ವನಾತ್ಮಾಹುತಿ
ವನಾತ್ಮಾಹುತಿ
-----------
ಸೃಷ್ಟಿಕ್ಕ್ರಿಯಾಲೀಲೆಯಲಿ ನರಜನ್ಮಕೂ ಪೂರ್ವ ಭೂತಾಯಿಯೊಡಲನಲಂಕರಿಸಿ,
ವಿಸ್ತರದಲಿ, ಎತ್ತರದಲಿ ಅದ್ವಿತೀಯತೆಯನು ಮೆರೆದ ಅರಣ್ಯವೇ,
ಮಹೋನ್ನತ ಮಲೆಗಳನು, ಪೃಥುಲ ಜಲತೀರಗಳನು, ವಿಶಾಲ ಬಯಲ ಮೈಯ್ಯನು,
ಬೆಚ್ಚಿಸುವ ಕಂದರಗಳನು ಆವರಿಸಿ ಕಳಕಳಿಸುತಿಹ ವನಾತ್ಮಗಳೆ,
ಸರ್ವಸೌಂದರ್ಯಾಧಿಪತಿಯ ಮುಖುಟ ತುಂಗ ವಿರಾಜಿತ ವಜ್ರಗಳೇ,
ಯುಗಗಳಿಂದ ಕೋಟಿ ಜೀವರಾಶಿಗಳಿಗಿಂಬು ನೀಡಿ ಪೊರೆಯುತಿಹ ಮಮತಾಮಹಿಮರೇ,
ನಿಮ್ಮ ನಂದನ ಸಮ ಹಸಿರೆದೆಯಲ್ಲಿಂದು ಸರ್ವಸಂಹೃತಿಯ ಆವೇಶವೇಕೆ?
ಕ್ರಿಮಿಯಿಂದ ಕರಿಯವರೆಗೂ ಸಲಹುತಿರುವಾತ್ಮದಲಿ ನಿರ್ನಾಮಗೈವ ಆಕ್ರ್ಓಶವೇಕೆ?
ಕ್ಷಣಗಳಲಿ ವನ ಹರಣ ಹೋಮ ನಡೆಸುವ ನಿಷ್ಪಂದದಟವೇಕೆ?
ಮಾನವರ ದುರಾಭೀಷ್ಟತೆಯ ದುರಾಲೋಚನೆಗೆ ಕಾಲದಿಂದಲು ಬಲಿಯಾಗುತ,
ಅವನ ಸ್ವಾರ್ಥ ದುಷ್ಕೃತ್ಯದುರಿಯ ತಾಳದೆ, ಅಸಹಾಯಕತೆಯ ಪರಾಕಾಷ್ಟತೆಯನು
ಮೀರಿ, ಕಾಳ್ಗಿಚ್ಚಿನಾತ್ಮಾಹುತಿಗೈಯಲನುವಾದಿಯಾ ?
ಪ್ರಗತಿಯ ಉನ್ಮಾದಹಯವೇರಿ ದಿಕ್ಕುದಿಕ್ಕುಗಳಲಿ ಓಡುತಿರುವ, ನಾವೀನ್ಯ ಕಲ್ಪನೆಗಳ
ವಿಭ್ರ್ಆಂತಿಯಲಿ ನಿನ್ನುಪಕಾರವ, ನಿನ್ನವಲಂಬನೆಯ ಮರೆತಿರುವ ನರಹೃದಯವನು,
ನಲುಗಿಸಲೆಂದೀ ರುದ್ರ ವೇಷಾಂತರ ತಳೆದಿರುವೆಯಾ?
ವನವೇ, ನಿನ್ನೀ ಕ್ರೋಧಾಗ್ನಿಜ್ವಾಲೆಗೆ ಕೇಡರಿಯದ ಮೃಗಗಳ ಪಕ್ಷಿಗಳು ಬಲಿಯಾಗುತಿವೆ.
ನಿನ್ನಾಸರೆಯ ಸವಿ ಮಡಿಲಿನ ಜೀವಿಗಳಿಂದು ಅನಾಥಪಥ ಸಂಚಾರಿಗಳಾಗಿರಿವರು.
ವಾಯುವೇಗದಿ ಹಬ್ಬಿಹ ಅಗ್ನಿದಾಳಿಗೆ ಹಸಿರುರಿದು ಭಸ್ಮವಾಗುತಿಹುದು.
ಬರುವಕಾಲಕೆ ಜೀವದುಸಿರ ಕಾಯುವ ಹಸಿರೆಂಬ ಭವಿಷ್ಯನಿಧಿ ನಶಿಸುತಿಹುದು.
ನಿನ್ನಜೇಯ ಅಪ್ರತಿಮ ಶಕ್ತಿಗೆದುರಾಗಿ ಹುಲುಮಾನವರು ನಾವು ನಿಲ್ಲಲಾದೀತೆ?
ಕ್ಷಮಿಸೆಮ್ಮ ವನಾತ್ಮವೆ. ಕರುಣೆಯ ಭಿಕ್ಷೆಯಿತ್ತು ಶಾಂತವಾಗು.
ನಿನ್ನುಸಿರಿನ ನೆಳಲಲಿ ನಮ್ಮುಸಿರು ಮಲಗಿಹುದು.
ನಿನ್ನುಳಿವ ಕನಸು ನಮ್ಮುಳಿವ ನನಸ ಕಾಯುತಿಹುದು.
ನಿನ್ನಾತ್ಮಾಹುತಿಯ ತ್ರಿಶೂಲ ನಮ್ಮ ಭವಿಷ್ಯದೆದೆಯನಿರಿಯದಿರಲಿ.
ನಿನ್ನಾತ್ಮಕಾಂತಿಯ ಧವಲ ನಮ್ಮ ಭವಿತವ್ಯ ಬೆಳಗಲಿ.
- ಚಂದ್ರಹಾಸ (ಮಾರ್ಚ್ ೭ ೨೦೧೨)