ಲ೦ಡನ್ ಪ್ರವಾಸಕಥನ ಭಾಗ ೧೩: ಇ೦ಗ್ಲೆ೦ಡಿನ ಇಲಿಗಳೂ, ವಿಯಟ್ನಾಮಿ ಹೊಟ್ಟೆಯೊ!

ಲ೦ಡನ್ ಪ್ರವಾಸಕಥನ ಭಾಗ ೧೩: ಇ೦ಗ್ಲೆ೦ಡಿನ ಇಲಿಗಳೂ, ವಿಯಟ್ನಾಮಿ ಹೊಟ್ಟೆಯೊ!

ಬರಹ

www.anilkumarha.com

ಲ೦ಡನ್ ಪ್ರವಾಸಕಥನ ಭಾಗ ೧೩: ಇ೦ಗ್ಲೆ೦ಡಿನ ಇಲಿಗಳೂ, ವಿಯಟ್ನಾಮಿ ಹೊಟ್ಟೆಯೂ

ಲ೦ಡನ್ನಿನಲ್ಲಿ ನನ್ನ ರೂಮಿನದ್ದೇ ಒ೦ದು ಕಥೆ. ಹತ್ತಡಿ, ಹತ್ತಡಿ ಅಗಲದ ಕೋಣೆ. ಇದು ಅಫೀಶಿಯಲ್ಲಾಗಿ ನಾನು ಬಳಸಬಹುದಾಗಿದ್ದ ಸ್ಥಳಾವಕಾಶ. ‘ವಿಲಿಯ೦ ಪಬ್’ ಸ೦ಕಿರಣದ ಮೊದಲ೦ತಸ್ತಿನ ಒ೦ದು ಕೋಣೆ ನನ್ನದು. ಉಳಿದೆರೆಡು ಮೊರು-ಮತ್ತೊ೦ದು ಅ೦ತಸ್ತು ಇದ್ದು ಯಾರ್ಯಾರೋ ಬ೦ದಿರುತ್ತಿದ್ದರಲ್ಲಿ. ಯಾವ್ಯಾವಾಗಲೋ ಬ೦ದಿರುತ್ತಿದ್ದರಲ್ಲಿ. ಆದರೆ ಹೆಚ್ಚು ಜನರಿರುತ್ತಿರಲಿಲ್ಲ. ಹೆಚ್ಚು ದಿನವಿರುತ್ತಿರಲಿಲ್ಲ. ಪರ್ಮನೆ೦ಟಾಗಿ ಅಲ್ಲಿ ದಿನವಹೀ ಇರುತ್ತಿದ್ದವರೆ೦ದರೆ ಒ೦ದಕ್ಷರವೂ ಇ೦ಗ್ಲೀಷ್ ಬರದ, “ಇ೦ಗ್ಲೀಷ್” ಎ೦ಬ ಪದವನ್ನೂ ಸಹಜವಾಗಿ ಹೇಳಲಾಗದ ವಿಯಟ್ನಾಮಿ ಅಡುಗೆಭಟ್ಟ, ಲ೦ಡನ್ನಿನಲ್ಲಿ ಪಾಸ್‍ಪೋರ್ಟ್-ವೀಸಗಳ ಅವಶ್ಯಕತೆ ಲವಲೇಶವೂ ಇರದಿದ್ದ ಅನೇಕ ಇಲಿಗಳು ಮತ್ತು ಎರಡು ಅಡುಗೆ ಮನೆ-ಕಿಚನ್ ರೂಮುಗಳು.

ಕೆಳಗಿನ ಬಾರಿನಲ್ಲಿ ಸ೦ಜೆ ಆರಕ್ಕೆ ಗಲಾಟೆ ಶುರು, ಬೇಸಿಗೆಯಾದರೆ. ಚಳಿಗಾಲವಾದರೆ ಮೊರುಗ೦ಟೆಗೆಲ್ಲ ಗಲಾಟೆ. ಬೇಸಿಗೆಯಲ್ಲಿ ಗು೦ಡು ಬಾರನ್ನು ದಾಟಿ, ಅಲ್ಲಲ್ಲ, ಬಾರನ್ನು ದಾಟಿ ‘ಗು೦ಡು’ ಹೊರಗೆ ರಸ್ತೆಯ ಮೇಲೆಲ್ಲ ಹರಿದು ಬರುತ್ತಿತ್ತು, ಚೇರುಕುರ್ಚಿಗಳ ಸಮೇತ. ಜೊತೆಗೆ ಹೊರಗೆಲ್ಲ ಬೆಳಗುವ ಸೀರಿಯಲ್ ಸೆಟ್‍ಗಳು ಮಾತ್ರ ನಮ್ಮೂರಿನ ಮದುವೆ ಛತ್ರಗಳನ್ನು ನೆನಪಿಗೆ ತರುತ್ತಿದ್ದವು. ಪಬ್ಬಿನ ಒಳಗೇ ಸ್ನೂಕರ್ ಟೇಬಲ್ಲು--ಬಿಸಿಲಿರಲಿ ಮಳೆಯಿರಲಿ. ಆದರ ಪಕ್ಕ ಒ೦ದು ಜೂಕ್ ಬಾಕ್ಸ್. ಅದನ್ನು ನಾವು ‘ಜೋಕ್ ಬಾಕ್ಸ್’ ಎನ್ನುತ್ತಿದ್ದೆವು. ಏಕೆ೦ದರೆ ನಾವು ಹಾಕಿದ ಕಾಸೆಲ್ಲ ಅದರ ಹೊಟ್ಟೆಗೆ, ಮತ್ತದರ ಮೊಲಕ ಅದರ ಒಡೆಯನಿಗೇ ಸ್ವಾಹಾ. ಹಾಗ೦ತ ತಿಳಿದಿದ್ದರೂ ನಾವು ಆಡುವುದು ನಿಲ್ಲಿಸುತ್ತಿರಲಿಲ್ಲವಲ್ಲ!

ನನ್ನ ಕೋಣೆಯಲ್ಲಿ ಭಯ೦ಕರ ಇಲಿಮರಿಗಳ ಓಡಾಟ. ಅಥವ ಇಲಿಯ ಮರಿಗಳ ಭಯ೦ಕರ ಓಡಾಟ. ಜೊತೆಗೆ ಕೊರೆವ ಚಳಿ. ಆ ಕಟ್ಟಡದ ಒಡೆಯ, ವಿಯಟ್ನಾಮಿ ಯಜಮಾನ ಸದಾ ನಗು ಸೂಸುತ್ತಿದ್ದ. ಐದು ಗ೦ಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ತ೦ದೆ ಹಾಗೂ ರೋಸ್ ಎ೦ಬ ಒಬ್ಬ ಹೆ೦ಡತಿಯ ಗ೦ಡ. ಈ ತು೦ಬು ಸ೦ಸಾರದಿ೦ದಾಗಿ ಆತ ನಗೆ ಸೂಸುತ್ತಿರಲಿಲ್ಲ.

“ಊಟ ಮಾಡಿದಿರ?”
“ನಗು”,
“ಏನಾದರೂ ತೊ೦ದರೆ ಇದೆಯ?”
“ನಗು”
“ನನಗ್ಯಾಕೋ ನನ್ನ ಕಿವಿಗಳ ಮಧ್ಯೆ ಪ್ರತಿಧ್ವನಿ ಹುಟ್ಟಿದ೦ತಿದೆ, ಈಗ, ನಿಮ್ಮನ್ನು ಭೇಟಿಮಾಡಿದಾಗಿನಿ೦ದ. ಏನ೦ತೀರ?”
“ನಗು” !!!

ಹೀಗೆ ಆ ಯಜಮಾನನ ನಗು ಎಲ್ಲದಕ್ಕೂ ಮದ್ದು--(ಅ) ಇ೦ಗ್ಲೀಷ್ ಬಾರದಿರುವುದಕ್ಕೆ, (ಆ) ಗ೦ಡು ಮಕ್ಕಳು ಜಗಳದ ನಡುವಿನ ತಮ್ಮ ಅಸಹಾಯಕತೆಗೆ, (ಇ) ಈ ದೇಶದಲ್ಲಿ ಬ೦ದು ಏನು ಮಾಡಿತ್ತಿದ್ದೇನೆ೦ದು ತಿಳಿಯದಿರುವುದಕ್ಕೆ. ಆಶ್ಚರ್ಯವೆ೦ದರೆ ವಿಯಟ್ನಾಮಿ ಜನ ಭಾರತೀಯರ೦ತೆ ಹಲವು ಶತಮಾನಗಳ ಕಾಲ ಇ೦ಗ್ಲೆ೦ಡಿಗೆ ವಲಸೆ ಬ೦ದವರಲ್ಲ. ೧೯೭೮-೮೧ರ ನಡುವೆ, ಕೇವಲ ಮೊರು ವರ್ಷಗಳ ಅ೦ತರದಲ್ಲಿ ವಲಸೆ ಬ೦ದವರವರು!

ಮೊರ್ನಾಲ್ಕೂ ಕೋಣೆಗಳನ್ನು ಬಾಡಿಗೆಗೆ ಕೊಟ್ಟಿದ್ದರಿ೦ದ, ಕೋಣೆಯ ಒಳಗಿನ ಬಿಸಿಮಾಡಿಸುವ ಯ೦ತ್ರದ ತೀವ್ರತೆಯನ್ನು ಕಡಿಮೆಮಾಡಿರುತ್ತಿದ್ದ ಆ ವ್ಯಕ್ತಿ. ಪಾಪ, ಪೈಪುಗಳು ಬಿಸಿಯಾಗಿ, ಜ್ವರ ಬ೦ದ೦ತೆ ಆಡುತ್ತವೆ ಎ೦ಬ ಕಾರಣಕ್ಕಿರಬೇಕು. ರಾತ್ರಿಯೆಲ್ಲ ಚಳಿ ಎ೦ದರೆ ಚಳಿ. ಪ್ರಪ೦ಚ ಯುದ್ಢಗಳ ಕಾಲದಲ್ಲಿ ಹಿಟ್ಲರ್ ಜ್ಯೂ ಜನರನ್ನು ಕೂಡಿ ಹಾಕಿದ ರೂಮುಗಳಿಗಾದರೂ, ಬಿಸಿಯಿರುತ್ತಿದ್ದವು. ಏಕೆ೦ದರೆ ಅಲ್ಲಿ ಸಾವಿನ ಭಯದಿ೦ದಾಗಿ ಜನ ಕುದಿಯುತ್ತಿದ್ದರ೦ತೆ! ಸಾಮೊಹಿಕವಾಗಿ ಜನರನ್ನು (ಅ೦ದರೆ ಜ್ಯೂಗಳನ್ನು) ಅತಿ ಕಡಿಮೆ ಖರ್ಚಿನಲ್ಲಿ ಕೊಲ್ಲುವುದು ಹೇಗೆ ಎ೦ದು ಅತಿ ಕಡಿಮೆ ಖರ್ಚಿನಲ್ಲಿ ಪತ್ತೆಮಾಡಲು ಪ್ರಾರ೦ಭಿಸಿ, ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿದರ೦ತೆ. ಏನೆ೦ದರೆ, ಕಾರಿನ ಎಕ್ಸಾಸ್ಟ್ ಪೈಪಿನ ಮೊಲಕ ವಿಷಾನಿಲವನ್ನು ಸೀಲ್ ಮಾಡಲಾದ ಕೋಣೆಯೊಳಕ್ಕೆ ಹರಿಯಬಿಡುವುದು. ಆ ಹೊಗೆಗೆ ಸಧ್ಯದ ಭಾರತದ ಕ್ರಿಕೆಟ್ ದಿಗ್ಗಜ ದಾ೦ಡಿಗರ ಗುಣಲಕ್ಷಣವಿದ್ದ೦ತಿತ್ತು--ಅಜ೦ತಾ ಮೆ೦ಡಿಸನ ಎಸೆತವನ್ನು ಎದುರಿಸಲು ಒ೦ದೇ ದಾರಿ--ಸುಮ್ಮನೆ ಔಟ್ ಆಗಿಬಿಡುವುದು. ನಾನೂ ನನ್ನ ಕೋಣೆಯ ಬಾಡಿಗೆಯನ್ನು ಪೌ೦ಡ್‍ಗಳ ಮೊಲಕವಲ್ಲದಿದ್ದರೂ ಹೇಗೋ ಕೊಟ್ಟೂ ಸಹ ದೇಹದ ಬಿಸಿ ಕಾಪಾಡಿಕೊಳ್ಳಲಾಗದ ಸಮಯದಲ್ಲಿ ಇ೦ತಹ ಬಿಸಿಬಿಸಿ ಸುದ್ದಿಗಳನ್ನು ಟಿ.ವಿಯಲ್ಲೋ, ಪುಸ್ತಕದಲ್ಲೋ, ಕ೦ಪ್ಯೂಟರಿನಲ್ಲೋ ಅಥವ ನೆನಪಿನಿ೦ದಲೋ ಮೆಲುಕು ಹಾಕುತ್ತ, ಭ್ರಮಾತ್ಮಕವಾಗಿಯಾದರೂ ಬೆಚ್ಚಾಗಾಗುತ್ತಿದ್ದೆ.

ನನ್ನ ಕೋಣೆಯಲ್ಲಿ ಚಳಿಯ ಕಾಟ ಒ೦ದೆಡೆಯಾದರೆ, ಇಲಿಮರಿಗಳ ಕಾಟ ಇನ್ನೊ೦ದೆಡೆ. ಏಕೆ೦ದರೆ ಇಲಿಮರಿಗಳು ಚಳಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಏಕೆ೦ದರೆ ಅವುಗಳಿಗೆ ಮು೦ಚಿನ ಪ್ಯಾರಾದ ಜ್ಯೂಗಳ ಕಥೆ ಗೊತ್ತಿರಲಿಲ್ಲ. ಅಡುಗೆಮನೆ ಇದ್ದೆಡೆಯೆಲ್ಲ ಇಲಿಗಳ ಕಾಟ ಇದ್ದದ್ದೇ ಅಲ್ಲವೆ--ಆಹಾರಕ್ಕಾಗಿ. ಬೇರೆಲ್ಲಾ ಕಡೆ ಇಲಿಗಳು ಅಹಾರಕ್ಕಾಗಿ ಬ೦ದರೆ, ಈ ವಿಯಟ್ನಾಮಿ ಪಬ್ಬಿನಲ್ಲಿ ಇಲಿಗಳು ‘ಆಹಾರವಾಗಲಿಕ್ಕೆ’ ಬರುತ್ತಿದ್ದವು. ಅವುಗಳನ್ನು ಹಿಡಿಯಲು ವಿಯಟ್ನಾಮಿಗಳು ಒ೦ದು ತ೦ತ್ರವನ್ನು ರೂಪಿಸಿದ್ದರು. ವಿಲಿಯ೦ ಪಬ್ಬಿನ ಮೊದಲ೦ತಸ್ತಿನಲ್ಲಿ ನನ್ನ ಕೋಣೆಯ ಬದಿಯಲ್ಲಿ ಎರಡು ಅಡುಗೆಮನೆ ಇದ್ದು, ಅದರಲ್ಲಿ ಒ೦ದು ಕೋಣೆಯಲ್ಲಿರುತ್ತಿದ್ದವರಾದ ನಾವ್ಗಳು ಅಡುಗೆ ಮಾಡಿಕೊಳ್ಳಲು ಹಾಗೂ ಬಟ್ಟೆ ಒಗೆಯಲು ಬಳಸುತ್ತಿದ್ದೆವು. ಎರಡನೆಯದ್ದು ಬೃಹತ್ತಾದ, ವಿಲಿಯ೦ ಪಬ್‍ಗೆ ಬರುವವರ ಹೊಟ್ಟೆ ತು೦ಬಿಸುವ ಅಡುಗೆಮನೆಯಾಗಿದ್ದು, ಅದರ ತು೦ಬ ಅಡುಗೆಯವರಿರುತ್ತಿದ್ದರು. ಅವರೆಲ್ಲ ವಿಯಟ್ನಾಮಿಯರು ಎ೦ದು ಒತ್ತಿ ಹೇಳಬೇಕಿಲ್ಲವಷ್ಟೇ. ಅವರುಗಳು ಅಡುಗೆಮನೆಯಲ್ಲಿ ಓಡಾಡುವ ಇಲಿಮರಿಗಳನ್ನು ‘ಕಚಕ್’ ಎ೦ದು ತು೦ಡರಿಸಿ ಅಡುಗೆಗೆ ಬಳಸುತ್ತಾರೆ ಎ೦ದೇ ನಾನು ಬಹಳಷ್ಟು ದಿನ ತಪ್ಪಾಗಿ ಭಾವಿಸಿದ್ದೆ--ಬೇಕೆ೦ದೇ!
*
ಪುಟ್ಟ, ನಾಲ್ಕಿ೦ಚು ಆರಿ೦ಚು ಅಗಲದ ಕಾರ್ಡೊ೦ದನ್ನು ವಿಲಿಯ೦ ಪಬ್‍ನ ಒಡೆಯ ನನಗೊಮ್ಮೆ ಕೊಟ್ಟ.

“ಏನಿದು?” ಎ೦ದೆ.

“ರ್ಯಾಟ್ ಕಾರ್ಡ್” (ಇಲಿ-ಹಿಡಿವ-ಕಾರ್ಡ್) ಎ೦ದು ನಕ್ಕು, ಆತ ಆ ಕಾರ್ಡಿನ ಮೇಲ್ಪದರವಾದ ತೆಳು ಕಾಗದವನ್ನು ಬಲು ಎಚ್ಚರಿಕೆಯಿ೦ದ ತೆಗೆದು ತೋರಿಸಿದ. ಎಚ್ಚರಿಕೆಯಿ೦ದ ಅ೦ಚನ್ನೇ ಹಿಡಿದು ನೋಡಿದೆ. ಸುಮಾರು ಒ೦ದು ಎ೦.ಎ೦ ಎತ್ತರದ ಶಕ್ತಿಯುತ ನೀಲಿ ಅ೦ಟು ಮಧ್ಯದಲ್ಲಿತ್ತು.

“ಮಧ್ಯದಲ್ಲಿ ನಿನ್ನ ಬೆರಳನ್ನು ಮುಟ್ಟಬೇಡ. ಅ೦ದರೆ ನಿನ್ನ ಬೆರಳನ್ನು ಮಧ್ಯದಲ್ಲಿ ಅದ್ದಬೇಡವೆ೦ದು ಅರ್ಥವಲ್ಲ. ಈ ಕಾಗದವನ್ನು ಟೇಬಲ್ಲಿನ ಕೆಳಗಿಡು. ಬೆಳಗಾದರೆ ಇದರಲ್ಲಿ ಮೊರ್ನಾಲ್ಕು ಇಲಿಗಳು ಸಿಕ್ಕಿಕೊ೦ಡಿರುತ್ತವೆ. ಒಳ್ಳೆಯ ಭೋಜನವಾದೀತು” ಎ೦ದು ಹೇಳಿ ಹೋದ ನಗುತ್ತ. ಅ೦ತೆಯೇ ಆ ಕಾರ್ಡನ್ನು ಟೇಬಲ್ ಕೆಳಗಿರಿಸಿ, ಟಿ.ವಿ ನೋಡತೊಡಗಿದೆ.

ಸುಮಾರು ಹೊತ್ತಾದ ನ೦ತರ ಇಲಿಯನ್ನು ಟಿವಿಯಲ್ಲಿ ನೋಡಿದ೦ತಾಯ್ತು. ಕನ್ನಡಿಯಲ್ಲಿ ಇಲಿಯನ್ನು ಕ೦ಡೆನೇನೋ ಎ೦ದುಕೊ೦ಡು ಹಿ೦ದಿರುಗಿ ನೋಡಿದೆ. ಟೇಬಲ್ಲಿನ ಕೆಳಗೆ ಏನೋ ಸದ್ದು. ತಿರುಗಿ ನೋಡಿದರೆ ಕತ್ತಲೆಯಲ್ಲಿ ಎರಡು ಪುಟ್ಟ ಕಣ್ಗಳು ಹೊಳೆಯುತ್ತಿದ್ದವು. ಇಲಿಯೊ೦ದು ಆ ಕಾರ್ಡಿನ ಮೇಲೆ ಓಡಲು ಹೋಗಿ ಅದರ ಎರಡೂ ಹಿ೦ಗಾಲುಗಳು ಸಿಕ್ಕಿಹಾಕಿಕೊ೦ಡಿದ್ದವು. ಅದು ಬಲವಾದ ಅ೦ಟಿದ್ದ ಕಾರ್ಡೆ೦ದರೆ ಅರ್ಥವಾಗದು. ನನ್ನ ಒ೦ದು ಬೆರಳನ್ನು ಅದರಲ್ಲಿ ಅದ್ದಿ, ಮತ್ತೊ೦ದು ನನ್ನದೇ ಆದ ಬೆರಳನ್ನು ಅದರಿ೦ದ ಮುಟ್ಟಿದಾಗ, ಎರಡು ಬೆರಳುಗಳೂ ವಿಯಟ್ನಾಮಿ-ಅವಳಿ ಜವಳಿಗಳ೦ತಾಗಿದ್ದವು, ಅರ್ಧ ಗ೦ಟೆ ಕಾಲ. ಇನ್ನು ಅದರಲ್ಲಿ ಎರಡೂ ಕಾಲ್ಗಳನ್ನು ಇರಿಸಿಕೊ೦ಡ ಇಲಿಯ ಪಾಡೇನು ಹೇಳಿ? ರಾಬಿನ್‍ಸನ್ ಕ್ರೂಸೋ ಹನ್ನೆರೆಡು ವರ್ಷಗಳ ಏಕಾ೦ತವಾಸದ ನ೦ತರ ಹಡಗನ್ನು ಕ೦ಡು ಗಾಭರಿಯಿ೦ದ ‘ಕಾಪಾಡಿ’ ಎ೦ದು ಕಿರುಚಿಕೊ೦ಡ೦ತಿತ್ತು ಆ ಇಲಿಯ ಪೋಸು! ಹಡಗು ಕ೦ಡ ಖುಷಿಯ ಕಿರುಚುವಿಕೆಯಲ್ಲವದು. ಇಷ್ಟು ಸಮಯದ ನ೦ತರ ಕ೦ಡ ಹಡಗು ಮರೀಚಿಕೆಯಾಗಿ ಹೋಗದಿರಲೆ೦ಬ ಅನಿಸಿಕೆಯಿ೦ದ ಹುಟ್ಟಿಕೊ೦ಡ ಕಿರಿಚಾಟವದು. ಲ೦ಡನ್ನಿನ-ನನ್ನ ಕೋಣೆಯ-ಅ೦ಟಿನ ಕಾರ್ಡಿನ-ಬ೦ಧಿಯಾಗಿದ್ದ-ಇಲಿಯದ್ದೂ ಅ೦ತಹದ್ದೇ ಕೂಗು. “ಇ೦ಗ್ಲೆ೦ಡಿನ ಇಲಿಯಾದ ನನ್ನನ್ನು, ಕ್ಷಮಯಾಧರಿತ್ರಿ ಭಾರತಾ೦ಬೆಯ ಪುತ್ರ ಉಳಿಸುವ ಮುನ್ನ ವಿಯಟ್ನಾಮಿ ಹುಡುಗರು ಸ್ವಾಹ ಮಾಡದಿರಲಿ” ಎ೦ಬುದೇ ಆ ಕರುಳಿನ ಕೂಗು.

ಬೋನಿನೊಳಗಿನ ಇಲಿಯನ್ನು ಕ೦ಡಿದ್ದೆನಷ್ಟೇ ಅಲ್ಲಿಯವರೆಗೂ. ಪ್ಲಾಟ್‍ಫಾರ್ಮಿನ ಟಿಕೆಟ್ ಇಲ್ಲದವರನ್ನು ಅಥವ ಹಾಗಿಲ್ಲದೆ ಟಿ.ಟಿ. ಕೈಯಲ್ಲಿ ಸಿಕ್ಕಿಹಾಕಿಕೊ೦ಡವರನ್ನು ರೈಲ್ವೇ ಪ್ಲಾಟ್‍ಫಾರ್ಮಿನ ಸಣ್ಣ ಕೋಣೆಯಲ್ಲಿ ಕೂಡಿಹಾಕಿರುತ್ತಾರಲ್ಲ, ಹಾಗೆ ಕಾಣುತ್ತಿದ್ದವು ಭಾರತದ ಇಲಿಗಳೂ ಸಹ, ಬೋನಿನಲ್ಲಿ ಸಿಲುಕಿಕೊ೦ಡಾಗ. ಇಲ್ಲಾದರೆ, ಹಾಲಿವುಡ್ ಸಿನೆಮ “ಸ್ಟೂವರ್ಟ್ ಲಿಟಲ್”ನಲ್ಲಿಯ೦ತೆ ನನ್ನೆಡೆ ನೋಡುತ್ತ ಕೈ ಬೀಸುತ್ತಿತ್ತು ಇ೦ಗ್ಲೀಷ್ ಇಲಿ. ಯಾವ ಪ್ರಾಣಿದಯಾ ಸ೦ಘದವರೂ ಸಹಾಯಕ್ಕೆ ಬರದ, ಪ್ರತಿಭಟನೆ ಮಾಡದ ಪ್ರಾಣಿಗಳ ವರ್ಗಕ್ಕೆ ಸೇರಿದ ಪ್ರಾಣಿಯಿರಬೇಕು ಈ ಇ೦ಗ್ಲೆ೦ಡಿನ ಇಲಿಮರಿಗಳು!

ಅಷ್ಟರಲ್ಲಿ ಮಧ್ಯರಾತ್ರಿಯಾಗಿದ್ದರೂ ಹೊರಗೋಡಿ ಅಡುಗೆಭಟ್ಟನನ್ನು ಎಳೆದುಕೊ೦ಡೇ ಬ೦ದೆ. ಮಧ್ಯರಾತ್ರಿಯಾಗಿದ್ದರಿ೦ದಲೇ ಆತ ಅಡುಗೆಮಾಡುವುದರಲ್ಲಿ ಬ್ಯುಸಿಯಾಗಿದ್ದ. ಆತ ಅ೦ಟಿಗೆ ಕಾಲ್ಗಳನ್ನು ಗ೦ಟು ಹಾಕಿಕೊ೦ಡಿದ್ದ ಇಲಿಮರಿಗೆ ಕೈ ಬೀಸಿ ‘ಹಾಯ್’ ಎ೦ದು. ಇ೦ಗ್ಲೀಷಿನವನೇ ಆದ ಡಾರ್ವಿನ್ನನ “ಸಮರ್ಥನಿಗೆ ಮಾತ್ರ ಉಳಿವು” ಯೋಜನೆಯಡಿಯಲ್ಲಿ ನಡೆಯುತ್ತಿದ್ದ ಘಟನೆಯಿದು.

“ಕಾರ್ಡಿನ ಸಮೇತ ನಿ೦ತುಕೊ೦ಡಿದ್ದ ಇಲಿಯ ಎರಡು ಕಾಲ್ಗಳ ಮಧ್ಯೆ ಲ೦ಬರೇಖೆಯಲ್ಲಿ, ಆ ಕಾರ್ಡನ್ನು ಬ್ಲೇಡಿನಲ್ಲಿ ಕುಯ್ದರೆ, ಸ್ಕೇಟಿ೦ಗ್ ಶೂ ತೊಟ್ಟ೦ತಹ ಈ ಇಲಿ ಹಾಗೆಯೇ ನಡೆದು ಹೊರಗೋಗಬಲ್ಲದು” ಎ೦ದೆ.

“ಎಸ್. ಎಸ್. ವಾತ್?” ಎ೦ದು ಆತ ಏನೂ ಅರ್ಥಮಾಡಿಕೊಳ್ಳದೆಯೊ ಎಲ್ಲವನ್ನೂ ಅರ್ಥಮಾಡಿಕೊ೦ಡವನ೦ತೆ ಕಾರ್ಡನ್ನು ಎತ್ತಿ ಕೈಯಲ್ಲಿ ಹಿಡಿದ. ಗಣೇಶ ಹಬ್ಬದ ದಿನ ಮಣ್ಣಿನ ಗಣೇಶನನ್ನು ಕೊ೦ಡು ಮನೆಗೆ ಮೆರವಣಿಗೆಯಲ್ಲಿ ತರುವ೦ತವನ೦ತಿತ್ತು ಆತನ ಪೋಸು. ಇ೦ಗ್ಲೀಷ್ ಬರದ ವಿಯಟ್ನಾಮಿ ಅಡುಗೆಭಟ್ಟನಿಗೆ ಹಿ೦ದೂ ಸ೦ಪ್ರದಾಯದ ಗಣೇಶಹಬ್ಬದ ಸೊಬಗನ್ನು ಹೇಗೆ ವರ್ಣಿಸಲಿ?
*
ಮರುದಿನ ಬೆಳಿಗ್ಗೆ ಅಲೆಕ್ಸನನ್ನು ಕೇಳಿದೆ, “ಗಣೇಶಮೊರ್ತಿಯ೦ತೆ ಪೋಸು ಕೊಡುವ ಇಲಿಮರಿಯನ್ನು ಏನು ಮಾಡಿದಿರಿ?” ಎ೦ದು. ನಗುಮೊಗದ ವಿಯಟ್ನಾಮಿಯ ನಾಲ್ಕಾರು ಮಕ್ಕಳಲ್ಲಿ ಒಬ್ಬ ಈ ಅಲೆಕ್ಸ್.

“ಮೋರಿಯಲ್ಲಿ ವಿಸರ್ಜನೆ ಮಾಡಿದೆವು” ಎ೦ದ.

“ನಿಜವೆ ನಿನ್ನ ಮಾತು?”

“ಅರ್ಧ ನಿಜ.” ಎ೦ದು ಆತನೂ ನಕ್ಕ, ಅವನಪ್ಪನ೦ತೆ.

“?”

“ಅರ್ಥವಾಗಲಿಲ್ಲವೆ? ಇಲಿಮರಿ ಕತ್ತರಿಸಲ್ಪಟ್ಟು, ಅಡುಗೆ ಮನೆಯಲ್ಲಿ ಕುದಿಯುವ ಸೌಭಾಗ್ಯ ಪಡೆದು, ನನ್ನ ದೇಹದ ಜಠರಾಗ್ನಿಗೆ ‘ಹಲೋ’ ಹೇಳುವ ಸೌಭಾಗ್ಯ ಹೊ೦ದಿ, ದೊಡ್ಡಪುಟ್ಟ ಕರುಳುಗಳಲ್ಲಿ ‘ವೈರಸ್ ಸ್ಕ್ಯಾನ್’ ಮಾಡಲ್ಪಟ್ಟು, ಮು೦ಜಾನೆಯಷ್ಟೇ ಮೋರಿಗೆ ಡೌನ್‍ಲೋಡ್ ಮಾಡಿಬಿಟ್ಟೆ. ಹ್ಹ ಹ್ಹ ಹ್ಹ!!” ಎ೦ದು ವಿಕ್ಷಿಪ್ತವಾಗಿ ನಗತೊಡಗಿದ ಅಲೆಕ್ಸ್.
*
ಸ೦ಜೆ ಮತ್ತೆ ಸಿಕ್ಕ ಅಲೆಕ್ಸ್.

“ನಿಜ ಹೇಳು. ನಿಜಕ್ಕೂ ನೀವು ಇಲಿ ತಿನ್ನುತ್ತೀರ?” ಎ೦ದೆ.

“ಬಡತನದಲ್ಲಿದ್ದಾಗ, ವಿಯಟ್ನಾಮಿನಲ್ಲಿದ್ದಾಗ--ಎರಡರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲದಿದ್ದಾಗ, ಅಮೇರಿಕನ್ನರಿ೦ದ ತಪ್ಪಿಸಿಕೊ೦ಡು ಕಾಡಿನಲ್ಲಿ ಬದುಕುತ್ತಿದ್ದಾಗ--ನಮ್ಮಮ್ಮಪ್ಪ ತಿನ್ನುತ್ತಿದ್ದರೇನೋ, ಅವರನ್ನೇ ಕೇಳಿ ತಿಳಿ. ಆಗ ಇಲಿಗಳೂ ಸಹ ಮೃಷ್ಟಾನ್ನ ಭೋಜನದ೦ತೆ ಕ೦ಡಿರಬಹುದು, ಅವರಿಗೆ. ಆದರೆ ನಮಗೆ ಮಾತ್ರ ಇಲಿಗಳು ನಿಷಿದ್ಧ. ತಾವಾಗ ಆಗಾಗ ನಮ್ಮ ಅಡುಗೆಮನೆಯ ತವ್ವೆಯ ಮೇಲೆ ಸ್ವಇಚ್ಛೆಯಿ೦ದ ಕೆಲವು ಇಲಿಗಳು ಆತ್ಮಹತ್ಯೆ ಮಾಡಿಕೊ೦ಡರೆ ನಾವು ನಮ್ಮ ಪಿತೃ-ಸ೦ಪ್ರದಾಯವನ್ನು ಉಳಿಸಿ, ಮು೦ದುವರೆಸುವುದರಲ್ಲಿ ಹಿ೦ದು-ಮು೦ದು-ವಿಯಟ್ನಾಮಿ ಎ೦ಬ ವ್ಯತ್ಯಾಸ ನೋಡುವುದಿಲ್ಲ” ಎ೦ದು ಮಾರ್ಮಿಕವಾಗಿ ಹೇಳಿ, ನಕ್ಕು ಬಾಯ್ ಹೇಳಿದ. ಆತ ಹೇಳಿದ್ದೇನೆ೦ಬುದು ಆತನಿಗೇ ತಿಳಿಯಿತೋ ಇಲ್ಲವೋ ಎ೦ದು ನನಗೆ ತಿಳಿಯದ೦ತಾಯ್ತು.
* * *