ರಾಜ್ಯ ಪೌರ ಕಾರ್ಮಿಕರ ದಿನ ಸೆಪ್ಟೆಂಬರ್ 23...
ಆತ್ಮೀಯರು - ಜೀವಪರ ಕಾಳಜಿಯ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ( ತಹಸೀಲ್ದಾರ್ ) ನಿನ್ನೆ ಕರೆ ಮಾಡಿ ಇಂದು ರಾಜ್ಯ ಪೌರ ಕಾರ್ಮಿಕರ ದಿನ. ನಿಮ್ಮಿಂದ ಅವರ ಬಗ್ಗೆ ಒಂದು ಲೇಖನ ನಿರೀಕ್ಷಿಸಿದ್ದೆ ಎಂದರು. ನನಗೂ ಸಹ ಅದರ ಅರಿವಿರಲಿಲ್ಲ. ಅದಕ್ಕಾಗಿ ಕ್ಷಮೆ ಯಾಚಿಸುತ್ತಾ....
ಏಕೆಂದರೆ ಪೌರ ಕಾರ್ಮಿಕರ ಇನ್ನೊಂದು ಹೆಸರೇ ಆರೋಗ್ಯ ರಕ್ಷಕರು. ರೋಗ ಬಂದ ನಂತರ ನಮ್ಮ ಪಾಲಿನ ರಕ್ಷಕರು ವೈದ್ಯರು. ಆದರೆ ರೋಗ ಬರದಂತೆ ತಡೆಯುವ ಎಲ್ಲಾ ಪ್ರಯತ್ನ ಮಾಡುವವರು ಈ ಪೌರ ಕಾರ್ಮಿಕರು. ಪ್ರೇಮಿಗಳ ದಿನವೂ ಸೇರಿ ಅನೇಕ ದಿನಗಳನ್ನು ನಾವು ಭರ್ಜರಿಯಾಗಿ ಮತ್ತು ಕೆಲವೊಮ್ಮೆ ಅಭಿಮಾನ ಪೂರ್ವಕವಾಗಿ ಆಚರಿಸುತ್ತೇವೆ. ಆದರೆ ಈ ಪೌರ ಕಾರ್ಮಿಕರ ದಿನ ಸಾಮಾನ್ಯರು ಬಿಡಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು ಮುಂತಾದ ಮುಖ್ಯವಾಹಿನಿಯ ಸುದ್ದಿಗಳ ಸೃಷ್ಟಿಕರ್ತರೇ ಬಹುತೇಕ ಮರೆತದ್ದು ನಮ್ಮ ಮನಸ್ಸುಗಳ ಮಾನವೀಯ ಮೌಲ್ಯಗಳನ್ನೇ ಪ್ರಶ್ನಿಸುವಂತೆ ಮಾಡಿದೆ.
ಪೌರ ಕಾರ್ಮಿಕ ವೃತ್ತಿಯ ಮುಖ್ಯ ಉದ್ದೇಶವೇ ಜನರಿಗೆ ಬೇಡವಾದ ಜನರಿಂದ ತಿರಸ್ಕರಿಸಲಾದ ಅದನ್ನು ಎಲ್ಲಿಯೂ ಸಂಗ್ರಹಿಸಲಾರದ ಅತ್ಯಂತ ಕೊಳಕ ಅಸಹ್ಯ ದುರ್ವಾಸನೆಯ ವಸ್ತುಗಳನ್ನು ತಾವು ಸಂಗ್ರಹಿಸಿ ವಿಲೇವಾರಿ ಮಾಡುವುದು. ನೆನಪಿರಲಿ, ಇದು ಶ್ರೀಮಂತ ಅಥವಾ ಗೌರವಾನ್ವಿತ ಅಥವಾ ಆಸಕ್ತಿದಾಯಕ ಅಥವಾ ಸಾಧನೆಗೆ ಅವಕಾಶವಿರುವ ವೃತ್ತಿಯಲ್ಲ. ಬಹುಶಃ ಬದುಕಲು ಪರ್ಯಾಯ ಮಾರ್ಗವಿಲ್ಲದ ಅತಿ ಅನಿವಾರ್ಯ ಹೊಟ್ಟೆ ಪಾಡಿನ ಕೆಲಸ.
ಕೆಲವೊಮ್ಮೆ ಆ ದುರ್ನಾತ ನೆನಪಾದಲ್ಲಿ ಊಟ ಮಾಡುವುದು ಕಷ್ಟ. ಅದಕ್ಕಾಗಿಯೇ ಈ ವೃತ್ತಿಯಲ್ಲಿ ಇರುವವರು ಹೆಣ್ಣು ಗಂಡು ಭೇದವಿಲ್ಲದೆ ಸಾಕಷ್ಟು ಜನ ಸಂಪೂರ್ಣ ಮದ್ಯಪಾನದ ದಾಸರಾಗಿರುತ್ತಾರೆ. ಬಹುಶಃ ಆ ಅಸಹ್ಯ ಮತ್ತು ನೋವನ್ನು ಮರೆಯಲು ಅವರೇ ಕಂಡುಕೊಂಡಿರುವ ಒಂದು ಮಾರ್ಗ ಇರಬಹುದು. ಅದೇ ಕಾರಣದಿಂದ ಅವರು ಬಹುಬೇಗ ರೋಗಗಳಿಗೆ ತುತ್ತಾಗಿ ಅಕಾಲ ಮೃತ್ಯುವಿಗೆ ಒಳಗಾಗುತ್ತಾರೆ.
ಕೋವಿಡ್ ಸಮಯದಲ್ಲಿ ಸಹ ಇವರು ನಿರಂತರವಾಗಿ ತಮ್ಮ ಕೆಲಸ ಮಾಡಿದ್ದಾರೆ ಮತ್ತು ಸಾಕಷ್ಟು ಜನ ಜೀವ ತೆತ್ತಿದ್ದಾರೆ. ಮಾಧ್ಯಮಗಳಿಗೆ ದಿನದ 24 ಗಂಟೆಯಲ್ಲಿ ಕೆಲವು ನಿಮಿಷಗಳು ಸಹ ಇವರನ್ನು ನೆನಪಿಸಿಕೊಂಡು ಕೃತಜ್ಞತೆ ಹೇಳಲು ಸಮಯವಿರಲಿಲ್ಲ. ನಾನು ಗಮನಿಸಿದಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಬಗ್ಗೆ ಪ್ರಸ್ತಾಪ ಆಗಲೇ ಇಲ್ಲ. ಸ್ಥಳೀಯವಾಗಿ ಕೆಲವು ಅಧಿಕಾರಿಗಳು ಒಂದು ಕಾರ್ಯಕ್ರಮ ಮಾಡಿರಬಹುದು.
ಎಲ್ಲಾ ಕೆಲಸಗಳು ಪವಿತ್ರವೇ ಎಂಬುದು ಆತ್ಮ ವಂಚನೆಯ ಮಾತಾಗಬಹುದು. ಏಕೆಂದರೆ ಪೌರ ಕಾರ್ಮಿಕ ವೃತ್ತಿಯು ಕಡು ಬಡವರ ಅನಿವಾರ್ಯ ಆಯ್ಕೆಯೇ ಹೊರತು ಅದು ಇಷ್ಟ ಪಟ್ಟು ಮಾಡುವ ಕೆಲಸವಲ್ಲ. ಆದರೆ ಕೆಲಸಕ್ಕೆ ಸೇರಿದ ನಂತರ ಪರಿಶ್ರಮ ಪಡಲೇಬೇಕು. ಹಣಕ್ಕಾಗಿ ಮತ್ತು ಅದನ್ನು ನಿರ್ವಹಿಸುವ ಮೇಲ್ವಿಚಾರಕರ ಒತ್ತಡದಿಂದಾಗಿ. ನಮ್ಮ ಮನೋಭಾವ ಸಹ ಈ ವಿಷಯದಲ್ಲಿ ಸ್ವಲ್ಪ ವಿಚಿತ್ರವಾಗಿಯೇ ಇದೆ. ಕಸ ಗುಡಿಸುವವರು ಇದ್ದಾರೆ ಎಂಬ ಕಾರಣದಿಂದಾಗಿಯೇ ಹೆಚ್ಚು ಕಸವನ್ನು ಎಲ್ಲೆಂದರಲ್ಲಿ ಬೇಜವಾಬ್ದಾರಿಯಿಂದ ಬಿಸಾಡುತ್ತೇವೆ. ಕಾರಣ ಅವರಿಗೆ ಸ್ವಚ್ಛ ಗೊಳಿಸಲು ಸಂಬಳ ಕೊಡಲಾಗುತ್ತದೆ ಎಂದು.
ಇದು ಎಷ್ಟು ತಪ್ಪು ಗೊತ್ತಾ. ಸ್ವಲ್ಪ ಊಹಿಸಿಕೊಳ್ಳಿ. ನಾವು ಅಥವಾ ನಮ್ಮ ಹತ್ತಿರದವರು ಅಥವಾ ನಮ್ಮ ಪ್ರೀತಿ ಪಾತ್ರರು ಬಡತನದ ಕಾರಣಕ್ಕಾಗಿ ಇನ್ನೊಬ್ಬರ ಮಲ ಮೂತ್ರಗಳನ್ನು ಮತ್ತು ಅತ್ಯಂತ ಕೊಳೆತ ವಸ್ತುಗಳನ್ನು ಶುಚಿ ಮಾಡುತ್ತಾರೆ ಎಂದರೆ ನಮಗೆ ಆಗಬಹುದಾದ ನೋವು ಮತ್ತು ಅವಮಾನ. ಸುಲಭವಾಗಿ ಹೇಳಬಹುದು ಅವರಿಗೆ ಎಲ್ಲಾ ರೀತಿಯ ಆಧುನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು. ಆದರೆ ಅದು ಬಹುತೇಕ ಕಾಗದದಲ್ಲಿ ಮಾತ್ರ. ವಾಸ್ತವ ಪರಿಸ್ಥಿತಿ ಬೇರೆಯದೇ ಆಗಿರುತ್ತದೆ. ಸುರಕ್ಷತೆ ಒದಗಿಸಿದರು ಆ ಕೆಲಸ ಅತ್ಯಂತ ಮಾನಸಿಕ ಹಿಂಸಾತ್ಮಕ ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಇರಲಿ ಈಗ ಇತರರನ್ನು ದೂಷಿಸುವುದು ಒಂದು ಕಡೆಯಾದರೆ ನಮ್ಮ ಸ್ವತಃ ಜವಾಬ್ದಾರಿ ಏನು ಎಂಬುದನ್ನು ಯೋಚಿಸಿ ಸ್ವಲ್ಪ ಮಟ್ಟಿಗೆ ಕಾರ್ಯರೂಪಕ್ಕೆ ತರೋಣ.
ಮೊಟ್ಟಮೊದಲನೆಯದಾಗಿ, ಬೇರೆ ಎಲ್ಲಾ ವೃತ್ತಿ ನಿರತ ವ್ಯಕ್ತಿಗಳಂತೆ ಅಂದರೆ ಶಿಕ್ಷಕರು, ವೈದ್ಯರು, ಪೋಲೀಸರು, ಶಾಸಕರು, ಸಿನಿಮಾ ನಟರು, ಸ್ವಾಮೀಜಿಗಳು, ಸಾಹಿತಿಗಳು, ಸಮಾಜ ಸೇವಕರು, ಸೈನಿಕರು ಮುಂತಾದ ಎಲ್ಲರಂತೆ ಇವರಿಗೂ ಗೌರವ ನೀಡಿ ಬಹುವಚನದಲ್ಲಿ ಬನ್ನಿ ಹೋಗಿ ಎಂದು ಮಾತನಾಡಿಸೋಣ. ಇದು ಯಾವುದೇ ಶ್ರಮವಿಲ್ಲದ ಅತ್ಯಂತ ಸರಳ ಮಾನವೀಯ ಪ್ರತಿಕ್ರಿಯೆ.
ಎರಡನೆಯದಾಗಿ, ಅವರ ಮೇಲಿನ ಒತ್ತಡ ಕಡಿಮೆ ಮಾಡಬೇಕೆಂದರೆ ನಾವುಗಳು ಎಷ್ಟು ಸಾಧ್ಯವೋ ಅಷ್ಟು ಕಸ ಉತ್ಪಾದನೆ ಕಡಿಮೆ ಮಾಡುವುದು ಮತ್ತು ಅದನ್ನು ಕ್ರಮಬದ್ಧ ಗೊಳಿಸಲು ನಮ್ಮ ನಿಯಂತ್ರಣದ ಸಂಬಂಧಪಟ್ಟವರಲ್ಲಿ ಮನವಿ ಮಾಡೋಣ ಮತ್ತು ಜಾಗೃತ ಗೊಳಿಸೋಣ. ಕನಿಷ್ಠ ಇಷ್ಟಾದರೂ ನಾವು ಪ್ರಯತ್ನಿಸೋಣ.
ಮೂರನೆಯದಾಗಿ, ಅವರಿಗೆ ಸ್ವಲ್ಪ ಹಣದ ರೂಪದ ಟಿಪ್ಸ್ ಕೊಡುವುದೇ ಒಂದು ಸಾಧನೆ ಎಂಬ ಅಹಂಕಾರ ಬಿಟ್ಟು ಅದು ನಮ್ಮ ಗೌರವಪೂರ್ವಕ ಕಾಣಿಕೆ. ಇವರು ಅದಕ್ಕಿಂತ ಹೆಚ್ಚು ಅರ್ಹರು ಎಂಬ ವಿನಮ್ರತೆ ಇರಲಿ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಇದ್ದಲ್ಲಿ ಆತ್ಮಸಾಕ್ಷಿಯಾಗಿ ಸ್ವಲ್ಪ ಸಹಾಯ ಅಥವಾ ಮಾರ್ಗದರ್ಶನ ಮಾಡೋಣ. ಇದನ್ನು ಕೇವಲ ಓದಿ ನಿರ್ಲಕ್ಷಿಸದೆ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಆರಂಭಿಸಿದರೆ ಸಾಮಾಜಿಕ ಬದಲಾವಣೆ ಹೆಚ್ಚು ನಾಗರಿಕವಾಗುತ್ತಾ ಸಾಗುತ್ತದೆ. ಸಣ್ಣ ಸಣ್ಣ ಬದಲಾವಣೆಗಳೇ ಮುಂದೆ ನಮ್ಮನ್ನು ಹೆಚ್ಚು ಆರೋಗ್ಯ ಪೂರ್ಣವಾಗಿ ಇರುವಂತೆ ಮಾಡುತ್ತದೆ.
ಕೆಲವೇ ದಿನಗಳ ಹಿಂದೆ ರಾಜ್ಯ ಸರ್ಕಾರ ದಿನಗೂಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಆದೇಶ ಹೊರಡಿಸಿದೆ ಎಂಬ ಮಾಹಿತಿ ಇದೆ. ಅದನ್ನು ಹೃದಯ ಪೂರ್ವಕವಾಗಿ ಅಭಿನಂದಿಸುತ್ತಾ....ಖಂಡಿತ ಈ ಆದೇಶ ಅವರ ಬದುಕುಗಳಲ್ಲಿ ಒಂದಷ್ಟು ಉತ್ತಮ ಬದಲಾವಣೆಗೆ ಕಾರಣವಾಗಬಹುದು. ಹಾಗೆಯೇ ಮುಂದಿನ ವರ್ಷ ನೆನಪು ಮಾಡಿಕೊಂಡು ಸಾರ್ವಜನಿಕರು ಪೌರ ಕಾರ್ಮಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರಯತ್ನಿಸೋಣ. ಒಳ್ಳೆಯದನ್ನು ಮಾಡುತ್ತಾ ಒಳ್ಳೆಯವರಾಗೋಣ… ದುಡ್ಡಿಗಿಂತ ಮಾನವೀಯತೆ ಮುಖ್ಯವಾಗಲಿ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ