ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ

ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಡಾ. ಸುಕನ್ಯಾ ಸೂನಗಹಳ್ಳಿ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೫೦೦.೦೦, ಮುದ್ರಣ : ೨೦೨೫

‘ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ ಎನ್ನುವುದು ಡಾ. ಟಿ ಆರ್ ಅನಂತರಾಮು ಅವರ ಆಯ್ದ ಪ್ರಬಂಧಗಳ ಸಂಕಲನ. ವಿಜ್ಞಾನ ಲೇಖಕರಾಗಿ ಅನಂತರಾಮು ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರ ಆಯ್ದ ಪ್ರಬಂಧಗಳನ್ನು ಸಂಪಾದಿಸುವ ಕಾರ್ಯ ಮಾಡಿದ್ದಾರೆ ಡಾ. ಸುಕನ್ಯಾ ಸೂನಗಹಳ್ಳಿ. ಈ ಕೃತಿಯಲ್ಲಿರುವ ಪ್ರಬಂಧ ‘ಲಾಲ್‌ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ದಲ್ಲಿ “ಲಾಲ್‌ಬಾಗ್‌ನ ನಿತ್ಯ ಸಂತೆಯಲ್ಲಿ ನೀವೂ ಧ್ಯಾನಾಸಕ್ತರಾಗಬಹುದು. ಗೋಪುರದಲ್ಲಿ ಚಿತ್ರಿಸಿರುವ ಪುರಾಣ ಪ್ರಸಿದ್ಧರನ್ನು ನೆನೆದೋ ಅಥವಾ ಕಲಿಯುಗವನ್ನು ತೊರೆದು ದ್ವಾಪರವನ್ನೂ ದಾಟಿ ತ್ರೇತಾಯುಗವನ್ನೂ ಮೀಟಿ ಹಿಂದೆ ಸರಿಯಬಹುದು. ಈ ಲೋಕದ ರಂಪಗಳು ನಿಮ್ಮ ಏಕಾಂತತೆಗೆ ಭಂಗತಂದರೆ ಬೇಸರಪಡಬೇಡಿ, ಗುಡ್ಡದ ಯಾವ ಭಾಗದಲ್ಲಾದರೂ ಕಾಲು ಚೆಲ್ಲಿ, ನಿಮ್ಮ ಕಾಲಡಿಯಿರುವುದು ಈ ಯುಗ ಯುಗಗಳನ್ನೂ ಮೀರಿದ ಕಲ್ಲು, ಮನುಕುಲ ಹುಟ್ಟುವ ಸುಳಿವೂ ಇರದಿದ್ದ, ಭೂಮಿಯ ಆದಿ ಪರ್ವತದ ಒಂದು ತುಣುಕನ್ನೇ ಎತ್ತಿ ತಂದು ಇಲ್ಲಿ ಬಿಸುಟಿದ ಕಲ್ಲಿನ ಮೇಲೆ. ದೋಸೆ ಹೊಯ್ದು ಒಂದರ ಮೇಲೆ ಒಂದರಂತೆ ಪೇರಿಸಿದಂತೆ ಕಾಣುತ್ತದೆ ಸುತ್ತೆಲ್ಲ.” ಎಂದು ಬರೆದಿದ್ದಾರೆ. 

ವಿಜ್ಞಾನದ ಭವಿಷ್ಯವೊ - ಭವಿಷ್ಯದ ವಿಜ್ಞಾನವೊ? ಎಂಬ ಬರಹದಲ್ಲಿ “ವಿಜ್ಞಾನವಿಲ್ಲದೆ ತಂತ್ರಜ್ಞಾನವಿಲ್ಲ, ವಿಜ್ಞಾನ 'ಜಾತೆ'ಯಾದರೆ, ತಂತ್ರಜ್ಞಾನ ಅದರ 'ತನುಜಾತೆ'. ಮುಂದೆ ಸ್ಮಾರ್ಟ್ ಫೋನ್‌ಗಳು ಏನಾಗುತ್ತವೆ? ಎತ್ತ ಸಾಗುತ್ತವೆ? ಮುಂದಿನ 20 ವರ್ಷಗಳಲ್ಲಿ ಅದು ಯಾವ ರೂಪದಲ್ಲಿರುತ್ತದೆ? ಒಂದಂತೂ ನಿಜ, ಆ ಹೊತ್ತಿಗೆ ನಮ್ಮ ಇಂದಿನ ಸ್ಮಾರ್ಟ್ ಫೋನ್‌ಗಳು ಓಬಿರಾಯನ ಕಾಲದವು ಎನ್ನಿಸಿದರೆ ಅದೇನೂ ಅವಾಸ್ತವವಾಗಲಾರದು. ನಿಮ್ಮ ಒಂದು ಕಣ್ಣನೋಟ, ಅಷ್ಟೇ ಏಕೆ ಬರೀ ಧ್ವನಿ ಸಾಕು, ನಿಮಗೆ ಬೇಕಾದ ಆ್ಯಪ್ ನಿಮ್ಮ ಫೋನಲ್ಲಿ ಕೂತುಬಿಡುತ್ತದೆ. ಬರೀ ನಿಮ್ಮ ನೋಟದಿಂದಲೇ ಚಿತ್ರಗಳನ್ನು ಎಡಿಟ್ ಮಾಡಬಹುದು. ತಲೆಯೊಳಗೆ ಒಂದು ಐಡಿಯಾ ಬಂದರೆ ಸಾಕು, ಅಲ್ಲಿ ಅದು ಪ್ರತ್ಯಕ್ಷವಾಗಿ ನಿಮ್ಮ ಸೇವೆಗೆ ಸಿದ್ಧ.” ಎಂದೂ, ವಿಜ್ಞಾನದ ಪ್ರಭಾವದಲ್ಲಿ ಆಧುನಿಕ ಬದುಕಿನ ಪ್ರವಾಹ ಬರಹದಲ್ಲಿ  “ಜಗತ್ತಿನ ಮೇಲೆ ಕಂಪ್ಯೂಟರ್ ಬೀರಿರುವ ಪರಿಣಾಮ ಅನೂಹ್ಯ. ಶಿಕ್ಷಿತರು ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥರ ಗುಂಪಿಗೆ ಸೇರಿಬಿಡುತ್ತಾರೆ. ಇದು ಕಂಪ್ಯೂಟರ್ ಸಾಕ್ಷರತೆಯ ಯುಗ 'ಸಾವಿಲ್ಲದ ಮನೆಯಿಂದ ಸಾಸಿವೆ ತಾ' ಎಂದು ಬುದ್ಧ, ಮಗುವನ್ನು ಕಳೆದುಕೊಂಡ ತಾಯಿಗೆ ಸಾಂತ್ವನ ಕೊಡಲು ಹೇಳಿದ ಮಾತು. ಇದನ್ನು ಕಂಪ್ಯೂಟರ್ ಲೋಕಕ್ಕೂ ವಿಸ್ತರಿಸಬಹುದು. 'ಸರ್ವಂ ಕಂಪ್ಯೂಟರ್ ಮಯಂ ಜಗತ್' ಎಂಬುದು ಉಪ್ಪೇಕ್ಷೆಯಲ್ಲ.” ಎಂಬ ಮಾಹಿತಿ ಇದೆ.

ಈ ಕೃತಿಯ ಸಂಪಾದಕಿಯಾಗಿರುವ ಸುಕನ್ಯಾ ಅವರು ತಮ್ಮ ಮುನ್ನುಡಿಯಲ್ಲಿ “ ವಿಜ್ಞಾನದ ಮೂಲ ಆಶಯವೇ ನಿಸರ್ಗದ ಸಂಕೀರ್ಣ ವಿದ್ಯಮಾನಗಳ ಅನಾವರಣ. ಅಂಥ ವಿದ್ಯಮಾನಗಳನ್ನು ಬರಿಗಣ್ಣಿನಿಂದ ನೋಡಿ ಬೆರಗಾಗುವ ಬದಲು ಬಗೆಗಣ್ಣಿನಿಂದ ನೋಡಿ ವಿಶ್ಲೇಷಿಸುವುದು ವಿಜ್ಞಾನದ ಪರಿ. ಪ್ರಕೃತಿಯ ಇಂತಹ ಸಂಗತಿಗಳನ್ನು ಜನಸಾಮಾನ್ಯರಿಗೂ ಕುತೂಹಲ ಕೆರಳಿಸುವಂತೆ, ಮನಮುಟ್ಟುವಂತೆ ತಲಪಿಸಿ, ಅವರಲ್ಲಿ ಆಸಕ್ತಿಯನ್ನುಂಟುಮಾಡಿದ ಕನ್ನಡ ಜನಪ್ರಿಯ ವಿಜ್ಞಾನ ಲೇಖಕರೆಂದರೆ 'ಡಾ. ಟಿ.ಆರ್. ಅನಂತರಾಮು' ಅವರು. ಜನಪ್ರಿಯ ವಿಜ್ಞಾನವೆಂದರೆ, ಕೇವಲ ಒಂದು ವಿಷಯಕ್ಕೆ ಸಂಬಂಧಿಸಿದುದಲ್ಲ. ವೈವಿಧ್ಯಮಯ ವಿಷಯಗಳನ್ನು ಅದು ಒಳಗೊಳ್ಳುತ್ತದೆ. ಕೇವಲ ಕೃಷಿಯನ್ನ ಕುರಿತು ಬರೆದರೆ ಕೃಷಿ ಲೇಖಕರು, ಪರಿಸರವನ್ನು ಕುರಿತು ಬರೆದರೆ ಪರಿಸರ ಲೇಖಕರು, ವೈದ್ಯಕೀಯವನ್ನು ಬರೆದರೆ ವೈದ್ಯ ಲೇಖಕರಾಗುತ್ತಾರೆ. ಜನಪ್ರಿಯ ವಿಜ್ಞಾನ ಲೇಖಕರೆಂದರೆ, ಮಾನವ ವಿಕಾಸದ ಬಗ್ಗೆಯೂ ಬರೆಯಬೇಕು, ಜೀವಿಗಳ ಬಗ್ಗೆಯೂ ಬರೆಯಬೇಕು. ಭೂಮಿಯ ಬಗ್ಗೆಯೂ ಬರೆಯಬೇಕು. ಹಾಗೆಯೇ, ನಮ್ಮ ಸೌರಮಂಡಲದ ಗ್ರಹಗಳ, ನಕ್ಷತ್ರಪುಂಜಗಳ ಕುರಿತು ಜನಸಾಮಾನ್ಯರಿಗೆ ತಮ್ಮ ಬರಹಗಳ ಮೂಲಕ ಮಾಹಿತಿಗಳನ್ನು ತಲಪಿಸಬೇಕು. ಪರಮಾಣು ಶಕ್ತಿ ಬಗ್ಗೆಯೂ ಬರೆಯಬೇಕು. ಆರೋಗ್ಯ, ಪರಿಸರ ಇತ್ಯಾದಿ ವೈವಿಧ್ಯಮಯವಾದ ಲೇಖನಗಳನ್ನು ಬರೆಯಬೇಕಾಗುತ್ತದೆ. ಇವೆಲ್ಲವು ಆಯಾಕಾಲಕ್ಕೆ ಪ್ರಸ್ತುತವಿರಬೇಕು. ಆಗಲೇ ಒಬ್ಬ ಜನಪ್ರಿಯ ವಿಜ್ಞಾನ ಲೇಖಕರು ಎಂದು ಕರೆಸಿಕೊಳ್ಳುವುದು: ಒಂದರ್ಥದಲ್ಲಿ ವಿಜ್ಞಾನ ಮತ್ತು ಜನಸಾಮಾನ್ಯರ ನಡುವಿನ ಕೊಂಡಿ.

ಕಳೆದ ಐವತ್ತು ವರ್ಷಗಳಿಂದ ಅನಂತರಾಮು ಇಂತಹ ವೈವಿಧ್ಯಮಯವಾದ ಲೇಖನಗಳನ್ನು ಬರೆದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಮಾಡಿಕೊಂಡು ಬಂದಿದ್ದಾರೆ. ಇವರು ಅನೇಕ ವಾರಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಮಾಸಿಕಗಳಲ್ಲಿ ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಇವರ ಹೆಚ್ಚಿನ ಲೇಖನಗಳು ಸುಧಾ, ತರಂಗ ಮುಂತಾದ ವಾರಪತ್ರಿಕೆಗಳಲ್ಲಿ ಮತ್ತು ದೈನಂದಿಕ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಳೆದ ಐದು ದಶಕಗಳಲ್ಲಿ 1500ಕ್ಕೂ ಮಿಕ್ಕಿ ಲೇಖನಗಳನ್ನು ಬರೆದಿದ್ದಾರೆ. ಇವೆಲ್ಲವು ಜನಪ್ರಿಯ ವಿಜ್ಞಾನ ಲೇಖನಗಳು, ಅದರಲ್ಲಿ ನಾವು ಕೆಲವನ್ನು ಬೇರೆ ಬೇರೆ ಅಭಿರುಚಿ ಇರುವಂತಹ, ವೈವಿಧ್ಯಮಯ ಲೇಖನಗಳನ್ನು ಈ ಸಂಗ್ರಹಕ್ಕೆ ಆಯ್ಕೆಮಾಡಿಕೊಂಡಿದ್ದೇವೆ.

ಅನಂತರಾಮು ಅವರ ಪ್ರಬಂಧವೆಂದರೆ ಜಾಲಿಮರದಿಂದ ಹಿಡಿದು ರಾಸಾಯನಿಕ ಯದ್ಧದವರೆಗೆ, ಲಾಲ್‌ಬಾಗ್ ಕಲ್ಲಿನ ಸಲ್ಲಾಪದಿಂದ ಹಿಡಿದು ಭಾರತದ ಜ್ಯುರಾಸಿಕ್ ಪಾರ್ಕ್‌ರೆಗೆ, ಮನುಷ್ಯನ ವಿಕಾಸದ ಹಾದಿಯಿಂದ ಹಿಡಿದು ಏಲಿಯನ್ಸ್ ಪತ್ತೆಹಚ್ಚುವ ತಂತ್ರದವರೆಗೆ, ಧರಣಿಯ ಒಡಲಿನಿಂದ ಹಿಡಿದು ಆಕಾಶದ ಆತಂಕವಾದಿಗಳವರೆಗೆ, ಶನಿಗ್ರಹದಿಂದ ಹಿಡಿದು ಓಜೋನ್ ವಲಯದ ಗಂಡಾಂತರದವರೆಗೆ ಹೀಗೆ ಒಬ್ಬ ಜನಪ್ರಿಯ ವಿಜ್ಞಾನ ಲೇಖಕ ಏನೆಲ್ಲ ಅಂಶಗಳನ್ನು ಕುರಿತು ಬರೆಯಬೇಕೋ ಅವೆಲ್ಲವುಗಳು ಅನಂತರಾಮು ಅವರ ಪ್ರಾಥಮಿಕ ಲೇಖನಗಳಲ್ಲಿ ಎದ್ದು ಕಾಣುತ್ತವೆ. ಈ ಲೇಖನಗಳೆಲ್ಲ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದಂಥವುಗಳೇ; ಈ ಸಂಪುಟಕ್ಕಾಗಿ ಬರೆದದ್ದಲ್ಲ. ಈಗಾಗಲೇ ಅವರು ಪ್ರಕಟಮಾಡಿರುವ ಜನಪ್ರಿಯ ಲೇಖನಗಳಲ್ಲಿ ಅತ್ಯುತ್ತಮ ಲೇಖನಗಳನ್ನು ಆರಿಸಿಕೊಳ್ಳಬೇಕಾದರೆ ಸ್ವಲ್ಪ ಕಷ್ಟವಾಯಿತು. ಏಕೆಂದರೆ 1500ಕ್ಕೂ ಮಿಕ್ಕಿ ಲೇಖನಗಳಿವೆ. ಯಾವುದನ್ನು ಆರಿಸಿಕೊಳ್ಳಬೇಕು. ಯಾವುದನ್ನು ಬಿಡಬೇಕು ಎಂಬ ಗೊಂದಲ ಇದ್ದೇ ಇರುತ್ತದೆ. ಆದರೆ, ಇಲ್ಲಿ ಆರಿಸಿಕೊಂಡಿರುವುದು ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವಂತಹವು. ವಿಷಯದ ವ್ಯಾಪ್ತಿ ಬಹಳ ಆಳ. ಇವರು ಬರಿ ಭೂಮಿಯ ಬಗ್ಗೆ ಬರೆದಿದ್ದರೆ ಇಷ್ಟೊಂದು ಲೇಖನಗಳನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹತ್ತರಿಂದ ಹನ್ನೆರಡು ಲೇಖನಗಳನ್ನು ಬರೆದರೆ ಭೂವಿಜ್ಞಾನ ಮುಗಿದು ಹೋಗುವುದೇನೋ! ಆದರೆ ಅವರೆಂದೂ ನಿರ್ಬಂಧ ಹಾಕಿಕೊಳ್ಳಲಿಲ್ಲ. ವೃತ್ತಿಯಲ್ಲಿ ಭೂವಿಜ್ಞಾನಿಯಾಗಿದ್ದರೂ ಅವರು ಜನಪ್ರಿಯ ವಿಜ್ಞಾನದ ಎಲ್ಲ ಮಗ್ಗಲುಗಳನ್ನು ಮುಟ್ಟಿದರು. ಜನರಿಗೆ ವಿಜ್ಞಾನ ಹತ್ತಿರವಾಗುವಂತೆ ಮಾಡಿದರು; ಈ ಪ್ರಕ್ರಿಯೆಯಲ್ಲಿ ಸಾಹಿತ್ಯವನ್ನು ಧಾರಾಳವಾಗಿ ಬಳಸಿಕೊಂಡರು.

ಸಾಮಾನ್ಯವಾಗಿ ವಿಜ್ಞಾನ ಬರವಣಿಗೆಗಳು ಅಲ್ಪಾಯುಗಳು ಎಂಬ ಮಾತಿದೆ. ಇದರಲ್ಲಿ ಸತ್ಯವಿಲ್ಲದಿಲ್ಲ. ಆಯಾ ಕಾಲಕ್ಕೆ ಪ್ರಸ್ತುತವೆನಿಸಿದ ವಿಜ್ಞಾನದ ಪ್ರಗತಿಯ ಪಥದಲ್ಲಿ ಆದ ಅನ್ವೇಷಣೆಗಳನ್ನೋ, ಸಂಗತಿಗಳನ್ನೋ ದಾಖಲು ಮಾಡುವಾಗ ನಾಗಾಲೋಟದ ವಿಜ್ಞಾನದ ಯಾವುದೇ ವಿಚಾರಗಳು ಕಾಲಚಕ್ರದಲ್ಲಿ ಹಿಂದಕ್ಕೆ ಸರಿಯುತ್ತ ಹೋಗುವುದು ಸ್ವಾಭಾವಿಕ. ಇಲ್ಲಿ ಆಯ್ಕೆಮಾಡಿರುವ ಅನಂತರಾಮು ಅವರ ಎಲ್ಲ ಲೇಖನಗಳು ಇದೇ ಜಾಡಿಗೆ ಬಿದ್ದಿಲ್ಲ ಎನ್ನುವುದು ನನ್ನ ಭಾವನೆ. ವಿಜ್ಞಾನ ಲೇಖನಗಳಲ್ಲಿ ಪ್ರಬಂಧದ ಬಂಧ-ನಿರೂಪಣೆ ಇದ್ದರೆ ಓದುಗರು ಸ್ವಾಗತಿಸುತ್ತಾರೆಂಬುದು ನನ್ನ ನಂಬಿಕೆ. ಸಾಧ್ಯವಾದಷ್ಟು ಅಂಥ ಲೇಖನಗಳನ್ನು ಇಲ್ಲಿ ಸೇರಿಸಲು ಪ್ರಯತ್ನಿಸಿದ್ದೇನೆ. ಹಾಗೆಯೇ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸೇವೆಗೈದಿರುವವರ - ಪ್ರೊ. ಜಿ.ಟಿ. ನಾರಾಯಣರಾವ್, ಜೀವಿವಿಜ್ಞಾನಿ ಜ್ಯೂಲಿಯಾನಿ ಕಕೆ, ಕನ್ನಡಕ್ಕೊಬ್ಬನೇ ಕೈಲಾಸಂ ಎನಿಸಿಕೊಂಡ ಟಿ.ಪಿ. ಕೈಲಾಸಂ ಮುಂತಾದವರ ವ್ಯಕ್ತಿ ಚಿತ್ರಗಳೂ ಇದರಲ್ಲಿವೆ. ಇವೆಲ್ಲವುದರಲ್ಲಿ ಅನಂತರಾಮು ಅವರ ಶೈಲಿ, ನಿರೂಪಣೆ, ವಿಜ್ಞಾನ ಪ್ರತಿಪಾದನೆಯಲ್ಲಿ ಅವರದೇ ಮಾರ್ಗವಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ.

ಕನ್ನಡದ ಓದುಗರು ಈ ಪ್ರಬಂಧ ಸಂಕಲನವನ್ನು ಆದರದಿಂದ ಬರಮಾಡಿಕೊಂಡು, ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುವರೆಂದು ನಂಬಿದ್ದೇನೆ.” ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.