ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತ...

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತ...

ರಾಷ್ಟ್ರ ಅಥವಾ ದೇಶ ಎಂದರೇನು  ? ರಾಷ್ಟ್ರ ಎಂಬುದು ಕಲ್ಲು ಮಣ್ಣು ಬೆಟ್ಟ ಗುಡ್ಡ ನದಿ ಕಾಡುಗಳ ಒಂದು ಪ್ರದೇಶವೇ  ಅಥವಾ ರಾಷ್ಟ್ರ ಎಂಬುದು ಆ ನೆಲದಲ್ಲಿ ಬದುಕುತ್ತಿರುವ ಎಲ್ಲಾ ಜೀವ ಚರಗಳ ವಾಸಸ್ಥಾನವೇ ಅಥವಾ ರಾಷ್ಟ್ರ ಎಂಬುದು ಋತುಮಾನಗಳ ಹಗಲು ರಾತ್ರಿಗಳ ಪ್ರಾಕೃತಿಕ ಸೃಷ್ಟಿಯೇ ಅಥವಾ ರಾಷ್ಟ್ರ ಎಂಬುದು ದೇವರು ಧರ್ಮ ಸಂವಿಧಾನ ಆಡಳಿತ ಮುಂತಾದ ನೀತಿ ನಿಯಮಗಳ ಪ್ರಯೋಗ ಶಾಲೆಯೇ ? ಹೀಗೆ ಹಲವಾರು ಪ್ರಶ್ನೆಗಳು ಸಹಜವಾಗಿ ಉದ್ಭವವಾಗುತ್ತದೆ. 

ಬಹುಶಃ ಹೀಗೆ ಸೃಷ್ಟಿಯಾಗುವ ಎಲ್ಲಾ ಪ್ರಶ್ನೆಗಳು ಅಂಶಗಳು ಮುಂತಾದ ಎಲ್ಲವೂ ಸಮನ್ವಯಗೊಂಡ ವಿಶಾಲ ಅರ್ಥದ ಸರಳ ರೂಪವೇ ಒಂದು ರಾಷ್ಟ್ರ ಅಥವಾ ದೇಶ ಎಂದು ಪರಿಗಣಿಸಬಹುದು. ಪ್ರಾಕೃತಿಕ ಪ್ರದೇಶ - ಜೀವಚರಗಳು ಮತ್ತು ಆಡಳಿತ ವ್ಯವಸ್ಥೆಯ ಸಮ್ಮಿಲನವೇ ದೇಶ ಎಂದು ಅತ್ಯಂತ ಸರಳವಾಗಿ ಹೇಳಬಹುದು. ಹಾಗಾದರೆ ರಾಷ್ಟ್ರೀಯತೆ ಎಂದರೇನು ?

ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆಗೆ ಗೌರವ ನೀಡುವುದು, ರಾಷ್ಟ್ರದ ಪರವಾಗಿ ಘೋಷಣೆ ಕೂಗುವುದು, ಪ್ರತಿಭಟಿಸುವುದು, ಪ್ರತಿನಿತ್ಯ ರಾಷ್ಟ್ರದ ಜಪ ಮಾಡುವುದು ಮಾತ್ರವೇ ರಾಷ್ಟ್ರೀಯತೆಯೇ ? ನಾವು ವಾಸಿಸುವ ರಾಷ್ಟ್ರದ ಬಗೆಗಿನ ಪ್ರಾಮಾಣಿಕ ಪ್ರೀತಿ ಗೌರವ ಅಭಿಮಾನ, ರಕ್ಷಣೆ ಸಮಯ ಸಂದರ್ಭದಲ್ಲಿ ತ್ಯಾಗ, ಒಗಟ್ಟು ಮತ್ತು ಅನಿವಾರ್ಯದಲ್ಲಿ ಪ್ರಾಣತ್ಯಾಗ ಮುಂತಾದ ಒಟ್ಟು ಭಾವಗಳ ಮೊತ್ತವೇ ರಾಷ್ಟ್ರೀಯತೆ.

ಈ ನಿಟ್ಟಿನಲ್ಲಿ ಭಾರತದ ಜನರ ( ಎಲ್ಲಾ ಜಾತಿ ಧರ್ಮ ಮತ ಪಂಥ ಭಾಷೆ ಪ್ರದೇಶಗಳನ್ನು ‌ಒಳಗೊಂಡು ) ರಾಷ್ಟ್ರೀಯ ಪ್ರಜ್ಞೆಯ ಗುಣಮಟ್ಟ ಹೇಗಿದೆ ? ಯಾವ ದಿಕ್ಕಿನಲ್ಲಿ ಸಾಗುತ್ತಿದೆ ? ಅದರ ಆಳ‌ ವಿಸ್ತಾರ ವ್ಯಾಪ್ತಿ ಗಟ್ಟಿತನ ನೈಜತೆ ಎಷ್ಟು ? ಅದರ ಭ್ರಮೆ ‌ವಾಸ್ತವ ಪೊಳ್ಳುತನ ಕಪಟತನ ಅಜ಼್ಞಾನ ಸ್ವಾರ್ಥ ಎಷ್ಟು ? ಅದರೊಳಗಿನ‌ ರಾಜಕೀಯ ಎಷ್ಟು ? ಜೊತೆಗೆ ರಾಷ್ಟ್ರೀಯತೆಯ ವಿರೋಧ ಪದದ ಅರ್ಥ ರಾಷ್ಟ್ರ ದ್ರೋಹ ಎಂದರೇನು ? ಅದರ ಪರಿಕಲ್ಪನೆ ಯಾವ ಅಂಶಗಳನ್ನು ಒಳಗೊಂಡಿದೆ ? ಈ ಬಗ್ಗೆ ಈ‌ ಕ್ಷಣದ ಅನುಭವದ ಆಧಾರದ ಮೇಲೆ ಒಂದು ಅವಲೋಕನ...

( ಇದು ಭಾರತ ಒಂದು ಗಣರಾಜ್ಯಗಳ ಒಕ್ಕೂಟವಾಗಿ‌ ರಚನೆಯಾದ ಮತ್ತು ಸಂವಿಧಾನ ಅಂಗೀಕಾರವಾದ ದಿನದಿಂದ ಆದ ಭಾರತ ‌ದೇಶಕ್ಕೆ ಮಾತ್ರ ಅನ್ವಯಿಸುತ್ತದೆ ) 

ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಬೇಕೆಂದರೆ....ರಾಷ್ಟ್ರೀಯತೆಯ ಪರಿಕಲ್ಪನೆ ಸರಳವೂ ಹೌದು ಸಂಕೀರ್ಣವೂ ಹೌದು. ನೇರ ದೃಷ್ಟಿಕೋನದಿಂದ ಸಹಜವಾಗಿ ಯೋಚಿಸಿದರೆ ಒಂದು ಅರ್ಥ ಹೊಳೆಯುತ್ತದೆ. ಅದನ್ನೇ ರಾಜಕೀಯಗೊಳಿಸಿ ಸಿದ್ದಾಂತಗಳ ಹಿನ್ನೆಲೆಯಲ್ಲಿ ವಾದ ಮಾಡಿದರೆ ಹೆಚ್ಚು ಸಂಕೀರ್ಣವಾಗಿ ಭಾಸವಾಗುತ್ತದೆ. ಉದಾಹರಣೆಗೆ....

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಪರಿವಾರದವರು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಹೇಳುವಂತೆ  ಕಮ್ಯೂನಿಸ್ಟ್‌ರು, ಮುಸ್ಲಿಂ ಕ್ರಿಶ್ಚಿಯನ್ ಸಂಘಟನೆಗಳು ಕೆಲವೊಮ್ಮೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಕೆಲವು ರಾಜಕೀಯ ಪಕ್ಷಗಳನ್ನು ದೇಶದ್ರೋಹಿಗಳು ಎಂದು ಕರೆಯುತ್ತಾರೆ. ಅದಕ್ಕೆ ವಿರುದ್ಧವಾಗಿ ಸಂಘ ಪರಿವಾರ ಮತ್ತು ಅದರ ಚಟುವಟಿಕೆಗಳನ್ನು ಈ ಪಕ್ಷಗಳು ಸಹ ರಾಷ್ಟ್ರ ದ್ರೋಹಿಗಳು ಎಂದೇ ಕರೆಯುತ್ತಾರೆ. ಅಂದರೆ ರಾಷ್ಟ್ರೀಯತೆ ಮತ್ತು ರಾಷ್ಟ್ರ ದ್ರೋಹ ಇಲ್ಲಿ ಹೆಚ್ಚು ಸಂಕೀರ್ಣ ಮತ್ತು ಅನುಮಾನಾಸ್ಪದವಾಗುತ್ತದೆ. ಅದರಲ್ಲೂ ಸಮೂಹ ಸಂಪರ್ಕ ಕ್ರಾಂತಿಯ ಈ ಸಂದರ್ಭದಲ್ಲಿ ಇದು ಸಾಮಾನ್ಯ ಜನರಲ್ಲಿ ಅತ್ಯಂತ ಕ್ಲಿಷ್ಟಕರ ಅರ್ಥಗಳನ್ನು ಹೊಮ್ಮಿಸುತ್ತಿದೆ. ಸರಿಯಾದ ನಿರ್ಧಾರಕ್ಕೆ ಬರದೆ ಗೊಂದಲಕ್ಕೊಳಗಾಗಿದ್ದಾರೆ.

ರಾಷ್ಟ್ರೀಯತೆ ಎಂದರೆ ರಾಷ್ಟ್ರದ ಮೇಲಿನ ಪ್ರೀತಿ ಎಂಬುದು ನಿಜ. ಆದರೆ ಅದನ್ನು ವ್ಯಕ್ತಪಡಿಸುವ ರೀತಿ ಹೇಗೆ. ಅದನ್ನು ಅಳೆಯುವ ಮಾನದಂಡ ಏನು ? ಅವರವರ ಭಾವಕ್ಕೆ ಅವರವರ ಮೂಗಿನ ನೇರಕ್ಕೆ ರಾಷ್ಟ್ರೀಯತೆ ಮತ್ತು ರಾಷ್ಟ್ರ ದ್ರೋಹವನ್ನು ಅರ್ಥೈಸುವುದಾದರೆ ಅದು ಮತ್ತೊಂದು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ನಮ್ಮದು ಹಿಂದು ಧರ್ಮ ಅಥವಾ ಸನಾತನ ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಅಥವಾ ನಡೆಯಬೇಕಾದ ದೇಶ ಎನ್ನುವುದು ರಾಷ್ಟ್ರೀಯತೆಯೇ? ರಾಷ್ಟ್ರ ವಿರೋಧಿಯೇ ? ಅಪರಾಧವೇ ? ಸರಿಯಾದ ನಿಲುವೇ ?  

ನಮ್ಮದು ಇಸ್ಲಾಂ ಧರ್ಮ. ನಾವು ಷರಿಯತ್ ನಿಯಮದಂತೆ ನಾವು ಬದುಕುತ್ತೇವೆ. ಸಂವಿಧಾನವನ್ನೂ ಗೌರವಿಸುತ್ತೇವೆ. ಆದರೆ ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಖುರಾನ್ ನಮಗೆ ಅತ್ಯಂತ ಶ್ರೇಷ್ಠ ಎನ್ನುವ ಭಾವನೆ ಮತ್ತು ವರ್ತನೆ ರಾಷ್ಟ್ರೀಯತೆಯೇ ? ದೇಶ ದ್ರೋಹವೇ ? ಅಪರಾಧವೇ ? ಸರಿಯಾದ ನಿಲುವೇ ? ಇದೇ ರೀತಿ ಕ್ರಿಶ್ಚಿಯನ್ ಭೌದ್ದ ಜೈನ್ ಸಿಖ್ ಪಾರ್ಸಿ ಬಸವ ಧರ್ಮದ ರಾಷ್ಟ್ರ ಎಂಬ ಬಹಿರಂಗ ಭಾವನೆ ಮತ್ತು ವರ್ತನೆ ಸಂವಿಧಾನಾತ್ಮಕವಾಗಿ ಎಷ್ಟು ಸರಿ ? ಎಷ್ಟು ತಪ್ಪು ? ಎಷ್ಟು ಸಹನೀಯ ?

ಮದರಸಾಗಳಲ್ಲಿ ಖುರಾನ್, ಕ್ರಿಶ್ಚಿಯನ್ ಶಾಲೆಗಳಲ್ಲಿ ಬೈಬಲ್, ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಭೋದಿಸುವುದು ಸಂವಿಧಾನಕ್ಕೆ ಮಾಡುವ ಅಪಮಾನವೇ ಅಥವಾ ಅದಕ್ಕೆ ಪೂರಕವೇ ? ಭವಿಷ್ಯದಲ್ಲಿ ಇದರ ಪರಿಣಾಮ ಊಹಿಸಿದರೆ ಇದು ರಾಷ್ಟ್ರೀಯತೆಯ ಪರಿಕಲ್ಪನೆಗೆ ಅಪಾಯಕಾರಿ ಎಂದೆನಿಸುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಾವು ಭಾರತೀಯರು ಮತ್ತು ಭಾರತದ ಸಂವಿಧಾನದ ನೀತಿ ನಿಯಮಗಳಿಗೆ ನಿಷ್ಠರು. ಅದೇ ಭಾರತದ ನಿಜವಾದ ಆತ್ಮ ಎಂದು ಪ್ರತಿಪಾದಿಸುವವರು ನಿಜವಾದ ರಾಷ್ಟ್ರೀಯವಾದಿಗಳು ಎನ್ನಬಹುದೇ?

ದೇಶ ಮತ್ತು ಧರ್ಮದ ಆಯ್ಕೆಯಲ್ಲಿ ದೇಶ ಮೊದಲು‌ ಎನ್ನುವವರು ರಾಷ್ಟ್ರೀಯವಾದಿಗಳು, ಧರ್ಮ ಮುಖ್ಯ ಎನ್ನುವವರು ರಾಷ್ಟ್ರ ವಿರೋಧಿಗಳು. ಎರಡೂ ಬೇಕು ಎನ್ನುವವರು ಅಪಾಯಕಾರಿಗಳು ಎಂದು ಪರಿಗಣಿಸಬಹುದೇ ಅಥವಾ ಅಥವಾ ಅದು ಅವರವರ ಭಾವ ಸ್ವಾತಂತ್ರ್ಯ ಎಂದು ನಿರ್ಲಕ್ಷಿಸಬಹುದೇ.... ಸರ್ಕಾರಿ ‌ಸೇವಕರಾಗಿ ಸರ್ಕಾರದ ಸಂಬಳ ಪಡೆದು ತಮ್ಮ ಕಾಯಾ ವಾಚಾ ಮನಸಾ ಈ‌ ದೇಶದ ಪ್ರಜೆಗಳ ಸೇವೆ ಮಾಡುವವರು ನಿಜವಾದ ರಾಷ್ಟ್ರೀಯವಾದಿಗಳು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಲಂಚ ಮುಂತಾದ ‌ಆಮಿಷಗಳಿವೆ ಒಳಗಾಗಿ ಜನರನ್ನು ಶೋಷಣೆಗೆ ಒಳಪಡಿಸುವವರು ಅಪರಾಧಿಗಳು ಮತ್ತು ಪರೋಕ್ಷವಾಗಿ ದೇಶದ್ರೋಹಿಗಳು ಎಂದು ಭಾವಿಸಬಹುದೇ?

ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಪ್ರತಿಭೆ ಸಾಮರ್ಥ್ಯ ಸೇವಾ ಮನೋಭಾವದಿಂದ ಆಯ್ಕೆಯಾಗಿ‌ ಸಂವಿಧಾನ ಬದ್ದವಾಗಿ ನಿಷ್ಠೆಯಿಂದ ಕೆಲಸ ಮಾಡುವ ಎಲ್ಲಾ ಜನ ಪ್ರತಿನಿಧಿಗಳು ರಾಷ್ಟ್ರೀಯವಾದಿಗಳು. ಚುನಾವಣೆಯಲ್ಲಿ ‌ಹಣ ಹೆಂಡ ಜಾತಿ ಧರ್ಮ ಸುಳ್ಳು ಭರವಸೆಗಳ ಮೂಲಕ ಆಯ್ಕೆಯಾಗುವವರು ಮತ್ತು ತದನಂತರ ತಮ್ಮ ಸ್ಥಾನದಿಂದ ಭ್ರಷ್ಟ ಮತ್ತು ಸ್ವಜನ ಪಕ್ಷಪಾತ ಮಾಡುವವರು ಅಪರಾಧಿಗಳು ಮತ್ತು ಪರೋಕ್ಷ ದೇಶ ದ್ರೋಹಿಗಳು ಎಂದು ಕರೆಯಬಹುದೇ?

ಚುನಾವಣೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವ ಘನತೆ ಒಳ್ಳೆಯತನಗಳನ್ನು ನಿರ್ಲಕ್ಷಿಸಿ ಆತನ ಜಾತಿ‌ ಧರ್ಮ ಹಣ ತೋಳ್ಬಲದ ಪ್ರಭಾವಕ್ಕೆ ಒಳಗಾಗಿ ಮತ ಚಲಾಯಿಸುವುದು ಕೂಡ ಅತ್ಯಂತ ಅಜ್ಞಾನ ಅಪರಾಧ ಮತ್ತು ಪರೋಕ್ಷ ದೇಶದ್ರೋಹವೇ ಎಂದೂ ಭಾವಿಸಬಹುದಲ್ಲವೇ? ಲಾಭದ ದುರಾಸೆಯಿಂದ ನೀರು ಗಾಳಿ ಆಹಾರಗಳನ್ನು ಕಲಬೆರಕೆ ಮಾಡಿ, ಖೋಟಾ ನೋಟು ಮುದ್ರಿಸಿ ಇಡೀ ವ್ಯವಸ್ಥೆಯನ್ನು ಕಲ್ಮಶ ಮಾಡಿ ದೇಹ ಮನಸ್ಸುಗಳನ್ನು ಮಲಿನಗೊಳಿಸುವುದು ರಾಷ್ಟ್ರ ದ್ರೋಹ ಎಂದು ಪರಿಗಣಿಸಬಹುದೇ ? ಏಕೆಂದರೆ ಇದರಿಂದ ದೇಶ ದುರ್ಬಲವಾಗುವುದಿಲ್ಲವೇ ?

ಒಬ್ಬರಿಗೊಬ್ಬರು ದ್ವೇಷಿಸುತ್ತಾ, ಬಹಿಷ್ಕಾರಗಳನ್ನು ಹಾಕುತ್ತಾ, ಅಸಹಿಷ್ಣತೆ ವ್ಯಕ್ತಪಡಿಸುತ್ತಾ, ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದ ಮಾತ್ರಕ್ಕೆ ಅವರನ್ನು ‌ದೇಶದ್ರೋಹಿಗಳು ಎಂದು ಆರೋಪ ಮಾಡುತ್ತಾ, ಧರ್ಮದ ಹುಳುಕುಗಳನ್ನು ಹೇಳಿದರೆ ಅದನ್ನು ಧರ್ಮ ದ್ರೋಹ ಎನ್ನುತ್ತಾ ಇಡೀ ದೇಶದಲ್ಲಿ ಅಸಹನೀಯ ವಾತಾವರಣ ಸೃಷ್ಟಿಸುತ್ತಿರುವವರು ಮೇಲ್ನೋಟಕ್ಕೆ ‌ರಾಷ್ಟ್ರೀಯವಾದಿಗಳು ಎನಿಸಿದರು ಆಂತರ್ಯದಲ್ಲಿ ಅವರು ದೇಶಕ್ಕೆ ಮಾರಕ ಎಂದಾಗುವುದಿಲ್ಲವೇ? ಹೀಗೆ ದೀರ್ಘವಾಗಿ ಬೆಳೆಯುತ್ತಾ ಹೋಗುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗಿದರೆ ರಾಷ್ಟ್ರೀಯತೆ ಮತ್ತು ರಾಷ್ಟ್ರ ದ್ರೋಹದ ವಾಸ್ತವದ ಹತ್ತಿರಕ್ಕೆ ‌ಸಾಗಬಹುದು.

ಆದರೂ ಅತ್ಯಂತ ಸರಳವಾಗಿ ಹೇಳುವುದಾದರೆ.... ರಾಷ್ಟ್ರೀಯತೆಗೆ ಅತಿ ಹತ್ತಿರದ ‌ಚಿಂತನೆಗಳೆಂದರೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಭಾರತೀಯತೆ ಮತ್ತು ಮಹಾತ್ಮ ಗಾಂಧಿಯವರು ನಡೆ ನುಡಿಗಳು ನಿಜಕ್ಕೂ ಭಾರತದ ರಾಷ್ಟ್ರೀಯತೆಯ ನೈಜ ಅರ್ಥವನ್ನು ಕೊಡುತ್ತದೆ. ಜೊತೆಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಡಕ ಮಾಡಿರುವ " ಭಾರತೀಯ ಪ್ರಜೆಗಳಾದ ನಾವು " ಎಂಬ ಪೀಠಿಕೆ ಮತ್ತು ಹಕ್ಕುಗಳು ಹಾಗು ಕರ್ತವ್ಯಗಳ ಮಾರ್ಗದರ್ಶನ ರಾಷ್ಟ್ರೀಯತೆಯ ಸ್ಪಷ್ಟ ಮತ್ತು ನಿಕಟ ಅರ್ಥವನ್ನು ಹೊಮ್ಮಿಸುತ್ತದೆ. ಗೌತಮ ಬುದ್ದರ ಮಾನಸಿಕತೆ ಮತ್ತು ಬಸವಣ್ಣನವರ ಸಾಮಾಜಿಕತೆ ರಾಷ್ಟ್ರೀಯತೆಯ ಚಿಂತನೆಗೆ ಪೂರಕವಾಗಿ ಕೆಲಸ ಮಾಡುತ್ತದೆ.  ಇದು ಇನ್ನೂ ವಿಸ್ತಾರಗೊಳ್ಳುವ ಒಂದು ಆಳ ವಿಷಯ. ಮುಂದೆ ಈ ಬಗ್ಗೆ ಮತ್ತೊಮ್ಮೆ ಚರ್ಚಿಸೋಣ. ನಿಮ್ಮ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ