೊದಲ ಕಥಾ ಸಂಕಲನ ʼಅಳಲುʼ ಬಹುತೇಕ ಸಮಾಜವಾದಿ ಆಶಯಗಳನ್ನು ಪ್ರತಿನಿಧಿಸುವಂಥದ್ದು. ಈ ಆಶಯಗಳನ್ನು ಅನಸೂಯರವರ ಕೃತಿ ಸ್ಪಷ್ಟವಾಗಿ ಗುರುತಿಸಿದೆ.
ಪುರುಷನೊಬ್ಬ ಹೆಣ್ಣನ್ನು ಕುರಿತು ಬರೆಯುವಾಗ ಸಾಮಾನ್ಯವಾಗಿ ಸುಧಾರಕ ಮನಸ್ಥಿತಿಯನ್ನು ಆವಾಹಿಸಿಕೊಂಡು ಬರೆಯುವುದು ವಾಡಿಕೆಯಾಗಿರುತ್ತದೆ. ಇಲಿ ಹೆಣ್ಣನ್ನು ಕುರಿತು ಅನುಕಂಪವೇ ಪ್ರಧಾನ. ಹೆಚ್ಚೆಂದರೆ ಅವಳ ದುಃಸ್ಥಿತಿಯನ್ನು ಕುರಿತು ಆಕ್ರೋಶ ವ್ಯಕ್ತಪಡಿಸಬಹುದು. ಬಹುತೇಕ ಪುರುಷ ನಿರ್ಮಿತ ಸ್ತಿತಿ ಕೇಂದ್ರಿತ ಕೃತಿಗಳು ಈ ಜಾಡಿನಲ್ಲೇ ಇರುತ್ತವೆ. ಅಲ್ಲೊಂದು ಇಲ್ಲೊಂದರಂತೆ ಇದಕ್ಕೆ ಅಪವಾದಗಳಿಲ್ಲದಿಲ್ಲ. ಹೆಣ್ಣಿನ ಮನಸ್ಸನ್ನು ತನ್ನೊಳಗೆ ಸಂಕಲ್ಪಿಸಿಕೊಂಡು, ಅದನ್ನು ಪೋಷಿಸಿ, ಅದೇ ತಾನಾಗಿ, ಅನುಸಂಧಾನ ಮಾಡಿ ಬರೆಯುವುದು ಗಂಡೊಬ್ಬನಿಗೆ ಸುಲಭದ ಮಾತಲ್ಲ. ಅದಕ್ಕೊಂದು ಅಂತರ್ ದೃಷ್ಟಿ ಬೇಕು, ಅಂತಹ ನೋಟ ರಾಗಂ ಅವರಿಗೆ ದಕ್ಕಿದೆ. ಇದಕ್ಕೆ ನಿದರ್ಶನವಾಗಿ ಅವರ ʼಹೆಣ್ಣು ಹೇಳುವ ಅರ್ಧಸತ್ಯʼ ಸಂಕಲನ ನಿಂತಿದೆ.
ಭಾಷಾಂತರಕಾರರಾಗಿ ಜಾಗತಿಕ ಸಾಹಿತ್ಯದ ಸಂವೇದನೆಗಳನ್ನು ಕನ್ನಡ ಭಾಷಾ ಭೂಮಿಕೆಯಲ್ಲಿ ಹಿಡಿದಿಟ್ಟಿರುವ ರಾಗಂ ಜಗತ್ತಿನ ಶ್ರೇಷ್ಠ ಭಾಷಣಗಳ ಸತ್ವವನ್ನು ಕನ್ನಡಿಗರ ಪ್ರಜ್ಞೆಗೆ ಮುಟ್ಟಿಸಿದ್ದಾರೆ. ಸಂಪಾದನೆ, ಅಂಕಣ ಬರಹಗಳು, ವಿಮರ್ಶೆ-ವಿಚಾರ ಸಾಹಿತ್ಯ, ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ದಕ್ಕಿಸಿಕೊಂಡು ಅದರ ಸಾರವನ್ನು ಓದುಗರಿಗೆ ಹಂಚಿದ್ದಾರೆ. ಬರಹಗಾರನೊಬ್ಬ ಧನ್ಯತೆ ಗಳಿಸುವುದು ಇಲ್ಲೇ ಅಲ್ಲವೇ?
ಬರಹವೆಂಬುದೇ ಒಂದು ವಿಸ್ಮಯದ ಕ್ರಿಯೆ. ಅದು ಯಾವುದೇ ಪ್ರಕಾರವಾಗಿರಲೀ, ಯಾವುದೇ ತಂತ್ರದಲ್ಲಿರಲೀ ಪ್ರತಿಯೊಂದೂ ಹೊಸ ಹುಟ್ಟು ಪಡೆದ ರೇಶಿಮೆಯ ಹುಳು. ರೆಕ್ಕೆಯ ಬಣ್ಣ ಯಾವುದಾದರೇನು? ಚಿಟ್ಟೆ ಎಂಬುದೇ ಒಂದು ಬೆರಗು. ಈ ಬೆರಗು ರಾಗಂ ಬರಹಗಳಲ್ಲಿ ಬೆರೆತು ಹೋಗಿದೆ. ಪ್ರಸ್ತುತ ನಮ್ಮ ಮುಂದಿರುವ ಅನುಸೂಯ ಯತೀಶ ಅವರ “ರಾಗಂ ಬರಹ ಬೆರಗು” ಕೃತಿ ರಾಗಂ ಅವರ ಬದುಕು-ಬರಹಗಳ ಸಮಗ್ರ ಚಿತ್ರಣವನ್ನು ಓದುಗರಿಗೆ ನೀಡುತ್ತಿದೆ. ಲೇಖಕಿ ಕೃತಿಯ ಆರಂಭಕ್ಕೆ ಚಡಚಣದ ಗರಿಮೆ, ರಾಗಂ ಅವರ ಬಾಲ್ಯ, ತಂದೆ-ತಾಯಿ, ಶಾಲೆ, ವಿದ್ಯಾಭ್ಯಾಸ, ಸಿಂಪಿ ಲಿಂಗಣ್ಣನವರೊಂದಿಗಿನ ಆತ್ಮೀಯ ಸಂಬಂಧ, ಸಂಪರ್ಕ ಮೊದಲಾದ ವ್ಯಕ್ತಿ ವಿವರಗಳನ್ನು ನೀಡುತ್ತಾರೆ. ಹೀಗೆ ಆರಂಭವಾಗುವ ಕೃತಿ ಅವರ ವೃತ್ತಿ ಬದುಕು ಮತ್ತು ಬರಹದ ಎಲ್ಲ ಮಜಲುಗಳನ್ನೂ ಪರಿಚಯಿಸುತ್ತಾ ಸಾಗುತ್ತದೆ.
ನಂತರ ಕ್ರಮವಾಗಿ ಕಾವ್ಯ, ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಭಾಷಾಂತರ, ಅಂಕಣ ಬರಹ, ಪತ್ರ ಸಾಹಿತ್ಯ, ವಿಚಾರ ಸಾಹಿತ್ಯ, ಸಂಪಾದನೆ, ಸಂಪಾದನಾ ಸಂಚಿಕೆಗಳು, ಇಂಗ್ಲಿಷ್ ಸಾಹಿತ್ಯ, ಸಂಶೋಧನೆ, ರಾಗಂ ಕುರಿತ ಸಾಹಿತ್ಯ, ಸಿನಿಮಾ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಎಂಬ ಶೀರ್ಷಿಕೆಗಳಡಿ ಸುಮಾರು ನೂರು ಕೃತಿಗಳ ಒಂದು ಸಂಕ್ಷಿಪ್ತ ಅವಲೋಕನವನ್ನು ಕೃತಿ ಒಳಗೊಂಡಿದೆ. ಇದು ನಿಜಕ್ಕೂ ಬೆರಗುಗೊಳಿಸುವ ಸಾಧನೆಯೆ. ಈ ಕಾರಣ ಲೇಖಕಿ ಅನಸೂಯಾ ಯತೀಶ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.”