ರೈತರ ಬೀಜದ ಹಕ್ಕು: ಪೆಪ್ಸಿ ಕಂಪೆನಿಯ “ಕೊಕ್”
ಗುಜರಾತಿನ ಕೆಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಈ ಬಾರಿ ಮಾತ್ರ ಅವರಿಗೆ ಸಿಡಿಲು ಬಡಿದಂತಾಯಿತು. ಯಾಕೆಂದರೆ, ಅಮೇರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ ೧೧ ರೈತರ ಮೇಲೆ ೮ ಮೊಕದ್ದಮೆ ಹೂಡಿತು – ತಮ್ಮ ಕಂಪೆನಿಯ ಬೈದ್ಧಿಕ ಸೊತ್ತಾದ ಆಲೂಗಡ್ದೆ ತಳಿಯನ್ನು “ಕಾನೂನುಬಾಹಿರವಾಗಿ” ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ! ಪ್ರತಿಯೊಬ್ಬ ರೈತನೂ ರೂಪಾಯಿ ೧.೦೫ ಕೋಟಿ ಪರಿಹಾರ ಪಾವತಿಸಬೇಕೆಂಬುದು ಪೆಪ್ಸಿಕೋ ಕಂಪೆನಿಯ ಆಗ್ರಹ!
ಈ ಪ್ರಕರಣವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ಗಮನಿಸಿತು. ಇದು ಪುಟಾಣಿ ಇರುವೆಯನ್ನು ದೈತ್ಯ ಆನೆ ಯುದ್ಧಕ್ಕೆ ಆಹ್ವಾನಿಸಿದಂತಿದೆ. ೬೪ ಬಿಲಿಯನ್ ಡಾಲರು ವಾರ್ಷಿಕ ಆದಾಯ ಗಳಿಸುತ್ತಿರುವ ಪೆಪ್ಸಿಕೋ ಕಂಪೆನಿಗೆ, ಗುಜರಾತಿನ ಹಳ್ಳಿ ಮೂಲೆಯ ತುಂಡು ಜಮೀನಿನಲ್ಲಿ ಆಲೂಗಡ್ಡೆ ಬೆಳೆಯುವ ರೈತ ಯಾವ ರೀತಿಯಲ್ಲೂ ಸರಿಸಾಟಿಯಲ್ಲ.
ಆ ರೈತರು ಬೆಳೆಸುತ್ತಿದ್ದ ಎಫ್ಎಲ್ ೨೦೨೭ ಎಂಬ ಆಲೂಗಡ್ಡೆ ತಳಿ ತನ್ನ ಒಡೆತನದ್ದು; ಭಾರತದ ಕಾಯಿದೆಯ ಅನುಸಾರ ೨೦೧೬ರಲ್ಲಿ ತಾನು ದಾಖಲಿಸಿದ ಎರಡು ಆಲೂಗಡ್ಡೆ ತಳಿಗಳಲ್ಲಿ ಅದೊಂದು ಎಂಬುದು ಕೋರ್ಟಿನಲ್ಲಿ ಪೆಪ್ಸಿಕೋ ಕಂಪೆನಿಯ ವಾದ. ಆ ಕಾಯಿದೆಯ ಪ್ರಕಾರ ಒಂದು ತಳಿಯನ್ನು ದಾಖಲಿಸಿದರೆ, ಅದರ ಉತ್ಪಾದನೆ, ಮಾರಾಟ, ವಿತರಣೆ, ಆಮದು ಮತ್ತು ರಫ್ತು – ಇವೆಲ್ಲದರ ಸಂಪೂರ್ಣ ಹಕ್ಕು ಆಯಾ ತಳಿಯ ತಳಿವರ್ಧಕನಿಗೆ ಸಿಗುತ್ತದೆ.
ಇದ್ಯಾವ ಕಾಯಿದೆ? ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ, ೨೦೦೧ (ಪಿಪಿವಿ ಆಂಡ್ ಎಫ್ಆರ್ಎ). ಜಾಗತಿಕ ವಾಣಿಜ್ಯ ಸಂಘಟನೆಯ (ಡಬ್ಲ್ಯುಟಿಓ) ಬೇಡಿಕೆಯಂತೆ, ತಳಿವರ್ಧಕ (ವ್ಯಕ್ತಿ ಅಥವಾ ಸಂಸ್ಥೆ)ರ ಹಕ್ಕುಗಳ ರಕ್ಷಣೆಗಾಗಿ ಭಾರತ ಸರಕಾರ ಈ ಕಾಯಿದೆಯನ್ನು ಜ್ಯಾರಿ ಮಾಡಿದೆ. ಇದರ ವಿಶೇಷತೆ: ಜಗತ್ತಿನಲ್ಲಿ ರೈತರ ಹಕ್ಕುಗಳ ರಕ್ಷಣೆಯ ವಿಧಿ ಒಳಗೊಂಡ ಏಕೈಕ ಕಾಯಿದೆ ಇದು.
ಪೆಪ್ಸಿಕೋ ಕಂಪೆನಿಯ ಮೊಕದ್ದಮೆ ಎದುರಿಸಿದ ರೈತರು ಏನೆನ್ನುತ್ತಾರೆ? ತಾವು ಆಲೂಗಡ್ಡೆ ಬೀಜ ಖರೀದಿಸಿದ್ದು ಸ್ಥಳೀಯ ಬೀಜದಂಗಡಿಯಿಂದ ಎನ್ನುತ್ತಾರೆ. ಈಗ ಅವರು ಬೆಚ್ಚಿ ಬಿದ್ದಿದ್ದಾರೆ. ಬೌದ್ಧಿಕ ಸೊತ್ತಿನ ಹಕ್ಕು (ಐಪಿಆರ್) ಎಂದರೆ ಏನೆಂಬುದೇ ಆ ರೈತರಿಗೆ ಗೊತ್ತಿಲ್ಲ. ನಮ್ಮ ದೇಶದಲ್ಲಿ ಯಾವನೇ ರೈತ ಯಾವುದೇ ಬೆಳೆ ಬೆಳೆದು ಫಸಲು ಮಾರಾಟ ಮಾಡಬಹುದು ಎಂಬುದು ಆ ರೈತರ ನಂಬುಗೆ. ಈಗ ಆ ನಂಬುಗೆಯೇ ಅಲುಗಾಡಿದೆ.
ಪೆಪ್ಸಿಕೋ ಕಂಪೆನಿ ಏನೆನ್ನುತ್ತಿದೆ? ರೈತರಿಂದ ಪರಿಹಾರ ವಸೂಲಿ ಬೇಡಿಕೆ ಹಿಂತೆಗೆಯಬೇಕಾದರ ಆ ರೈತರು ತಮ್ಮ ಒಪ್ಪಂದ ಕೃಷಿ ಯೋಜನೆಗೆ ಸೇರಬೇಕು ಎನ್ನುತ್ತಿದೆ. ಇಲ್ಲವಾದರೆ, ತಾವಿನ್ನು ಎಫ್ಎಲ್ ೨೦೨೭ ಆಲೂಗಡ್ಡೆ ತಳಿಯನ್ನು ಬೆಳೆಯುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಡಬೇಕು ಎನ್ನುತ್ತಿದೆ.
ಅಮೇರಿಕಾದ ಪೆಪ್ಸಿಕೋ ಕಂಪೆನಿಯ ಭಾರತೀಯ ಉಪಕಂಪೆನಿ ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್. ಇದು ರೈತರು ಮತ್ತು ಶೈತ್ಯಾಗಾರ ಮಾಲೀಕರ ಮೇಲೆ ಎಂಟು ಮೊಕದ್ದಮೆ ಹೂಡಿದೆ. ಆದರೆ ಕಾನೂನು ಪರಿಣತರ ಮತ್ತು ರೈತಪರ ಸಂಘಟನೆಗಳ ಅಭಿಪ್ರಾಯ ಏನೆಂದರೆ, ಆ ಕಾಯಿದೆಯ ಸೆಕ್ಷನ್ ೩೯(೧) (೪) ಅನುಸಾರ ರೈತರ ಹಕ್ಕುಗಳಿಗೆ ಸಂಪೂರ್ಣ ರಕ್ಷಣೆ ಲಭ್ಯ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬೀಜ ಮತ್ತು ತಳಿಗಳ ವಿಷಯದಲ್ಲಿ, ಈ ಕಾಯಿದೆ ಜ್ಯಾರಿಗೆ ಬರುವ ಮುಂಚೆ ರೈತರ ಹಕ್ಕುಗಳು ಹೇಗಿತ್ತೋ ಹಾಗೆಯೇ ಇರುತ್ತದೆ. ಇದಕ್ಕೆ ಒಂದು ನಿರ್ಬಂಧ ಏನೆಂದರೆ, ಈ ಕಾಯಿದೆಯ ಅನುಸಾರ ರಕ್ಷಿಸಲಾದ ಯಾವುದೇ ತಳಿಯ “ಬ್ರಾಂಡೆಡ್ ಬೀಜ”ಗಳನ್ನು ಮಾರುವ ಹಕ್ಕು ರೈತರಿಗಿಲ್ಲ.
ಅದೇನಿದ್ದರೂ “ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ಪ್ರಾಧಿಕಾರ”, ರೈತರು ಅಭಿವೃದ್ಧಿ ಪಡಿಸಿದ ಮತ್ತು ದೇಸಿ ತಳಿಗಳ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆತಂಕಕ್ಕೆ ಕಾರಣ. ಉದಾಹರಣೆಗೆ, ಪ್ರಾಧಿಕಾರವು ಆಲೂಗಡ್ಡೆಯ ೨೫ ತಳಿಗಳನ್ನು ಆ ಕಾಯಿದೆ ಅನುಸಾರ ನೋಂದಾಯಿಸಿದೆ. ಅವುಗಳಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಆರ್) ೧೫ ತಳಿಗಳಿದ್ದು, ಉಳಿದ ೧೦ ತಳಿಗಳು ಖಾಸಗಿ ಸಂಸ್ಥೆಗಳದ್ದು.
ಆ ಕಾಯಿದೆ ಜ್ಯಾರಿಯಾಗಿ ಇಪ್ಪತ್ತು ವರುಷಗಳು ದಾಟುತ್ತಿದ್ದರೂ, ರೈತರು ಅಭಿವೃದ್ಧಿ ಪಡಿಸಿದ ಯಾವುದೇ ಆಲೂಗಡ್ಡೆ ತಳಿಯನ್ನು ಕಾಯಿದೆಯ ಅನುಸಾರ ನೋಂದಾಯಿಸಲಾಗಿಲ್ಲ. ಫೆಬ್ರವರಿ ೨೦೧೮ರ ತನಕ “ವೆರೈಟೀಸ್ ಆಫ್ ಕಾಮನ್ ನಾಲೆಜ್” (ವಿಸಿಕೆ – ಸಾಮಾನ್ಯ ಬಳಕೆಯ ತಳಿಗಳು) ಗುಂಪಿನಲ್ಲಿ ನೋಂದಾಯಿಸಲಾದ ೩೨೦ ತಳಿಗಳಲ್ಲಿ ಹೆಚ್ಚುಕಡಿಮೆ ಎಲ್ಲವೂ ಬೀಜ ಕಂಪೆನಿಗಳ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ. ಈ ರೈತವಿರೋಧಿ ಮತ್ತು ಸಂಸತ್ತಿನ ಆಶಯ ವಿರೋಧಿ ಬೆಳವಣಿಗೆಯನ್ನು ತಡೆಯಲೇ ಬೇಕಾಗಿದೆ.
ಭಾರತೀಯ ಕಿಸಾನ್ ಸಂಘ, ಬೀಜ ಅಧಿಕಾರ ವೇದಿಕೆ ಇತ್ಯಾದಿ ಹಲವು ರೈತರ ಮತ್ತು ರೈತಪರ ಸಂಘಟನೆಗಳು ಪೆಪ್ಸಿಕೋ ಕಂಪೆನಿ ಮೊಕದ್ದಮೆ ಹೂಡಿದ್ದನ್ನು ತೀವ್ರವಾಗಿ ಪ್ರತಿಭಟಿಸಿದವು. ನಾಗರಿಕ ಹಕ್ಕು ರಕ್ಷಣಾ ಸಂಘಟನೆಗಳೂ ಸಿಡಿದೆದ್ದವು. ಪೆಪ್ಸಿಕೋ ಕಂಪೆನಿಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದವು. ಅಂತಿಮವಾಗಿ, ೧೦ ಮೇ ೨೦೧೯ರಂದು ಪೆಪ್ಸಿಕೋ ಕಂಪೆನಿ ಎಲ್ಲ ಮೊಕದ್ದಮೆಗಳನ್ನೂ ಹಿಂದೆಗೆಯಿತು. ಇದು ರೈತಪರ ಹೋರಾಟಕ್ಕೆ ಸಂದ ದೊಡ್ಡ ಜಯ.
ಆದರೆ, ದೈತ್ಯ ಕಂಪೆನಿಯೊಂದು ಬಡಪಾಯಿ ರೈತರನ್ನು ಹೆದರಿಸಿದ್ದಕ್ಕೆ ಮತ್ತು ಸತಾಯಿಸಿದ್ದಕ್ಕೆ, ಅದು ರೈತರಿಗೆ ಪರಿಹಾರ ಪಾವತಿಸಬೇಡವೇ? ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಇಂತಹ ಘಟನೆ ಮರುಕಳಿಸದಂತೆ, ಕೆಂದ್ರ ಸರಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ, ಅಲ್ಲವೇ?