ರಾಮಣ್ಣಿಯ ಹೊಸ ವರ್ಷದ resolution !

ರಾಮಣ್ಣಿಯ ಹೊಸ ವರ್ಷದ resolution !

ಬರಹ

ಭಾನುವಾರ ಬೆಳಿಗ್ಗೆ. ನಗರದ ಹೊರವಲಯ ಒಂದು ಸಾಮಾನ್ಯ ಬೀದಿ. ನೆಡೆಯಲು ಜಾಗವಿಲ್ಲದೇ ಇದ್ದರೂ ಮೋಟಾರುಬೈಕು, ಆಟೋಗಳು ನುಗ್ಗಬಲ್ಲ ಸಾಮಾನ್ಯ ಬೀದಿ. ಇಂದು ರಜಾ ದಿನವಾದ್ದರಿಂದ ಗಲಾಟೆ ಸ್ವಲ್ಪ ಕಡಿಮೆ ಇತ್ತು... ಮೂಲೆಯ ಅಂಗಡಿಯ ಕಾಕ ಯಾವುದೋ ಗಿರಾಕಿಗೆ ಟೋಪಿ ಹಾಕುವುದರಲ್ಲಿ ನಿರತನಾಗಿದ್ದ ... ಯಾವುದೋ ಮನೆಯಲ್ಲಿ ಮಗು ಅಳುತ್ತಿತ್ತು... ಇನ್ಯಾರದೋ ಮನೆಯ ಕುಕ್ಕರ್ ಶಿಳ್ಳಿ ಹಾಕುತ್ತಿತ್ತು.... ಮತ್ಯಾರದೋ ಮನೆಯವರು, ಯಾರ ಮೇಲೆ ಸಿಟ್ಟೋ ಏನೋ, ಸಿಕ್ಕಾಪಟ್ಟೆ ರೋಷದಿಂದ ಬಟ್ಟೆಯನ್ನು ಬಂಡೆಗೆ ಬಡೀತಿದ್ದರು ... ಎದುರು ಮನೆಯವರ ಅಡಿಗೆ ಮನೆಯಿಂದ ಸ್ಟೀಲ್ ಡಬರಿ ಕೆಳಗೆ ಬಿದ್ದ ಸದ್ದು .. ಅದರ ಹಿಂದೆಯೇ ’ನಿಧಾನಕ್ಕೆ ಇಡ್ರೀ... ಅದು ನಮ್ಮಮ್ಮನ ಮನೇದು’ ಎಂಬೋ ಮನೆಯಾಕೆಯ ಕೂಗು... ಬೀದಿ ಮೂಲೆಯಲ್ಲಿ ನಿಂತ ಒಣಕಲು ನಾಯಿ ಬೊಗಳಲೋ ಬೇಡವೋ ಎಂದು ಯೋಚಿಸುತ್ತಿತ್ತು.... ಹೀಗಿರುವಾಗ ...

ವಾಕಿಂಗ್ ಅಂತ ಹೊರಟ ಅನಸೂಯಾಬಾಯಿ ಎದುರು ಮನೆ ಸುಂದರಮ್ಮ ಸಿಕ್ಕ ಮೇಲೆ, ಬರೀ ಟಾಕಿಂಗ್ ಮಾಡುತ್ತಿದ್ದರೇ ವಿನ: ಎರಡು ಹೆಜ್ಜೆ ಮುಂದೆ ಹೋಗಲಿಲ್ಲ... ಮಾತಿನ ಮಧ್ಯೆ ನುಗ್ಗಿ, ಬಿಸಿ ಕಾಫೀ ಕೊಡ್ತೀಯಾ ಎಂದು ಕೇಳುವ ಧೈರ್ಯ ರಮಣಮೂರ್ತಿಯವರಿಗೆ ಇಲ್ಲ... ವಿಶಾಲೂ’ಗೆ ಬೂತ್’ನಿಂದ ಹಾಲು ತಂದುಕೊಟ್ಟು ನಾನು, ಅರ್ಥಾತ್ ರಾಮಣ್ಣಿ ಹಾಗೇ ಬಾಗಿಲ ಬಳಿ ಚೇರ್ ಹಾಕಿಕೊಂಡು ಕೂತು, ಬೀದಿಯಿಂದ ಬರುವ ಧೂಳನ್ನು ನಾನೇ ಹೀರುತ್ತ "ಧೂಳುಕಂಠ" ನಾಗಿ, ಹಳೇ ಹಾಲಿನ ಹೊಸ ಕಾಫಿಯನ್ನು ಸಶಬ್ದವಾಗಿ ಹೀರುತ್ತ ಪೇಪರ್ ಓದತೊಡಗಿದ್ದೆ.

ಆಲೂಗಡ್ಡೆ ಹೆಚ್ಚುತ್ತ ವಿಶಾಲೂ ಕೇಳಿದಳು "ಏನಂತೆ ಹೊಸ ಸುದ್ದಿ ?".... ನಾನು ನುಡಿದೆ "ಖರ್ಗೆ ನಕ್ಕರಂತೆ" .... ವಿಶಾಲೂ ಕೈಯಲ್ಲಿದ್ದ ಚಾಕು ಕೆಳಗೆ ಬಿತ್ತು ... ಇರಾಕ್’ನಲ್ಲಿ ಒಂದು ದಿನ ಯಾರೂ ಸಾಯದೆ ಇರಬಹುದು ಆದರೆ ಈ ವಿಷಯವಂತೂ ಅಸಾಧ್ಯ ಅನ್ನೋ ಭಾವ ಹೊತ್ತಿತ್ತು ಅವಳ ಮುಖ ... ಶಾಕ್’ನಿಂದ ಎಲ್ಲಿ ಅವಳ ಎದೆ ನಿಂತೇ ಹೋಗುವುದೋ ಎಂದು ಹೆದರಿ "ಸುಮ್ಮನೆ ಅಂದೆ ಕಣೆ... ನಗರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಏರಿಸ್ತಾರಂತೆ... " .... ವಿಶಾಲೂ ನಾರ್ಮಲ್’ಗೆ ಬಂದಳು.

ಅನಸೂಯಾಬಾಯಿಯ ಬಾಯಿ ಇನ್ನೂ ಬ್ಯುಸಿ ಇದ್ದು, ರಮಣಮೂರ್ತಿಗಳ ಬಾಯಿ ಒಣಗುತ್ತಿದ್ದುದರಿಂದ, ಅವರ ಸವಾರಿ ನಮ್ಮ ಮನೆ ಕಡೆ ಚಿತ್ತೈಸಿತು. ಹೀಗೆ ಆದಾಗ ನಮ್ಮ ಮನೆಗೆ ಕಾಫ಼ಿಗೆ ಬರುವುದು ಸರ್ವೇ ಸಾಮಾನ್ಯ. ಆಯ್ತು ಅವರಿಗೂ ಒಂದು ಲೋಟ ಕಾಫಿ ಸೇವೆ ಆಯಿತು.

ರಮಣಮೂರ್ತಿಗಳ ವಯಸ್ಸು ಅರವತ್ತೈದರ ಆಸುಪಾಸು. ಸ್ವಾತಂತ್ರ್ಯ ಹೋರಾಟಗಾರರು. ತಮ್ಮ ಮದುವೆಯಾದ ದಿನದಿಂದಲೂ ಅವರು ತಮ್ಮ ಸ್ವಾತಂತ್ರ್ಯಕ್ಕೆ ಮನೆಯಲ್ಲಿ ಮೂಕ ಹೋರಾಟ ನೆಡೆಸುತ್ತಿದ್ದಾರೆ. ದಿನವೂ ಅವರು ತಮ್ಮ ಅತ್ತೆಯ ಫ಼ೋಟೋ ಮುಂದೆ ನಿಂತು ಕೇಳುವುದು ಒಂದೇ ಪ್ರಶ್ನೆ "ನಾನು ನಿಮಗೆ ಏನು ಅನ್ಯಾಯ ಮಾಡಿದ್ದೆ ?" ಅಂತ !!! ಕಾಫ಼ಿ ಕುಡಿದ ರಮಣಮೂರ್ತಿಗಳು ಹೊರಟು ನಿಂತು "ರಾಮಣ್ಣಿ, ಇನ್ನು ಬರ್ತೀನಪ್ಪ. ಕೆಲಸ ಇದೆ.... ಅಂದ ಹಾಗೇ, ಈ ನಡುವೆ ನಾನು ಕಾಫ಼ಿ ಕುಡಿಯೋದು ಬಿಟ್ಟುಬಿಟ್ಟಿದ್ದೀನಿ" ಅನ್ನೋದೇ ? ನಾನು ಅರ್ಥವಾಗದೆ ಮಿಕ ಮಿಕ ನೋಡಿದೆ. ವಿಶಾಲೂ ನುಡಿದಳು "ತಮ್ಮ ಮನೆಯಲ್ಲಿ ಕಾಫ಼ಿ ಕುಡಿಯೋದು ಬಿಟ್ಟಿದ್ದಾರೆ ಅಂತ ಅವರು ಹೇಳಿದ್ದು" !!!

ವಿಶಾಲೂ ’ತಿಂಡಿ ರೆಡಿಯಾಗ್ತಾ ಇದೆ, ಸ್ನಾನ ಮಾಡಿಕೊಂಡು ಬರಬಾರದೇ ? ’ ಅಂದಳು ... ತತ್ವಜ್ಞ್ನಾನಿಯಂತೆ ನುಡಿದೆ "ಮನಸ್ಸು ಶುದ್ದ ಇದ್ದರೆ ಸಾಲದೇ.. ಮೈ ಶುದ್ದ ಆಗಲೇಬೇಕೇ ? ಕಾಡ್ನಲ್ಲಿರೋ ಹುಲಿ ಸ್ನಾನ ಮಾಡಿ ಬೇಟೆಗೆ ಹೋಗುತ್ಯೇ? ". ವಿಶಲೂ ನುಡಿದಳು "ಸರಿ, ನಾಳೆಯಿಂದ ಹಲ್ಲು ಉಜ್ಜದೆ, ಸ್ನಾನ ಮಾಡದೆ ಕೆಲಸಕ್ಕೆ ಹೋಗಿ ಬನ್ನಿ... ಆಮೇಲೆ ನೋಡೋಣ".... ತೆಪ್ಪಗೆ ಎದ್ದು ಹೋದೆ.

ಸ್ನಾನ ಮಾಡಿಕೊಂಡು ಬರುತ್ತಿದ್ದಂತೆ ವಿಶಾಲೂ ನುಡಿದಳು ’ದೇವರಿಗೆ ಅಡ್ಡಬಿದ್ದು ಬನ್ನಿ. ಉಪ್ಪಿಟ್ಟು ತಿನ್ನುವಿರಂತೆ’. ನಾನು ’ತಿಮ್ಮಪ್ಪ ನನ್ನ ಕಾಪಾಡಪ್ಪ. ವಿಶಾಲೂ ಮಾಡಿರೋ ಉಪ್ಪಿತ್ತು ತಿಂತಾಯಿದ್ದೀನಿ .... ’ ಅಂದೆ. ವಿಶಾಲೂ ಹುಸಿಕೋಪ ತೋರುತ್ತ ’ಶುದ್ದ ತರಳೇ ರ್ರೀ ನೀವು .... ’ ಎಂದು ತಟ್ಟೆ ಕೈಗೆ ತುರುಕಿ, "ತಿಂಡಿ ಆದ ಮೇಲೆ ಮಧ್ಯಾನ್ನದ ಅಡಿಗೆಗೆ ತರಕಾರಿ ತಂದುಕೊಡಿ" ಅಂದಳು.

ಬಿಸಿ ಬಿಸಿ ಉಪ್ಪಿಟ್ಟನ್ನು ಉಂಡೆ ಮಾಡಿ ಚಟ್ನಿಪುಡಿಯಲ್ಲಿ ಅದ್ದಿಕೊಂಡು ಬಾಯಲ್ಲಿ ಇಟ್ಟುಕೊಂಡೆ. ಅದ್ಭುತವಾಗಿತ್ತು. ವಿಶಾಲೂ ನುಡಿದಳು ’ಹೇಗಿದೆ ಅಂತ ಹೇಳಲೇ ಇಲ್ಲ’.... ನಾನು ನುಡಿದೆ ’ಉರಿಯೋ ಸೂರ್ಯನಿಗೆ ನೀ ಚೆನ್ನಾಗಿ ಬೆಳಗುತ್ತಿದ್ದೀಯಾ ಗುರೂ ಅಂತ ಯಾರಾದರೂ ಹೇಳ್ತಾರೆಯೇ? ’ ಅಂದೆ... ವಿಶಾಲೂ "ಸರಿಯಾಗಿ ಹೇಳಿ ಹೇಗಿದೆ ಅಂತ" ಅಂದಳು ... "ಮೈಸೂರು ಪಾಕ್ ಇದ್ದ ಹಾಗೆ ಇದೆ ಕಣೆ" ಅಂದೆ... "ಉಪ್ಪಿಟ್ಟು ಹೇಗ್ರೀ ಮೈಸೂರ್ ಪಾಕ್ ಇದ್ದ ಹಾಗೆ ಇರುತ್ತೆ ? " ನಾನೆಂದೆ "ಅಂದರೇ, ಬಾಯಲ್ಲಿ ಇಟ್ಟುಕೊಂಡ ತಕ್ಷಣ, ಬಿಸಿ ತಾಕಿದ ಬೆಣ್ಣೆಯಂತೆ, ಹಾಗೇ ಕರಗಿ ಹೋಗುತ್ತೆ ಅಂತ ನಾನು ಹೇಳಿದ್ದು" ... ಅವಳೆಂದಳು "ಸರಿ....ಎಣ್ಣೆ ಜಾಸ್ತಿಯಾಗಿದೆ ಅಂತ ನೇರವಾಗಿ ಹೇಳಬಾರದೇ?"

ಮೆಟ್ಟನ್ನು ಮೆಟ್ಟಿಕೊಂಡು ಅಂಗಡಿ ಬೀದಿ ಹೊರಟೆ. ದೂರದಲ್ಲಿ ರಮಣಮೂರ್ತಿಗಳು ಬರುತ್ತಿರುವುದು ಕಣ್ಣಿಗೆ ಬಿತ್ತು. ಎಲ್ಲಿ ಅವರು "ಈ ನಡುವೆ ನಾನು ತರಕಾರಿಗೆ ದುಡ್ಡು ಕೊಡುವುದನ್ನೇ ಬಿಟ್ಟು ಬಿಟ್ಟಿದ್ದೀನಿ" ಎನ್ನುವರೋ ಅಂತ ಅವರ ಕಣ್ಣಿಗೆ ಬೀಳದಂತೆ ನಿಂತೆ. ಹಿಂದಿನಿಂದ ದನಿ ಕೇಳಿ ಬಂತು "ಏನ್ ಗುರೂ ಚೆನ್ನಾಗಿದ್ದೆಯಾ ? " ಅಂತ. ಇದ್ಯಾರಪ್ಪಾ ಅಂತ ತಿರುಗಿ ನೋಡಿದಾಗ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು.

ಹಾಗೆಂದವನು ದಪ್ಪ ಮೀಸೆಯೆ ಖಾಕಿ ಬಟ್ಟೆಯವ ಅರ್ಥಾತ್ ಪೋಲೀಸ್. ನಾನೇನು ತಪ್ಪು ಮಾಡಿದೆ ಅಂತ ನೆನಪಿಸಿಕೊಳ್ಳಲು ಶುರು ಮಾಡಿದೆ. ಕೆಲಸದಲ್ಲಿ ಬಾಸ್ ಮೇಲೆ ಕೋಪ ಬಂತು ಅಂತ ಟಾಯ್ಲೆಟ್’ಗೆ ಹೋಗಿ ಬಾಗಿಲು ಹಾಕಿಕೊಂಡು, ಜೋರಾಗಿ ನೀರು ಬಿಟ್ಟು, ಅವರನ್ನು ಬೈದುಕೊಂಡದ್ದಕ್ಕೆ ಅವರೇನಾದರೂ ಕಂಪ್ಲೈಂಟ್ ಕೊಟ್ರಾ ? ಅದು ಬಿಟ್ರೆ ನನ್ನ ಸ್ಟಾಪಿನಲ್ಲಿ ಇಳಿಯುವಾಗ ಯಾರದೋ ಕಾಲು ತುಳಿದ ನೆನಪು. ಕತ್ತಲಲ್ಲಿ ಗೊತ್ತಾಗಲಿಲ್ಲ. ಅವರೇನಾದರೂ ಕಂಪ್ಲೈಂಟ್ ಕೊಟ್ರಾ ? ಶುದ್ದ ಭಾನುವಾರ ಅರೆಸ್ಟ್ ಆಗ್ತಾ ಇದ್ದೀನಿ. ಕೋರ್ಟ್ ಬಾಗಿಲು ನಾಳೆ ತೆಗೆಯೋದು. ಅಲ್ಲೀ ತನಕ ಲಾಕಪ್’ನಲ್ಲಿ ಯಕ್ಕ ಮಕ್ಕ ಹೊಡೀತಾರೆ. ದೇಹದಲ್ಲಿ ಇರೋ ಎರಡೂವರೆ ಲೀಟರ್ ರಕ್ತನೂ ಮೋರಿಗೆ ಹೋಗುತ್ತೆ ಅಂತೆಲ್ಲ ಏನೇನೋ ಯೋಚನೆ ಮನ ಮುತ್ತಿ ಕಣ್ಣು ಕತ್ತಲು ಬಂದಂತಾಯಿತು.

"ಲೋ! ಸಿಂಗಲೀಕ !! ನಾನು ಕಣೋ ಪರಮೇಶಿ... ನಿನ್ನ ಹೈಸ್ಕೂಲ್ ಕ್ಲಾಸ್ಮೇಟು ...ಇನ್ನೂ ಹಂಗೇ ಪೆಕರು ಪೆಕರಾಗೇ ಇದ್ದೀಯಲ್ಲೋ. ಅದಕ್ಕೇ ಇರಬೇಕೂ ಚಕ್ಕಂತ ಗುರುತು ಹಿಡಿದು ಬಿಟ್ಟೆ ನಿನ್ನಾ" ಅಂದ. ನೆನಪಿಗೆ ಬಂತು. ಶುದ್ದ ತರಳೆ ಆಗಿದ್ದೋನು ಈಗ ಎಸ್.ಐ ಆಗಿದ್ದಾನೆ. ಉಭಯಕುಶಲೋಪರಿಯ ಜೊತೆ ಹಳೆಯ ಕೆಲವು ನೆನಪುಗಳಾದ ಮೇಲೆ ಕಾಫ಼ೀ ಕುಡಿಯೋಣ ಬಾ ಅಂದ. ಬೇಡಾ ಅಂದದಕ್ಕೆ ಬಲವಂತದಿಂದ ಹೆಚ್ಚು ಕಮ್ಮಿ ನನ್ನನ್ನು ದರ ದರ ಎಳೆದುಕೊಂಡೇ ಸ್ಟೇಶನ್’ಗೆ ಹೋದ... ತನ್ನ ಕಾರ್ಯವೈಖರಿಯನ್ನೂ ತೋರಿಸಲು !!

ದೊಡ್ಡ ಮನುಷ್ಯ ನನ್ನ ನೆನಪು ಇಟ್ಟುಕೊಂಡು ಬಲವಂತದಿಂದ ಸ್ಟೇಶನ್’ಗೂ ಕರೆದುಕೊಂಡು ಹೋಗುತ್ತಿದ್ದಾನೆ ಅನ್ನೋ ಹೆಮ್ಮೆ...ಬಡ್ಕೋಬೇಕು.... ನೆಡೆದದ್ದೇ ಬೇರೆ.... ಪರಮೇಶಿಯು ರಾಮಣ್ಣಿಯನ್ನು ದಬ್ಬಿಕೊಂಡು ಹೋಗುವುದನ್ನು ದೂರದಿಂದ ನೋಡಿದ ರಮಣಮೂರ್ತಿಗಳು ಅದನ್ನು ಬೇರೆಯಾಗಿಯೇ ಅರ್ಥೈಸಿಕೊಂಡು ಬಂದ ಕೆಲಸ ಬಿಟ್ಟು ಧಡ ಧಡ ಮನೆ ಕಡೆ ನೆಡೆದು ತಮ್ಮ ಪತ್ನಿ ಹಾಗೂ ಸುಂದ್ರಮ್ಮ ಅಲ್ಲದೇ ಇಡೀ ಬೀದಿಗೇ ಗೊತ್ತಾಗುವಂತೆ ಮಾಡಿದರು. ಪುರುಸೊತ್ತು ಮಾಡಿಕೊಂಡು ವಿಶಾಲೂಗೂ ಹೇಳಿದರು, ಅನ್ನಿ. ರಮಣಮೂರ್ತಿಗಳ ಅಂದರೆ ಅನಸೂಯಾಬಾಯಿಯವರ ನೇತೃತ್ವದಲ್ಲಿ Bail Out Plan ಅಂದರೆ Bail ಕೊಟ್ಟು ಬಿಡಿಸಿಕೊಂಡು ಬರುವ ಬಗ್ಗೆ ತೀರ್ಮಾನವೂ ತೆಗೆದುಕೊಂಡಾಯಿತು.

ನಾನು ಸ್ಟೇಶನ್’ನಿಂದ ಮನೆಗೆ ತಲುಪುವ ಹೊತ್ತಿಗೆ ಬೀದಿ ಜನ ಅಲ್ಲಲ್ಲೇ ನಿಂತು ಗುಸು ಗುಸು ಪಿಸು ಪಿಸು ಅಂತ ಮಾತನಾಡಿಕೊಳ್ಳ ತೊಡಗಿದ್ದರು. ನನಗೆ ಅರ್ಥವಾಗಲಿಲ್ಲ. ...ಮನೆ ಒಳಗೆ ಕಾಲಿಟ್ಟೊಡನೆ ವಿಶಾಲೂ "ಏನ್ರೀ ಸಿಕ್ಕಾ ಪಟ್ಟೆ ಹೊಡದ್ರಾ ? ನೀವೇನು ಮಾಡಿದ್ರಿ? ಅವತ್ತು ನಾಯಿಗೆ ಕಲ್ಲು ಹೊಡೀಬೇಡಿ ಅಂತ ಹೇಳಿದೆ, ಕೇಳಿದ್ರಾ? ಯಾವ ಶ್ರೀಮಂತರ ಮನೆ ನಾಯಿನೋ ಏನೋ. ನಿಮ್ಮ ಮೇಲೆ ಅವರು ದೂರು ಕೊಟ್ಟಿದ್ದಾರೆ..." ಕೆಲವರು ನಮ್ಮ ಮನೆಯಲ್ಲಿ ಆಗಲೇ ಸೇರಿದ್ದರು... ರಮಣಮೂರ್ತಿಗಳು ನುಡಿದರು "ನಾವುಗಳು Bail Out ಬಗ್ಗೇ ಯೋಚನೆ ಮಾಡುತ್ತಿದ್ದೆವು.. ಸದ್ಯ ಅಷ್ಟರಲ್ಲಿ ನೀವೇ ಬಂದ್ರಲ್ಲಾ...." ಸುಂದ್ರಮ್ಮ ನುಡಿದರು "ರ್ರೀ ರಾಮಣ್ಣಿ, ತಪ್ಪಿಸಿಕೊಂಡು ಬಂದ್ರೋ ಹೇಗೆ? ...." ಹೀಗೇ ಸಾಗುತ್ತಿತ್ತು. ಅಲ್ಲಾ, ನಾನು Jail In ನ್ನೇ ಆಗಿಲ್ಲ ಇವರುಗಳು Bail Out ಬಗ್ಗೆ ಯೋಚನೆ ಮಾಡುತ್ತಿದ್ದರೆ... ಎಲ್ಲಾ ಈ ರಮಣಮೂರ್ತಿಗಳದ್ದೇ ಕಿತಾಪತಿ ಇರಬೇಕು ... ಇಲ್ಲಿ ಬಂದು ಊದುವ ಬದಲು ಸ್ಟೇಷನ್’ಗೆ ಬರಬಹುದಿತ್ತಲ್ಲಾ ? ಕಾಫ಼ೀ ಕುಡಿದ ಮನೆಗೆ ಎರಡು ಬಗೀತಾರೆ, ಥತ್ !

ಎಲ್ಲರನ್ನೂ ಹೊರಗೆ ಕಳಿಸಿ, ವಿಶಾಲೂನ್ನ ಸಮಾಧಾನ ಮಾಡಿ ವಿಷಯವನ್ನು ವಿವರಿಸಿದ ಮೇಲೆ, ಮುಖದಲ್ಲಿ ಕಾಂತಿ ಅರಳಿತು .... ಅವಳು ಈ ವರದಿಯನ್ನು ಸವಿಸ್ತಾರವಾಗಿ ಅನಸೂಯಾಬಾಯಿಯ ಕಿವಿಗೆ ಹಾಕಿದಳು. ಅವರಿಂದ ಇಡೀ ಬೀದಿಗೆ ತಿಳಿಯುತ್ತದೆ ಎಂಬುದು ನಿರ್ವಿವಾದ....

ಹೋಗ್ಲಿ ಬಿಡಿ.... ಯಾವುದು ಏನೇ ಇರಲಿ .. ಈ ಭಾನುವಾರದಿಂದ, ನಾನು ಅಂದರೆ ರಾಮಣ್ಣಿ ಇನ್ನು ಮುಂದೆ ಬಾಸ್’ನ ಮನಸ್ಸಿನ್ನಲ್ಲಿ ಮಾತ್ರ ಬೈದುಕೊಳ್ಳುತ್ತೇನೆ, ಬಸ್ಸಿನಿಂದ ಇಳಿಯುವಾಗ ಯಾರ ಕಾಲೂ ತುಳಿಯುವುದಿಲ್ಲ ಮತ್ತು ಯಾವುದೇ ನಾಯಿ ನಮ್ಮ ಮನೆ ಮುಂದೆ ಗಲೀಜು ಮಾಡಲಿ ಅಥವಾ ಸುಮ್ಮನೆ ಬೊಗಳುತ್ತಿರಲಿ ಕಲ್ಲು ಹೊಡೆಯುವುದಿಲ್ಲ.... ಇದು ನನ್ನ ನೂತನ ವರ್ಷದ resolution.... ನಿಮ್ಮದು ?

*****

ಕನ್ನಡಧ್ವನಿಯ ಓದುಗರೆಲ್ಲರಿಗೂ ರಾಮಣ್ಣಿ-ವಿಶಾಲೂ ಕುಟುಂಬದಿಂದ ನೂತನ ವರ್ಷದ ಹಾರ್ದಿಕ ಶುಭಾಶಯಗಳು ...