ರಾಯರು ಬಂದರು ಮಾವನ ಮನೆಗೆ

ರಾಯರು ಬಂದರು ಮಾವನ ಮನೆಗೆ

ಬರಹ

ರಚನೆ: ಕೆ.ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು, ತುಂಬಿದ ಚಂದಿರ ಬಂದಿತ್ತು |ಪ್|

ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು
ಒಳಗಡೆ ದೀಪದ ಬೆಳಕಿತ್ತು |೧|

ಘಮ ಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸ-ಗಸೆ ಪಾಯಸ ರಾಯರ ಕರೆದಿತ್ತು
ಭೂಮಿಗೆ ಸ್ವರ್ಗವೆ ಇಳಿದಿತ್ತು |೨|

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
ಪದುಮಳು ಹಾಕಿದ ಹೂವಿತ್ತು |೩|

ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಸು ನಗುತ
ಬಿಸಿ ಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ
ಮಡದಿಯ ಸದ್ದೆ ಇರಲಿಲ್ಲ |೪|

ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮ
ಮೆಲು ದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ
ನಕ್ಕಳು, ರಾಯರು ನಗಲಿಲ್ಲ |೫|

ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ
ಕಣ್ಣನು ಕಡಿದರು ನಿದ್ರೆಯು ಬಾರದು ಪದುಮಳು ಒಳಗಿಲ್ಲ
ಪದುಮಳ ಬಳೆಗಳ ಧ್ವನಿ ಇಲ್ಲ |೬|

ಬೆಳಗಾಯಿತು ಸರಿ ಹೊರಡುವೆನಂದರು ರಾಯರು ಮುನಿಸಿನಲಿ
ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ
ಯಾರಿಗೆ ಎನ್ನಲು ಹರುಶದಲಿ |೭|

ಪದುಮಳು ಬಂದಳು ಹೂವನು ಮುಡಿಯುತ
ರಾಯರ ಕೊಣೆಯಲಿ |೮|