ಲಿನಕ್ಸ್ ಗೆ ೧೭ ವರ್ಷದ ಹರೆಯ

ಲಿನಕ್ಸ್ ಗೆ ೧೭ ವರ್ಷದ ಹರೆಯ

ಬರಹ

 

ಲಿನಕ್ಸ್ ಗೆ ಈಗ ೧೭ ವರ್ಷ. ಲಿನಕ್ಸ್ ಜರ್ನಲ್ ನಲ್ಲಿ ಕಂಡು ಬಂದ ಈ ಲೇಖನವನ್ನ ಒಮ್ಮೆ ಓದಿ. ೧೯೯೧ರಲ್ಲಿ ಲಿನಸ್ ಟೋರ್ವಾಲ್ಡ್ಸ್ "ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿ ಉಪಯೋಗಿಸಿಕೊಳ್ಳ ಬಲ್ಲಂತಹ ಮಿನಿಕ್ಸ ಆಪರೇಟಿಂಗ್ ಸಿಸ್ಟಂ" ನ ಬಗ್ಗೆ ಜಗತ್ತಿಗೆ ಸಾರಿ ಹೇಳಿದ. ಇದನ್ನ ನೆನಪಿಸಿಕೊಳ್ಳಲು Encyclopedia Brittanica ಮೊನ್ನೆ ತನ್ನ ಮುಖಪುಟದ ವಿಷಯವನ್ನಾಗಿ "ಲಿನಕ್ಸ್ ಹುಟ್ಟು ಹಬ್ಬವನ್ನ" ಆಯ್ದು ಕೊಂಡಿತ್ತು. ಗಣಕ ತಂತ್ರಜ್ಞಾನದಲ್ಲಿ ಹೊಸದೊಂದು ಮೈಲಿಗಲ್ಲನ್ನೇ ಹಾಕಿಕೊಟ್ಟ ಟೋರ್ವಾಲ್ಡ್ಸನ ಕೆಲಸಕ್ಕೆ ಬೆನ್ನಲುಬಾಗಿದ್ದು, ಗ್ನು ಪ್ರಾಜೆಕ್ಟನ ಮೂಲಕ ೧೯೮೩ರಲ್ಲಿ ಜನರಿಗೆ ಸ್ವತಂತ್ರ ತಂತ್ರಾಂಶವನ್ನ ಪರಿಚಯಿಸಿದ "ರಿಚರ್ಡ್ ಸ್ಟಾಲ್ಮನ್" ಮತ್ತು ಗ್ನು ಪ್ರಾಜೆಕ್ಟ್ ನ ತಂತ್ರಾಂಶಗಳು. ಮಿಲಿಯಾಂತರ ಫೀ ಮತ್ತು ಓಪನ್ ಸೋರ್ಸ್ ಪ್ರಾಜೆಕ್ಟ್ ಗಳಿಗೆ ಇದು ಮಾದರಿಯಾಯ್ತು. ಜಗತ್ತಿನ ಕಂಪ್ಯೂಟರುಗಳಿಗೆ ಸ್ವತಂತ್ರ ತಂತ್ರಾಂಶವನ್ನ ಹುಟ್ಟುಹಾಕುವುದರೊಡನೆ, ಅನೇಕ ಹೊಸ ಆವಿಷ್ಕಾರಗಳು ಸಾಧ್ಯವಾದವು. ಮೈಕ್ರೋಸಾಫ್ಟ್ ವಿಂಡೋಸ್ ನ ಅಧಿಪತ್ಯವನ್ನ ಅಲುಗಾಡಿಸಿದ ಈ ತಂತ್ರಾಂಶ ಇಂದು ಕಂಪ್ಯೂಟರ್ ಗಳಲ್ಲದೆ, ಪಿಡಿಎ, ಮೊಬೈಲ್ ಫೋನು, ಎಮ್ಬೆಡೆಡ್ ಸಿಸ್ಟಂ ಹೀಗೆ ಅನೇಕ ಹಾರ್ಡ್ವೇರ್ಗಳಲ್ಲಿ ನಿರಾಳವಾಗಿ ಕಾರ್ಯನಿರ್ವಹಿಸುತ್ತಿದೆ.

ಲಿನುಸ್ ಟೋರ್ವಾಲ್ಡ್ಸ್ ಬರೆದ ಕರ್ನೆಲ್ ಇಂದು ನಾವೆಲ್ಲ ಉಪಯೋಗಿಸುತ್ತಿರುವ ಗ್ನು/ಲಿನಕ್ಸ್ ನ ಹೃದಯ ಭಾಗ. ಅದರ ಮೇಲೆ ನಿಮ್ಮ ಡೆಸ್ಕ್ಟಾಪ್, ಮತ್ತು ಇತರೆ ತಂತ್ರಾಂಶಗಳು ಜೊತೆಗೂಡಿ ಕಾರ್ಯನಿರ್ವಹಿಸುತ್ತವೆ. ನನ್ನ ಲಿನಕ್ಸಾಯಣದಲ್ಲಿ ಇದರ ಬಗ್ಗೆ ಒಂದು ಕಿರುಪರಿಚಯವಿದೆ.

ಗ್ನು/ಲಿನಕ್ಸ್ ಹಬ್ಬದ ಮೂಲಕ ಸಂಪದ ಜನರಿಗೆ ಇದೇ ತಂತ್ರಾಂಶದ ಸವಿಯನ್ನ ಬಡಿಸುತ್ತಾ ಬಂದಿದೆ. ಪೈರಸಿಗೆ ಮಾರು ಹೋಗದೆ, ಲಿನಕ್ಸ್ ಅನ್ನ್ ಒಮ್ಮೆ ಉಪಯೋಗಿಸಿ ನೋಡಿ. ನಿಮ್ಮ ಮುಂದೆ ಬರಲಿರುವ ಸಂಪದದ ಹೊಸ ವಿಭಾಗ "ಟೆಕ್ ಸಂಪದ" ನಿಮಗೆ ಮತ್ತಷ್ಟು ಲಿನಕ್ಸ್ ವಿಷಯವನ್ನ ಕೂಡ ಹೊತ್ತು ತರಲಿದೆ.

ನಿಮಗೆ ಲಿನಕ್ಸ್ ಬಗ್ಗೆ ಗೊತ್ತಿದೆಯೇ? ಅದನ್ನ ಇತರೆ ಕನ್ನಡಿಗರೊಂದಿಗೆ ಹಂಚಿಕೊಳ್ಳುವ ಆಶಯವಿದೆಯೇ? ಹಾಗಿದ್ದಲ್ಲಿ ನಿಮ್ಮ ಲೇಖನಗಳನ್ನ ಟೆಕ್ ಸಂಪದದಲ್ಲಿ ಪ್ರಕಟಿಸಲು ಮುಂದಾಗಿ. "tech-volunteers@sampada.net" ಗೆ ಇಂದೇ ಒಂದು ಸಂದೇಶ ಕಳಿಸಿ.