ಲಂಘನಂ ಪರಮೌಷಧಂ
“ಲಂಘನಂ ಪರಮೌಷಧಂ” ಈ ವಾಕ್ಯವನ್ನು ನಾವು ಆಗಾಗ ಬಳಸುತ್ತಿರುತ್ತೇವೆ. ಇದರ ಮೇಲೆ ಒಂದು ಕಥೆ ಇದೆ ಕೇಳುವಿರಿ ತಾನೆ?
ಎಂದೋ ಒಂದು ದಿನ ಕೇಳಿದ ಕಥೆ ಇದು, ನಿಮಗೂ ಹೇಳುತ್ತೇನೆ ಕೇಳಿ. ಒಂದೂರಲ್ಲಿ ಒಬ್ಬನಿಗೆ ಸಿಕ್ಕಾಪಟ್ಟೆ ಹೊಟ್ಟೆನೋವು ಬಂತು. ಅವನು ನೇರವಾಗಿ ಆಯುರ್ವೇದ ವೈದ್ಯರ ಬಳಿ ಹೋಗಿ ತನ್ನ ನೋವನ್ನು ಹೇಳಿಕೊಂಡ. ಅದಕ್ಕೆ ವೈದ್ಯನು ಇದಕ್ಕೆ ಏನೂ ಬೇಡ “ಲಂಘನಂ ಪರಮೌಷಧಂ” ಎನ್ನುವಂತೆ ಒಂದೆರಡು ದಿನ ಲಂಘನವನ್ನು ಮಾಡು ಸರಿಯಾಗುತ್ತದೆ ಎಂದ. ಇವನೂ ಕೂಡಾ ಅಲ್ಪ ಸ್ವಲ್ಪ ಸಂಸ್ಕೃತ ಓದಿಕೊಂಡಿದ್ದರಿಂದ ಪಂಡಿತರಲ್ಲಿ ಕೇಳುವುದಕ್ಕೆ ಸಂಕೋಚ ಮಾಡಿಕೊಂಡು ಮನೆಗೆ ಬಂದು ಮನೆಯ ಪಕ್ಕದಲ್ಲಿರುವ ಸಣ್ಣ ಹಳ್ಳದ ಆಚೆ ದಡದಿಂದ ಈಚೆ ದಡಕ್ಕೆ, ಈಚೆ ದಡದಿಂದ ಆಚೆ ದಡಕ್ಕೆ “ಲಂಘನ” ಶುರು ಮಾಡಿದ. ಎರಡು ದಿನವಾದರೂ ಕಡಿಮೆಯಾಗಲಿಲ್ಲ! ಪುನಃ ವೈದ್ಯನಲ್ಲಿಗೆ ಬಂದು “ಸ್ವಾಮೀ ಸ್ವಲ್ಪವೂ ಕಡಿಮೆಯಾಗಿಲ್ಲ” ಎಂದು ಹೇಳಿದ. ಅದಕ್ಕೆ ವೈದ್ಯನು, ಹಾಗಾದರೆ “ಕಂಟಕಾರಿ ಕಷಾಯ” ಮಾಡಿ ಕುಡಿ ಎಂದು ಹೇಳಿದ. ಈಗಲೂ ಕೇಳುವುದಕ್ಕೆ ಸಂಕೋಚ ಮಾಡಿಕೊಂಡವನು ಯೋಚಿಸತೊಡಗಿದ. “ಕಂಟಕಾರಿ ಕಷಾಯ” ಎಂದರೇನು………? ……. ಕೊನೆಗೂ ಅವನ ತಲೆಗೆ ಹೊಳೆಯಿತು, “ಕಂಟಕ” ಎಂದರೆ ಮುಳ್ಳು, “ಅರಿ” ಅಂದರೆ ಶತ್ರು, “ಕಂಟಕಾರಿ” ಎಂದರೆ ಮುಳ್ಳಿನ ಶತ್ರು, ಎಂದರೆ ಚಪ್ಪಲಿ. ಓಹೋ! ವೈದ್ಯರು ಚಪ್ಪಲಿಯ ಕಷಾಯ ಮಾಡಲು ಹೇಳಿದ್ದಾರೆ ಎಂದು ಮನೆಗೆ ಬಂದು ಮಾಡಿಯೂ ಆಯಿತು, ಕುಡಿದೂ ಆಯಿತು. ಆದರೂ ಹೊಟ್ಟೆ ನೋವು ಯಥಾ ಸ್ಥಿತಿಯಲ್ಲಿ ಮುಂದುವರೆಯಿತು. ಪುನಃ ವೈದ್ಯನಲ್ಲಿಗೆ ಬಂದು “ಇನ್ನೂ ಕಡಿಮೆಯಾಗಿಲ್ಲ ಸ್ವಾಮೀ” ಎಂದು ಹೇಳಿಕೊಂಡ. ವೈದ್ಯನು ಆಗಬೇಕಿತ್ತಲ್ಲ! ಹಾಗಾದರೆ ಇನ್ನೇನೂ ಮಾಡಲಾಗುವುದಿಲ್ಲ ದೇವರ ಮೇಲೆ ಭಾರ ಹಾಕು ಸರಿಯಾಗುತ್ತೆ ಎಂದ. ಸರಿ ಎಂದು ಮನೆಗೆ ಬಂದವನೇ ವೈದ್ಯರು ದೇವರಮೇಲೆ ಭಾರ ಹಾಕಲು ಹೇಳಿದ್ದಾರೆ ಏನು ಮಾಡುವುದು ಎಂದು ಯೋಚಿಸಿ, ಮನೆಯಲ್ಲಿದ್ದ ಬೀಸೋಕಲ್ಲನ್ನು ತೆಗೆದುಕೊಂಡುಬಂದು ದೇವರ ತಲೆಯ ಮೇಲೆ ಹೇರಿಯೇ ಬಿಟ್ಟ. ಇಷ್ಟೆಲ್ಲ ಮಾಡಿದರೂ ಹೊಟ್ಟೆನೋವು ಕಡಿಮೆಯಾಗದಿರಲು ಪುನಃ ವೈದ್ಯನ ಬಳಿಗೆ ಹೋಗಲಾಗಿ, ವೈದ್ಯನು ಏನೇನು ಮಾಡಿದೆ ಎಂದು ಕೇಳಿದಾಗ, ನೆಡೆದುದೆಲ್ಲಾ ಹೇಳಿದ. ಈಗ ವೈದ್ಯನೇನು ಮಾಡಬೇಕು………..?
ನೀವು ವೈದ್ಯರಾಗಿದ್ದರೆ ಏನು ಮಾಡುತ್ತಿದ್ದೀರೆಂದು ಬರೆಯಿರಿ :)