ವಕ್ಫ್ ಆಸ್ತಿ ವಿವಾದದ ಹಿಂದೆ…(ಭಾಗ 1)
ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು. ವಕ್ಫ್ ಬೋರ್ಡ್ ನೋಟಿಸ್ ಗಳು ಈಗ ಇಡೀ ದೇಶದಲ್ಲಿ ಸದ್ಯ ಚರ್ಚೆಯಾಗುತ್ತಿರುವ ವಿಷಯವಾಗಿದೆ. ವಕ್ಫ್ ಹಿಂದುಗಳ ಮೇಲೆ ಸರ್ವಾಧಿಕಾರಿಯಂತೆ ವರ್ತಿಸಿ ಸಾಕಷ್ಟು ಭೂಮಿಯನ್ನು ಕಬಳಿಸುತ್ತಿದೆ ಎಂಬ ವಿಷಯದ ಮೇಲೆ ರಾಜಕೀಯ ಪಕ್ಷಗಳು, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಸಾಮಾನ್ಯ ಜನರು ಚರ್ಚಿಸುತ್ತಿದ್ದಾರೆ.
ಇದರ ಬಗ್ಗೆ ನಿಜವಾದ, ವಾಸ್ತವದ ಮಾಹಿತಿಗಿಂತ ನಾವು ನೋಡುತ್ತಿರುವುದು, ಕೇಳುತ್ತಿರುವುದು, ಓದುತ್ತಿರುವುದು ಕೇವಲ ಪರ ಅಥವಾ ವಿರೋಧದ ಅಂಶಗಳನ್ನು ಮಾತ್ರ. ಮನಸ್ಸುಗಳೇ ಮಲಿನವಾಗಿ, ಧರ್ಮಗಳ ಗೋಡೆ ಕಟ್ಟಿಕೊಂಡು, ಸಂವಿಧಾನವನ್ನು ಸಂಪೂರ್ಣ ನಿರ್ಲಕ್ಷಿಸಿ, ರಾಜಕೀಯ ಮಾಡುತ್ತಿರುವಾಗ ಮನಸ್ಸುಗಳು ಸತ್ಯದ ಹತ್ತಿರಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ ಅಥವಾ ಸತ್ಯ ಅರ್ಥವಾದರೂ ಒಪ್ಪಿಕೊಳ್ಳುವ ಮನಸ್ಥಿತಿಯೂ ಇಲ್ಲ. ಧಾರ್ಮಿಕ ಮುಖಂಡರು, ರಾಜಕಾರಣಿಗಳು ವಾದ ಮಾಡಿದರೆ ನಿರ್ಲಕ್ಷಿಸಬಹುದು. ಆದರೆ ಸಾಮಾನ್ಯ ಜನರೂ ಸಹ ರಾಜಕೀಯ, ಭಾವನಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ, ಸಾರ್ವಜನಿಕ ಅಭಿಪ್ರಾಯ ರೂಪಗೊಳ್ಳುವ ಪ್ರಕ್ರಿಯೆಗೆ ಅಪಾಯಕಾರಿ. ಈ ರೀತಿಯ ಚರ್ಚೆಗಳು ಯಾವತ್ತೂ ಏಕಮುಖವಾಗಿರಬಾರದು.
ವಕ್ಫ್ ಬೋರ್ಡ್ ಎಂಬುದು ಒಂದು ರಿಯಲ್ ಎಸ್ಟೇಟ್ ಏಜೆನ್ಸಿಯಲ್ಲ. ಅದೊಂದು ಧಾರ್ಮಿಕ ಸೇವಾ ಮನೋಭಾವದ ಸಂಸ್ಥೆ. ನನಗಿರುವ ಮಾಹಿತಿಯಂತೆ ಬ್ರಿಟಿಷರ ಕಾಲದಲ್ಲೇ ಇದನ್ನು ಸ್ಥಾಪಿಸಲಾಗಿತ್ತು. ನಂತರದಲ್ಲಿ ಅದನ್ನು ಭಾರತ ಸರ್ಕಾರ ಎರಡು/ಮೂರು ಬಾರಿ ತಿದ್ದುಪಡಿಯನ್ನು ಮಾಡಿದೆ. ಈಗ ಮತ್ತೊಂದು ತಿದ್ದುಪಡಿ ಕೇಂದ್ರದ ಲೋಕಸಭೆಯ ಜಂಟಿ ಸಂಸದೀಯ ಸದನ ಸಮಿತಿಯ ಮುಂದಿದೆ.
ಬ್ರಿಟಿಷರು ರೂಪಿಸಿದ ಈ ಕಾನೂನಿಗೆ ಕಾಂಗ್ರೆಸ್ ಸರ್ಕಾರ ಎರಡು ಬಾರಿ ಮುಸ್ಲಿಮರ ಪರವಾಗಿ ತಿದ್ದುಪಡಿ ಮಾಡಿದ್ದರೆ, ಇದೀಗ ಬಿಜೆಪಿ ಸರ್ಕಾರ ಮುಸ್ಲಿಮರ ವಿರುದ್ಧವಾಗಿ ಅಥವಾ ಅದಕ್ಕೆ ನಿಯಂತ್ರಣ ಹೇರುವ ರೀತಿಯಲ್ಲಿ ಮತ್ತಷ್ಟು ತಿದ್ದುಪಡಿ ಮಾಡುತ್ತಿದೆ. ಅಂದರೆ ರಾಜಕೀಯ ಪಕ್ಷಗಳು ಇದನ್ನು ತಮ್ಮ ಹಿಂದೂ ಮುಸ್ಲಿಂ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಿವೆ ಎಂಬುದರಲ್ಲಿ ಯಾವುದೇ ಸಂದೇಹವು ಉಳಿದಿಲ್ಲ. ಒಂದು ವಿಷಯವನ್ನು ನ್ಯಾಯದ, ಕಾನೂನಿನ ಹೆಸರಿನಲ್ಲಿ ಸಾರ್ವಜನಿಕವಾಗಿ ವಿವಾದಾತ್ಮಕ ಗೊಳಿಸಿ ಆನಂತರ ಅದಕ್ಕೆ ನಿಯಂತ್ರಣ ಹೇರುವುದು ಸಾಮಾನ್ಯವಾಗಿ ಆಡಳಿತ ಪಕ್ಷಗಳ ಒಂದು ಕಾರ್ಯತಂತ್ರ. ಅದರ ಭಾಗವೇ ವಕ್ಫ್ ಆಸ್ತಿ ವಿವಾದ.
ಇಸ್ಲಾಂ ಧರ್ಮದ ಕೆಲವು ನೀತಿ ನಿಯಮಗಳಂತೆ ಅದರ ಅನುಯಾಯಿಗಳು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಮಾಡಬೇಕು ಎಂದು ಹೇಳಲಾಗಿದೆ. ಅದರ ಪ್ರಕಾರ ಕೆಲವು ಮುಸ್ಲಿಮರು ತಮ್ಮ ಬಳಿ ಇರುವ ಜಮೀನನ್ನು ದೇವರು ಹೆಸರಿನಲ್ಲಿ ದಾನ ಮಾಡುತ್ತಾರೆ. ಅದನ್ನು ಬಡವರಿಗೆ ಮತ್ತು ಅವಶ್ಯಕತೆ ಇರುವವರ ಏಳಿಗೆಗೆ ದೇವರ ಹೆಸರಿನಲ್ಲಿಯೇ ಹಂಚಬೇಕು, ಅದನ್ನು ಕ್ರಮಬದ್ಧವಾಗಿ ನಿರ್ವಹಿಸಲು ವಕ್ಫ್ ಬೋರ್ಡ್ ಸ್ಥಾಪಿಸಲಾಗಿದೆ. ಇದು ಮೇಲ್ನೋಟದ ಒಂದು ಸರಳ ವ್ಯಾಖ್ಯಾನ.
ಹಾಗೆಯೇ ಈ ಜಮೀನಿನ ದಾನ ದೇವರ ಹೆಸರಿನಲ್ಲಿ ನೀಡುವುದು ಪ್ರಾರಂಭವಾಗಿ ದಿನೇ ದಿನೇ ಸಾವಿರಾರು, ಲಕ್ಷಾಂತರ ಎಕರೆಗಳು ಇಡೀ ದೇಶಾದ್ಯಂತ ವಕ್ಫ್ ಬೋರ್ಡ್ ಗೆ ಸೇರುತ್ತದೆ. ಅದರ ಲೆಕ್ಕಾಚಾರಗಳನ್ನು ಇದೇ ಬೋರ್ಡ್ ನಿಯಂತ್ರಿಸುತ್ತಿರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ನೋಡುವುದಾದರೆ ಸಾಕಷ್ಟು ಜಮೀನುಗಳನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸದೆ ಹಿಂದೆ ಅದನ್ನು ನಿರ್ಲಕ್ಷಿಸಿಕೊಂಡು ಬಂದಿದೆ ಎಂಬುದು ತಿಳಿಯುತ್ತದೆ. ಏಕೆಂದರೆ ಆಗ ಜಮೀನುಗಳಿಗೆ ಯಾವುದೇ ಕಿಮ್ಮತ್ತು ಇರಲಿಲ್ಲ. ಆದರೆ ಯಾವಾಗ ಭೂಮಿಯ ಬೆಲೆ, ರಿಯಲ್ ಎಸ್ಟೇಟ್ ಉದ್ದಿಮೆ, ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಹಣಕಾಸಿನ ಮೂಲವಾಯಿತೋ ಆಗ ಎಲ್ಲಾ ಧಾರ್ಮಿಕ ಸಂಸ್ಥೆಗಳು, ಮಠಮಾನ್ಯಗಳು, ಚರ್ಚುಗಳು, ದೇವಸ್ಥಾನಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಭೂಮಿಯನ್ನು ಸಾಧ್ಯವಾದಷ್ಟು ಆಕ್ರಮಿಸಿಕೊಳ್ಳಲು ಪ್ರಾರಂಭವಾಯಿತು. ಅದಕ್ಕೆ ದೊಡ್ಡಬೆಲೆ ಬಂದಿತು. ಆಗ ನಿಜವಾದ ವಕ್ಫ್ ಆಸ್ತಿ ವಿವಾದ ಪ್ರಾರಂಭವಾಗುತ್ತದೆ.
ಕರ್ನಾಟಕದಲ್ಲಿ ವಕ್ಫ್ ಗೆ ಸೇರಿದ ಅನೇಕ ಜಮೀನನ್ನು ಅಲ್ಲಿನ ಸದಸ್ಯರು, ನಿರ್ದೇಶಕರುಗಳೇ ಕಬಳಿಸಿದ್ದಾರೆ ಎಂದು ಒಂದು ಅಧ್ಯಯನ ಸಮಿತಿ ವರದಿಯನ್ನು ನೀಡಿದೆ. ಅದು ಬಹಳ ಹಿಂದಿನಿಂದಲೂ ಸರ್ಕಾರದಲ್ಲಿ ಕೊಳೆಯುತ್ತಿದೆ. ಎಲ್ಲಾ ಕ್ಷೇತ್ರಗಳು ಮಲಿನವಾಗಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಒಳಗಾದಂತೆ ವಕ್ಫ್ ಕೂಡ ಅದರಿಂದ ಹೊರತಾಗಿಲ್ಲ. ಅದು ಸಹ ಒಂದಷ್ಟು ಒಳ್ಳೆಯ, ಒಂದಷ್ಟು ಆದಾಯ ತರುವ, ಒಂದಷ್ಟು ರಿಯಲ್ ಎಸ್ಟೇಟ್ ಉದ್ಯಮದ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಲೇ ಬಂತು. ಆದರೆ ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಅದರ ಮೇಲೆ ನಿಯಂತ್ರಣ ಸಾಧಿಸುವ ಸಂದರ್ಭ ಸೃಷ್ಠಿಯಾಗಿರುವಾಗ ಕರ್ನಾಟಕದ ವಕ್ಫ್ ಮಂತ್ರಿಗಳು ಆ ಕಾಯ್ದೆ ಜಾರಿಯಾಗುವುದಕ್ಕೆ ಮೊದಲು ಎಷ್ಟು ಸಾಧ್ಯವೋ ಅಷ್ಟು ವಕ್ಫ್ ಗೆ ಸೇರಿದ್ದ ಈಗ ತಮ್ಮ ನಿಯಂತ್ರಣ ಮೀರಿ ಹೋಗಿರುವ ಆಸ್ತಿಗಳನ್ನು ಮತ್ತೆ ಪಡೆಯಲು ಆತುರಾತುರವಾಗಿ ನೋಟಿಸ್ ಜಾರಿ ಮಾಡಿದರು.
(ಇನ್ನೂ ಇದೆ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ