ರುದ್ರರಮಣೀಯ ಜಲಪಾತಗಳ ತವರೂರು - ಶಿವನ ಸಮುದ್ರ



ಹೆಬ್ಬಂಡೆಗಳನ್ನು ಬಳಸಿ, ಮರಗಳನ್ನು ಆಲಂಗಿಸಿಕೊಂಡು ಕಾವೇರಿ ರಭಸದಿಂದ ಇಳಿಯುತ್ತಿದ್ದಾಳೆ ಶಿವನಸಮುದ್ರದಲ್ಲಿ. ಕಾವೇರಿ ಮತ್ತು ಅವಳ ಸೋದರಿಯರು ಒಡಲನ್ನು ವರುಣ ಭರ್ತಿ ಮಾಡಿದ್ದಾನೆ. ಅದನ್ನು ಸಮುದ್ರಕ್ಕೆ ಸೇರಿಸುವ ತವಕದಲ್ಲಿ ತುಂಬು ವೈಯ್ಯಾರದಿಂದ ಕಾವೇರಿ - ಜಲಪಾತಗಳ ಸಮುಚ್ಛಯವಾದ ಇಲ್ಲಿ ಸರಾಸರಿ ಸುಮಾರು 100 ಅಡಿ ಕೆಳಕ್ಕೆ ಝೇಂಕರಿಸುತ್ತಾ ಜಿಗಿಯುತ್ತಾಳೆ.
ವೆಸ್ಲೆ ಸೇತುವೆ ಬಳಿ ಕಾವೇರಿ ಎರಡು ಕವಲುಗಳಾಗಿ ಸೀಳಿಕೊಂಡು ಮಂಡ್ಯ ಮತ್ತು ಚಾಮರಾಜನರ ಜಿಲ್ಲೆಗಳನ್ನು ಪ್ರತ್ಯೇಕಿಸುತ್ತಾಳೆ. ಒಂದು ಸೀಳು ಮಂಡ್ಯದ ಬ್ಲಫ್, ಗಗನಚುಕ್ಕಿಯಾದರೆ ಇನ್ನೊಂದು ಭರಚುಕ್ಕಿಯನ್ನು ನಿರ್ಮಿಸಿದೆ. ಕಾವೇರಿ ಭರಚುಕ್ಕಿಯಲ್ಲಿ ಮೂರು ಭಾಗದಲ್ಲಿ ಇಳಿಯುತ್ತಾಳೆ. ಇಲ್ಲಿಗೆ ಎರಡು ಕಿ.ಮೀ. ಹಿಂದೆಯೇ ಸಿಗುವ ಗಗನಚುಕ್ಕಿ ಜಲಪಾತದ ದಕ್ಷಿಣ ದಂಡೆ ಇದೆ. ಇಲ್ಲಿಂದಲೂ ಜಲಧಾರೆ ಕಣ್ಮನ ಸೆಳೆಯುತ್ತದೆ. ಇದರ ಪಕ್ಕದಲ್ಲಿ ದರ್ಗಾ ಇದೆ. ಇದಕ್ಕೂ ಹಿಂದೆ ಅಂದರೆ ಶಿವನಸಮುದ್ರದ ಆರಂಭದಲ್ಲಿ ಮಧ್ಯರಂಗವಿದೆ. ಪಕ್ಕದಲ್ಲೇ ಪುರಾತನ ಸೋಮೇಶ್ವರ ಗುಡಿ, ಅದಕ್ಕೆ ಸಮೀಪದಲ್ಲಿ ಊರಿನ ಮಾರಮ್ಮನ ದೇವಾಲಯವಿದೆ. ಇದನ್ನು ಶಿಂಷಾ ಮಾರಮ್ಮ ಎಂದೂ ಕರೆಯುತ್ತಾರೆ. ಹೀಗಾಗಿ ಇದು ದೇಗುಲಗಳ ದ್ವೀಪವೂ ಆಗಿದೆ.
ಈ ರಂಗನಾಥಸ್ವಾಮಿ ದೇವಳ ಹೊಯ್ಸಳರ ಕಾಲದ್ದು. ಎರಡೂವರೆ ಮೀಟರ್ ಕಪ್ಪುಶಿಲೆಯ ಶಾಂತಮೂರ್ತಿ ರಂಗನಾಥ ಕಾಲುಚಾಚಿ ಮಲಗಿದ್ದಾನೆ. ಈ ಕಾವೇರಿ ತಾನು ಹರಿಯುವ ಸ್ಥಳದಲ್ಲಿ ಮೂರು ಊರುಗಳನ್ನು ದ್ವೀಪವನ್ನಾಗಿ ಮಾಡಿದ್ದಾಳೆ. ಇಲ್ಲಿ ರಂಗನಾಥ ನೆಲೆಸಿದ್ದಾನೆ. ಆದಿರಂಗ ಶ್ರೀರಂಗಪಟ್ಟಣದಲ್ಲಿದ್ದರೆ, ಮಧ್ಯರಂಗ ಶಿವನಸಮುದ್ರದಲ್ಲಿ, ಅಂತ್ಯರಂಗ ತಮಿಳುನಾಡಿನ ಶ್ರೀರಂಗದಲ್ಲಿ ಮಲಗಿದ್ದಾನೆ. ಈ ಮೂರು ರಂಗನಾಥನ ದರ್ಶನವನ್ನು ಒಂದೇ ದಿನ ಮಾಡಿದರೆ ಅಧಿಕ ಪುಣ್ಯಫಲ ಪ್ರಾಪ್ತಿ ಇದೆ ಎಂಬ ನಂಬಿಕೆ ಇದೆ. "ಜಲಧಾರಿಗಳ ಕವಲು, ಪುಣ್ಯ ನದಿಯ ಹರಿಯುವಿಕೆ, ಪ್ರಕೃತಿಯ ರಮಣೀಯತೆ ಕಣ್ಮನಗಳನ್ನು ಸೆಳೆಯುತ್ತಿದೆ" ಬನ್ನಿ ಪ್ರವಾಸಕ್ಕೊಮ್ಮೆ ಶಿವನಸಮುದ್ರವನ್ನು ನೋಡಲು ......
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು