ರೈಟ್ ನಂಬರ್ (ಭಾಗ ೨)
ಇತ್ತ ರೇಶ್ಮಾ ರಮೇಶ್ಗೆ ಮಿಸ್ಕಾಲ್ ಕೊಟ್ಟಿದ್ದಳು. ಈ ವಿಷಯ ರಜತ್ಗೆ ತಿಳಿದಿರಲಿಲ್ಲ. ರಮೇಶ್ ಅವಳಿಗೆ ಕಾಲ್ ಮಾಡಿದಾಗ, ಅವಳ ಹೆಸರು ರೇಶ್ಮಾ, ಮಂಗಳೂರಿನವಳು ಎಂದು ಹೇಳಿ, ತಂದೆ ತಾಯಿಯ ಬಗ್ಗೆ ತಿಳಿಸಿದಳು. ಅವಳ ಮಾತಿನಲ್ಲೇ ಅವಳು ಸುಸಂಸ್ಕೃತ ಮನೆತನದ ಹುಡುಗಿ ಎಂದು ತಿಳಿದುಬಿಡುತ್ತಾನೆ. ಆಗ, ರಮೇಶ್ ಆಗ ನೀನು ಒಬ್ಬ ಹುಡುಗನ ಬಳಿ ಮಾತಾಡಿದೆ ಅಲ್ವಾ ಅವನು ಯಾರು ಗೊತ್ತಾ? ಎಂದಾಗ.
ರೇಶ್ಮಾ, ಹಾಂ... ಅವರ ಹೆಸರು ರಜತ್. ಬೆಂಗಳೂರಿನವರು. ಇಂಜಿನಿಯರ್ ಅಲ್ವಾ? ಅಂದಳು.
ರಮೇಶ್ ಹಾಂ... ನನ್ನ ಮಗ. ನಿನಗೆ ಆತ ಇಷ್ಟಾನಾ? ಅಂದಾಗ.
ರೇಶ್ಮಾ ಹೂಂ... ಅಂದಳು.
ರಮೇಶ್ ಸರಿ ಹಾಗಾದರೆ. ಮುಂದಿನ ಮಾರ್ಚ್ ೨೯ ನನ್ನ ಮಗನ ಹುಟ್ಟುಹಬ್ಬ. ಅವನಿಗೆ ನಿನ್ನನ್ನು ಗಿಫ್ಟ್ ಆಗಿ ಕೊಡಬೇಕು. ಅಲ್ಲಿ ತನಕ ಮೊಬೈಲ್ ಸ್ವಿಚ್ ಆಫ್ ಮಾಡಬೇಕು ಎಂದನು.
ರೇಶ್ಮಾ ಓಕೆ. ಅಂದಳು.
***
ಮುಂದೆ...ಇತ್ತ ರಜತ್ಗೆ ಕಾಲ್ ಮಾಡಿ ಮಾಡಿ ಸಾಕಾಯ್ತು. ತಂದೆಗೆ ಬೈದು ನೀವೇನು ಹೇಳಿದಿರಿ ರೇಶ್ಮಾಳಿಗೆ? ಮೊನ್ನೆಯಿಂದ ಮೊಬೈಲ್ ಸ್ವಿಚಾಫ್ ಮಾಡಿದ್ದಾಳೆ. ಎಂದು ಕೇಳಿದ.
ಆಗ, ರಮೇಶ್ ರೇಶ್ಮಾ... ಹೆಸರು ಗೊತ್ತಿದ್ಯಾ? ಏನು ವಿಷಯ? ಎಂದಾಗ,
ರಜತ್ ರೇಶ್ಮಾ ಹೆಸರು ಮಾತ್ರ ಗೊತ್ತಿದೆ ಎಂದು ಹೇಳಿ ಹೊರ ಹೋದ.
೨೮ನೇ ತಾರೀಖಿನಂದು, ರಮೇಶ್ ಕೌಶಿಕ್ ತಮ್ಮ ಬಟ್ಟೆ ಬರೆ ಪ್ಯಾಕ್ ಮಾಡಿ ಮಂಗಳೂರಿಗೆ ಹೋಗಲು ಹೊರಟರು. ರಜತ್ ಕೂಡ ಬಟ್ಟೆ ಬರೆ ಪ್ಯಾಕ್ ಮಾಡಿದ್ದ. ಆದರೆ ಎಲ್ಲಿಗೆ ಹೋಗುವುದು ಎಂದು ತಿಳಿದಿರಲಿಲ್ಲ. ಆದರೆ, ರಮೇಶ್ ಕೌಶಿಕ್ನ ಬಳಿ ಎಲ್ಲಾ ವಿಷಯ ತಿಳಿಸಿ ಅವನಿಗೆ `ಬರ್ತ್ಡೇ ಗಿಫ್ಟ್ ಎಂದು ಈ ವಿಷಯ ರಜತ್ಗೆ ತಿಳಿಯಬಾರದು ಎಂದು ಹೇಳಿದರು. ಮುಂದೆ ರಾತ್ರಿ ಕಾರಿನಲ್ಲಿ ಹೊರಟರು. ಮಂಗಳೂರಿಗೆ ತಲುಪಿ ಹೋಟೆಲ್ನಲ್ಲಿ ರೂಮ್ ಮಾಡಿದರು. ಒಂದೇ ಹಾಸಿಗೆಯಲ್ಲಿ ಮಲಗಿ ನಿದ್ರೆಗೆ ಶರಣಾದರು.
***
ಮುಂಜಾನೆ ಆಯಿತು. ಮಂಗಳೂರಿನ ಸುಂದರ ವಾತಾವರಣ ಎಲ್ಲರಿಗೂ ಖುಷಿ ತಂದಿತು. ಮುಂಜಾನೆ ರಮೇಶ್ ತನ್ನ ಮಗನನ್ನು ಅಪ್ಪಿ "ಹುಟ್ಟುಹಬ್ಬದ ಶುಭಾಶಯ" ತಿಳಿಸಿದರು. ನಂತರ ಮೂವರೂ ಕಾರಲ್ಲಿ ಹೊರಟರು. ಇತ್ತ ರಜತ್ಗೆ ತಳಮಳ. ಎಲ್ಲಿಗೆ ಪಯಣ... ಎಂದು ತಿಳಿದಿಲ್ಲ. ಎತ್ತ ಕಡೆ ಸಾಗುತ್ತಿದೆ ಪಯಣ ಎಂದು ತಿಳಿಯಲಾರದೇ ಹೋದನು. ಇತ್ತ ರಮೇಶ್, ರೇಶ್ಮಾಳಿಗೆ ಮೆಸೇಜ್ ಮಾಡಿ, ಬರುವ ವಿಚಾರವನ್ನು ತಿಳಿಸಿದನು. ಮುಂದೆ ರೇಶ್ಮಾ ಕೂಡ ಮನೆಯ ವಿಳಾಸವನ್ನು ತಿಳಿಸಿದಳು. ಹಾಗೆ ಕಾರು ರೇಶ್ಮಾಳ ಮನೆಯ ಕಡೆ ಚಲಿಸಿತು.
***
ಇತ್ತ ರೇಶ್ಮಾ ಹಿಂದಿನ ದಿನ ರಜತ್ ಮತ್ತು ಅವನ ತಂದೆ ಬರುವ ವಿಷಯವನ್ನು ತಂದೆ ತಾಯಿ ಬಳಿ ಹೇಳಿದ್ದಳು. ಒಬ್ಬಳೇ ಪ್ರೀತಿಯ ಮಗಳಾದ ಕಾರಣ ಆಶಾ ಮತ್ತು ಕಿರಣ್ ಅವರು ರೇಷ್ಮಾಳ ಪ್ರೀತಿಗೆ ಸಮ್ಮತಿಸಿದರು. ಮಾತ್ರವಲ್ಲದೆ ಎಲ್ಲಾ ಸಿದ್ಧತೆ ಮಾಡಿದ್ದರು.
***
ಕಾರು ರೇಶ್ಮಾ ನೀಡಿದ ವಿಳಾಸ ತಲುಪಿತು. ರಮೇಶ್, ಕೌಶಿಕ್, ರಜತ್ ಬಾಗಿಲ ಬಳಿ ಬಂದರು. ರಮೇಶ್ ಕಾಲಿಂಗ್ ಬೆಲ್ ಒತ್ತಿದರು. ಮುಂದೆ... ಆಶಾ-ಕಿರಣ್ ಬಂದು ಎಲ್ಲರಿಗೂ ನಮಸ್ಕರಿಸಿ, ಒಳಗೆ ಕರೆದರು, ಸತ್ಕರಿಸಿದರು. ಎರಡೂ ಕಡೆಯವರು ತಮ್ಮ ಪರಿಚಯ ಮಾಡಿಕೊಂಡರು.
ಆಗ ರಮೇಶ್ ನಿಮ್ಮ ಹುಡುಗಿಯನ್ನು ಕರೆಯಿರಿ ಎಂದರು. ಆಗ ರಜತ್ಗೆ ಹುಡುಗಿ ನೋಡಲು ಬಂದಿರುವ ವಿಷಯ ತಿಳಿಯಿತು. ತಳಮಳಗೊಂಡನು, ಏನು ಮಾಡುವುದು ತಿಳಿಯಲಿಲ್ಲ. ರಜತ್ಗೆ ಏನು ಗತಿ ಎಂದು ತಿಳಿಯದಾಯಿತು.
ಆಗ, ರೇಶ್ಮಾಳನ್ನು ತಾಯಿ ಕರೆತಂದಳು. ರೇಶ್ಮಾ ನಿಜವಾಗಿಯೂ ಸುಂದರ ಹೆಣ್ಣು. ಬಿಳಿ ಬಣ್ಣ ಸುಂದರ ಮೈಕಟ್ಟು. ಒಟ್ಟಿನಲ್ಲಿ ರಜತ್ಗೆ ಒಪ್ಪುವಂತಹ ಹುಡುಗಿಯಾಗಿದ್ದಳು. ಆದರೆ ರಜತ್ ಈ ಮದುವೆಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ತಳಮಳಗೊಂಡನು. ಮಾತ್ರವಲ್ಲದೆ, ರೇಷ್ಮಾಳನ್ನು ನೋಡಲಿಲ್ಲ. ಆದರೆ ಧೈರ್ಯ ಮಾಡಿ ರಜತ್ ನಾನು ಹುಡುಗಿಯ ಬಳಿ ಮಾತನಾಡಬೇಕು ಎಂದನು
ರೇಶ್ಮಾ ರಜತ್ನನ್ನು ಒಂದು ಕೋಣೆಗೆ ಕರೆದುಕೊಂಡು ಹೋದಳು. ರಜತ್ ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಜೋರಾಗಿ ಹೇಳಿದನು.
ಆಗ ರೇಶ್ಮಾ ಯಾಕೆ? ಅಂದಾಗ, ರಜತ್ ನಾನು ರೇಶ್ಮಾ ಅನ್ನೋ ಹುಡುಗೀನ ಪ್ರೀತಿಸ್ತೀನಿ. ಅವಳನ್ನೇ ಮದುವೆಯಾಗಬೇಕೆಂದಿದ್ದೇನೆ. ಅವಳು ಕೂಡ ಮಂಗಳೂರಿನವಳು. ಆದರೆ, ನನ್ನ ಡ್ಯಾಡಿ ಮದುವೆ ಮಾಡುವ ಆತುರದಲ್ಲಿ ಮಂಗಳೂರಿನವರಾದ ನಿನ್ನನ್ನು ಹುಡುಕಿದ್ದಾರೆ ಎಂದನು. ಆಗ ರೇಶ್ಮಾ ಸುಮ್ಮನಾದಳು.
ರಜತ್ ಮನಸಿನಲ್ಲಿ ಒಬ್ಬಳನ್ನು ಇಟ್ಟುಕೊಂಡು, ಬೇರೆಯವರನ್ನು ಮದುವೆ ಆಗುವುದು ನನಗೆ ಇಷ್ಟವಿಲ್ಲ. ನಾನು ಇದ್ದುದನ್ನು ಹೇಳಿದ್ದೇನೆ. ಇನ್ನು ನಿಮ್ಮ ಇಷ್ಟ. ಎಂದನು.
ಆಗ ಸಂತೋಷದಿಂದ ರೇಶ್ಮಾ ನೀವು ಅವಳನ್ನು ಅಷ್ಟು ಪ್ರೀತಿಸ್ತೀರಾ...? ಅವಳನ್ನು ನೋಡಿದ್ದೀರಾ? ಎಂದಾಗ,
ರಜತ್ ಇಲ್ಲ ನೋಡಿಲ್ಲ. ಆದರೆ ಆಕೆಯೇ ನನ್ನ ದೇವತೆ ಎಂದ.
ಆಗ ರೇಶ್ಮಾ ಪರಿಚಯವಿಲ್ಲದ ಅವಳನ್ನು ಅಷ್ಟು ಪ್ರೀತಿಸ್ತೀರಾ, ಅದೂ ಮುಖ ನೋಡದೆ, ಮಿಸ್ಟರ್ ರಾಂಗ್ ನಂಬರ್? ಎಂದಳು.
ಬಾಗಿಲ ಕಡೆ ಮುಖ ಮಾಡಿ ನಿಂತಿದ್ದ ರಜತ್ ಅವಳ ರಾಂಗ್ ನಂಬರ್ ಶಬ್ದ ಕೇಳಿ ತಿರುಗಿ 'ಏನಂದ್ರಿ ನೀವು?' ಎಂದನು. ಆಗ, ಮುಖ ಪರಿಚಯವಿಲ್ಲದ ಅವಳನ್ನು ಅಷ್ಟು ಪ್ರೀತಿಸ್ತೀರಾ ಮಿಸ್ಟರ್ ರಾಂಗ ನಂಬರ್ ಅಂತ ಅಂದೆ ಎಂದಳು.
ಆಗ ರಜತ್, ತನ್ನ ಪ್ಯಾಂಟ್ ಜೇಬಿನಿಂದ ಮೊಬೈಲ್ ತೆಗೆದ. ಆಗ ರೇಶ್ಮಾ ಸುಮ್ಮನೆ ಕಾಲ್ ಕಟ್ ಮಾಡಿ, ಕೈ ಯಾಕೆ ನೋಯಿಸಿ ಕೊಳ್ಳುವಿರಿ? ನಾನೇ ರೇಶ್ಮಾ. ನಿಮ್ಮ ಡ್ಯಾಡಿ ನಿಮಗೆ ನೀಡಿದ ಬರ್ತಡೇ ಗಿಫ್ಟ್ ಎಂದಳು.
ಇದನ್ನು ಕೇಳಿದ ರಜತ್ಗೆ ತುಂಬಾ ಖುಷಿಯಾಯ್ತು. ಸ್ವರ್ಗಕ್ಕೆ ಹೋಗಿ ಬಂದಷ್ಟು ಸಂಭ್ರಮ. ತಕ್ಷಣವೇ ರೇಶ್ಮಾಳ ಕೈಹಿಡಿದು ಹೊರಗೆ ಕರೆದುಕೊಂಡು ಬಂದ.
ತನ್ನ ಪ್ರೀತಿಯ ಡ್ಯಾಡಿಯನ್ನು ಅಪ್ಪಿ ಥ್ಯಾಂಕ್ಯೂ ಡ್ಯಾಡಿ ಅಂದ. ಎಲ್ಲರೂ ಸಂಭ್ರಮಿಸಿದರು. ರೇಶ್ಮಾ-ರಜತ್ ಮುಂದೆ ಸಪ್ತಪದಿ ತುಳಿದರು. ರಾಂಗ್ ನಂಬರ್ ಆಗಿ ಬಂದ ರೇಶ್ಮಾ ರಜತ್ನ ಪಾಲಿಗೆ ರೈಟ್ ನಂಬರ್ ಆಗಿ ಜೀವನ ಬೆಳಗಿಸಿದಳು.
-ಶ್ವೇತಾ ವಿ, ಹರಿಹರ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ