ರಾಷ್ಟ್ರೀಯ ಮತದಾರರ ದಿನ

ರಾಷ್ಟ್ರೀಯ ಮತದಾರರ ದಿನ

ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ ಬಹುದು. ನಮ್ಮ ದೇಶದಲ್ಲಿ ಮತ ಚಲಾಯಿಸಲು ೧೮ ವರ್ಷ ತುಂಬಿರಬೇಕು. ಭಾರತದ ಪ್ರಜೆಯಾಗಿರಬೇಕು. ನೀತಿ ನಿಯಮ ನಿಬಂಧನೆಗಳನ್ನು ಪಾಲಿಸಲೇ ಬೇಕು. ಸಾರ್ವತ್ರಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿರಬೇಕು. ಈ ಬಗ್ಗೆ ಆಯಾಯ ಮತಗಟ್ಟೆ, ಅಲ್ಲಿಯೇ ನಿರ್ದಿಷ್ಟಾಧಿಕಾರಿಗಳ (ಬಿ.ಎಲ್.ಒ) ನೇಮಕ, ತಿದ್ದುಪಡಿ, ತೆಗೆದು ಹಾಕುವುದು, ಸೇರ್ಪಡೆ ಮಾಡುವುದು ಮುಂತಾದ ಪ್ರಕ್ರಿಯೆ ನಡೆಸಲಾಗುವುದು. ಇತ್ತೀಚೆಗೆ ಆಧಾರ್ ಸಂಖ್ಯೆಯನ್ನೂ ಮತದಾರನ ಹೆಸರಿಗೆ ಜೋಡಣೆ ಮಾಡಲಾಗುತ್ತಿದೆ. ಇದರಿಂದ ಸುಳ್ಳು ದಾಖಲೆಗಳನ್ನು, ಕಳ್ಳ ಮತದಾನಗಳನ್ನು ತಡೆಯಲಾಗುತ್ತದೆ. ಓರ್ವ ಮತದಾರ ಹಲವಾರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಅಕ್ಷಮ್ಯ ಅಪರಾಧ. ಇದು ಸಾಬೀತಾದರೆ ದಂಡದ ಜೊತೆ ಜೈಲುವಾಸದ ಶಿಕ್ಷೆಯೂ ಇದೆ. ಭಾರತದ ನಾಗರಿಕರೆನಿಸಿದ ನಾವುಗಳು ಇಂತಹ ಮೋಸಗಳನ್ನು ಖಂಡಿಸಬೇಕಾದುದು ನಮ್ಮ ಜವಾಬ್ದಾರಿ ಸಹ.

ಈ ದಿನ ಪಂಚಾಯತ್ ಮಟ್ಟದಲ್ಲಿ ಮತದಾನದ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆ, ಮಾಹಿತಿ, ಬೀದಿನಾಟಕ ಪ್ರದರ್ಶನ ಇಟ್ಟುಕೊಂಡು ಮತದಾರರಿಗೆ ಜಾಗೃತಿ ಮೂಡಿಸುತ್ತಾರೆ. ಅತ್ಯುತ್ತಮ ಮತದಾರರ ಪಟ್ಟಿ ಕರ್ತವ್ಯ ನಿರ್ವಹಿಸಿದವರನ್ನು ತಾಲೂಕು, ಜಿಲ್ಲಾಮಟ್ಟದಲ್ಲೂ ಅಭಿನಂದಿಸುವುದೂ ಇದೆ. ಚುನಾವಣಾ ಆಯೋಗದ ಸ್ಥಾಪನಾ ದಿನದಂಗವಾಗಿ ಈ ದಿನವನ್ನು ‘ರಾಷ್ಟ್ರೀಯ ಮತದಾರರ ದಿನ’ ವೆಂದು ಘೋಷಿಸಲಾಯಿತು. ಮುಖ್ಯವಾಗಿ ಸಮರ್ಥ ಯುವ ಮತದಾರರನ್ನು ಆಕರ್ಷಿಸಲು ಬೃಹತ್ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ವಯಸ್ಸುವಾರು ಸೇರ್ಪಡೆಯ ಅಂಕಿ ಅಂಶಗಳನ್ನು ಸಹ ಕ್ರೋಢೀಕರಿಸಿದರು. ಬಿ.ಎಲ್.ಒ ಮತ್ತು ಗ್ರಾಮ ಸಹಾಯಕರು, ಸಿಬ್ಬಂಧಿಗಳು ತಾಲೂಕು, ಹೋಬಳಿ ಕಂದಾಯ ಮಟ್ಟದ ಅಧಿಕಾರಿಗಳು, ಕೆಲವೆಡೆ ಶಾಲಾ ಮುಖ್ಯಸ್ಥರು ಸಹ ಈ ಪ್ರಕ್ರಿಯೆಯಲ್ಲಿ (ಅಂಕಿ ಅಂಶಗಳ ದಾಖಲೆ ಸಂಗ್ರಹಿಸಲು) ನಿರಂತರ ಕರ್ತವ್ಯ ನಿರ್ವಹಿಸುತ್ತಾರೆ.

ಮತದಾರರನ್ನು ಎಚ್ಚರಿಸುವುದು ಇದರ ಒಂದು ಅಂಗ. ‘ಪ್ರತಿಜ್ಞಾವಿಧಿ’ ಯ ಸಾಮೂಹಿಕ ಘೋಷಣೆ ಬೂತು ಮಟ್ಟದಲ್ಲಿ ಮಾಡಲಾಗುವುದು. ಹೊಸ ಮತದಾರರ ಗುರುತುಚೀಟಿ ವಿತರಿಸಲಾಗುವುದು. ನ್ಯಾಯ ಸಮ್ಮತ ಮತ, ನಿರ್ಭೀತಿ, ಕೊಡುಗೆಗಳಿಗೆ ಬಲಿಯಾಗದೆ, ಧರ್ಮ, ಜನಾಂಗ, ಜಾತಿ, ಮತ, ವ್ಯಕ್ತಿ, ಭಾಷೆ ಯಾವುದಕ್ಕೂ ಒಳಗಾಗದೆ, ಸಮರ್ಥ ಅಭ್ಯರ್ಥಿಯ ಆಯ್ಕೆಯ ದೃಷ್ಟಿಯಿಂದ ಮತ ಚಲಾಯಿಸುವುದೇ ಪ್ರತಿಜ್ಞೆಯ ಸಾರ. ಭಾರತೀಯ ಮತದಾರರಾದ ನಾವೆಲ್ಲರೂ ಜಗೃತಿ ಮೂಡಿಸೋಣ, ಜಾಗ್ರತರಾಗೋಣ. ಶುಭಾಶಯಗಳು

-ರತ್ನಾ ಕೆ ಭಟ್ ತಲಂಜೇರಿ

(ಲೇಖಕರು ೨೦೧೫ರಲ್ಲಿ ಮಂಗಳೂರು ಜಿಲ್ಲಾಮಟ್ಟದಲ್ಲಿ ಸನ್ಮಾನ್ಯ ಜಿಲ್ಲಾಧಿಕಾರಿಗಳಿಂದ ಅಭಿನಂದಿಸಲ್ಪಟ್ಟ ಅತ್ಯುತ್ತಮ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಹಾಗೂ ನಿವೃತ್ತ ಸರಕಾರಿ ಶಾಲಾ ಮುಖ್ಯಸ್ಥರು.*)🙏

ಚಿತ್ರ ಕೃಪೆ: ಇಂಟರ್ನೆಟ್ ತಾಣ