ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

ಬರಹ

ಜಮ್ಮು ಕಾಶ್ಮೀರದಿಂದ ಅಸ್ಸಾಮಿನವರೆಗೂ ಭಾರತದ ಮಹಾಗೋಡೆಯಾಗಿ ನಿಂತಿದೆ ಹಿಮಾಲಯ. ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. ಇಂತಹ ಒಂದು ಸ್ಥಳ ರೂಪ್‌ಕುಂಡ್. ಉತ್ತರಾಂಚಲ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ ೭೦೦೦ಮೀ ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಕೆರೆ ರೂಪ್‌ಕುಂಡ್.

ವರ್ಷದ ೧೧ ತಿಂಗಳು ಹೆಪ್ಪುಗಟ್ಟಿರುವ ಈ ಕೆರೆ ಕರಗಿದಾಗ ಕಾಣುವುದು ಹಲವು ಶತಮಾನಗಳಷ್ಟು ಹಳೆಯದಾದ ನೂರಾರು ಮಾನವರ ಹಾಗೂ ಕುದುರೆಗಳ ಅಸ್ಥಿಪಂಜರಗಳು . ೫೦೨೯ಮೀ ಗಳಷ್ಟು ಎತ್ತರದಲ್ಲಿ ಜನ ಜೀವನವೇ ಇಲ್ಲದ ಪ್ರದೇಶದಲ್ಲಿ ಇಷ್ಟೊಂದು ಅಸ್ಥಿಪಂಜರಗಳು ಬಂದದ್ಡಾದರೂ ಹೇಗೆ? ಇಲ್ಲಿಯ ವರೆಗೆ ಈ ಪ್ರಶ್ನೆಗೆ ನಿಖರವಾದ ಉತ್ತರ ದೊರೆತಿಲ್ಲ. ಆದರೆ ಹಲವಾರು ಊಹೆಗಳು ಚಾಲ್ತಿಯಲ್ಲಿವೆ. ಯಾತ್ರೆಗಾಗಿ ಹೊರಟಿದ್ದ ನೂರಾರು ಜನ ಹೇಗೋ ರೂಪ್‌ಕುಂಡ್ ಬಳಿ ಸಮಾಧಿಯಾದರು. ಸ್ಥಳೀಯ ಜನರು ಹೇಳುವ ಪ್ರಕಾರ ಹಿಮಾಲಯದ ಪುಣ್ಯಭೂಮಿಯಲ್ಲಿ ಮೋಜುಮಾಡುತ್ತಿದ್ದ ರಾಜನ ಪರಿವಾರ ನಂದಾ ದೇವಿಯ ಕೋಪಕ್ಕೆ ಗುರಿಯಾಗಿ ಹಿಮಪಾತದಲ್ಲಿ ನಶಿಸಿ ಹೋಯಿತಂತೆ. ಇನ್ನೊಂದು ಥಿಯರಿಯ ಪ್ರಕಾರ ಯುಧ್ಧ ಮಾಡಿ ಹಿಂದಿರುಗುತ್ತಿದ್ದ ಕಾಶ್ಮೀರಾದ ರಾಜ ಮತ್ತು ಅವನ ಸೇನೆ ದಾರಿ ತಪ್ಪಿ ರೂಪ್‌ಕುಂಡ್ ಬಳಿ ಹಿಮಪಾತಕ್ಕೆ ಸಿಕ್ಕಿ ನಶಿಸಿ ಹೋಗಿರಬಹುದು. ಕಾರ್ಬನ್ ಡೇಟಿಂಗ್ ನಿಂದ ತಿಳಿದು ಬಂದದ್ದು ಈ ಆಸ್ಥಿ ಪಂಜರಗಳು ೫೦೦-೮೦೦ ವರ್ಷ ಹಳೆಯದಿರಬಹುದು ಎಂದು.
ಅದೇನೇ ಆಗಲಿ, ರೂಪ್‌ಕುಂಡ್ ನ ದಾರಿಯಲ್ಲಿ ಕಾಣಸಿಗುವ ಪ್ರಕೃತಿ ಸೌಂದರ್ಯ ಅವರ್ಣನೀಯ. ನೈನಿತಾಲ್ ನಿಂದ ೩೦೦ಕಿ.ಮೀ. ದೂರದಲ್ಲಿರುವ ಮುನ್ಡೋಲಿ ಎಂಬ ಹಳ್ಳಿ ಯಿಂದ ಶುರುವಾಗುತ್ತದೆ ರೂಪ್ ಕುಂಡಕ್ಕೆ ಕಾಲುದಾರಿ.

ದಟ್ಟ ಕಾಡಿನಲ್ಲಿ ಒಂದು ದಿನ ಪೂರ್ತಿ ನಡೆದ ಮೇಲೆ ಸಿಗುತ್ತದೆ ಬೇಡಿನಿ ಬುಗ್ಯಾಲ್. ಬುಗ್ಯಾಲ್ ಎಂದರೆ ಹುಲ್ಲುಗಾವಲು ಎಂದು. ೨೫೦೦ಮೆ. ಗಳ ಎತ್ತರದ ಈ ಹುಲ್ಲುಗಾವಲಿನಲ್ಲಿ ಅನೇಕ ರೀತಿಯ ಹೂವುಗಳನ್ನೂ ಕಾಣಬಹುದು. (ವಿಂಡೊಸ್ XPಯ ವಾಲ್‌ಪೇಪರ್ ಚಿತ್ರ ಇಲ್ಲೇ ತೆಗೆದಿರಬಹುದೇನೋ ಎಂದು ನನಗೆ ಈಗಲೂ ಸಂದೇಹ :))

ಇಲ್ಲಿಂದ ತ್ರಿಶೂಲ್, ನಂದಾ ಘು೦ಟಿ ಪರ್ವತಗಳು ಬಹಳ ಹತ್ತಿರದಲ್ಲಿ ಕಾಣುತ್ತವೆ.

ದೂರದಲ್ಲಿ ಚೌಕಂಭಾ, ನೀಲ್ ಕ೦ಠ್ ಮುಂತಾದ ಪಾರ್ವತಗಳೂ ಕಾಣುತ್ತವೆ. ಇನ್ನೊಂದು ದಿನ ನಡೆದರೆ ಸಿಗುತ್ತದೆ ಕೈಲು ವಿನಾಯಕನ ಗುಡಿ.

ಇಲ್ಲಿಂದ ಮುಂದೆ ಸಿಗುವ ಜಾಗ ಬಗುವಾಬಾಸಾ. ಬಗುವಾಬಾಸಾ ದಾರಿಯಲ್ಲಿ ಯಾವಾಗಲೂ ಪ್ರತೀಕೂಲ ಹವಾಮಾನವಿರುತ್ತದೆ. ದಾರಿ ಕಾಣಿಸದಷ್ಟು ಮಂಜು, ನಡೆಯಲಾರದಷ್ಟು ಹಿಮ. ಬಗುವಾಬಾಸಾದಿಂದ ಮುಂದೆ ಹತ್ತಲು ೭೦ ಡಿಗ್ರೀ ಎತ್ತರದ ಗೋಡೆ. ಜೊತೆಗೆ ಎತ್ತರದ ಕಾರಣದಿಂದ ಬರುವ ತಲೆನೋವು, ಆಮ್ಲಜನಕದ ಕೊರತೆ. ಆದರೆ ಹವಾಮಾನ ತಿಳಿಯಾದಾಗ ಕಾಣುವುದು ಸ್ವರ್ಗ. ಹಿಮಾಚ್ಛಾದಿತ ಪರ್ವತಗಳು, ಬಿಸಿಲಿಗೆ ಹೊಳೆಯುವ ಹಿಮನದಿಗಳು, ಎಲ್ಲಿ ನೋಡಿದರೂ ಬರೀ ಹಿಮ. ಹೀಗೆ ರೂಪ್‌ಕುಂಡ್ ತಲುಪಿದರೆ ಹವಾಮಾನ ಚೆನ್ನಾಗಿದ್ದಲ್ಲಿ ಮುಂದೆ ಜುರಾಂಗಲಿ ಪಾಸ್ ಅಥವಾ ಶಿಲಾ ಸಮುದ್ರ ಹಿಮನದಿ ಕಡೆಗೆ ಹೋಗಬಹುದು. ಇಲ್ಲವೇ ಬ೦ದ ದಾರಿಯಲ್ಲೇ ಹಿಂದಿರುಗಬಹುದು.

ವಿ.ಸೂ.: ನಾವು ಹೋದ ವರ್ಷ ಹೋದಾಗ ಹವಾಮಾನ ಕೆಟ್ಟಿದ್ದರಿನ್ದ ನಮಗೆ ಕೈಲು ವಿನಾಯಕದಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ.