ರಾತ್ರಿಯ ರೋಡು

ರಾತ್ರಿಯ ರೋಡು

ಬರಹ

ಕಥೆ ಬರೆಯೋಕೆ ನನಗೆ ಬರೋದಿಲ್ಲ ಅಂತ ತಿಳಿದಿದ್ದೂ ಕಥೆ ಬರೆಯಲು ನಡೆಸಿರುವ ಪ್ರಯತ್ನ ಇದು. ಪ್ರಸಂಗಗಳನ್ನು ನನ್ನ ದೃಷ್ಟಿಯಲ್ಲೇ ನೋಡಿದಂತೆ ಬರೆದಿದ್ದೇನೆ. ನಿಜ ಜೀವನದಲ್ಲಿ ನಡೆದಿರಲೇಬೇಕೆಂದೇನಿಲ್ಲ.

ಸ್ನೇಹಿತನೊಂದಿಗೆ ಮಾತು ಮುಗಿಸಿ ನಾನು ಬೈಕು ಸ್ಟಾರ್ಟ್ ಮಾಡಿದ್ದೆ. ಅವ ನಮ್ಮೆದುರಿಗೆ ಬಂದ ಆಟೋ ನಿಲ್ಲಿಸಿ "ಬಿ ಟಿ ಎಂ ಲೇಔಟ್" ಎಂದು ಹೇಳಿ ಹತ್ತಿದ್ದ. "ಒನ್ನೆಂಡ್ ಹಾಫು ಸಾರ್" ಎಂದು ತಿಳಿಸಿ ಉತ್ತರ ಪಡೆದ ನಂತರವೇ ಆಟೋದವ ಆಟೋ ಹೊರಡಿಸಿದ್ದು.

ನಾನು ಬೈಕನ್ನು ವಿರುದ್ಧ ದಿಕ್ಕಿನಲ್ಲಿ ಮೇಯ್ನ್ ರೋಡಿಗೆ ತಿರುಗಿಸಿದಂತೆ ಆಟೋ ಅತ್ತ ದೂರವಾಗುತ್ತಿರುವುದು ಸೈಡ್ ಮಿರರ್ರಿನಲ್ಲಿ ಕಾಣಿಸುತ್ತಿತ್ತು. ರಾತ್ರಿ ಹನ್ನೊಂದೂವರೆಯಾದರೂ ಅಲ್ಲಿಲ್ಲಿ ಒಂದೆರಡು ಗಾಡಿಗಳು ಚಲಿಸಿದ್ವು. ಸ್ವಲ್ಪ ದೂರ ಹೋಗುತ್ತಲೆ ಟ್ರಾಫಿಕ್ ತೀರ ಇಲ್ಲವೇ ಇಲ್ಲ ಎಂಬಂತಾಯಿತು. ಬೆಂಗಳೂರಿನಲ್ಲಿ ಇಂತಹ ಭಾಗ್ಯ ರಾತ್ರಿಯ ಹೊತ್ತೇ. ಹೀಗಾಗಿ ನನ್ನ ಬೈಕಿನ acceleratorಗೆ ಧಾರಾಳತನದ ಸವಿ.

ರಿಂಗ್ ರೋಡು ಯಾವಾಗ ಹಾಕಿಸಿದ್ದೋ ಈಗ ಮುಂಚಿನಂತಿಲ್ಲ - ಬರೇ ಕಿತ್ತುಹೋಗಿರುವ ಟಾರು. ಇಂತಹ ರೋಡಿನಲ್ಲಿ ವೇಗದಲ್ಲಿ ಚಲಿಸೋದು ಸುಲಭವಲ್ಲ. ಇಂತಹ ರೋಡಿನ ಮೇಲೆ ಬೈಕು ಎಷ್ಟು ವೇಗವಾಗಿ ಓಡಬಲ್ಲುದು ಎಂಬುದು ಅದರ ಕ್ಷಮತೆಯೊಂದಷ್ಟೆ ಅಲ್ಲದೆ, ಅದರ ಗಾಲಿಗಳಲ್ಲಿರುವ ಗಾಳಿ, ಅದರ ವಯಸ್ಸು (ಎಷ್ಟು ದಿನಗಳ ಕಾಲ ಓಡಿಸಲ್ಪಟ್ಟು ಸವೆದಿದೆ ಎಂಬುದು) ಮತ್ತು ಮುಖ್ಯವಾಗಿ ಅದರಲ್ಲಿರುವ ಬ್ರೇಕು - ಇವೆಲ್ಲವುಗಳನ್ನು ಅವಲಂಬಿಸಿರುತ್ತದೆ. ನನ್ನ ಬೈಕು ಆಗಲೆ ನಾಲ್ಕೈದು ವರ್ಷ ಹಳೆಯದು. ಗಾಲಿ ಕೂಡ ಸವೆದಿದೆ - ತೀರ ವೇಗವಾಗಿ ಹೋದರೆ ತಕ್ಷಣ ಬ್ರೇಕ್ ಹಾಕುವುದು ಕಷ್ಟ - ಹಾಕಿದರೆ ಗಾಡಿ ಸ್ಕಿಡ್ ಆಗಬಹುದು, ಇಲ್ಲ ಬ್ರೇಕ್ ಸಂಪೂರ್ಣವಾಗಿ ಕೆಲಸ ಮಾಡದೆಯೂ ಇರಬಹುದು. ಹೀಗಾಗಿ 'ವೇಗವಾಗಿ' ಎಂದರೂ ಬೈಕಿನ ವಯಸ್ಸಿಗೆ ತಕ್ಕುದಾದ ನಿಧಾನಮಿತಿಯ ಗತಿಯಲ್ಲಿ ಹೊರಟಿದ್ದೆನೆಂದುಕೊಳ್ಳಿ.

ಒಂದಷ್ಟು ದೂರದಲ್ಲಿ ಸರ್ಕಲ್ಲೊಂದಿತ್ತು. ನಾಲ್ಕು ರೋಡುಗಳಿಗೂ ಮುಖ ಮಾಡಿದ್ದ ವಿವಿಧ ಸಿಗ್ನಲ್ಲು ಕಂಬಗಳಲ್ಲಿ ಹಳದಿಯ ರಶ್ಮಿ ಹತ್ತಿ ಆರುತ್ತಿದ್ದಳು. ಈ ಹಳದಿಯ ಲೈಟು ಬ್ಲಿಂಕ್ ಆಗುತ್ತಿದೆಯೆಂದರೆ 'ನೋಡಿಕೊಂಡು ನಡೆ' ಎಂಬುದು ಲೈಸೆನ್ಸ್ ಮಾಡಿಸಿಕೊಳ್ಳುವಾಗ ಸ್ವಲ್ಪವಾದರೂ ಗಮನವಿಟ್ಟು ಪರೀಕ್ಷೆ ಕೊಟ್ಟವರಿಗೆ ತಿಳಿದಿರುತ್ತದೆ. ರಾತ್ರಿಯ ಹೊತ್ತು ಇದು ಸಾಮಾನ್ಯ. ಆ ಸರ್ಕಲ್ಲು ಕಳೆದು ಮುಂದಿನ ಸರ್ಕಲ್ಲಿಗೆ ನಡೆದಾಗ ಅಲ್ಲಿಯೂ ಸಹಜವಾಗಿ ಇದೇ. ಆದರೆ ಈ ಸರ್ಕಲ್ಲಿನಲ್ಲಿ ಆ ಒಂದೆರಡು ಘಳಿಗೆಗಳ ನಂತರ ನಡೆದ ಘಟನೆ ಎಷ್ಟು ಬಾರಿ ಆಗಿರುವುದು ನೋಡಿದ್ದೇನೊ, ಗಣನೆಯೇ ಇಲ್ಲ. ರೋಡು ಖಾಲಿಯಾಗಿದೆಯೆಂದು ಮುನ್ನುಗ್ಗಿದ ನನ್ನ ಹಿಂದಿದ್ದ ಮತ್ತೊಬ್ಬ ದ್ವಿಚಕ್ರ ಸವಾರ ರಭಸದಿಂದ ಸರ್ಕಲ್ ದಾಟಲು ಹೋದ. ಅದೇ ಸಮಯ ಈಗ ತಾನೆ ಧರೆಗಿಳಿದುಬಂದಂತೆ ಪಕ್ಕದಿಂದ ಕಾರೊಂದು ನುಗ್ಗಿತು. ಕಾರಿನವ ರಭಸದಿಂದ ಬ್ರೇಕ್ ಹಾಕಿದ್ದು ಅವರಿಬ್ಬರ ಪುಣ್ಯ. ಕಾರು ಸ್ವಲ್ಪ ಸ್ಕಿಡ್ ಆಗಿ ಎಡಕ್ಕೆ ಸರಿದರೆ, ಬೈಕಿನವ ಸ್ವಲ್ಪ ವೇಗದಿಂದ ನುಸುಳಿ ತಲೆ ಉಳಿಸಿಕೊಂಡನು. ಮಾತಾಡಲೂ, ಬೈಯಲು ಇಬ್ಬರಿಗೂ ಸಮಯ ಸಿಗಲಿಲ್ಲ. ಹಿಂದೆ ಬರುತ್ತಿದ್ದ ನನಗಷ್ಟೇ ನಿದ್ರೆಯಿಂದ ಎಚ್ಚರಿಸಿದಂತಾಯಿತು. ಎಂದಿಗಿಂತ ಹುಷಾರಾಗಿ ಎಡ, ಬಲಗಳಿಂದ ಯಾವುದೂ ವೆಹಿಕಲ್ ಬರುತ್ತಿಲ್ಲವೆಂಬುದನ್ನು ಖರೆ ಮಾಡಿಕೊಂಡು ಮುನ್ನಡೆದೆ.

ರಾತ್ರಿಯ ಹೊತ್ತು ಸಿಗ್ನಲ್ಲುಗಳಲ್ಲಿ ಆಗುವ ಅಪಘಾತಗಳು ಸಾಕಷ್ಟು. ಬೆಳಗ್ಗಿನ ಟ್ರಾಫಿಕ್ ಕವಿದ ರೋಡುಗಳಲ್ಲಿ ಬೈಕನ್ನು ಬಳುಕಿಸುತ್ತ ಸಂದಿಗೊಂದಲಲ್ಲಿ ನುಗ್ಗಿಸುತ್ತ ಸಾಗುವ ಬೈಕು ಸವಾರರಿಗೆ ರಾತ್ರಿಯ ಖಾಲಿ ರೋಡು ವರ ನೀಡಿ ಶಾಪ ಹಾಕಿದಂತೆ. ಬೆಳಗ್ಗಿನ ಅಭ್ಯಾಸಬಲ - ರಾತ್ರಿ ಹೊತ್ತು ಖಾಲಿ ರೋಡಿನಲ್ಲೂ ಬಳುಕಿಸಿಕೊಂಡೇ ಸಾಗುತ್ತಾರೆ. ವೇಗದಲ್ಲಿ ರಭಸದಲ್ಲಿ ಸಾಗುತ್ತಾರೆ. ಹೀಗಾಗಿ ಅಲ್ಲೊಂದು ಇಲ್ಲೊಂದು ಹೀಗೆ ಸ್ಕಿಡ್ ಆಗೋದು, ಸ್ವಲ್ಪದರಲ್ಲೇ 'ಮಿಸ್' ಆಗೋದು, 'ಬದುಕಿಕೊಂಡ' ಎಂದುಕೊಳ್ಳುವಂತಹ ದೃಶ್ಯಗಳು ಸರ್ವೇ ಸಾಮಾನ್ಯ. ಆದರೆ ಕುಡಿದು ಗಾಡಿ ಓಡಿಸುವ ಮಹಾಶಯರು ಯಾರಾದರೂ ಹಿಂದಿನಿಂದಲೋ ಪಕ್ಕದಿಂದಲೋ ರಭಸದಿಂದ ಬಂದು ಗುದ್ದಿದರು ಎಂದರೆ ಎಂತಹ ನಾಜೂಕಾಗಿ ಬೈಕು ಓಡಿಸುವವರಿಗೂ ಗ್ರಹಚಾರ ತಪ್ಪದು - ಇದು ಅವರಿಗೆ ವರವಿಲ್ಲದ ಶಾಪದಂತೆ!

ಈ ಸಾರಿ ಸ್ವಲ್ಪದರಲ್ಲೇ 'ಬದುಕಿಕೊಂಡ' ಬೈಕು ಸವಾರ ಹಾಗೂ ಕಾರು ಓಡಿಸುವವರಿಬ್ಬರ ಚೆಂದದ ಹಣೆಬರಹದ ಬಗ್ಗೆ ಆಲೋಚಿಸುತ್ತ ಎಂದಿನ ಸಾವಧಾನದಿಂದ ಮತ್ತಷ್ಟು ಸಿಗ್ನಲ್ಲುಗಳನ್ನು ದಾಟಿದ್ದೆ. ಒಂದೆರಡು ಕಿಲೋ ಮೀಟರ್ ದೂರ ಹೋಗಿದ್ದೆನಷ್ಟೆ. ದೂರದಲ್ಲಿ ಸುಮಾರು ಹತ್ತು - ಹನ್ನೆರಡು ಮಂದಿಯ ಗುಂಪೊಂದು ಕಂಡಿತು. ದಾರಿ ಅಡ್ಡಗಟ್ಟಲಾಗಿತ್ತು. ಯಾವುದೋ accident ಆಗಿರಬೇಕೆಂದು ಎಣಿಸಿದೆ. ಅಗೋಚರ ಗೋಚರವಾಗುತ್ತಿದ್ದಂತೆ ಅಲ್ಲೇ ಸೈಡಿನಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳು, ಬೈಕುಗಳು ಹಾಗೂ ಅಲ್ಲಿದ್ದ ಕೆಲವರು ರೋಡನ್ನು ಅಡ್ಡಗಟ್ಟಿ ನಿಂತಿರುವುದು ಕಂಡು ಬಂತು.

ಅಡ್ಡಗಟ್ಟಿದ್ದವರು ಮುಫ್ತಿಯಲ್ಲಿದ್ದ ಪೋಲಿಸರು. ಸಾಮಾನ್ಯವಾಗಿ ಯಾರಿಗಾದರೂ ಗುದ್ದಿ ಓಡಿಹೋದ ಪ್ರಳಯಾಂತಕರನ್ನು ಹಿಡಿಯಲೆಂದೋ, ಅಥವ ತಪ್ಪಿಸಿಕೊಂದ ಪಕ್ಕಾ ಖದೀಮರು ಕೊಲೆಗಡುಕರು ಆ ದಾರಿಯಲ್ಲಿ ಬರುವುದು ಖಾತ್ರಿಯಾದಲ್ಲಿ ಪೋಲಿಸರು ಈ ರೀತಿಯ ಬೆಪ್ಪತನಕ್ಕಿಳಿಯುತ್ತಾರೆಂದು ಕೇಳಿರುವೆ. ಆದರೆ ಈಗ ಹೆಲ್ಮೆಟ್ ಇರೋದರಿಂದ ಅವರಿಗೆ ಫಜೀತಿ ಹೆಚ್ಚು. ಎಲ್ಲರದ್ದೂ ಹೆಲ್ಮೆಟ್ ತೆಗೆದೂ ತೆಗೆದು ನೋಡಬೇಕು. ಹೀಗೆಯೇ ಏನೋ ನಡೆದಿರಬೇಕು, ಅದಕ್ಕಾಗಿಯೇ ರೋಡು ಅಡ್ಡಗಟ್ಟಿ ನಿಂತಿರುವವರು ಎಂದು ಎಣಿಸಿದ್ದೆ.

ನನ್ನ ಎಣಿಕೆ ಸುಳ್ಳಾಯಿತು. ಹತ್ತಿರವಾಗುತ್ತಲೆ ಲಾಠಿ ಹಿಡಿದು ಮುಫ್ತಿಯಲ್ಲಿದ್ದ ಪೋಲಿಸ್ ಪೇದೆಯೊಬ್ಬನು ಗಾಡಿಯನ್ನು ನಿಲ್ಲಿಸಿ 'ಸೈಡಿಗೆ' ಹಾಕಿಸಿದನು. ಪಕ್ಕದಲ್ಲಿ ಇನ್ನೊಬ್ಬ ಪಿ.ಸಿ, ದೂರದಲ್ಲಿ ಇನ್ಸ್ಪೆಕ್ಟರ. ನಾನು ಅವರ ಪಜೀತಿ ಕಡಿಮೆ ಮಾಡುವದಕ್ಕೆಂದು ಗಾಡಿ ನಿಲ್ಲಿಸಿದವನೆ ಗಾಡಿಯ ಮೇಲೆ ಕುಳಿತಿದ್ದೇ ಹೆಲ್ಮೆಟ್ ತೆಗೆದು ಮುಖ ತೋರಿಸಿದೆ. ಅದೇನಾಯ್ತೋ ಆ ಪೇದೆಗೆ, ನನ್ನ ಮುಖವನ್ನೊಮ್ಮೆ ಸರ್ವೇ ಮಾಡಿ ಸ್ವಲ್ಪ ಹತ್ತಿರ ಬಂದು ಮುಖದ ಹತ್ತಿರ ಮೂಸಿದನು. "ಡ್ರಿಂಕ್ಸ್ ತಗೊಂಡಿದ್ದೀಯಾ?" ಎಂದು ಹೇಳಿದಾಗಲೆ ನನಗೆ ಅವನ ವಿಚಿತ್ರ ವರ್ತನೆಯ ಹಿಂದಿದ್ದ ಗುಟ್ಟು ತಿಳಿದುಬಂದದ್ದು. ಅಚ್ಚರಿ, ಗಾಬರಿಗಳ ನಡುವೆ "no, no" ಎಂದಿದ್ದೆ.

Alchohol detectorಗಳನ್ನು ಬಳಸುತ್ತಿದ್ದಾರೆಂದು ಪೇಪರಿನಲ್ಲಿ ಓದಿ ತಿಳಿದಿದ್ದ ನನಗೆ ಅವುಗಳು ಇಷ್ಟು ಮ್ಯಾನ್ಯುಯಲ್ ಆಗಿ ಇರುತ್ತವೆ ಎಂಬುದು ತಿಳಿದಿರಲಿಲ್ಲ. ಡ್ರಿಂಕ್ಸ್ ವಾಸನೆ ಬರಲಿಲ್ಲವಾದ್ದರಿಂದ ಲಾಠಿಯಿಂದ ಬೈಕಿನ ಟ್ಯಾಂಕಿನ ಮೇಲೆ ಎರಡು ಸಾರಿ ಕುಟ್ಟಿ 'ಲೈಸೆನ್ಸ್ ತೆಗಿ' ಎಂದು ಗುಡುಗಿ ಹೊರಟುಹೋದ.

ಬ್ಯಾಗಿನಲ್ಲಿದ್ದ ಲೈಸೆನ್ಸ್ ತೆಗೆದು ಕೈಯಲ್ಲಿ ಹಿಡಿದು ನಾನು ಕಾದು ನಿಂತಿದ್ದೆ. ಅತ್ತ ಕಡೆ ಒಂದು ಕಾರು ಸಮೀಪಿಸಿತ್ತು. ನನ್ನ ಹಿಡಿದು ನಿಲ್ಲಿಸಿದ ಪಿ.ಸಿ ಕಾರು ಸಮೀಪಿಸುವುದನ್ನೇ ನೋಡುತ್ತ "ಲೋ, ಇದು ಗ್ಯಾರಂಟಿ" ಎಂದು ಪಕ್ಕದಲ್ಲಿದ್ದ ಪೇದೆಗೆ ಸಣ್ಣಗಿನ ಧ್ವನಿಯಲ್ಲಿ ಗುಡುಗಿದ್ದ. ಕಾರು ನಿಲ್ಲಿಸಿದ್ದೇ ಪಿ.ಸಿಗಳಿಬ್ಬರ ಲಾಠಿಗಳ ಅಬ್ಬರ ಕಾರಿನ ಬಾಗಿಲ ಮೇಲೆ ಮಾತನಾಡಿದವು. ಬರೇ ಇಂಗ್ಲೀಷು ಮಾತನಾಡುತ್ತಿದ್ದ ಬಹುರಾಷ್ಟ್ರೀಯ ಕಂಪೆಯಿನಿಯೊಂದರ ಸಾಫ್ಟ್ವೇರ್ ಇಂಜಿನಿಯರಿನಂತೆ ಕಾಣುತ್ತಿದ್ದ ಚಾಲಕ ಮೊದಮೊದಲಿಗೆ ಅಲ್ಪ ಸ್ವಲ್ಪ ಗೌರವ ಪಡೆದರೂ ಕಾರು 'ಸೈಡಿಗೆ' ಹಾಕಿಸಲ್ಪಟ್ಟು "ಹೊರಗ್ನಡಿಯೋ, ಆಚೆ. ಲೈಸೆನ್ಸ್ ತೆಗಿ" ಎನ್ನಿಸಿಕೊಂಡ. ಬಹುಶಃ ಕುಡಿದಿದ್ದ ಅನ್ಸತ್ತೆ. ಮುಂದಿನ ಹತ್ತು ನಿಮಿಷ ಮನರಂಜಕವಾಗಿತ್ತು - ಪಿ. ಸಿ. ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡಿದ್ದ ಚಾಲಕನಿಗೆ ಹೊಡೆಯಲು ಹೋದದ್ದು, ಅವ ರಾಜಕೀಯದಲ್ಲಿರುವ ತನ್ನ ಬಂಧು ಬಳಗವನ್ನೆಲ್ಲ ನೆನೆಸಿಕೊಂಡದ್ದು. ಕೊನೆಗೆ ಇನ್ಪೆಕ್ಟರ ಚೀಟಿ ಹರಿದನೋ ಬಿಟ್ಟನೋ ಏನೋ ಒಪ್ಪಂದವಂತೂ ಆದಂತೆ ಕಂಡಿತು.

ಅಷ್ಟರಲ್ಲಿ ಇತ್ತ ಬಂದ ಇನೊಬ್ಬ ಪಿ. ಸಿ. ಗೆ ಕೈಯಲ್ಲಿದ್ದ ಲೈಸೆನ್ಸನ್ನು ಅವನಿಗೆ ಕಾಣುವಂತೆ ಎತ್ತಿ ಹಿಡಿದು "ಲೈಸೆನ್ಸು" ಎಂದೆ. ಲೈಸೆನ್ಸ್ ನೋಡದೆ ದೂರದಿಂದಲೆ ಹೋಗುವಂತೆ ಸನ್ನೆ ಮಾಡಿದ. ನಾ ಮನೆಯ ಕಡೆ ನಡೆದೆ.