ಲೈಕು ಕಮೆಂಟ್ಸ್ ಗಳ ಹಿಂದೆ ಬಿದ್ದ ಬದುಕು !

ಲೈಕು ಕಮೆಂಟ್ಸ್ ಗಳ ಹಿಂದೆ ಬಿದ್ದ ಬದುಕು !

ಇಂದಿನ ನಮ್ಮ ಬದುಕು ವಾಟ್ಸಾಪ್, ಫೇಸ್ಬುಕ್,  ಟ್ವಿಟ್ಟರು, ಇನ್ಸ್ಟಾಗ್ರಾಂ ಗಳಲ್ಲಿ ರೂಪಗೊಳ್ಳುತ್ತಿದೆ . ಅದೇ ಜಗತ್ತು ಅವುಗಳ ಹಿಂದೆ ಬಿದ್ದು ಇತರೆ ಪ್ರಪಂಚವನ್ನೇ ಮರೆತುಬಿಟ್ಟಿದ್ದೇವೆ. ನಮ್ಮನ್ನು  ಬಹುತೇಕವಾಗಿ ಅವುಗಳೇ ಆಳುತ್ತಿವೆ. ನಮಗೆ ಸ್ವಂತ ಆಲೋಚನೆಯೇ ಇಲ್ಲದಂತಾಗಿ ಜಾಲತಾಣಗಳ ಸುದ್ದಿ ಅಂತಿಮವಾಗಿದೆ. ನಾವು ದಿನದ ಬಹುತೇಕ ಸಮಯವನ್ನ ಜೀವನದ ಅರ್ಥಕ್ಕಿಂತ ಹೆಚ್ಚು ಆಯುಷ್ಯವನ್ನು ಜಾಲತಾಣಗಳಲ್ಲಿ ಕಳೆಯುತ್ತಿದ್ದೇವೆ. ಅವುಗಳಲ್ಲಿ ಲೈಕು ಕಮೆಂಟ್ಸ್ ಗಳನ್ನ ಪಡೆಯುವುದಕ್ಕಾಗಿ ಹರಸಾಹಸ ಪಟ್ಟು ಕೆಲವು ಬಾರಿ ದುಸ್ಸಾಹಸ ಮಾಡಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದನ್ನ ಅದೇ ಜಾಲತಾಣಗಳಲ್ಲಿ ನಾವು ನೋಡಿದ್ದೇವೆ. ಮೂರ್ನಾಲ್ಕು ವರ್ಷದ ಹಿಂದೆ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ ಹೈದ್ರಾಬಾದಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಒಬ್ಬಳು ಯುವತಿ ತಾನು ಹಾಕು ಫೋಟೋಗಳಿಗೆ ತನ್ನ ಸ್ನೇಹಿತರು ಲೈಕ್ ಕೊಡುತ್ತಿಲ್ಲ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ನನಗೆ ಇನ್ನೂ ಸರಿಯಾಗಿ ನೆನಪಿದೆ. ಇದರಿಂದಲೇ  ಅರ್ಥವಾಗುತ್ತದೆ ಸಾಮಾಜಿಕ ಜಾಲತಾಣಗಳು ನಮ್ಮ ಆಲೋಚನೆಗಳನ್ನೇ ಕೊಂದು ತನ್ನ ತಾಳಕ್ಕೆ ತಕ್ಕಂತೆ ನಮ್ಮಣ್ಣ ಹೇಗೆ ಕುಣಿಸಿಕೊಳ್ಳುತ್ತಿವೆ ಎಂದು.

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಾದವರೇ ನಮ್ಮ ಬದುಕಿನ ಆದರ್ಶ ವ್ಯಕ್ತಿಗಳು, ಅವರೇ ಅಪ್ರತಿಮ ಸಾಧಕರು. ಇವರುಗಳ ಮಧ್ಯೆ ಎಲೆಮರೆಕಾಯಿಯಂತಿರುವ ಅನೇಕ ಸಮಾಜ ಸುಧಾರಕರು ನಮಗೆ ತಿಳಿಯುವುದೇ ಇಲ್ಲ.ಏಕೆಂದರೆ ಅವರು ತಾನು ಮಾಡಿದ ಕಾರ್ಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಇನ್ನು ಜಾಲತಾಣಗಳ ಸೆಲೆಬ್ರಿಟಿ ಗಳಿಗೆ ಸಮಾಜದಲ್ಲಿ ದೊಡ್ಡದೊಂದು ಮರಿಯಾದೆ ಇದೆ ಅವರಿಗೊಂದು ತಮ್ಮದೇ ಆದ ಅಭಿಮಾನಿಗಳ ಬಳಗವಿದೆ. ಅದರಲ್ಲೇ ಕೆಲವು ವ್ಯಕ್ತಿಗಳು ಸಮಾಜ ಸೇವೆಯನ್ನು ಜಾಲತಾಣಗಳ ಪ್ರೇರಣೆಯಿಂದ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಅವುಗಳಲ್ಲಿ ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಅನೇಕ ಸಂಗತಿಗಳು ಸಿಗುತ್ತವೆ ಎನ್ನುವುದನ್ನು ನಾನು ಅಲ್ಲಗಳೆಯಲಾರ.                                           

ಇಂದು ಒಂದು ದೇಶದ ಆಡಳಿತಾರೂಢ  ರಾಜಕೀಯ ಪಕ್ಷವನ್ನ ಕಿತ್ತೊಗೆದು ಇನ್ನೊಂದು ಪಕ್ಷವನ್ನ ಕೂರಿಸುವಲ್ಲಿ , ಸಮಾಜದಲ್ಲಿ ಕ್ರಾಂತಿ ಮತ್ತು ಶಾಂತಿಗಳೆರಡನ್ನು ರೂಪಿಸುವಲ್ಲಿ ಮೂಲ ಕಾರಣೀಭೂತಗಳಾಗಿ ನಿಂತಿರುತ್ತವೆ ಸಾಮಾಜಿಕ ಜಾಲತಾಣಗಳು. ಇವುಗಳು ಸತ್ಯವನ್ನ ಸುಳ್ಳನ್ನಾಗಿಸಿ ಸುಳ್ಳನ್ನ ಸತ್ಯವನ್ನಾಗಿಸಿ ಬಹುಬೇಗ ಹಬ್ಬಿಸುವ ಶಕ್ತಿಯು ಇವುಗಳಿಗಿದೆ. ನಮ್ಮ ಮನಸ್ಸನ್ನು ನಾವು ನಿಯಂತ್ರಣದಲ್ಲಿಟ್ಟುಕೊಳ್ಳಲು ದೀರ್ಘವಾದ ತಪಸ್ಸನ್ನೇ ಆಚರಿಸಬೇಕು, ಅಷ್ಟಾದರೂ ಮನಸ್ಸು ನಿಯಂತ್ರಣಕ್ಕೆ ಬರುವುದಿಲ್ಲ. ಆದರೆ ಒಂದು ಜಾಲತಾಣ ನಮ್ಮ ಮನಸ್ಸನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ ಎಂದರೆ ಅದರ ತಾಕತ್ತು ಎಷ್ಟಿರಬಹುದೆಂದು ಆಲೋಚಿಸಿ. ಇಂದು ನಮಗೆ ಒಂದು ದಿನ ಊಟ ಇಲ್ಲದಿದ್ದರೂ ಬದುಕುತ್ತೇವೆ, ಯಾವ ಸಮಸ್ಯೆಯೂ ಆಗದು.ಆದರೆ ಜಾಲತಾಣಗಳ ಬಳಕೆ ಇಲ್ಲದಿದ್ದರೆ ಖಂಡಿತವಾಗಿಯೂ ಜೀವ ಒದ್ದಾಡಿ ಹೋಗುತ್ತದೆ. ಇಂದು ನಮ್ಮ ಬದುಕು ಯಾವ ದಿಕ್ಕಿನಡೆಗೆ ಸಾಗುತ್ತಿದೆ ಎನ್ನುವುದೇ ಅರ್ಥವಾಗದಂತಾಗಿದೆ.

ಈ ಯುಗದಲ್ಲಿ ಖಂಡಿತವಾಗಿಯೂ ಸಾಮಾಜಿಕ ಜಾಲತಾಣಗಳ ಅಗತ್ಯತೆ ಇದೆ. ಆದರೆ ಊಟದ ರುಚಿಯನ್ನು ಹೆಚ್ಚಿಸಲು ಸ್ವಲ್ಪ ಉಪ್ಪಿನಕಾಯಿ ಹೇಗೆ ಬೇಕೋ. ಹಾಗೆಯೇ ನಮ್ಮ ಇಂದಿನ ಬದುಕಿನಲ್ಲಿ ಜಾಲತಾಣಗಳು ಇರಬೇಕು, ಇಡೀ ಬದುಕೇ ಜಾಲತಾಣಗಳ ಮೇಲೆ ನಿರ್ಧಾರವಾಗಬಾರದು.

-ಶ್ರೀರಾಮಕೃಷ್ಣ ದೇವರು, ಮರೇಗುದ್ದಿ

ಚಿತ್ರ ಕೃಪೆ: ಅಂತರ್ಜಾಲ ತಾಣ