ರಾಷ್ಟ್ರೀಯ ರೈತರ ದಿನ

ರಾಷ್ಟ್ರೀಯ ರೈತರ ದಿನ

ಇಂದು ‘ರಾಷ್ಟ್ರೀಯ ರೈತರ ದಿನ’, ರೈತರು ನಮಗೆಲ್ಲರಿಗೂ ಅನ್ನ ನೀಡುವ,ನಮ್ಮ ಹಸಿವನ್ನು ನೀಗಿಸುವ ಮಹಾನ್ ವ್ಯಕ್ತಿಗಳು ಮತ್ತು ಶಕ್ತಿಗಳು ಎನ್ನಬಹುದು. ಹೊಟ್ಟೆ ಹಸಿವು ಎಲ್ಲರಿಗೂ ಇದೆ. ಬಡವ ಶ್ರೀಮಂತ ಎನ್ನುವ ತಾರತಮ್ಯವಿಲ್ಲ. ಹೊಟ್ಟೆ ತುಂಬಲು ಚಿನ್ನದಿಂದ ಸಾಧ್ಯವಿಲ್ಲ, ಅನ್ನವೇ ಆಗಬೇಕಷ್ಟೆ.

ರಾಷ್ಟ್ರೀಯ ರೈತ ದಿನ, ಭಾರತದ ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್' ಇವರ ಸ್ಮರಣಾರ್ಥ, ಅವರ ಜನ್ಮದಿನವಾದ ಡಿಸೆಂಬರ್ ೨೩ರಂದು ಆಚರಿಸಲಾಗುತ್ತಿದೆ. ಅವರ ಅಲ್ಪಾವಧಿಯ ಆಡಳಿತದಲ್ಲಿ, ದೇಶದ ಕಾಯಕ ಯೋಗಿಗಳು,ಕಷ್ಟ ಪಡುವವರು, ತಮ್ಮ ಹಾಗೂ ತಮ್ಮೊಂದಿಗೆ ಇತರರಿಗಾಗಿ ದುಡಿಯುವವರು, ತಪಸ್ವಿಗಳು, ಶ್ರಮಿಕವರ್ಗದವರು ಆದ ರೈತರ ಬಗ್ಗೆ ಅವರಿಗೆ ತುಂಬಾ ಕಾಳಜಿ ಇತ್ತು. ಈ ರೈತಾಪಿ ಜನರಿಗೋಸ್ಕರ ಅವರು ಬಹಳಷ್ಟು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು.

ನಾಡಿಗಾಗಿ ಹಗಲಿರುಳು ದುಡಿಯುವ ಜನರ ಬವಣೆ ಸಾವಿರಾರು. ಸಮಾಜಕ್ಕೆ ಅವರ ಕೊಡುಗೆ ಲೆಕ್ಕಕ್ಕೆ ಸಿಕ್ಕದ್ದು. ಖಾಸಗೀಕರಣ, ಜಾಗತೀಕರಣ, ಬೆಳೆದ ಬೆಳೆಗೆ ಸರಿಯಾದ ಫಲ ಆರ್ಥಿಕವಾಗಿ ಸಿಗುತ್ತಿಲ್ಲ,ಮಳೆ, ಬಿಸಿಲು, ಪ್ರಾಣಿ ಪಕ್ಷಿಗಳ, ಕೀಟಗಳ ಹಾವಳಿ, ಎಲ್ಲಾ ರೀತಿಯ ಪ್ರಹಾರ ಆ ಬಡಪಾಯಿಗಳ ಮೇಲೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ, ರೈತಾಪಿ ವರ್ಗದವರನ್ನು ಹೈರಾಣಗೊಳಿಸುತ್ತಿದೆ. ಇದರಿಂದಾಗಿ ರೈತರ, ಅನ್ನದಾತನ ಅಂತಃಕರಣ ಮಿಡಿಯುತ್ತಿದೆ, ತುಡಿಯುತ್ತಿದೆ, ಇನ್ನೊಂದೆಡೆ ಸೋತು ಹೋಗಿದ್ದಾರೆ ಕಷ್ಟದಿಂದ.

ಶ್ರೀಮಾನ್ ಚೌಧರಿ ಚರಣ್ ಸಿಂಗ್ ಇವರ ಸ್ಮಾರಕವನ್ನು ‘ಕಿಸಾನ್ ಘಾಟ್’ ಎಂದೇ ಕರೆಯಲಾಗುತ್ತಿದೆ. ಜಮೀನಿನ, ಕೃಷಿಯ, ಹೊಲದ ಕೆಲಸದ ಮೇಲೆ ತೆಗೆದ ಸಾಲ ತೀರಿಸಲಾಗದೆ, ಆತ್ಮಹತ್ಯೆಗೆ ಶರಣಾಗುವ ರೈತ ಕುಟುಂಬಕ್ಕೆ ಇಂದು ಸಾಂತ್ವನ, ಹಣಕಾಸಿನ ನೆರವು ಬೇಕಾಗಿದೆ.

ಬನ್ನಿ ,ಅನ್ನದಾತನಿಗೆ ವಂದಿಸೋಣ

***

ಅನ್ನದಾತ ನಿನಗೆ ಶರಣು

ಬನ್ನಿ ಬನ್ನಿ ಗೆಳೆಯರೇ 

ಓಡೋಡಿ ಬನ್ನಿರೇ

ಹೊಲದ ಕಡೆಗೆ ನಡೆಯುವ

ಬೇಗ ಬನ್ನಿರೇ

 

ನೊಗ ನೇಗಿಲ ಹೆಗಲಿಗೇರಿಸಿ

ಸಾಗೋಣ ಬನ್ನಿರೇ

ಗದ್ದೆಯ ಉಳುಮೆ ಮಾಡಿ

ಬಿತ್ತೋಣ ಬನ್ನಿರೇ

 

ಗೊಬ್ಬರವ ಚೆಲ್ಲುತ

ನೀರನ್ನು ಹಾಯಿಸೋಣ

ಸಂತಸದಿ ಲೇಲೇ ಹಾಡಿ

ದುಡಿವ ಬನ್ನಿರೇ

 

ಬೆಳೆದು ನಿಂತ ಪಚ್ಚೆ ತೆನೆಯ

ಅಂದ ನೋಡಿರೇ

ಕಟಾವನ್ನು ನಡೆಸಿ ನಾವು

ಮನೆಯ ಸೇರಿ ಬನ್ನಿರೇ

 

(ರಾಷ್ಟ್ರೀಯ ರೈತರ ದಿನದ ಅಂಗವಾಗಿ)

 

-ರತ್ನಾ ಭಟ್ ತಲಂಜೇರಿ