ರೈತನ ಹಿತ ಬಲಿಯಾಗದಿರಲಿ !
ಸಾರ್ವಜನಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರ ಬದುಕು ಪರಿಶುದ್ಧವಾಗಿರಬೇಕು. ಇಂತಹ ಹೋರಾಟಗಳ ಮುಂಚೂಣಿಯಲ್ಲಿರುವ ನಾಯಕರ ಬದುಕಿನ ಒಂದೊಂದು ಅಂಶವೂ ಸಾರ್ವತ್ರಿಕವಾಗಿ ಚರ್ಚೆಗೆ ಬರುವಂತಹದು. ಆಸೆ-ಆಮಿಷಗಳಿಂದ ದೂರವಿದ್ದು ಸಾರ್ವಜನಿಕ ಸಂಘಟನೆಯನ್ನು ಮುನ್ನಡೆಸುವುದೆಂದರೆ ಅದೊಂದು ಮಹತ್ತರ ಕೆಲಸವೇ.
ಐದು ದಶಕಗಳ ಹಿಂದೆ ರಾಜ್ಯದಲ್ಲಿ ತಲೆಯಿತ್ತಿದ್ದ ರೈತ ಸಂಘ ಮತ್ತದರ ಹೋರಾಟಗಳಿಗೆ ಅದರದ್ದೇ ಆದ ಹಿನ್ನಲೆ ಮತ್ತು ಪ್ರತ್ಯೇಕತೆ ಇದೆ. ಅನ್ನದಾತನ ಬದುಕು ಮತ್ತು ಬವಣೆಗೆ ಸ್ಪಂದಿಸಿ ಹಳ್ಳಿಯಿಂದ ದಿಲ್ಲಿಯವರೆಗೆ ಅವರ ಪರವಾಗಿ ಧ್ವನಿ ಮೂಡಿಸಿದ ರಾಜ್ಯ ರೈತ ಸಂಘ ನಡೆದು ಬಂದ ದಾರಿಯೇ ವಿಭಿನ್ನ. ಎಂಬತ್ತರ ದಶಕದಲ್ಲಿ ನವಲಗುಂದದಲ್ಲಿ ಅಮಾಯಕ ರೈತರ ಮೇಲೆ ಗೋಲಿಬಾರ್ ನಡೆದ ಹಿನ್ನಲೆಯಲ್ಲಿ ಇದನ್ನು ಪ್ರತಿಭಟಿಸಬೇಕೆಂಬ ನಿಲುವಿನಿಂದ ತಲೆಯೆತ್ತಿದ್ದ ರೈತ ಸಂಘ ಕ್ರಮೇಣ ಗ್ಯಾಟ್ ಒಪ್ಪಂದಗಳಲ್ಲದೆ ರೈತರಿಗೆ ಮಾರಕವಾಗುವಂತಹ ಬಹುರಾಷ್ಟ್ರೀಯ ಕಂಪೆನಿಗಳ ವಿದೇಶಿ ಕೃಷಿ ನೀರಿ ಮತ್ತು ಸಿದ್ಧಾಂತಗಳನ್ನು ಧಿಕ್ಕರಿಸಿದ ದೇಸೀಯ ರೈತ ಸಂಘಟನೆ.
ಪ್ರೊ. ಎಂ ಡಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಶುರುವಾದ ರೈತ ಸಂಘ ಕೊನೆಗೆ ರಾಜ್ಯದ ಅಸೆಂಬ್ಲಿ ಮತ್ತು ದಿಲ್ಲಿ ಪಾರ್ಲಿಮೆಂಟಿನಲ್ಲಿ ತನ್ನ ಹೆಜ್ಜೆಯ ಗುರುತನ್ನು ಮೂಡಿಸಿದ್ದು ನಿಜ. ಆದರೆ ದಿನ ಕಳೆದಂತೆ ಅನ್ನದಾತರ ಹಿತಾಸಕ್ತಿಗೆಂದು ಪ್ರಾಮಾಣಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕಾಗಿದ್ದ ಸಂಘದ ಮೂಲ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿ ಸಾಗಿದ್ದು ದುರದೃಷ್ಟಕರ. ವಿದೇಶಿ ಬಿತ್ತನೆ ಬೀಜಗಳ ಮಾರಾಟದಲ್ಲಿ ತೊಡಗಿದ ಮಾನ್ಸಾಂಟೋ, ಮಾರಕ ರಸ ಗೊಬ್ಬರ ಮತ್ತು ಬೆಳೆ ಔಷಧಿಗಳಲ್ಲದೆ ಮಲೆನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ ವಿರುದ್ಧ ಬೃಹತ್ ಮಟ್ಟದಲ್ಲಿ ಧ್ವನಿ ಎತ್ತಿದ ರೈತ ಸಂಘಕ್ಕೆ ಕಾಲ ಕ್ರಮೇಣ ಸಕ್ರಿಯ ರಾಜಕಾರಣದ ನಂಟೂ ಬೆಳೆಯಿತು. ರೈತರೂ ಈ ದೇಶದ ಶ್ರಮಿಕರೆ. ಇವರ ಪರವಾಗಿ ಹೋರಾಟ ಮಾಡುವ ಯಾವುದೇ ಸಂಘ ರಾಜಕೀಯ ವ್ಯವಸ್ಥೆ ಮತ್ತು ಸರ್ಕಾರಗಳ ಜೊತೆ ಗುದ್ದಾಡುವುದು ಅನಿವಾರ್ಯ. ಆದರೆ ರೈತರ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅದರಿಂದ ಕೆಲವೇ ಮಂದಿ ರಾಜಕೀಯವಾಗಿ ಲಾಭ ಪಡೆಯುವಂತಹ ಪ್ರವೃತ್ತಿಗೆ ಇಂಬು ದೊರೆತರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುವುದು. ಕಬ್ಬು ಮತ್ತು ಭತ್ತದ ಬೆಳೆಗಾರರ ಹಲವು ಹತ್ತು ಸಮಸ್ಯೆಗಳಿಗೆ ಇಂದಿಗೂ ಸರಿಯಾದ ಪರಿಹಾರಗಳು ದೊರೆತಿಲ್ಲ.
ಇಂತಹ ರೈತರು ಮತ್ತು ಸರ್ಕಾರದ ನಡುವೆ ಸಮಂಜಸ ಕೊಂಡಿಯಾಗಿ ಕೆಲಸ ಮಾಡಬೇಕಿರುವ ಸಂಘಟನೆಯ ಪದಾಧಿಕಾರಿಗಳು ಇವುಗಳತ್ತ ಹೆಚ್ಚು ಲಕ್ಷ್ಯ ವಹಿಸಬೇಕಾಗಿದೆ. ಕೋಡಿಹಳ್ಳಿ ಚಂದ್ರಶೇಖರ್, ತಮ್ಮ ಮೇಲೆ ಗುರುತರವಾದ ಆರೋಪಗಳು ಕೇಳಿ ಬಂದ ಕೂಡಲೇ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಬೇಕಿತ್ತು. ಆದರೆ ಇವರನ್ನು ಅಧ್ಯಕ್ಷ ಸ್ಥಾನದಿಂದಲೇ ಉಚ್ಛಾಟಿಸಿ ಮತ್ತೊಂದು ವರ್ಗ ತೀರ್ಮಾನವನ್ನು ಕೈಗೊಂಡಿದೆ. ಆದರೆ ಕೋಡಿಹಳ್ಳಿ ಈ ಕ್ರಮವನ್ನು ಪ್ರಶ್ನಿಸಿದ್ದಾರೆ. ಅವರಿದನ್ನು ನ್ಯಾಯಾಲಯದ ಮುಂದೆಯೂ ಪ್ರಶ್ನಿಸಬಹುದು. ಅದೇನೆ ಇರಲಿ, ಸಾರ್ವಜನಿಕ ಬದುಕಿಗೆ ಸಾಮೀಪ್ಯ ಹೊಂದಿರುವ ಇಂತಹ ಸಂಘಟನೆಗಳ ಕೃತಿ ಮತ್ತು ಆಚರಣೆಯಲ್ಲಿ ಲೋಪವಾದರೆ ಸಮಾಜವು ಸಂಘಟನೆಯ ಮೇಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುವಂತಾಗುತ್ತೆ.
ಕೃಪೆ: ಹೊಸದಿಗಂತ, ಸಂಪಾದಕೀಯ, ದಿ: ೦೩-೦೬-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ