ಲಿನಕ್ಸ್ ಶರಣಂ ಗಚ್ಛಾಮಿ!

ಲಿನಕ್ಸ್ ಶರಣಂ ಗಚ್ಛಾಮಿ!

ಬರಹ

tech sampadaಕ್ಕಾಗಿ ಬರಹಗಳ ವರ್ಡ್ ಕಡತಗಳನ್ನು ಪಿಡಿಎಫ್‌ಗೆ ಬದಲಾಯಿಸಬೇಕಿತ್ತು. ನನ್ನಲ್ಲಿರುವ ವರ್ಡ್ ಆ ಬದಲಾವಣೆಯ ಸೌಲಭ್ಯ ಹೊಂದಿಲ್ಲ. ಹೇಗೂ ಅಂತರ್ಜಾಲದಲ್ಲಿ ಸೇವೆ ನೀಡುವ ತಾಣಗಳಿವೆಯಲ್ಲ ಅಲ್ಲಿಗೆ ಕಳುಹಿಸಿ ಬದಲಾಯಿಸೋಣವೆಂದು ನಿರ್ಧರಿಸಿದೆ. ಸರಿ pdfonline.com ಹಿಂದೆಯೇ ಪರಿಚಿತವಾದ ತಾಣ. ಅದರಲ್ಲಿ ಕಡತವನ್ನು ಆಯ್ದು,ನಮ್ಮ ಮಿಂಚಂಚೆ ವಿಳಾಸ ನಮೂದಿಸಿದರೆ,ಪಿಡಿಎಫ್ ಕಡತ ಮಿಂಚಂಚೆ ಖಾತೆಗೆ ಬರುತ್ತದೆ. ಕಳುಹಿಸಿ ಕಾದೆ. ಕಡತ ಬರಲೇ ಇಲ್ಲ. ತಿರುಗಿ ಪುಟ ನೋಡಿದರೆ, ಕಡತವಿನ್ನೂ ಅಪ್ಲೋಡೇ ಆಗಿಲ್ಲ. ಆಗ ತಲೆಗೆ ಹೋಯಿತು-ದೊಡ್ದ ಕಡತಗಳನ್ನದು ಸ್ವೀಕರಿಸದು!

ಇನ್ನೂ ಕೆಲವನ್ನು ಪ್ರಯತ್ನಿಸಿದೆ. ಕಡೆಗೂ ಯಾವೂದೋ ಗೂಗಲ್ ಕೃಪೆ ಮಾಡಿ ತೋರಿಸಿದ ತಾಣ,ಕಡತ ಬದಲಾಯಿಸಿಕೊಟ್ಟಿತು. ನೋಡಿದರೆ, ಅದರಲ್ಲಿ ಬ್ರಹ್ಮಲಿಪಿ! ನನ್ನ ಕನ್ನಡ ಕಡತ ಬರಹ ಫಾಂಟಿನದ್ದು. ಅವರಲ್ಲಿ ಆ ಫಾಂಟು ಎಲ್ಲಿ ಬರಬೇಕು? ಹಾಗಾಗಿ ಬ್ರಹ್ಮಲಿಪಿ ಎಂದು ತಲೆಗೆ ಹೋಯಿತು.

ಹಾಂ,ಈಗ ಅಡೋಬ್ ಸ್ವತ: ಅಂತಹ ಸೇವೆ ನೀಡುತ್ತದೆ ಎಂದು ಹೊಳೆಯಿತು. ಅವರ ಆನ್‌ಲೈನ್ ಪ್ರಿಂಟರ್ ಸೇವೆಯಲ್ಲೂ ಬ್ರಹ್ಮಲಿಪಿಯ ಸಮಸ್ಯೆ.ವರ್ಡ್ ಟು ಪಿಡಿಎಫ್  ತಂತ್ರಾಂಶ ಇರುತ್ತದಲ್ಲ. ಒಮ್ಮೆ ಕಂಪ್ಯೂಟರಿನಲ್ಲಿ ಹಾಕಿಕೊಂಡರಾಯಿತು ಎನ್ನಿಸಿತು. ಯಾವೆದೋ ಉಚಿತ ಪ್ರಾಯೋಗಿಕ ತಂತ್ರಾಂಶವನ್ನು ಇಳಿಸಿಕೊಂಡುಅದನ್ನು ಕಂಪ್ಯೂಟರಿನಲ್ಲಿ ಸ್ಥಾಪಿಸಿದ್ದೂ ಆಯಿತು. ಪಿಡಿಎಫ್‌ಗೆ ಬದಲಾಯಿಸು,ಕ್ಲಿಕ್ಕಿಸಿ ಪಿಡಿಎಫ್ ಕಡತ ಸೃಷ್ಟಿಯಾದೊಡನೆ  ತೆರೆದು ನೋಡಿದರೆ,ಮೊದಲ ಪುಟ ಮಾತ್ರ ಪಿಡಿಎಫ್ ಕಡತದಲ್ಲಿದೆ. ಉಚಿತ ಪ್ರಾಯೋಗಿಕ ತಂತ್ರಾಂಶ ಒಂದು ಪುಟವನ್ನಷ್ಟೇ ಬದಲಾಯಿಸುತ್ತದೆ ಎನ್ನುವ ರಹಸ್ಯ ಬಯಲಾಯಿತು.

ಇನ್ನು ಲಿನಕ್ಸ್‌ಗೆ ಶರಣು ಹೋಗೋಣವೆಂದು ತೀರ್ಮಾನಿಸಿದೆ.ಮ್ಯಾಂಡ್ರಿವಾದಲ್ಲಿ ಕಡತ ಸರಿಯಾಗಿ ಗೋಚರಿಸುತ್ತದೋ ಎಂಬ ಸಂಶಯವಿತ್ತು. ಅದರೆ ವಿಂಡೋಸ್ ಫಾಂಟನ್ನು ಅದರಲ್ಲಿ ಸ್ಥಾಪಿಸಿಕೊಂಡಿದ್ದದ್ದು ಈಗ ಪ್ರಯೋಜನಕ್ಕೆ ಬಂತು.ಬರಹ ಫಾಂಟುಗಳು ಸರಿಯಾಗಿ ತೆರೆದುಕೊಂಡುವು.openofficeನಲ್ಲಿ ಪಿಡಿಎಫ್‌ಗೆ ರಫ್ತು ಮಾಡು ಸೇವೆ ಲಭ್ಯವಿದೆ. ಅದನ್ನು ಬಳಸಿ,ಅಂತೂ ಇಂತೂ ಪಿಡಿಎಫ್ ಕಡತ ತಯಾರಾಯಿತು. ಅದನ್ನು tech-volunteers @ sampada.netಗೆ ಕಳುಹಿಸಿ, ಈ ಬರಹ ಬರೆದೆ.