ರಾಷ್ಟ್ರೀಯ ಪೋಷಕರ ದಿನದಂದು...

ರಾಷ್ಟ್ರೀಯ ಪೋಷಕರ ದಿನದಂದು...

ಪೋಷಕರೆಂದರೆ ಹೆತ್ತವರು ಮಾತ್ರವಲ್ಲ, ಮಕ್ಕಳ ಬೆಳವಣಿಗೆ, ಏಳಿಗೆಗಾಗಿ ಶ್ರಮಿಸುವವರೂ ಇದ್ದಾರೆ. ತಂದೆ ತಾಯಿ ಇಲ್ಲದ ಮಗುವಿಗೆ ಮನೆಯ ಹಿರಿಯರೋ, ಇನ್ನಾರೋ ಪೋಷಕರಾಗಿರಬಹುದು. ಸಾಕಿ ಸಲಹುವ ಹೆತ್ತವರನ್ನು, ಪೋಷಕರನ್ನು, ವೃದ್ಧಾಪ್ಯದಲ್ಲಿ ಬೀದಿಪಾಲು ಮಾಡದೆ, ಸ್ನೇಹ, ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳಬೇಕು. ಬದುಕಿನ ಬವಣೆಯಲಿ ನೊಂದವರಿಗೆ ಮತ್ತಷ್ಟು ನೋವುಂಟುಮಾಡದೆ ಇರುವುದೇ ಹಿರಿಯರಿಗೆ ಮಕ್ಕಳು ನೀಡುವ ಗೌರವ. ಅವರಿಗೆ ಇಳಿವಯಸ್ಸಿನಲ್ಲಿ ಬೇಕಾದ್ದು ಚಿನ್ನ, ವಸ್ತ್ರ ಪಟ್ಟೆ ಪೀತಾಂಬರ, ಮಹಡಿ ಮನೆಯಲ್ಲ. ಮಕ್ಕಳ ಬೊಗಸೆಯಷ್ಟು ಪ್ರೀತಿ, ಹತ್ತಿರ ಕುಳಿತು ನಾಲ್ಕು ಮಾತು, ಅನಾರೋಗ್ಯಕ್ಕೆ ಉಪಚಾರ, ಒಂದು ಹಿಡಿ ಅನ್ನ ಮಾತ್ರ. ಅದನ್ನೇ ನೀಡದೆ, ಹಂಗಿಸುವ ಮಾತುಗಳನ್ನಾಡುತ್ತ, ಅವರು ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಅನುಭವಿಸುವ ಮಕ್ಕಳನ್ನು ನೋಡುತ್ತಿದ್ದೇವೆ. ಕರುಳ ಸಂಬಂಧದ ಅರಿವೇ ಇಲ್ಲದಂತೆ ಇರುವವರೂ ಇದ್ದಾರೆ. ಇಳಿವಯಸ್ಸಿನವರ ಕಣ್ಣೀರು ಒಳ್ಳೆಯದಲ್ಲ. 'ಹಣ್ಣೆಲೆ ಬಿದ್ದಾಗ ಚಿಗುರೆಲೆ ನಗುವುದಂತೆ,' ಆದರೆ ಮುಂದೊಂದು ದಿನ ನನಗೂ ಈ ಗತಿ ಬರಬಹುದೆಂಬ ಪ್ರಜ್ಞೆಯೇ ಇಲ್ಲ. ಹಾಗೆ ಮಾಡದಿರೋಣ. ಭಗವಂತನ ಕಣ್ಣಿನಿಂದ ತಪ್ಪಿಸಲಾಗದು. 'ಅವರ ಗಳಿಕೆ ಬೇಕು, ಸಾಕಲಾರೆನು' ಎನ್ನುವ ಮನೋಭಾವ ತಪ್ಪು. ಕೈಗಳ ಊರುಗೋಲಾಗೋಣ. ಕಾಳಜಿವಹಿಸೋಣ. ಗೊತ್ತಿದ್ದು,ಗೊತ್ತಿದ್ದು ತಪ್ಪುಗಳಾಗದಂತೆ ಎಚ್ಚರವಹಿಸೋಣ. 'ಎಸಗಿದ ಕರ್ಮಫಲಗಳು ಬೆನ್ನಿಗಂಟಿಯೇ ಬರುವುದಂತೆ' ಬಂಧುಗಳೇ, ಮನೆಯ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಮನುಷ್ಯತ್ವವನ್ನು ಕಲಿಸೋಣ. ಅರ್ಥೈಸಿ ನಡೆದರೆ ಮುಂದೆ ಒಳಿತಾಗಬಹುದು. ರಾಷ್ಟ್ರೀಯ ಪೋಷಕರ ದಿನದ ಶುಭಾಶಯಗಳು. 

(ಜುಲೈ ತಿಂಗಳ ನಾಲ್ಕನೇ ಭಾನುವಾರವನ್ನು (ಈ ವರ್ಷ ಜುಲೈ ೨೮) ರಾಷ್ಟ್ರೀಯ ಪೋಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ