ಲಾಂದ್ರಿಯಡಿಯ ಕಗ್ಗತ್ತಲಿನಲ್ಲಿ...! (ಭಾಗ 1)

ಊರಿನ ಗುಡಿ ಹಾಗೂ ಹಾಜಿ ಸೈಯ್ಯದ್ ಅಬ್ದುಲ್ ಬಾರಿ ಮದನಿಯವರ ಪಾವನ ದರ್ಗಾಯಿರುವ, ಅರಬ್ಬೀ ಕಡಲ್ತಡಿಯ ನಮ್ಮ ಈ ಊರಿಗೆ ಅಶ್ವಗುಡ್ಡದಿಂದ ಸುಲಲಿತವಾಗಿ ಚಿಮುಕಿಸುತ್ತ ಹರಿದು ಬಂದು ವಾರಿಧಿ ಸೇರುವ ಝರಿಯು, ಸತತ ಮೂರು-ನಾಲ್ಕು ದಿವಸಗಳಿಂದ ಹಿಡಿದ ನಿರಂತರ ವರುಣದ ಆರ್ಭಟದಿಂದ ಉಕ್ಕಿ ಹರಿಯಲಾರಂಭಿಸಿತು. 'ಧೋ...!' ಎಂದು ನಿಲ್ಲದ ಮೇಘರಾಜನ ಕ್ರೋಧದ ನಡುವೆ, ಇಂದಿನ ಮಾಘ ತಿಂಗಳಿನ ಮೌನಿ ಅಮಾವಾಸ್ಯೆಯ ಕಗ್ಗತ್ತಲಿನ ರಾತ್ರಿಯನ್ನು ಹಗಲಾಗಿಸುವಂತಹ ಮಿಂಚು ಹಾಗೂ ಇಡೀ ಬ್ರಹ್ಮಾಂಡವನ್ನೇ ನಡುಗಿಸುವಂಥ ಧ್ವನಿಯುಳ್ಳ ಗುಡುಗುಗಳಿಂದ ಹಳ್ಳಿಗರು ಭಯಭೀತರಾಗಿ ತಮ್ಮ ತಮ್ಮ ಮನೆಗಳಲ್ಲಿ ಕಂಪಿಸುತ್ತ, ಗುಡಿದೇವನನ್ನು ಆರಾಧಿಸುತ್ತ, ಶೃದ್ಧೆಯುಳ್ಳವರಾಗಿ ಕುಳಿತಿರುವಾಗ, ಕಿರ್ರೆರ್ರೆಂದು ಕಿರುಚಾಡಿದ ಹೆಂಗಸೊಬ್ಬಳಿನ ಗಂಟಲನ್ನು ಹರಿಯುವಂತ ಚೀತ್ಕಾರವನ್ನು ಕೇಳಿ ಹಳ್ಳಿಗರು ಬೆಚ್ಚಿಬಿದ್ದರು.
ಕೆಡುಕಿನ ಅಮಾವಾಸ್ಯೆಯ ಕಗ್ಗತ್ತಲಿನ ಕೃಷ್ಣ ಪಕ್ಷ ರಾತ್ರಿಗಳಲ್ಲಿ ಅಷ್ವಗುಡ್ಡದ ಎಡಕ್ಕಿರುವ ದಟ್ಟ ಅರಣ್ಯದಿಂದ ಯಕ್ಷಿಣಿಯೊಬ್ಬಳು ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೈಯಲ್ಲಿ ಹಿಡಿದು, ಬಿಳಿ ಸೀರೆಯಲ್ಲಿ ಹಳ್ಳಿಗೆ ಬರುತ್ತಿದ್ದಳು. ಕೆಲವರು ಆ ಯಕ್ಷಿಣಿಯನ್ನು ಕಂಡು ವಾರಗಟ್ಟಲೆ ಜ್ವರದಿಂದ ನರಳಿದ್ದುಂಟು. ಸುಟ್ಟು ಬೂದಿಯಾದ ಕರಿದ ಮೀನಿನಂತೆ ಅವಳ ಮುಖವೂ ಕರಿದಂತಾಗಿತ್ತೆಂದು ಕಂಡವರು ಆಗಾಗ ಹೇಳುತ್ತಿದ್ದರು. ಕೆಲವರು ಅವಳ ಕಣ್ಣುಗಳಲ್ಲಿ ಬೆಂಕಿ ಧಗಧಗಿಸುತ್ತಿದ್ದನ್ನೂ ಕಂಡಿದ್ದರು. ಆದರೆ, ಆ ಯಕ್ಷಿಣಿ ಕಿರುಚಾಡುತ್ತಿರಲಿಲ್ಲ. ಇಂದಿನ ಭಯಗ್ರಸ್ತ ವಾತಾವರಣದಲ್ಲಿ ಹಳ್ಳಿಗರು ದಿಗಿಲುಗೊಂಡು ಯಕ್ಷಿಣಿಯ ಕಾಟದಿಂದ ಮುಕ್ತಿ ಪಡೆಯಲು ಗುಡಿದೇವನ ವಿಗ್ರಹವನ್ನು ಪೂಜಿಸಲಾರಂಭಿಸಿದರು.
ಗುಡಿ ದೇವನ ವಿಗ್ರಹವನ್ನು ಪೂಜಿಸುತ್ತಿರುವಾಗ ಎಲ್ಲರ ಮನೆ-ಗುಡಿಯ ಗಂಟೆಗಳು ತಾವಾಗಿ ತೂಗಾಡಿ ಝಣಝಣಿಸ ತೊಡಗಿದವು. ಇದರಿಂದ ಇನ್ನೂ ಭಯಗ್ರಸ್ಥರಾದ ಹಳ್ಳಿಗರು ಅಸಹಾಯಕರಾಗಿ ತಮ್ಮ ತಮ್ಮ ಮನೆಗಳಲ್ಲಿ ನಡೆಯುತ್ತಿರುವ ಪವಾಡಗಳ ಹಿಂದಿರುವ ನಿಗೂಢ ರಹಸ್ಯವನ್ನು ತಿಳಿಯಲು ಹಾಗು ಅದಕ್ಕೆ ಪರಿಹಾರ ಪಡೆಯಲು ಊರಿನ ಗುಡಿಗೆ ಹೋಗಲು ನಿರ್ಧರಿಸಿದರು. ಹಾಗಾಗಿ, ಗಂಡಸರೆಲ್ಲರು ಒಂದೆಡೆ ಸೇರಿ, ದೀವಟಿಗೆಯ ಮಂದ ಬೆಳಕಿನಡಿಯಲ್ಲಿ, ಅಡ್ಡ ದಾರಿ ಹಿಡಿದು ಅಶ್ವಗುಡ್ಡಯೇರಿ ಗುಡಿ ತಲುಪಿದರು. ಹಳ್ಳಿಗರಿಗೆ ಪರಿಹಾರ ಒದಗಿಸಬೇಕಾಗಿದ್ದ ಪೂಜಾರಿಯವರು, ಕಳೆದ ಇಪ್ಪತ್ತು ನಿಮಿಷಗಳಿಂದ ಎಡೆಬಿಡದೆ ಬಿಕ್ಕಳಿಸಿ ಆಯಾಸಗೊಂಡಿದ್ದರು. ಬಿಕ್ಕಳಿಕೆಯಿಂದ ಬೇಸ್ತು ಹೋಗಿದ್ದ ಪೂಜಾರಿಯವರು, ಹಳ್ಳಿಗರನ್ನು ಕಂಡು ಅರಚಾಟಿಸಲಾರಂಭಿಸಿದರು.
"ಊರಿನಲ್ಲೆಲ್ಲೋ ಘೋರ ಪಾಪ ನಡೆಯುತ್ತಿದೆ... ಅಥವಾ ನಡೆದಿದೆ! ಹಾಗಾಗಿ, ಒಂದೆಡೆ ಮೇಘರಾಜನ ಕ್ರೋಧಕ್ಕೆ ನಮ್ಮ ಹಳ್ಳಿ ಜಲಸಮಾಧಿಯಾಗುವ ಹಂತಕ್ಕೆ ಬಂದಿದೆ. ಇನ್ನೊಂದೆಡೆ, ಮುಗ್ಧ ಗುಡಿ ದೇವನೂ ರೋಷದಿಂದ ಗುಡಿಗಳ ಗಂಟೆಯನ್ನು ಬಾರಿಸಿ ಮುಂಬರುವ ಅನಾಹುತದ ಮುನ್ಸೂಚನೆಯನ್ನು ನೀಡುತ್ತಿದ್ದಾನೆ. ದೇವನ ನಮ್ರ ಅರ್ಚಕನಾದ ನಾನೂ ಸಹ, ಅವನ ಕ್ರೋಧಕ್ಕೆ ತುತ್ತಾಗಿ ಇಲ್ಲಿ ಬಿಕ್ಕಳಿಸಿ... ಬಿಕ್ಕಳಿಸಿ ಸುಸ್ತಾಗಿದ್ದೀನಿ. ನನ್ನ ಪಾವನ ತಪಸ್ಸಿಗೂ ಭಗ್ನವಾಗುತ್ತಿದೆ. ಹೋಗಿ! ಆ ಪಾಪಿಯನ್ನು ಪತ್ತೆ ಹಚ್ಚಿರಿ... ಅವನನ್ನು ಗಡಿಪಾರು ಮಾಡಿ... ನಮ್ಮ ಊರನ್ನು ರಕ್ಷಿಸಿರಿ..." ಎಂದು ಬಿಕ್ಕಳಿಸುತ್ತ, ಪೂಜಾರಿಯವರು ಆದೇಶಿಸಿದರು. ಪೂಜಾರಿಯವರಿಂದ ಹೊರಬಂದ ಪ್ರಾಜ್ಞ ವಾಕ್ಯಗಳನ್ನು ತಿರಸ್ಕರಿಸದೇ, ಧರ್ಮೋಪದೇಶಗಳಂತೆ ಮನಃಪೂರ್ವಕವಾಗಿ ಸ್ವೀಕರಿಸಿ, ಗುಡಿಗೆ ಹೋದವರು ಹಳ್ಳಿಗೆ ಮರಳಿದರು.
* * * * *
ನೈಜ ಹರ್ಷಭರಿತ ಬದುಕು ಹೊಣೆಯರಿತ ದಾಂಪತ್ಯದಲ್ಲಿದೆ ಎಂದು ಗಿರಿಜಮ್ಮನ ಮಗಳೊಬ್ಬಳಾದ ರಮ್ಯಾಳಿಗೆ ಅರಿವಿಗೆ ಬಂದದ್ದೇ ಲಗ್ನವಾಗಿ ಒಂದು ಚಂದ್ರಮಾಸ ಕಳೆದ ಬಳಿಕೆ. ತುಂಬಿದ ಯೌವ್ವನಕ್ಕೆ ಕಾಲಿಟ್ಟರೂ ಸಹ ಮಕ್ಕಳ ತುಂಟಾಟಿಕೆ, ರಮ್ಯಾ ಮತ್ತು ಅವಳ ಗೆಳತಿಯರು ಬಿಟ್ಟಿರಲಿಲ್ಲ. ರಾಮಣ್ಣನ ಮಾವಿನ ಮರಕ್ಕೆ ಕಲ್ಲೆಸೆಯುವುದು, ಬೆಂಗಳೂರಿನಿಂದ ಬಂದ ಶ್ರೀಧರಣ್ಣನ ಬೂಟುಗಳನ್ನು ಅಡಗಿಸಿಟ್ಟು ಸಿಹಿ ತಿಂಡಿ ಕೇಳುವುದು, ನೆರೆಮನೆಯ ಅಜ್ಜಿ ಬೆಳೆಸಿದ ಗಿಡಗಳಿಂದ ಹೂವುಗಳನ್ನು ಕದಿಯುವುದು, ಅಪ್ಪಣ್ಣನ ತೋಟದಲ್ಲಿ ಪಟಾಕಿಗಳನ್ನು ಸಿಡಿಸಿ ಅವನನ್ನು ಹೆದರಿಸುವುದು ಇತ್ಯಾದಿ ಚೇಷ್ಟೆಗಳಿಂದ ಈ ಸ್ವಪ್ನಸುಂದರಿಯರು ಇಡೀ ಹಳ್ಳಿಯಲ್ಲಿ ಹೆಸರುವಾಸಿಯಾಗಿದ್ದರು. ನೆರವಿನ ಅಗತ್ಯವಿದ್ದರೆ ಸಹಾಯದ ಕೈ ಚಾಚಲು ಹಿಂದೆ ಸರಿಯುತ್ತಿರಲಿಲ್ಲ. ಗೋಪಾಲಣ್ಣನ ಎಮ್ಮೆ ಓಡಿ ಹೋಗಿದ್ದಾಗ, ಅದನ್ನು ಹಿಡಿದು ವಾಪಸ್ಸು ತಂದು ಕೊಟ್ಟಿದ್ದರು. ಜ್ಯೋತಿಯಕ್ಕ ಮೊದಲ ಬಾರಿಗೆ ಮಗುವನ್ನು ಹೇರಿದ್ದಾಗ, ಕೂಸಿನ ಮತ್ತು ಬಾಣಂತಿಯ ಬಟ್ಟೆ ಬರೆಗಳನ್ನು ತೊಳೆದು, ಅವಳಿಗೆ ನಿಸ್ವಾರ್ಥ ಭಾವದಿಂದ ಮರೆಯಲಾಗದ ನೆರವನ್ನು ಒದಗಿಸಿ ಹಳ್ಳಿಗರ ಕಣ್ಮಣಿ ಎನಿಸಿಕೊಂಡಿದ್ದರು!
ಒಂದು ಮಧ್ಯಾಹ್ನ, ಮಟಮಟ ಸುಡುವ ಬಿಸಿಲಿನಿಂದ ಊರು ಧಗಧಗಿಸುತ್ತಿರುವಾಗ, ಹಿತ್ತಲಿನ ತೆಂಗಿನ ಮರದ ನೆರಳಿನಲ್ಲಿ ಗಿರಿಜಮ್ಮ ಜಾನಪದ ಹಾಡೊಂದನ್ನು ಗುಂಯ್ ಗುಟ್ಟುತ್ತ, ಊಟದ ಪಾತ್ರೆಗಳನ್ನು ತೊಳೆಯುತ್ತಿದ್ದಳು.
"ಗಿರಿಜಾ... ಗಿರಿಜಾ..." ಎಂದು ಯಾರೋ ಕೂಗುತ್ತ ಇತ್ತ ಬರುವುದನ್ನು ಗಮನಿಸಿದ ಗಿರಿಜಮ್ಮ, "ಯಾರಮ್ಮ ಅದು? ಈ ಹೊತ್ತಿಗೆ... ಬನ್ನಿ" ಎಂದಳು
"ನಾನಮ್ಮ... ಗಿರಿಜಾ!" ಎನ್ನುತ್ತ ಗಿರಿಜಮ್ಮನ ದೂರದ ಸಂಬಂಧಿಯಾದ ಶಾರದಮ್ಮ ಬಂದಳು.
"ಏನ್ ಶಾರದಾ... ಈ ಹೊತ್ತಿಗೆ ಬಂದೆ?"
"ಏನಿಲ್ಲಪ್ಪ! ಹೀಗೆ ಆಯ್ತು!"
"ಹೂಂ! ಪಾತ್ರೆ ತೋಳ್ದಾಯ್ತು. ಒಳಗೆ ಹೋಗೋಣ. ಬಾ" ಎಂದು ಸೀರೆಯ ತುದಿಯಿಂದ ಮುಖ ಮೇಲಿನ ಬೆವರನ್ನು ಒರೆಸಿ, ತೊಳೆದ ಪಾತ್ರೆಗಳನ್ನೆತ್ತಿ ಗಿರಿಜಮ್ಮ ಒಳಗೆ ನಡೆದಳು. ಶಾರದಮ್ಮ ಅವಳನ್ನು ಹಿಂಬಾಲಿಸಿದಳು.
ಗಿರಿಜಮ್ಮ ಪಾತ್ರೆ ವಗೈರೆಗಳನ್ನು ಬದಿಗಿಟ್ಟು, ಒಂದು ಲೋಟದಲ್ಲಿ ಮಣ್ಣಿನ ಮಡಕೆಯಿಂದ ತಾಜಾ ತಣ್ಣಗೆಯ ಮಸಾಲಾ ಮಜ್ಜಿಗೆಯನ್ನು ತಂದು ಶಾರದಮ್ಮಳಿಗೆ ನೀಡಿ, ಗೌರವಾರ್ಹ ಆತಿಥ್ಯ ವಹಿಸಿ, "ಶೇಷಾದ್ರಿ ಇನ್ನೇನು ನಿರ್ಧರಿಸಿದ?" ಎಂದು ಚಿಂತನ ಶೀಲಳಾಗಿ ಕೇಳಿದಳು.
"ಇನ್ನೇನು...? ಆ ರಂಡೆಗೆ ವಿಚ್ಛೇದಿಸುತ್ತಾನಂತೆ!" ತಲೆಯನ್ನು ತರಚಿಕೊಳ್ಳುತ್ತ ಶಾರದಮ್ಮ ಉತ್ತರಿಸಿದಳು.
"ಅಯ್ಯೋ...! ಮುಂದೇನು ಮಾಡ್ತಾನಂತೆ?"
"ಇನ್ನೊಂದು ಮದುವೆ ಮಾಡುವುದಿಲ್ಲ ಎಂದು ಹೇಳಿದಪ್ಪ. ಈಗ ಬೆಂಗಳೂರಿನಲ್ಲಿ ಸಂಘದಲ್ಲೊಂದು ಅಧ್ಯಕ್ಷನಾಗಿದ್ದಾನೆ"
"ಮತ್ತು ರಾಜೇಶ?"
"ಅವನಿಗೆ ಬೆಂಗಳೂರಿನಲ್ಲಿ ನೌಕರಿ ಸಿಗಲಿಲ್ಲ. ಹಾಗಾಗಿ, ಇಲ್ಲೇ ಹೊಲದಲ್ಲಿ ಕೆಲಸ ಮಾಡ್ತಾನಂತೆ!" ಎಂದು ಸ್ವಲ್ಪ ತಡೆದು, "...ಹಾಂ! ಪುಟ್ಟಿ ರಮ್ಯಾ ಈಗ ಹೇಗಿದ್ದಾಳೆ? ಇನ್ನಾದರೂ ತನ್ನ ಚಾಳಿಯನ್ನು ಬಿಟ್ಟಿದ್ದಾಳಾ?" ಶಾರದಮ್ಮ ವಿಚಾರಿಸಿದಳು.
"ಇಲ್ಲಮ್ಮ. ಕಾಶಿ ಕಳುಹಿಸಿದರೂ ಆ ಹುಡುಗಿ ಬದಲಾಗುವುದಿಲ್ಲ. ನನಗಂತೂ ಸಾಕಾಗಿ ಹೋಯ್ತು"
"ಎಲ್ಲಾದರೂ ಒಳ್ಳೆಯ ವರ ಹುಡುಕಿ ಲಗ್ನ ಮಾಡಿಸಿಕೊಡು, ಗಿರಿಜಾ. ಗಂಡನ ಸಹವಾಸದಲ್ಲಾದರೂ ತನ್ನ ಚೇಷ್ಟೆಗಳನ್ನು ಬಿಡಬಹುದು"
"ಇಲ್ಲಮ್ಮ. ಇಷ್ಟು ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಿಸಿ ಕಳುಹಿಸುವುದಾ? ಇಷ್ಟು ಬೇಗ ಬೇಡಮ್ಮ" ಶಾರದಮ್ಮಳ ವಿಚಾರವನ್ನು ಗಿರಿಜಮ್ಮ ವಿನಮ್ರವಾಗಿ ವಿರೋಧಿಸಿದಳು.
"ಇಷ್ಟು ಬೇಗ...? ಇನ್ನು ಪುಟ್ಟಿ ಯಾವ ವಯಸ್ಸಿಗೆ ಬರಬೇಕು? ನೋಡು! ಆ ಪುಟ್ಟಿ ರಮ್ಯಾ ಈಗ ಬೆಳೆದು ರಮಣೀಯಾಗಿದ್ದಾಳೆ!"
"ಅದೂ ಹೌದು. ಆದರೆ ರಮ್ಯಾಳಿಗೆ ಒಳ್ಳೆಯ ವರವನ್ನು ಹುಡುಕಬೇಕಲ್ವ..."
"ಹುಡುಕುವುದೇಕೆ? ನಮ್ಮ ರಾಜೇಶ ಸರಿಯಾಗುವುದಿಲ್ಲವೇ? ಹೇಗೆ?"
"ಅರೇ ಹೌದಲ್ವಾ... ಇದು ಒಳ್ಳೆದಾಯ್ತು!" ಎಂದು ಗಿರಿಜಮ್ಮ ಹೃತ್ಪೂರ್ವಕವಾಗಿ ಸಂಬಂಧಿಯ ಮಗನನ್ನು ತನ್ನ ಅಳಿಯನ್ನಾಗಿ ಒಪ್ಪಿಕೊಂಡಳು.
ಇನ್ನೇನು? ಹಣೆಯ ಮೇಲಿನ ಕೆಂಪು ಕುಂಕುಮದಿಂದ ರಮ್ಯಳ ಉಜ್ವಲವರ್ಣದ ಲಾಲಿತ್ಯಮುಖ ಮಂದಿರದಲ್ಲಿ ದ್ಯುತಿತ್ತುತ್ತಿರುವ ದೀಪದಂತೆ ಬೆಳಗಿತು. ತನ್ನ ಮನಸ್ಸಿನಂಗಳದಲ್ಲಿ ಸ್ವಪ್ನ ದೀವಿಗೆಯನ್ನು ಬೆಳಗಿಸುವ ತೀವ್ರಾಭಿಲಾಷೆಯಲ್ಲಿ ರಮ್ಯಾ ತನ್ನ ತುಂಟಾಟಿಕೆಗಳನ್ನು ಮರೆತಳು.
(ಮುಂದುವರೆಯಲಿದೆ...)
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು