ರೈಲು ಸುರಕ್ಷತೆ ಬಲಗೊಳ್ಳಲಿ
ಉತ್ತರ ಪ್ರದೇಶದಲ್ಲಿ ಒಂದೇ ದಿನ ಎರಡು ಕಡೆ ರೈಲ್ವೆ ವಿಧ್ವಂಸಕ ಯತ್ನ ವರದಿಯಾಗಿದೆ. ಬಲಿಯಾ ಜಿಲ್ಲೆಯ ಬಕುಲ್ಲಾ- ಮಂಝಿ ನಿಲ್ದಾಣದ ನಡುವೆ ಹಳಿಯ ಮೇಲೆ ದೊಡ್ಡ ಕಲ್ಲೊಂದನ್ನು ಇರಿಸಿ ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಲೋಕೋಪೈಲೆಟ್ ಎಚ್ಚರದ ದಿಟ್ಟ ಕ್ರಮದಿಂದ ದುರಂತ ತಪ್ಪಿದೆ. ಬಂಡೆಗೆ ಅಪ್ಪಳಿಸಿ ರೈಲು ಹಳಿ ತಪ್ಪಿದ್ದರೆ ಕೆಲವೇ ಮೀಟರ್ ಗಳ ಅಂತರದಲ್ಲಿದ್ದ ಸೇತುವೆಯ ಕೆಳಗೆ ಬೋಗಿಗಳು ಉರುಳುತ್ತಿದ್ದವು. ಇದರಿಂದ ಸಾವು - ನೋವಿನ ಮಹಾಸ್ಪೋಟವೇ ಆಗುತ್ತಿತ್ತು. ದುರಂತ ತಪ್ಪಿರುವುದು ಸಮಾಧಾನ ತಂದಿದೆ. ಇಂತಹದ್ದೇ ಮತ್ತೊಂದು ಪ್ರಕರಣವೂ ಉತ್ತರ ಪ್ರದೇಶದಲ್ಲಿಯೇ ಅದೇ ರೀತಿ ನಡೆದಿದೆ. ಈ ಪ್ರಕರಣದಲ್ಲಿ ಹಳಿಯ ಮೇಲೆ ಗ್ಯಾಸ್ ತುಂಬಿಸಿದ ಸಿಲಿಂಡರ್ ಪತ್ತೆಯಾಗಿದೆ. ಇಲ್ಲೂ ಕೂಡ ಲೋಕೋಪೈಲೆಟ್ ಎಚ್ಚರದಿಂದಲೇ ದುರಂತ ತಪ್ಪಿದೆ.
ಸಿಬ್ಬಂದಿ ನಿರ್ಲಕ್ಷ್ಯದಿಂದಲೋ, ತಾಂತ್ರಿಕ ಸಮಸ್ಯೆಗಳಿಂದಲೋ ರೈಲು ಅವಘಡಗಳು ಘಟಿಸುವುದುಂಟು. ಇದನ್ನು ತಪ್ಪಿಸುವುದಕ್ಕಾಗಿಯೇ ರೈಲ್ವೆ ಇಲಾಖೆ ಹರಸಾಹಸ ಮಾಡುತ್ತಿದೆ. ಇಂಥದ್ದರ ನಡುವೆಯೇ ದುಷ್ಕರ್ಮಿಗಳೂ ವಿಧ್ವಂಸಕ್ಕೆ ಯತ್ನಿಸುವುದರ ಮೂಲಕ ಸುರಕ್ಷತೆಯ ಹೊರೆಯನ್ನು ಹೆಚ್ಚು ಮಾಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಉತ್ತರ ಪ್ರದೇಶವನ್ನೇ ಟಾರ್ಗೆಟ್ ಮಾಡಿಕೊಂಡು ದುಷ್ಕರ್ಮಿಗಳು ಇಂತಹ ಕುಕೃತ್ಯ ಎಸಗುವುದು ಕಂಡು ಬಂದಿದೆ.
ವಂದೇ ಭಾರತ ರೈಲು ಸೇವೆ ಪರಿಚಯಿಸಿದ ಆರಂಭದ ದಿನಗಳಲ್ಲಿ ದೇಶದ ಹಲವೆಡೆ ಇಂತಹ ವಿಧ್ವಂಸ ಯತ್ನಗಳು ನಡೆದವು. ವೇಗದ ರೈಲಿನ ಮೇಲೆ ಕಲ್ಲು ತೂರುವುದು ಹಾಗೂ ಹಳಿಗಳ ಮೇಲೆ ಅಡ್ಡಲಾಗಿ ಜಾನುವಾರುಗಳನ್ನು ಓಡಿಸುವುದು ನಡೆಯಿತು. ಇಲಾಖೆ ಸಿಬ್ಬಂದಿಯ ಎಚ್ಚರ ಕ್ರಮದಿಂದ ಆ ಎಲ್ಲಾ ವಿಧ್ವಂಸಕ ಯತ್ನಗಳೂ ವಿಫಲಗೊಂಡಿವೆ.
ಆಗಸ್ಟ್ ೧೦ ರಿಂದ ಇಲ್ಲಿಯವರೆಗೆ ದೇಶದ ವಿವಿದೆಡೆ ಒಟ್ಟು ೧೮ ಕಡೆ ರೈಲು ವಿಧ್ವಂಸಕ ಯತ್ನಗಳು ನಡೆದಿವೆ ಎಂದು ಇಲಾಖೆ ತಿಳಿಸಿದೆ. ಕಳೆದ ವರ್ಷ ೨೪ ಕಡೆ ಇಂತಹ ಕೃತ್ಯಗಳು ವರದಿಯಾಗಿವೆ. ಸುರಕ್ಷಿತ ಪ್ರಯಾಣದ ಭರವಸೆ ಮೂಡಿಸುವತ್ತ ದಾಪುಗಾಲು ಇಟ್ಟಿರುವ ರೈಲ್ವೆಯ ಮೇಲೆ ಪಿತೂರಿ ನಡೆಯುತ್ತಿರುವುದು ಖಂಡನಾರ್ಹ.
ಇದುವರೆಗಿನ ಘಟನೆಗಳ ಸ್ವರೂಪ ನೋಡಿದರೆ ಇದರ ಹಿಂದೆ ವ್ಯವಸ್ಥಿತ ಜಾಲವೇ ಕಾರ್ಯಾಚರಣೆ ನಡೆಸುತ್ತಿರುವ ಸಂಶಯ ಮೂಡುತ್ತದೆ. ಅಂತಹ ಜಾಲವೇನಾದರೂ ಇದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕಿದೆ. ಬಿಡಿ ಪ್ರಕರಣಗಳಲ್ಲೂ ಇಂತಹ ಕೃತ್ಯ ಎಸಗುವ ಕಿಡಿಗೇಡಿಗಳ ಬಗ್ಗೆ ಸರಕಾರ ಯಾವುದೇ ಮುಲಾಜು ಕಾಯಬಾರದು. ತಾವೇ ಪ್ರಯಾಣಿಸುವ, ತಮ್ಮದೇ ಸಂಪತ್ತಿನ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಕಿಡಿಗೇಡಿಗಳು ಯಾವತ್ತಿದ್ದರೂ ದೇಶಕ್ಕೆ ಅಪಾಯಕಾರಿಗಳೇ ಹೌದು. ಅನ್ಯರ ಜೀವಗಳ ಜತೆ ಚೆಲ್ಲಾಟವಾಡುವ ಇಂಥವರನ್ನು ಕಠಿಣವಾಗಿಯೇ ದಂಡಿಸಬೇಕು. ವಿಧ್ವಂಸಕ ತಡೆಗಾಗಿ ಇರುವ ಪಡೆಗಳನ್ನು ಇನ್ನಷ್ಟು ಬಲಪಡಿಸಬೇಕು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೩೦-೦೯-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ