ಲಾಂದ್ರಿಯಡಿಯ ಕಗ್ಗತ್ತಲಿನಲ್ಲಿ...! (ಭಾಗ 3)

ಮರುದಿನ ಉಷಃಕಾಲಕ್ಕೆ ಸರಿಯಾಗಿ ಇಮಾಂ ಸಾಹೇಬರು ಅಜಾ಼ನ್ ಹೇಳಿ, ಮುಂಬೆಳಗಿನ ಆಗಮನವನ್ನು ಸ್ವಾಗತಿಸಿದರು. ಸಾಮೂಹಿಕ ಮುಂಜಾನೆಯ ನಮಾಝನ್ನು ಅನುಸರಿಸಿ ಅರುಣೋದಯವಾಯಿತು.
ಮನೆಯಿಡೀ ಅರಸಿದರೂ ರಮ್ಯಾ ಕಾಣಸಿಗದಿರುವುದರಿಂದ ಗಾಬರಿಗೊಂಡಿದ್ದ ರಾಜೇಶ, ಶೇಷಾದ್ರಿಯಣ್ಣ ಮಲಗಿದ್ದ ಕೋಣೆಗೆ ಬಂದು,
"ನಿನ್ನ ತಲೆನೋವು ಹೇಗಿದೆ?" ಎಂದು ಅವಸರದಲ್ಲಿ ವಿಚಾರಿಸಿದನು.
"ಈಗ ಸರಿಯಾಗಿದ್ದೇನೆ"
"ನೀನು ರಮ್ಯಳನ್ನು ನೋಡಿದ್ದೀಯಾ? ಅವಳೆಲ್ಲಿದ್ದಾಳೆಂದು ಗೊತ್ತಿದ್ದೆಯೇ?"
"ಪರಸ್ತ್ರೀಯರತ್ತ ತಲೆಯೆತ್ತಿಯೂ ಕಾಣದವನಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದೆಂದರೆ ದೇವದೂತರಲ್ಲಿ ಜೂಜಾಟದ ನಿಯಮಗಳನ್ನು ಕೇಳಿದನಂತಿದೆ!" ಎಂದು ಭಾವೋದ್ರಿಕ್ತನಾಗಿ ಶೇಷಾದ್ರಿ ನಟಿಸಿದನು.
"ಅದೆಲ್ಲ ಇರಲಿ. ನಾನೀಗ ಪೊಲೀಸ್ ಠಾಣೆಗೆ ರಮ್ಯಳ ನಾಪತ್ತೆಯ ದೂರನ್ನು ದಾಖಲಿಸಲು ಹೋಗುತ್ತಿದ್ದೇನೆ..." ಎನ್ನುತ್ತಿರುವಾಗ, ಮಾತಿಗೆ ಅಡ್ಡ ಬಂದು, "ನಾಪತ್ತೆ!" ಶೇಷಾದ್ರಿ ಒಮ್ಮೆಗೆ ಚೀರಿ, ಗಾಬರಿಯಿಂದ ಥಟ‍್ಟೆಂದು ಎದ್ದು ಅಸ್ತವ್ಯಸ್ತಗೊಂಡು, "ಎಂಥ ಬೇಕೂಫನಂತೆ ಮಾತನಾಡುತ್ತಿದ್ದೀಯಾ?" ಎಂದು ಅಚ್ಚರಿ ಪಟ್ಟು ಕೇಳಿದನು.
"ಹೌದಣ್ಣ. ರಾತ್ರಿ ಆಚಾರ್ಯರ ಮನೆಗೆ ಹೋಗುವಾಗ ತನ್ನ ಕೊನೆಯಲ್ಲಿದ್ದಳು. ವಾಪಸ್ಸು ಬಂದಾಗ ಅವಳಲ್ಲಿರಲಿಲ್ಲ! ಇಡೀ ರಾತ್ರಿ ಹುಡುಕಿದೆ. ಎಲ್ಲೂ ಕಾಣಸಿಗುತ್ತಿಲ್ಲ!" ಎಂದು ತುಂಬಿದ ಕಣ್ಣನ್ನು ಒರೆಸುತ್ತ ರಾಜೇಶ ಹೇಳಿ, ಹೊರಗೆ ಹೋಗಲು ಕಾಲಿಟ್ಟನು.
"ನಿಲ್ಲು ರಾಜೇಶ. ಪೊಲೀಸರಲ್ಲಿ ದೂರನ್ನು ದಾಖಲಿಸಬೇಡ. ಸುಮ್ಮನೆ ತಮಾಷೆಯಾಗಬಹುದು" ಎನ್ನುವಾಗ ಮುಖದ ಮೇಲಿರುವ ನಾಟಕೀಯ ಭಾವನೆಗಳು ಮಾಯವಾಗಿ ಆತಂಕ ಮನೆ ಮಾಡಿತು. ಮುಖಭಾವಗಳನ್ನು ಗಾಂಭೀರ್ಯತೆಯಿಂದ ಅಡಗಿಸುತ್ತ, ಶೇಷಾದ್ರಿ ಮಂಚದ ಮೇಲಿನಿಂದಲೇ ಇಣುಕಿ ಕಿಟಕಿಯಿಂದ ಹೊರಗಡೆ ನೋಡಿದನು.
* * * * *
ಸಂಘದ ಸ್ವಯಂ ಸೇವಕರ ಬಿಡುವಿಲ್ಲದ ಶ್ರಮದಿಂದ ಇಡೀ ಹಳ್ಳಿಯಲ್ಲಿ ನ್ಯಾಷನಲ್ ವಿಮೆನ್ಸ್ ಬ್ರಿಗೇಡಿಯರ್ಸ್ ನ ಪತಾಕೆಗಳು ರಾರಾಜಿಸುತ್ತಿದ್ದವು. ಸರಿಯಾಗಿ ಏಳು ಗಂಟೆಗೆ ಸ್ಥಾಪಕಾಧ್ಯಕ್ಷ ಬೃಹತ್ ಮೆರವಣಿಗೆಯನ್ನು ವಿಧಿವತ್ತಾಗಿ ಉದ್ಘಾಟಿಸಿ, ಈ ಊರಿನ ಘಟಕಕ್ಕೆ ನಾಂದಿ ಹಾಡಿದನು. ಮೆರವಣಿಗೆ ಛಾನಸವಾಗಿ ವೇದಿಕೆಯತ್ತ ಸಾಗುತಿತ್ತು. ಆದರೆ, ಸೂರ್ಯೋದಯದ ಹೊಂಕಿರಣಗಳು ಹಳ್ಳಿಗರಲ್ಲಿ ಏನೋ ನಿಗೂಢತೆಯನ್ನು ಬಹಿರಂಗ ಪಡಿಸಿದಂತೆ ಶೇಷಾದ್ರಿಗೆ ಸ್ಫುರಿಸದಂತಾಗುತಿತ್ತು. ಎದೆ ಡಬಡಬ ಬಡಿಯುತ್ತಿತ್ತು.
ಅಷ್ಟರಲ್ಲಿ, ಕೆಲವು ಮೀನುಗಾರರು "ಅಯ್ಯಯ್ಯೋ...! ಶವ!!!" ಎಂದು ಕಿರುಚುತ್ತ ಓಡಿ ಹಳ್ಳಿಯತ್ತ ಬಂದರು. ಕೆಲವರು ಮೆರವಣಿಗೆಯನ್ನು ತೊರೆದು ಕಿನಾರೆಗೆ ಹೋದರು. ದಂಡದ ಮೇಲೆ ಒಂದು ಹೆಣ್ಣಿನ ಶವ ಅರೆ-ನಗ್ನ ಅನಾಥ ಸ್ಥಿತಿಯಲ್ಲಿ ಬಿದ್ದಿತ್ತು. ಮಾನವನ ಬೆಲೆ ಉಸಿರಿರುವರೆಗೆ; ಅದಿಲ್ಲದಿದ್ದರೆ ಅಡವಿ ಪಾಲಿಗೆ. ಜನರು ಶವವನ್ನು ಸುತ್ತಿ ನಿಂತರು.
ಶವವನ್ನು ನೋಡಿ, "ಆತ್ಮಹತ್ಯೆ ಮಹಾಪಾಪ. ಈ ಹುಚ್ಚು ಬೀರಿನ ದುಷ್ಕರ್ಮದ ಶಿಕ್ಷೆಯನ್ನು ಇಡೀ ಹಳ್ಳಿಯೇ ಅನುಭವಿಸಬೇಕಾಯಿತು" ಎಂದು ಕುಪಿತಗೊಂಡವನೊಬ್ಬ ಹೇಳಬಾರದನ್ನೆಲ್ಲ ಹೇಳಿ ತೃಪ್ತಿಗೊಂಡನು. ಅವನನ್ನು ವಿರೋಧಿಸದೆ ಹಲವರು ಅವನ ಮಾತುಗಳನ್ನು ತಲೆಗಳ ತೂಗಿನಲ್ಲೇ ಒಪ್ಪಿಕೊಂಡರು.
ಸತತ ಮೂರು ದಿನಗಳಿಂದ ಹಿಡಿದ ನಿರಂತರ ಮಳೆಯಿಂದ ಪ್ರವಾಹವೂ ಏರಿತ್ತು. ಹಾಗಾಗಿ ಶವ ನೀರಿನಿಂದ ಉಬ್ಬಿಕೊಂಡಿತ್ತು. ಅಲ್ಲದೆ, ಸಮುದ್ರದಲ್ಲಿರುವ ಕಲ್ಲು ಬಂಡೆಗಳನ್ನು ಬಡಿದುದರಿಂದ ಮುಖವನ್ನು ಗುರುತಿಸುವಂತಿರಲಿಲ್ಲ. ಆದರೆ, ಶವ ವಿವರ್ಣವಾಗಿ ಗಗನತ್ತ ಮುಖ ಮಾಡಿ ಜಗದ ಜಟಿಲತೆಯನ್ನು ತೊರೆದು ಶಾಂತವಾಗಿ ಮಲಗಿತ್ತು. ಕಾಗೆಗಳು ದಿಕ್ಕು ದೆಸೆಯಿಲ್ಲದೆ ಹಾರುತ್ತಿದ್ದವು. ಕಡಲಿನ ಅಲೆಗಳು ತಾವಾಗಿ ಏನನ್ನೂ ಲೆಕ್ಕಿಸದೆ ಒಂದರ ಮೇಲೆ ಇನ್ನೊಂದು ಉರುಳುತ್ತಿದ್ದವು.
* * * * *
"...ಪ್ರಿಯ ಸಹೋದರ ಸಹೋದರಿಯರೇ, ಬೀದಿ ಕಾಮಣ್ಣರು-ಸಮಾಜದ ನಕ್ಷತ್ರಿಕರು" ಎಂದು ಶೇಷಾದ್ರಿ ವೇದಿಕೆಯ ಉನ್ನತ ಪೀಠದ ಮೇಲೆ ನಿಂತು ಧ್ವನಿವರ್ಧಕದಲ್ಲಿ ಭಾಷಣ ಮಾಡುತ್ತ ಉಚ್ಛಸ್ವರದಿಂದ ಈ ಘೋಷಣೆಯನ್ನು ಕೂಗಿದಾಗ, ಜನಸಮೂಹ ಒಮ್ಮೆಗೆ 'ಹೋ...' ಎಂದು ಘರ್ಜಿಸಿದರು. "ಹೌದು. ಅತೀಯಾಗಿ ನಂಬನಿಷ್ಠೆಯುಳ್ಳವರೇ, ಬೆನ್ನಲ್ಲಿ ಇರಿಯುವರು. ಹಾಗಾಗಿ, ಎಂದೆಂದೂ ತಮ್ಮ ನೆರಳನ್ನೂ ನಂಬದಿರಿ. ಇದು ನನ್ನನುಭವ. ಇನ್ನು ಮುಂದೆ ನೀವು ನಿರ್ವಂಚನೆಯಿಂದ ಈ ಸಂಘವನ್ನು ಮುಂದುವರಿಸಿರಿ. ಊರಿನ ಸಮೀಕ್ಷೆ ನಡೆಸಿರಿ. ವಿಧವೆಯರಿಗೆ ನೆರವು ಒದಗಿಸಿರಿ... ಸಹೋದರರೇ, ನಮ್ಮ ಸಹೋದರಿಯರ ಮಾನ ಮರ್ಯಾದಕ್ಕಾಗಿ ತಮ್ಮ ಉಸಿರುಗಳನ್ನೂ ಕಳೆಯಲು ಅಂಜದಿರಿ"
ಅತ್ತ ಸಮಾವೇಶ ನಡೆಯುತ್ತಿರುವಾಗ ಕೆಲವರು ಶವವನ್ನು ಗುರುತಿಸಲು ಶತಪ್ರಯತ್ನ ನಡೆಸಿದರು. ರಮ್ಯಾ ಸಿಗದಿರುವುದರಿಂದ ಚಿಂತಾಗ್ರಸ್ತನಾಗಿದ್ದ ರಾಜೇಶ, ದಿಕ್ಕು ದೆಸೆಯಿಲ್ಲದೆ ಗಲ್ಲಿ-ಗಲ್ಲಿ ತಿರುಗುತ್ತ ಕಿನಾರೆ ತಲುಪಿದನು ಯಾರೋ ಶವದ ಕುರಿತು ಮಾತನಾಡುತ್ತಿರುವುದನ್ನು ಕೇಳಿ ಶವದ ಬಳಿ ಹೋದನು. ಶವದ ಗೆಜ್ಜೆಗಳನ್ನು ಕಂಡು, "ಇದು ರಮ್ಯಳ ಗೆಜ್ಜೆಗಳು. ಲಗ್ನವಾಗಿ ನಮ್ಮ ಮನೆಗೆ ಬಂದಿದ್ದಾಗ, ಇವುಗಳನ್ನು ನಾನು ಅವಳ ಕಾಲಿಗೆ ಕಟ್ಟಿದ್ದೆ" ಎಂದು ಕಣ್ಣೀರಿಡುತ್ತ ರಾಜೇಶ ಅನಾಥ ಶವವನ್ನು ಗುರುತಿಸಿದನು.
ಮಡದಿಯನ್ನು ಕಳೆದುಕೊಂಡವನ ಕಣ್ಣೀರನ್ನು ಕಂಡು ನೆರೆದಿದ್ದ ಜನರು ಎದೆಯೊಡೆದು ಬಿಕ್ಕಿ ಬಿಕ್ಕಿ ಅತ್ತರು. ಗಂಡನ ಅಶ್ರುಪೂರಿತ ಧಾರೆಯಲ್ಲೇ ರಮ್ಯಳ ಶವಸ್ನಾನವಾಯಿತು. ಜಗತ್ತಿನಾದ್ಯಂತ ರಂಗಭೂಮಿಯ ಮೇಲೆ ನಟಿಸುತ್ತಿರುವ ಕಾಲ ನಟ-ನಟಿಯರನ್ನು ನಿರ್ದೇಶಿಸುವ ನಿರ್ದೇಶಕನ ಬಳಿ ರಮ್ಯಳನ್ನು ಕಳುಹಿಸಿ ಕೊಡಲು ಹಳ್ಳಿಗರು ಶವ ಸಂಪುಟವನ್ನು ಸಿಂಗರಿಸಲಾರಂಭಿಸಿದರು.
ಒಟ್ಟಾರೆ, ಗಾಢವಾಗಿ ಸಮಚಿತ್ತ ದೃಷ್ಟಿಯಿಂದ ಈ ಬದುಕಿನ ಯಾತ್ರೆಯನ್ನು ವಿಮರ್ಶಿಸಿದರೆ ಒಡೆದೆದ್ದು ಕಾಣ ಸಿಗುವುದು ಒಂದೇ ಒಂದು ಅಂಶ. ಅದೇ, ಇಲ್ಲಿ ಆಗಮಿಸಿ ಕಳುಹಿಸಿದವನಲ್ಲಿಗೆ ಮರಳುವುದು. ಆದರೆ, ಆಗಮನದ ನೈಜ ಉದ್ದೇಶ ಮಾತ್ರ ಚಿದಂಬರ ರಹಸ್ಯವಾಗಿ ಉಳಿದಿದೆ!
* * * * *
ರಾತ್ರಿ ರಾಜೇಶ, ನಾಟಿ ವೈದ್ಯ ಆಚಾರ್ಯರಲ್ಲಿ ಔಷಧಿ ತರಲು ಹೋಗಿದ್ದಾಗ, ರಮ್ಯಾ ಸುಮ್ಮನೆ ಮಂಚದ ಮೇಲೆ ಅಡ್ಡ ಬಿದ್ದು ಒಂದೇ ಸವನೆ ಬಿಟ್ಟಗಣ್ಣಿನಿಂದ ಕಿಟಕಿಯ ಹೊರಗೆ ಬಾನಲ್ಲಿ ಹಾರುವ ದೆವ್ವ ಬಾವಲಿಗಳನ್ನು ನೋಡುತ್ತ, ರಾಜೇಶನನ್ನು ನೆನಪಿಸಿ ಅವನನ್ನು ಬಯಸುತ್ತಿರುವಾಗ, ನಿಧಾನವಾಗಿ ಕೋಣೆಯ ಬಾಗಿಲು ತೆರೆಯುವ ಭಾವನೆ ಅವಳಲ್ಲಿ ಮೂಡಿತು. ಭಾರಿ ಮಳೆಯಿಂದ ವಿದ್ಯುತ್ ಸಂಪರ್ಕವನ್ನು ಕಡಿದುದರಿಂದ ದಟ್ಟ ಕಗ್ಗತ್ತಲು ಆವರಿಸಿತ್ತು. ಆದರೆ, ಹೊರಗಿರುವ ಎಣ್ಣೆ ದೀಪದ ಮಂದ ಬೆಳಕು ತೆರೆದ ಬಾಗಿಲಿನಿಂದ ಕೋಣೆಯೊಳಗೆ ಬಿತ್ತು. ಹಿಂತಿರುಗಿ ನೋಡಿದಾಗ ಶೇಷಾದ್ರಿಯ ಗಡವ ನೆರಳು ಹೊಸ್ತಿಲಿನ ಮೇಲೆ ನಿಂತಿದ್ದನ್ನು ನೋಡಿ ರಮ್ಯಾ ಭಯಗ್ರಸ್ತಳಾಗಿ ಮಂಚದ ಮೇಲೆ ಒಂದು ಮೂಲೆಯಲ್ಲಿ ನಡುಗುತ್ತ ಕುಳಿತುಕೊಂಡಿದ್ದಾಗ, ಎದೆ ಗುಡುಗುಗಳಿಂದಲೂ ಗಟ್ಟಿಯಾಗಿ ಡಬಡಬ ಬಡಿಯಲಾರಂಭಿಸಿತು. ನುಂಗಲು ಅಪಾಯ ಕಾಯುತ್ತಿರುವಾಗ ಕರಿ ಬೆಕ್ಕು ಅಡ್ಡ ಬರಬೇಕಾ?
* * * * *
"ಕೊನೆಯದಾಗಿ, ಈ ಮೂರನ್ನು ಎಂದಿಗೂ ಬಯಸದಿರಿ- ಪರಧನ, ಪರಸ್ವತ್ತು ಮತ್ತು ಮುಖ್ಯವಾಗಿ ಪರಸ್ತ್ರೀಯರನ್ನು. ಪರಸ್ತ್ರೀಯರ ಸಂಗ- ಮಾನ ಮರ್ಯಾದಕ್ಕೆ ಭಂಗ! ಒಂದು ಹೂವಿನಿಂದ ಹಾರವಾಗುವುದಿಲ್ಲ. ಹಾಗೆಯೇ, ಒಬ್ಬನಿಂದ ಚಳುವಳಿಯೊಂದು ಮುಂದುವರಿಯುವುದಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಮತ್ತು ಕಾರ್ಯಕರ್ತರ ಅಸ್ತಿಮಿತ ಶ್ರಮದಿಂದ ನನಗೆ ಹುಟ್ಟೂರಿನಲ್ಲಿ ಅದ್ಧೂರಿ ಯಶಸ್ಸು ಸಿಕ್ಕಿದೆ. ನನಗೆ ಸ್ವಯಂಸೇವಕರಲ್ಲಿ ದೃಢವಾದ ವಿಶ್ವಾಸವಿತ್ತು. ಅವರ ಬಿರುಸಿನ ಪ್ರಚಾರಕ್ಕೆ ಮತ್ತು ಅತ್ಯುತ್ಕೃಷ್ಟ ನಿಯೋಜನೆಗೆ ನಾನು ಚಿರ ಋಣಿಯಾಗಿದ್ದೇನೆ. ಧನ್ಯವಾದಗಳು" ಎಂದು ಕೊನೆಯದಾಗಿ,
"यत्र नार्यस्तु पूज्यन्ते रमन्ते तत्रा देवताः ।
यत्रै तास्तु न पूज्यन्ते सर्वास्तात्राफल क्रियाः ॥" ಎಂಬ ಶ್ಲೋಕವೊಂದನ್ನು ಪಠಿಸಿ, ತನ್ನ ಭಾಷಣವನ್ನು ಮುಗಿಸಿ, ವೇದಿಕೆಯ ಉನ್ನತ ಪೀಠದಿಂದ ಇಳಿದನು. ನೆರೆದಿದ್ದ ಜನಸಾಮಾನ್ಯರು ಅಧ್ಯಕ್ಷರ ಭಾಷಣದಿಂದ ಪ್ರಭಾವಿತರಾಗಿ, ನ್ಯಾಷನಲ್ ವಿಮೆನ್ಸ್ ಬ್ರಿಗೇಡಿರ್ಸ್ ನ ಅಭ್ಯುದಯಕ್ಕಾಗಿ ಹಾಗು ಮಹಿಳೆಯರ ಸುರಕ್ಷತೆಗಾಗಿ ಶೃಮಿಸಲು ದೃಢ ನಿರ್ಧಾರ ಮಾಡಿದರು...
* * * * *
(ಮುಗಿಯಿತು)
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು