ರಾಜತಾಂತ್ರಿಕ ಗೆಲುವು

ರಾಜತಾಂತ್ರಿಕ ಗೆಲುವು

ಎರಡು ತಿಂಗಳ ಹಿಂದಷ್ಟೆ ಕ್ವಿಂಗ್‌ ವೋದಲ್ಲಿ ನಡೆದ ಶಾಂಫ್ಟ್ ಸಹಕಾರ ಸಂಘಟನೆ(ಎಸ್‌ಸಿಓ)ಯ ರಕ್ಷಣಾ ಸಚಿವರ ಮಟ್ಟದ ಸಭೆಯು ಪಹಲ್ಗಾಮ್ ನರಮೇಧವನ್ನು ಖಂಡಿಸಲು ನಿರಾಕರಿಸಿತ್ತು. ಪಾಕಿಸ್ತಾನವನ್ನು ಮೆಚ್ಚಿಸುವ ಸಲುವಾಗಿ ಚೀನಾವು ಪಹಲ್ಗಾಮ್ ಉಲ್ಲೇಖವಿಲ್ಲದೆ ನಿರ್ಣಯ ರೂಪಿಸಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿರ್ಣಯಕ್ಕೆ ಸಹಿ ಹಾಕಲು ಒಪ್ಪದೆ, ಭಾರತವು ತನ್ನ ಹಿತಾಸಕ್ತಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ದೃಢ ನಿರ್ಧಾರವನ್ನು ಸಾರಿದ್ದರು. ಇದೀಗ ತಿಯಾಂಜಿನ್‌ನಲ್ಲಿ ನಡೆದ ಶಾಂಫೈ ಸಹಕಾರ ಸಂಘಟನೆಯ ವಿಶ್ವನಾಯಕರ ಶೃಂಗ ಸಮ್ಮೇಳನವು ಪಹಲ್ಗಾಮ್ ನರಮೇಧವನ್ನು ಖಂಡಿಸುವ ನಿರ್ಣಯವನ್ನು ಕೈಗೊಂಡಿದೆಯಲ್ಲದೆ, ಪಹಲ್ಗಾಮ್ ನಲ್ಲಿ ಮೃತರಾದವರ ಕುಟುಂಬಗಳಿಗೆ ಗಾಢ ಸಂತಾಪವನ್ನು ವ್ಯಕ್ತಪಡಿಸಿದೆ. ಇಂತಹ ಭಯೋತ್ಪಾದಕ ಕೃತ್ಯಗಳನ್ನು ಎಸಗುವವರನ್ನು, ಅವರಿಗೆ ಪ್ರೋತ್ಸಾಹ ನೀಡುವವರನ್ನು ಮತ್ತು ಅವರಿಗೆ ನೆರವು ನೀಡುವವರನ್ನು ಶಿಕ್ಷಿಸಬೇಕು. ಎಂದೂ ನಿರ್ಣಯವು ಹೇಳಿದೆ. ಇದು ಭಾರತದ ಕಠಿಣ ನಿಲುವಿಗೆ ಸಂದ ರಾಜತಾಂತ್ರಿಕ ಗೆಲುವೆನ್ನಬೇಕು. ಏಕೆಂದರೆ ಪಹಲ್ಗಾಮ್ ನರಮೇಧಕ್ಕೆ ಕುಮ್ಮಕ್ಕು ನೀಡಿದ ಪಾಕಿಸ್ತಾನ ಕೂಡಾ ಎಸ್ ಸಿ ಒ ನಿರ್ಣಯದ ಪರವಾಗಿ ಸಹಿ ಹಾಕುವಂತಹ ಅನಿವಾರ್ಯತೆಗೆ ಸಿಲುಕಿದೆ.

ಭಯೋತ್ಪಾದನೆ ಮತ್ತು ಶಾಂತಿ ಎಂದಿಗೂ ಜತೆಯಾಗಿ ಸಾಗದು ಎಂಬುದು ಭಾರತದ ದೃಢ ನಿಲುವಾಗಿದೆ. ಜತೆಗೇ ಯಾವುದೋ ಸನ್ನಿವೇಶದಲ್ಲಿ ಮುಲಾಜಿ ಗೆ ಒಳಗಾಗಿ ತನ್ನ ಹಿತಾಸಕ್ತಿ ರಕ್ಷಿಸದ ನಿರ್ಣಯದಲ್ಲಿ ಪಾಲುದಾರನಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದೆ. ಹಿಂದೆಲ್ಲ ಭಾರತವು ತನ್ನ ನಿಲುವಿಗೆ ವಿರುದ್ಧವಾದ ನಿರ್ಣಯದಲ್ಲಿ ತಾನೂ ಒಬ್ಬ ಪಾಲುದಾರನಾದುದಿತ್ತು. ಈ ಬಾರಿಯ ಎಸ್‌ಸಿಓ ಶೃಂಗ ಸಮ್ಮೇಳನವು ಅತ್ಯಂತ ಮಹತ್ವದ ಕಾಲ ಘಟ್ಟದಲ್ಲಿ ನಡೆದಿದೆ ಹಾಗೂ ಜಗತ್ತಿಗೆ ಪ್ರಮುಖ ಸಂದೇಶವನ್ನೂ ರವಾನಿಸಿದೆ.

ಜಾಗತಿಕ ವ್ಯವಸ್ಥೆಯು ಬದಲಾಗುತ್ತಿರುವುದನ್ನು ಇದು ಸಾಂಕೇತಿಸಿದೆ. ಪಾಶ್ಚಿಮಾತ್ಯ ಜಗತ್ತಷ್ಟೇ ಜಾಗತಿಕ ಸ್ಥಿತಿಗತಿಯನ್ನು ನಿರ್ಧರಿಸಬಲ್ಲುದು ಎಂಬ ಮಿಥೈ ಯನ್ನು ಇದು ಬಯಲುಗೊಳಿಸಿದೆ. ಪೌರ್ವಾತ್ಯ ದೇಶಗಳೂ ಜಾಗತಿಕ ವ್ಯವಸ್ಥೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಸನ್ನಿವೇಶವಿದು ಎಂಬುದು ಈಗ ಸಾಬೀತಾಗಿದೆ. ಭಾರತದ ಪ್ರಧಾನಿ ಮೋದಿಯವರು ರಶ್ಯಾ ಮತ್ತು ಚೀನಾ ಅಧ್ಯಕ್ಷರ ಜತೆ ನಡೆಸಿದ ಮಾತುಕತೆಗಳು ಕೂಡಾ ಮುಂದಿನ ದಿನಗಳಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಮುನ್ಸೂಚನೆ ನೀಡಿವೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೨-೦೯-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ