ಲಕ್ಶ್ಮಿದೇವಿಗೆ ಕಾಲುಗಳೇ ಕೈಗಳು

ಲಕ್ಶ್ಮಿದೇವಿಗೆ ಕಾಲುಗಳೇ ಕೈಗಳು

ಬರಹ

ಕೈಯಿದ್ದವರು ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದೇ ಕಷ್ಟವಾಗಿರುವಾಗ, ಈ ಯುವತಿ ತನ್ನ ಪಾಲಕರಿಗೂ ಹೊರೆಯಾಗದೇ, ತನ್ನ ಎಲ್ಲ ಕೆಲಸಗಳನ್ನು ಕಾಲುಗಳಿಂದಲೇ ಮಾಡಿಕೊಳ್ಳುವಳೆಂದರೆ ಆಶ್ಚರ್ಯವಾಗದಿರದೇ? ನಿಜ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಂಡುಮುಣುಗು ಗ್ರಾಮದ ಲಕ್ಷ್ಮೀದೇವಿಗೆ ಕಾಲುಗಳೇ ಕೈಗಳು. ಹುಟ್ಟಿನಿಂದಲೂ ಕೈಗಳೇ ಇಲ್ಲದೆ ಅಂಗವಿಕಲೆಯಾಗಿ ಹುಟ್ಟಿದ ಲಕ್ಷ್ಮೀದೇವಿಗೆ ತನಗೆ ಕೈಗಳಿಲ್ಲ ಎಂದು ಎಂದೂ ಅನಿಸಿಯೇ ಇಲ್ಲ. ಏಕೆಂದರೆ ಎಲ್ಲ ಕೆಲಸಗಳನ್ನೂ ಕಾಲುಗಳಿಂದಲೇ ಮಾಡಿಕೊಳ್ಳುವ ಚಾಕಚಕ್ಯತೆ ಆಕೆಯದು.
ಕೂಡ್ಲಿಗಿ ತಾಲ್ಲೂಕಿನ ಗುಂಡುಮುಣುಗು ಪುಟ್ಟ ಗ್ರಾಮ. ಇಲ್ಲಿನ ಗಾರೆ ಕೆಲಸ ಮಾಡುವ ನಾಗೇಂದ್ರಪ್ಪನವರ ಎರಡನೇ ಮಗಳೇ ಲಕ್ಷ್ಮೀದೇವಿ. ಬಾಲ್ಯದಿಂದಲೇ ತನ್ನ ಕಾಲುಗಳನ್ನು ಬಳಸಿಯೇ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ ಲಕ್ಷೀದೇವಿಯ ಸ್ಥೈರ್ಯಕ್ಕೆ ಆಕೆಯ ಪಾಲಕರೂ ಪ್ರೋತ್ಸಾಹಿಸಿದರು. ಹೀಗಾಗಿ ಲಕ್ಷ್ಮೀದೇವಿಗೆ ತನಗೆ ಕೈಗಳಿಲ್ಲ ಎಂದು ಎಂದೂ ವ್ಯಥೆಪಟ್ಟಿಲ್ಲ. ಕಾಲುಗಳಿಂದ ಈಕೆ ಮಾಡುವ ಕೆಲಸಗಳೇನು ಗೊತ್ತೆ? ಅಡುಗೆಗೆ ಬೇಕಾಗುವ ಹಸಿ ಮೆಣಸಿನಕಾಯಿಯನ್ನು ನೀಟಾಗಿ ಈಳಿಗೆ ಮಣೆಯಲ್ಲಿಯೇ ಹೆಚ್ಚುತ್ತಾಳೆ, ಈರುಳ್ಳಿ, ಇತರೆ ತರಕಾರಿಗಳನ್ನೂ ಬೇಕಾದ ಆಕಾರದಲ್ಲಿ ಹೆಚ್ಚುವ ಸಾಮರ್ಥ್ಯ ಈಕೆಯ ಕಾಲುಗಳಿಗಿದೆ. ದಿನವೂ ಮನೆಯ ಅಂಗಳದಲ್ಲಿ ಸುಂದರವಾದ ರಂಗವಲ್ಲಿಯನ್ನು ಬಿಡಿಸುವುದೂ ಈಕೆಯ ಕಾಲುಗಳೇ ! ಊಟ ಮಾಡುವುದೂ ಸಹ ಕಾಲುಗಳಿಂದ. ಊಟಕ್ಕೆ ಮೊದಲು ತನ್ನ ಪಾದದ ಬೆರಳುಗಳನ್ನು ನಾವು ಕೈ ತೊಳೆಯುವಂತೆಯೇ ಸ್ವಚ್ಛವಾಗಿ ತೊಳೆದುಕೊಳ್ಳುತ್ತಾಳೆ. ನಂತರ ತಟ್ಟೆಯಲ್ಲಿ ಬಡಿಸಿದ ಅಡುಗೆಯನ್ನು ಏನೇ ಇದ್ದರೂ ಪಾದದ ಬೆರಳುಗಳನ್ನು ಬಳಸಿಯೇ ಊಟ ಮಾಡುತ್ತಾಳೆ. ತಲೆ ಬಾಚಿಕೊಳ್ಳುವುದು, ಹೂ ಮುಡಿದುಕೊಳ್ಳುವುದು, ಹೀಗೆ ಎಲ್ಲ ಕೆಲಸಗಳೂ ಈಕೆಗೆ ಪದತಲಾಮಲಕ.
ಲಕ್ಷ್ಮೀದೇವಿಗೆ ವಿದ್ಯೆಯ ಹಂಬಲವೂ ಇದೆ. ಪ್ರಸ್ತುತ ಈಕೆ ಡಿ.ಇಡಿ ಉತ್ತೀರ್ಣಳಾಗಿದ್ದಾಳೆ. ಇದುವರೆಗಿನ ಎಲ್ಲ ಪರೀಕ್ಷೆಗಳನ್ನೂ ಕಾಲಿನಿಂದ ಬರೆದೇ ಉತ್ತೀರ್ಣಳಾಗಿದ್ದಾಳೆ. ಪುಸ್ತಕಗಳನ್ನು ನೀಟಾಗಿ ತೆಗೆದು, ನೋಟ್‌ಪುಸ್ತಕದಲ್ಲಿ ಪೆನ್ನಿನಿಂದ ದುಂಡಾದ ಅಕ್ಷರಗಳನ್ನು ಬರೆಯತೊಡಗಿದಳೆಂದರೆ, ಕೈಗಳಿರುವವರೂ ನಾಚಬೇಕು. ಮುಂದೆ ಶಿಕ್ಷಕಿಯಾಗಬೇಕೆನ್ನುವ ಅಪಾರ ಹಂಬಲವಿರುವ ಲಕ್ಷ್ಮೀದೇವಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಶಿಕ್ಷಕಿಯಾಗಬೇಕೆನ್ನುವ ಮಹದಾಸೆ.
ಬಡಕುಟುಂಬ ಲಕ್ಷ್ಮೀದೇವಿಗೆ ದಾನಿಗಳಿಂದ ಸಹಾಯ ಹಸ್ತ ದೊರೆತರೆ, ಇನ್ನೂ ಹೆಚ್ಚಿನ ಅಭ್ಯಾಸ ಮಾಡುವ ಇಚ್ಛೆ ಲಕ್ಷ್ಮೀದೇವಿಗಿದೆ. ಪಾದಗಳ ನೆರವಿನಿಂದಲೇ ಉನ್ನತ ಮಟ್ಟಕ್ಕೆ ಹೋಗಬೇಕೆನ್ನುವ ಹಂಬಲ
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ.