ರಾಮನ ಡೋಲಿನ ನಾದ
( ಜಲ ಷಟ್ಪದಿ)
ಡೋಲು ಬಾರಿಸಿ
ಹಾಲು ಕುಡಿದನು
ಸೋಲನರಿಯದ ರಾಮನು|
ಕಾಲ ಮೇಲೆಯೆ
ಡೋಲನಿಕ್ಕುತ
ಬಾಲ ಪಂದ್ಯವ ಗೆದ್ದನು||
ಅಂಗಿ ತೊಟ್ಟನು
ರಂಗು ರಂಗಲಿ
ಚಂಗು ಚಂಗನೆ ಹಾರುತ|
ಭೃಂಗದಂತೆಯೆ
ಶೃಂಗದಲ್ಲಿಯೆ
ಹಂಗು ತೊರೆದನು ಬಡಿಯುತ||
ಎಣಿಕೆ ಮಾಡಲು
ಗುಣಿಕೆ ಬಡಿತವ
ತಣಿಸಿ ಮನವದು ನಾದವು|
ಉಣಿಸಿ ಗೀತವು
ಕುಣಿಸಿ ಹೃದಯವ
ದಣಿಯದಂತಹ ಮೇಳವು||
ಚಿಕ್ಕ ಮಕ್ಕಳು
ನಕ್ಕು ನಗುತಲಿ
ಹೊಕ್ಕು ಬಡಿದರು ಡೋಲನು|
ರೆಕ್ಕೆ ಬಡಿಯುವ
ಹಕ್ಕಿಯಂತೆಯೆ
ಚುಕ್ಕೆಯಾದನು ರಾಮನು||
ಪುಳಕಗೊಳ್ಳಲು
ತಳುಕ ತೋರುತ
ಚುಳುಕ ಗುಣಿಯ ಗತ್ತಲಿ|
ಹುಳುಕುಯಿರದಾ
ಸೆಳೆದು ಮನವನು
ಕಳೆಯ ಹೆಚ್ಚಿಸಿ ಡೋಲಲಿ||
ಕೆಚ್ಚಿನೆದೆಯಲಿ
ಮೆಚ್ಚಿ ವೀರನ
ತುಚ್ಛ ಕಂಡರು ಕೆಲವರು|
ಹುಚ್ಚನೆಬ್ಬಿಸಿ
ಹುಚ್ಚನಾಗಿಸಿ
ನಿಚ್ಚ ಮನವನ್ನರಿತರು||
ಮೇಳ ಸದ್ದನು
ಕೇಳಿಯೆದ್ದನು
ಢಾಳ ಬಣ್ಣದ ಬಸವನು|
ತಾಳ ಮೇಳಕೆ
ಬೋಳು ಬಸವನು
ಧೂಳನೆಬ್ಬಿಸಿ ಕುಣಿದನು||
ಹಾರಿ ಕುಣಿಯುತ
ಮೀರಿ ನೆಗೆಯುತ
ಭಾರಿ ಗಾತ್ರದ ದೇವನು|
ಸೇರಿ ಗುಂಪಲಿ
ತೂರಿ ಬಂದಿತು
ಯಾರು ಕಾಣದ ಬಸವನು||
ತುಂಟ ಬಾಲಕ
ಘಂಟೆ ಬಾರಿಸಿ
ತಂಟೆ ಮಾಡದೆ ಗುಣಿಯಲಿ|
ನೆಂಟರೆಲ್ಲರು
ಪಂಟು ಮಾತಲಿ
ತುಂಟ ಬಾಲನ ಮೆಚ್ಚಲಿ||
ಸಿದ್ದನಾಗಿಯೆ
ಗೆದ್ದು ಬಂದನು
ಬುದ್ದನಂತೆಯೆ ಹಾಸದಿ|
ಜಿದ್ದಿನಿಂದಲೆ
ಬಿದ್ದು ಗೆದ್ದನು
ಸುದ್ದಿಯಾದನು ಪಂದ್ಯದಿ||
*ಶಂಕರಾನಂದ ಹೆಬ್ಬಾಳ*