ರಾಜ ಜಾನ್ ಮತ್ತು ಅಬ್ಬೊಟ್


ರಾಜ ಜಾನ್ ಇಂಗ್ಲೆಂಡಿನ ಕ್ಯಾಂಟರ್-ಬರಿ ನಗರಕ್ಕೆ ತನ್ನ ಮಂತ್ರಿಮಾಗಧರೊಂದಿಗೆ ಬಂದ. ಅಲ್ಲಿ ಅವರು ಅಬ್ಬೊಟ್ (ಧಾರ್ಮಿಕ ಗುರು) ಅವರ ಬಂಗಲೆಯಲ್ಲಿ ವಾಸ್ತವ್ಯವಿದ್ದರು. ಅವರನ್ನು ಅಬ್ಬೊಟ್ ಅತ್ಯಂತ ಗೌರವದಿಂದ ಸತ್ಕರಿಸಿದರು.
ಕ್ಯಾಂಟರ್-ಬರಿಯ ಅಬ್ಬೊಟ್ ಅವರ ಸಂಪತ್ತನ್ನು ಕಂಡು ರಾಜ ಜಾನ್ನ ಅಸೂಯೆ ಕ್ಷಣಕ್ಷಣಕ್ಕೂ ಹೆಚ್ಚಿತು. ಕೊನೆಗೆ ತಡೆಯಲಾಗದೆ, “ನೀವು ನನಗಿಂತ ಹೆಚ್ಚು ಶ್ರೀಮಂತರು ಎಂದು ಯೋಚಿಸುತ್ತಿದ್ದೇನೆ” ಎಂದ ರಾಜ ಜಾನ್. ರಾಜನ ಮುಖದಲ್ಲಿ ಹೊಟ್ಟೆಕಿಚ್ಚು ಉರಿಯುತ್ತಿದ್ದುದನ್ನು ಗುರುತಿಸಿದ ಅಬ್ಬೊಟ್ ಹೇಳಿದರು, “ಮಹಾರಾಜಾ, ಇಲ್ಲವೇ ಇಲ್ಲ. ನಾನೊಬ್ಬ ಬಡ ಪ್ರಜೆ. ಒಬ್ಬ ಪ್ರಜೆ ಮಹಾರಾಜನಿಗಿಂತ ಶ್ರೀಮಂತನಾಗುವುದು ಸರಿಯಲ್ಲ.”
“ಖಂಡಿತವಾಗಿ ಸರಿಯಲ್ಲ. ನೀವು ಬುದ್ಧಿವಂತ ಎಂಬುದು ಬಹುಜನರ ಅಭಿಪ್ರಾಯ. ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಮಾತ್ರ ನಿಮ್ಮ ಸಂಪತ್ತು ಮತ್ತು ವಿಸ್ತಾರವಾದ ಜಮೀನು ಉಳಿಸಿಕೊಳ್ಳಬಹುದು" ಎಂದ ರಾಜ ಜಾನ್. “ಮಹಾರಾಜಾ, ಆ ಮೂರು ಪ್ರಶ್ನೆಗಳನ್ನು ಕೇಳಿ” ಎಂದರು ಅಬ್ಬೊಟ್.
“ಮೊದಲನೆಯ ಪ್ರಶ್ನೆ: ನನಗೆ ಹಣದಲ್ಲಿ ಎಷ್ಟು ಬೆಲೆ ಕಟ್ಟಬಹುದು? ಎರಡನೆಯ ಪ್ರಶ್ನೆ: ಎಷ್ಟು ಬೇಗನೇ ನಾನು ಈ ಭೂಮಿಗೆ ಒಂದು ಸುತ್ತು ಹಾಕಬಹುದು? ಮೂರನೆಯ ಪ್ರಶ್ನೆ: ನಾನೀಗ ಏನು ಯೋಚನೆ ಮಾಡುತ್ತಿದ್ದೇನೆ? ಈ ಮೂರು ಪ್ರಶ್ನೆಗಓಗೆ ಮೂರು ದಿನಗಳೊಳಗೆ ಉತ್ತರ ಕೊಡದಿದ್ದರೆ ನಿಮ್ಮ ತಲೆದಂಡ ಕೊಡಬೇಕಾಗುತ್ತದೆ” ಎಂದ ರಾಜ ಜಾನ್.
ಅನಂತರ ರಾಜ ಜಾನ್ ಅಲ್ಲಿಂದ ಹೊರಟು ಹೋದ. ರಾಜ ಕೇಳಿದ ಮೂರು ಪ್ರಶ್ನೆಗಳಿಂದಾಗಿ ಅಬ್ಬೊಟ್ ಚಿಂತೆಯಲ್ಲಿ ಮುಳುಗಿದರು. ಗ್ರಂಥಾಲಯಕ್ಕೆ ಹೋಗಿ ಇಡೀ ದಿನ ರಾಜನ ಪ್ರಶ್ನೆಗಳಿಗೆ ಯಾವುದಾದರೂ ಪುಸ್ತಕದಲ್ಲಿ ಉತ್ತರ ಸಿಗುವುದೇ ಎಂದು ಹುಡುಕಿದರು. ಆ ದಿನ ರಾತ್ರಿ ಅವರಿಗೆ ನಿದ್ದೆಯೇ ಬರಲಿಲ್ಲ.
ಮರುದಿನ ಅಬ್ಬೊಟ್ ಕುದುರೆಯೇರಿ ತನ್ನ ವಿಸ್ತಾರವಾದ ಜಮೀನಿನಲ್ಲಿ ಸುತ್ತಾಡಿದರು. ಆಗ ಅಲ್ಲೊಬ್ಬ ಕುರಿಗಾಹಿ ಕುರಿ ಮೇಯಿಸುತ್ತಿದ್ದ. ಅಬ್ಬೊಟ್ ಅವನನ್ನು ಕಂಡರೂ ಗಮನಿಸಲಿಲ್ಲ. ಆಗ ಕುರಿಗಾಹಿ ಅವರನ್ನು ಮಾತನಾಡಿಸಿದ, "ನನ್ನೊಡೆಯ ಅಬ್ಬೊಟ್, ವಂದನೆಗಳು. ನೀವು ಚಿಂತೆಯಲ್ಲಿ ಮುಳುಗಿದಂತೆ ಕಾಣುತಿದ್ದೀರಿ.”
ಒಬ್ಬರಾದರೂ ತನ್ನ ಕಷ್ಟವನ್ನು ವಿಚಾರಿಸಿದರಲ್ಲಾ ಎಂಬ ಭಾವದಿಂದ ಅಬ್ಬೊಟ್ ಉತ್ತರಿಸಿದರು, "ನಾನು ದೊಡ್ಡ ತೊಂದರೆಯಲ್ಲಿ ಸಿಕ್ಕಿ ಕೊಂಡಿದ್ದೇನೆ. ನಾಳೆಯೊಳಗೆ ನಾನು ರಾಜ ಕೇಳಿರುವ ಮೂರು ಪ್ರಶ್ನೆಗಳನ್ನು ಉತ್ತರಿಸಬೇಕು. ಇಲ್ಲವಾದರೆ, ರಾಜ ನನ್ನ ತಲೆ ಕಡಿದು, ನಮ್ಮ ಧರ್ಮಸಂಸ್ಥಾನದ ಜಮೀನನ್ನೆಲ್ಲ ಸ್ವಾಧೀನ ಪಡಿಸಿಕೊಳ್ಳುತ್ತಾನೆ.”
“ಇದು ನಿಜಕ್ಕೂ ಬಹಳ ಕೆಟ್ಟ ಸಂಗತಿ. ಆ ಪ್ರಶ್ನೆಗಳನ್ನು ನನಗೆ ಹೇಳಿ” ಎಂದು ವಿನಂತಿಸಿದ ಕುರಿಗಾಹಿ. ರಾಜ ಜಾನ್ ಕೇಳಿದ ಮೂರು ಪ್ರಶ್ನೆಗಳನ್ನು ಅಬ್ಬೊಟ್ ಕುರಿಗಾಹಿಗೆ ತಿಳಿಸಿದರು.
ಕುರಿಗಾಹಿ ಕೆಲವು ನಿಮಿಷ ಯೋಚಿಸಿ ಹೇಳಿದ: "ನನ್ನೊಡೆಯಾ, ಇವು ಸುಲಭದಲ್ಲಿ ಉತ್ತರಿಸಬಹುದಾದ ಪ್ರಶ್ನೆಗಳಲ್ಲ. ಆದರೂ ಅವನ್ನು ನಾನು ಉತ್ತರಿಸಬಲ್ಲೆ. ನಿಮ್ಮ ಮತ್ತು ನನ್ನ ಎತ್ತರ ಹಾಗೂ ನಿಲುವು ಒಂದೇ ರೀತಿ ಇವೆ; ಹಾಗಾಗಿ ನಾವು ನಮ್ಮ ಉಡುಪು ಬದಲಾಯಿಸಿಕೊಂಡರೆ, ನಾನು ನಿಮ್ಮಂತೆಯೇ ಕಾಣಿಸುತ್ತೇನೆ. ನಿಮ್ಮ ಬದಲಾಗಿ ನಾನೇ ರಾಜನ ಬಳಿಗೆ ಹೋಗಿ ಈ ಪ್ರಶ್ನೆಗಳಿಗೆ ಉತ್ತರ ಹೇಳುತ್ತೇನೆ.”
ಮರುದಿನ, ಅಬ್ಬೊಟ್ ಅವರ ಉಡುಪು ಧರಿಸಿ ಕುರಿಗಾಹಿ ರಾಜನ ಆಸ್ಥಾನಕ್ಕೆ ಹೋದ. ಅವನನ್ನು ರಾಜನ ಎದುರು ಒಯ್ದಾಗ, ತನ್ನ ಮುಖ ರಾಜನಿಗೆ ಸರಿಯಾಗಿ ಕಾಣಿಸದಂತೆ ಆತ ತಲೆಯ ಮೇಲು ಹೊದಿಕೆ ಕೆಳಕ್ಕೆ ಎಳೆದುಕೊಂಡ. “ಮಾನ್ಯ ಅಬ್ಬೊಟ್, ನನ್ನ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿದ್ದೀರಾ?” ಎಂದು ರಾಜ ಕೇಳಿದಾಗ "ಹೌದು, ಮಹಾರಾಜ” ಎಂದ ಕುರಿಗಾಹಿ.
“ಒಳ್ಳೆಯದು. ಮೊದಲಾಗಿ ನನಗೆ ಹಣದಲ್ಲಿ ಎಷ್ಟು ಬೆಲೆ ಕಟ್ಟಬಹುದೆಂದು ಹೇಳಿ” ಎಂದ ರಾಜ. “ಇದರ ಉತ್ತರ ಸರಳ. ಮಹಾರಾಜಾ, ಇಪ್ಪತ್ತೊಂಬತ್ತು ಬೆಳ್ಳಿ ನಾಣ್ಯಗಳು ಎಂಬುದೇ ಇದರ ಉತ್ತರ" ಎಂದ ಕುರಿಗಾಹಿ. ರಾಜ ಅಚ್ಚರಿಯಿಂದ ಕೇಳಿದ, “ಏನು, ಇಪ್ಪತ್ತೊಂಬತ್ತು ಬೆಳ್ಳಿ ನಾಣ್ಯಗಳೇ? ಖಂಡಿತವಾಗಿ ನನ್ನ ಬೆಲೆ ಅದಕ್ಕಿಂತ ಜಾಸ್ತಿ.” "ನಮ್ಮ ದೇವರನ್ನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಮಾರಾಟ ಮಾಡಲಾಗಿತ್ತು. ಹಾಗಾಗಿ, ನಿಮ್ಮ ಬೆಲೆ ಅವರದ್ದಕ್ಕಿಂತ ಒಂದು ಬೆಳ್ಳಿ ನಾಣ್ಯ ಕಡಿಮೆ ಎಂದು ನಾನು ಭಾವಿಸುತ್ತೇನೆ, ಮಾಹಾರಾಜಾ” ಎಂದು ವಿವರಿಸಿದ ಕುರಿಗಾಹಿ.
ಈ ಉತ್ತರದ ಜಾಣ್ಮೆಗೆ ತಲೆದೂಗುತ್ತಾ ರಾಜ ಅಬ್ಬರದಿಂದ ನಕ್ಕು ಬಿಟ್ಟ. “ಇದು ಅಲ್ಲ ಎನ್ನುವಂತಿಲ್ಲ. ಇರಲಿ, ಎಷ್ಟು ಬೇಗನೇ ನಾನು ಈ ಭೂಮಿಗೆ ಒಂದು ಸುತ್ತು ಹಾಕಬಹುದು ಹೇಳಿ” ಎಂದು ಎರಡನೆಯ ಪ್ರಶ್ನೆ ಕೇಳಿದ ರಾಜ. “ಮಹಾರಾಜಾ, ಸೂರ್ಯ ಉದಯಿಸುವಾಗ ಎದ್ದು, ಸೂರ್ಯನ ಜೊತೆಯೇ ನೀವು ಮುನ್ನಡೆದರೆ, ಈ ಭೂಮಿಗೆ ಒಂದು ಸುತ್ತು ಬರಲು ಇಪ್ಪತ್ತನಾಲ್ಕು ಗಂಟೆಗಳು ಸಾಕು" ಎಂದು ಉತ್ತರಿಸಿದ ಕುರಿಗಾಹಿ.
“ನೀವು ಬಹಳ ಜಾಣರಿದ್ದೀರಿ, ಮಾನ್ಯ ಅಬ್ಬೊಟ್” ಎಂದು ಮೆಚ್ಚುಗೆ ಸೂಚಿಸಿದ ರಾಜ ಜಾನ್ ಕೇಳಿದ, “ಆದರೆ ನನ್ನ ಮೂರನೆಯ ಪ್ರಶ್ನೆಗೆ ಉತ್ತರ ಕೊಡಲು ನಿಮಗೆ ಸಾಧ್ಯವಿಲ್ಲ. ನಾನೀಗ ಏನು ಯೋಚನೆ ಮಾಡುತ್ತಿದ್ದೇನೆ? ಹೇಳಿ ನೋಡೋಣ." “ಓ, ಇದು ಬಹಳ ಸುಲಭದ ಪ್ರಶ್ನೆ, ಮಹಾರಾಜಾ. ನಾನು ಕ್ಯಾಂಟರ್-ಬರಿಯ ಅಬ್ಬೊಟ್ ಎಂದು ನೀವು ಈಗ ಯೋಚಿಸುತ್ತಿದ್ದೀರಿ; ಆದರೆ ನಾನು ಅವರ ಬದಲಾಗಿ ಬಂದಿರುವ ಒಬ್ಬ ಬಡ ಕುರಿಗಾಹಿ” ಎನ್ನುತ್ತಾ, ಕುರಿಗಾಹಿ ರಾಜನಿಗೆ ತನ್ನ ಮುಖ ಸರಿಯಾಗಿ ಕಾಣುವಂತೆ ತಲೆಯ ಮೇಲು ಹೊದಿಕೆಯನ್ನು ಹಿಂದಕ್ಕೆ ಎಳೆದುಕೊಂಡ.
ಆಸ್ಥಾನದಲ್ಲಿದ್ದ ಎಲ್ಲ ಮಂತ್ರಿಮಾಗಧರು ಖುಷಿಯಿಂದ ಜಯಕಾರ ಹಾಕುತ್ತಿದ್ದಂತೆ, ರಾಜ ಜಾನ್ ಬಿಗುಮುಖದಿಂದ ಮುಗುಳು ನಗುತ್ತಾ ಹೇಳಿದ, “ಓ ಕುರಿಗಾಹಿಯೇ, ನೀನು ಜಾಣ. ಇಲ್ಲಿಂದ ಹಿಂತಿರುಗಿ ಹೋಗಿ, ನಿಮ್ಮ ಅಬ್ಬೊಟ್ ಅವರ ಜಮೀನು ಮತ್ತು ಜೀವವನ್ನು ನೀನು ಉಳಿಸಿ ಕೊಟ್ಟಿದ್ದಿ ಎಂದು ಅವರಿಗೆ ಹೇಳು. ನಿನ್ನ ಜಾಣ್ಮೆ ಮತ್ತು ಉತ್ತರಗಳಿಂದ ನನಗೆ ನಿಜಕ್ಕೂ ಸಂತೋಷವಾಗಿದೆ. ಅಬ್ಬೊಟ್ ಅವರಿಗೆ ನನ್ನಿಂದ ಯಾವುದೇ ತೊಂದರೆಯಿಲ್ಲ ಎಂದು ಭರವಸೆ ನೀಡುತ್ತೇನೆ.”
ಅಂತೂ ತನ್ನ ಜಾಣ್ಮೆಯಿಂದ ಅಬ್ಬೊಟ್ ಅವರ ಜೀವ ಮತ್ತು ಜಮೀನನ್ನು ಆ ಬಡ ಕುರಿಗಾಹಿ ಉಳಿಸಿ ಕೊಟ್ಟ. ಜಾಣತನಕ್ಕೆ ಅಂತಸ್ತು ಅಥವಾ ಇತರ ಯಾವುದೇ ಮಿತಿಗಳಿಲ್ಲ, ಅಲ್ಲವೇ?