ರಾಜಕೀಯ ಪಕ್ಷಗಳ ಪ್ರಣಾಳಿಕೆ...ಗೋವಿಂದ ಗೋವಿಂದ…!
ಆಶ್ವಾಸನೆಗಳ ಮಹಾಪೂರ. ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಸ್ವರ್ಗವಾಗುವ ಎಲ್ಲಾ ಸಾಧ್ಯತೆ. ಬಹುತೇಕ ಮೂಲಭೂತ ಅವಶ್ಯಕತೆಗಳು ಉಚಿತ, ಭ್ರಷ್ಟಾಚಾರ ರಹಿತ ಆಡಳಿತ, ರೈತರು ಕಾರ್ಮಿಕರು ಮಹಿಳೆಯರಿಗೆ ಎಲ್ಲಾ ಸೌಲಭ್ಯಗಳು, ನಿರುದ್ಯೋಗ ಸಮಸ್ಯೆ ಸಂಪೂರ್ಣ ನಿವಾರಣೆ, ಕರ್ನಾಟಕದಲ್ಲಿ ಮತದಾರರೇ ದೇವರುಗಳು, ಭಾರತದಲ್ಲಿ ಕರ್ನಾಟಕ ನಂಬರ್ ಒನ್…
ಕರ್ನಾಟಕದ ಜನ ಬಹಳ ಬುದ್ದಿವಂತರು - ಒಳ್ಳೆಯವರು, ಕನ್ನಡ ಭಾಷೆ ವಿಶ್ವ ಶ್ರೇಷ್ಠ, ಕನ್ನಡ ಇತಿಹಾಸ ಅದ್ಬುತ, ಕನ್ನಡ ಸಂಸ್ಕೃತಿ ವಿಶ್ವ ಮಾನ್ಯ, ಕನ್ನಡ ನೆಲದಲ್ಲಿ ಬಸವಣ್ಣ, ಕುವೆಂಪು, ಕೆಂಪೇಗೌಡ, ಕನಕ, ಪುರಂದರ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಮದಕರಿ ಮುಂತಾದ ಜಗತ್ ಪ್ರಸಿದ್ದ ನಾಯಕರು ಜನಿಸಿದ್ದಾರೆ.
ಬೆಳಗಾವಿಯ ಕುಂದ, ಧಾರವಾಡದ ಪೇಡ, ಬಳ್ಳಾರಿ ಖಾರ ಮಂಡಕ್ಕಿ, ಮೈಸೂರು ಪಾಕು, ತುಮಕೂರಿನ ತಟ್ಟೆ ಇಡ್ಲಿ, ದಾವಣಗೆರೆಯ ಬೆಣ್ಣೆ ದೋಸೆ, ಕೋಲಾರದ ಬಂಗಾರ ಪೇಟೆ ಚಾಟ್ಸ್, ಕಲಬುರಗಿಯ ಖಡಕ್ ರೋಟಿ, ಕರಾವಳಿ ಭಾಗದ ಕಾಣೆ ಮೀನಿನ ಸಾರು, ಮಲೆನಾಡಿನ ಹಲಸಿನ ಕಡುಬು, ಶಿವಮೊಗ್ಗದ ಮಾವಿನ ಶೀಕರಣೆ, ಉತ್ತರ ಕನ್ನಡದ ಕೆಸುವಿನ ಪಲ್ಯ, ಹಾಸನದ ಬೈನೇ ಮರದ ಕಳ್ಳು, ಚಾಮರಾಜನಗರದ ಆದಿವಾಸಿಗಳ ಬೊಂಬು ಬಿರಿಯಾನಿ, ಕೊಡಗಿನ ಅಕ್ಕಿ ರೊಟ್ಟಿ ಹಂದಿ ಫ್ರೈ, ಬಿಜಾಪುರದ ಸಿಹಿ ಮಿಶ್ರಿತ ಉಪ್ಪಿನಕಾಯಿ, ಬೀದರಿನ ಗಡಿಗೆ ಮೊಸರು, ಯಾದಗಿರಿಯ ಎಣ್ಣಿ ಬದನೆಯಕಾಯಿ ಪಲ್ಯ, ಮಂಡ್ಯದ ರಾಗಿ ಮುದ್ದೆ ಬನ್ನೂರು ಕುರಿಯ ತಲೆ ಮಾಂಸ, ಚಿತ್ರದುರ್ಗದ ಖಾಲಿ ದೋಸೆ, ಉಡುಪಿಯ ಹೋಳಿಗೆ ತುಪ್ಪ, ದಕ್ಷಿಣ ಕನ್ನಡದ ಪತ್ರೊಡೆ, ವಿಜಯನಗರದ ಮೆಣಸಿನಕಾಯಿ ಕಾಯಿ ಬಜ್ಜಿ, ಚಿಕ್ಕಮಗಳೂರಿನ ಘಮಘಮಿಸುವ ಕಾಫಿ, ಚಿಕ್ಕಬಳ್ಳಾಪುರದ ಕಡಳೆ ಬೀಜ, ಬಾಗಲಕೋಟೆಯ ಮೊಳಕೆ ಕಾಳು, ಹಾವೇರಿಯ ಗೋದಿ ಹುಗ್ಗಿ, ರಾಯಚೂರಿನ ಪಪ್ಪು ತುಪ್ಪ ಬೆರೆತ ಅನ್ನ, ಕೊಪ್ಪಳದ ಕಬ್ಬಿನ ರಸ, ಗದಗಿನ ಪಾಯಸ,
ರಾಮನಗರದ ಮುದ್ದೆ ಸೊಪ್ಪಿನ ಸಾರು, ಬೆಂಗಳೂರಿನ ಗ್ರಾಮಾಂತರದ ತರಕಾರಿಗಳು, ಬೆಂಗಳೂರು ನಗರದ ಪುಡ್ ಬಜಾರ್ ಗಳು, ಹೀಗೆ ಕರ್ನಾಟಕದ ಎಲ್ಲವೂ ಶ್ರೇಷ್ಠ ಶ್ರೇಷ್ಠ ಶ್ರೇಷ್ಠ..........ಹೊಗಳಿಕೆಯೋ ಹೊಗಳಿಕೆ... ದೊಡ್ಡ ದೊಡ್ಡ ನಾಯಕರು ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ, ನಿಮಗೆ ಕೈ ಮುಗಿಯುತ್ತಿದ್ದಾರೆ. ಕೆಲವರು ನಿಮ್ಮ ಯೋಗಕ್ಷೇಮಕ್ಕಾಗಿ ಖರ್ಚಿನ ಹಣವನ್ನು ಕೊಡುತ್ತಿದ್ದಾರೆ. ದೇಶದ ನಾನಾ ಭಾಗಗಳಿಂದ ನಾಯಕರು ಈ ನೆಲದಲ್ಲಿ ಎಲ್ಲವನ್ನೂ ವರ್ಣಿಸುತ್ತಾ ನೀವೇ ಇಂದ್ರ ಚಂದ್ರ ಎನ್ನುತ್ತಾ ರಾಜಕೀಯ ತಂತ್ರಗಾರಿಕೆ ಮಾಡುತ್ತಿದ್ದಾರೆ. ಮತ ಯಾಚಿಸುತ್ತಿದ್ದಾರೆ. ಇನ್ನೇನು ಬೇಕು ಕರ್ನಾಟಕಕ್ಕೆ, ಸಾಕು ಬಿಡಿ ಇನ್ನು. ಇಡೀ ವಿಶ್ವದಲ್ಲಿ ಮುಂದಿನ ಐದು ವರ್ಷಗಳಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಕರ್ನಾಟಕದಲ್ಲಿ ಮಾತ್ರ.
ಕರ್ನಾಟಕದ ಮಾಧ್ಯಮಗಳು ಈ ದಿವ್ಯ ಕ್ಷಣಗಳನ್ನು ಬಹುಪರಾಕ್ ಹೇಳುವ ಮೂಲಕ ವಿಶ್ವಕ್ಕೇ ಪ್ರಸಾರ ಮಾಡುತ್ತಿವೆ. ಕೆಲವು ಸಿನಿಮಾ ನಟರು ಈ ಸುಂದರ ಬದಲಾವಣೆಗಳನ್ನು ಜನರಿಗೆ ವರ್ಣಿಸುತ್ತಿದ್ದಾರೆ. ಧಾರ್ಮಿಕ ನಾಯಕರು ಇನ್ನು ತಮಗೆ ಕೆಲಸವಿಲ್ಲವೆಂದು ದೇವರ ಸನ್ನಿಧಿಯಲ್ಲಿ ಮೌನ ಧ್ಯಾನಕ್ಕೆ ಸರಿದಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಂಬಳದಲ್ಲಿ ಮಾತ್ರ ಜೀವನ ನಡೆಸುವುದು ಹೇಗೆ ಎಂದು ಚಿಂತಾಕ್ರಾಂತರಾಗಿ ಯೋಜನೆ ರೂಪಿಸುತ್ತಿದ್ದಾರೆ, ನ್ಯಾಯಾಧೀಶರು ಕೇಸುಗಳು ಕಡಿಮೆಯಾಗಿ ಬಿಪಿ ಶುಗರ್ ನಿಯಂತ್ರಣಕ್ಕೆ ಬರುತ್ತದೆ ಎಂದು ಖುಷಿಯಾಗಿದ್ದಾರೆ.
ಸಾಹಿತಿಗಳು ಮುಂದಿನ ಆಸ್ಥಾನದ ಒಡ್ಡೋಲಗದಲ್ಲಿ ತಮಗೆ ಯಾವ ಸ್ಥಾನ ಪ್ರಶಸ್ತಿ ಸಿಗಬಹುದು ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ, ಕಳ್ಳರು ದರೋಡೆಕೋರರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಸಾಮಾನ್ಯ ಜನರು ಹಿತಾನುಭವಲ್ಲಿ ಇದ್ದಾರೆ. ಇದೆಲ್ಲಾ ಸಾಧ್ಯವಾಗಿರುವುದು ರಾಜಕಾರಣಿಗಳ ಭಾಷಣಗಳು ಮತ್ತು ಅವರು ಬಿಡುಗಡೆ ಮಾಡಿದ ಪ್ರಣಾಳಿಕೆಗಳ ಪರಿಣಾಮ.
ರಾಜಕೀಯ ನಾಯಕರುಗಳ ಚುನಾವಣಾ ಪ್ರಚಾರದಲ್ಲಿ ಸೇರುತ್ತಿರುವ ಕರ್ನಾಟಕದ ಮತದಾರರು ಆ....ಓ....ಹೋ...ಸಿಳ್ಳೆ......ಚಪ್ಪಾಳೆ....ಹಾರಾಟ.... ಕೂಗಾಟ....ಕೇಕೆ...... ಸಂಭ್ರಮ....ಸಡಗರ....ನೋಡುತ್ತಿದ್ದರೆ ಜನರ ರಾಜಕೀಯ ಪ್ರಜ್ಞಾವಂತಿಕೆ ಕಂಡು ದಾಸರ ಕೀರ್ತನೆಯೊಂದು ನೆನಪಾಗುತ್ತಿದೆ. ಸಾರ್ಥಕವಾಯಿತು. ಈ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು..ಇದನ್ನು ನೋಡಿ ಜೀವನ ಪಾವನವಾಯಿತು.
ಸ್ವಾಭಿಮಾನವಿಲ್ಲ, ಸ್ವಂತಿಕೆಯಿಲ್ಲ, ಅಸ್ಮಿತೆಯಿಲ್ಲ, ನಾಚಿಕೆಯಿಲ್ಲ, ಮಾನವೂ ಇಲ್ಲ, ಮರ್ಯಾದೆಯೂ ಇಲ್ಲ. ಸುಮ್ಮನೆ ಸಮೂಹ ಸನ್ನಿಗೆ ಒಳಗಾಗಿ ಗಾಳಿ ಬಂದ ಕಡೆ ತೂರಿಕೊಳ್ಳುವುದು. ಕೇವಲ ಸಾಮಾನ್ಯ ಮತದಾರರು ಮಾತ್ರವಲ್ಲ, ಪ್ರೊಫೆಸರ್ ಗಳು, ಡಾಕ್ಟರ್ಗಳು, ಇಂಜಿನಿಯರ್ ಗಳು, ವಿಜ್ಞಾನಿಗಳು, ಮೇಧಾವಿಗಳು, ಶ್ರೀಮಂತರು, ಉದ್ಯಮಿಗಳು, ವ್ಯಾಪಾರಿಗಳು, ಪತ್ರಕರ್ತರು, ಸಾಹಿತಿಗಳು ಮುಂತಾದ ಎಲ್ಲರದೂ ಅದೇ ಕಥೆ. ಸೂಕ್ಷ್ಮತೆಯ ಅರಿವಿಲ್ಲ. ಈ ಕ್ಷಣದ ಲಾಭ ಮಾತ್ರ ಗಣನೆಗೆ ತೆಗೆದುಕೊಳ್ಳುವುದು. ಜನಪ್ರಿಯತೆಯ ಹಿಂದೆ ಹೋಗುವುದು. ಕೊನೆಗೆ ಗೋವಿಂದ.... ಗೋವಿಂದ.. ಜನರು ಶೋಷಣೆಗೂ ಅರ್ಹರೇ....!
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ