ವಯನಾಡ್ ದುರಂತ ಎಚ್ಚರಿಕೆಯ ಗಂಟೆ

ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದೆ. ಪಕ್ಕದ ವಯನಾಡಿನಲ್ಲಿ ಕಂಡುಕೇಳರಿಯದ ಭೂಕುಸಿತ ಉಂಟಾಗಿದೆ. ರಾಜ್ಯದ ಹಲವೆಡೆ ಭೂಕುಸಿತವಾಗಿ ಸಂಚಾರ ನಿಂತಿದೆ. ಪಶ್ಚಿಮ ಘಟ್ಟದ ಆಯಕಟ್ಟಿನ ಜಾಗದಲ್ಲಿ ಪ್ರಕೃತಿ ರುದ್ರಾವತಾರ ತೋರಿದೆ. ಮಳೆಗೆ ಹೆದರುವ ಪರಿಸ್ಥಿತಿಯಲ್ಲಿ ಜನರಿದ್ದಾರೆ.
ಈ ಎಲ್ಲಾ ಪ್ರದೇಶಗಳಲ್ಲಿ ಅಂದರೆ ಭೂಕುಸಿತ ಸಂಭವಿಸಿದ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಂಗತಿಯೆಂದರೆ ಕೆಲ ವರ್ಷಗಳ ಹಿಂದೆ ಇಲ್ಲೆಲ್ಲಾ ಕಸ್ತೂರಿ ರಂಗನ್ ವರದಿಯನ್ನು ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದರು ಎಂಬುವುದು ! ವಯನಾಡ್ ಜಿಲ್ಲೆಯ ಮಾನಂದವಾಡಿ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ವರದಿಯನ್ನು ವಿರೋಧಿಸಿ ಹರತಾಳ ನಡೆಸಲಾಗಿತ್ತು. ಅಂದು ಹರತಾಳ ನಡೆಸಿದ ಹಲವರೇ ಈಗ ಭೂಮಿಯಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಕೃತಿಯನ್ನು ಮನುಷ್ಯ ಕೇವಲವಾಗಿ ಕಂಡಷ್ಟೂ ಪ್ರಕೃತಿ ಮನುಷ್ಯನೊಡಗಿನ ಸಂಬಂಧವನ್ನು ಕಳಚಿಕೊಳ್ಳಲು ಹವಣಿಸುತ್ತದೆ ಎಂಬುದು ಈಗ ಕೇವಲ ತತ್ವ ಶಾಸ್ತ್ರದ ಮಾತಾಗಿ ಉಳಿದಿಲ್ಲ. ಭೌಗೋಳಿಕವಾಗಿ ಮತ್ತು ವೈಜ್ಞಾನಿಕವಾಗಿ ಅದು ನೂರಕ್ಕೆ ನೂರು ಸತ್ಯ ಎಂದು ಸಿದ್ಧವಾಗುತ್ತಿದೆ. ಕಸ್ತೂರಿ ರಂಗನ್ ಅವರ ನೀತಿಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆ ಈ ರೀತಿಯ ಅವಘಡಗಳು ಸಂಭವಿಸುತ್ತಿರಲಿಲ್ಲ. ಆದರೆ ಆ ಸಮಯದಲ್ಲಿ ರಾಜಕಾರಣದ ಒಂದು ಗುಂಪು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿತು. ಮನುಷ್ಯರ ಬದುಕುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತದೆ ಎಂಬಂತೆ ಬಿಂಬಿಸಲಾಗಿತ್ತು. ಇದು ಬುಡಕಟ್ಟು ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ಎಂದು ಅಪಪ್ರಚಾರ ಮಾಡಲಾಗಿತ್ತು. ಅಂದು ಜನರನ್ನು ಬದುಕಲು ಬಿಡಿ ಎನ್ನುತ್ತಿದ್ದವರಿಗೆ ಇಂದು ಮನುಷ್ಯರ ಜೀವ ಹೋಗುವುದನ್ನು ಮೂಕವಾಗಿ ನಿಂತುನೋಡುವ ಪರಿಸ್ಥಿತಿ ಬಂದಿದೆ !
ಕಸ್ತೂರಿ ರಂಗನ್ ವರದಿಯಲ್ಲಿ ಮನುಷ್ಯರನ್ನು ಕೊಲ್ಲುವ ಯಾವ ಅಂಶಗಳೂ ಇರಲಿಲ್ಲ. ಆದರೆ ರಾಜಕಾರಣ ಜನರ ದಿಕ್ಕು ತಪ್ಪಿಸಿ ಅಲ್ಲದೆ ಪ್ರಕೃತಿಯ ನಡುವೆ ಹಲವು ಕಾಮಕಾರಿಗಳನ್ನು ಮಾಡಲು ಅದು ಅಡ್ಡಿಯಾಗಲಿದೆ ಎಂಬ ಆತಂಕ ಕೆಲವರಿಗಿತ್ತು. ಬೆಟ್ಟಗುಡ್ಡಗಳ ಮೇಲೆ ರೆಸಾರ್ಟು, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡುವ ಮೂಲಕ ಬ್ರಾಂಡ್ ವ್ಯಾಲ್ಯೂ ವೃದ್ಧಿಸಿಕೊಳ್ಳಬಹುದೆಂಬ ಹುನ್ನಾರಕ್ಕೆ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಲಾಗಿತ್ತು. ಹೀಗೆ ವಿರೋಧಿ ಸುತ್ತಲೇ ಅಭಿವೃದ್ಧಿಯ ರೂಪುರೇಖೆಗಳು ನಿರ್ಮಾಣವಾಗತೊಡಗಿತು. ಕೆಲವೇ ವರ್ಷಗಳಲ್ಲಿ ಬೆಟ್ಟದ ತುದಿಯಲ್ಲಿ ರೆಸಾರ್ಟ್ ನಿರ್ಮಾಣವೂ ನಿರಂತರ ನಡೆಯಿತು. ಜನ ವಸತಿ ನಿರ್ಮಾಣವಾದವು. ಅದರ ಪರಿಣಾಮವನ್ನು ಇಂದು ವಯನಾಡ್ ಅನುಭವಿಸುತ್ತಿದೆ. ಕರ್ನಾಟಕದಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋಧದ ನಡುವೆಯೂ ಜಾರಿಗೆ ತರುವ ಪ್ರಯತ್ನ ನಡೆಯಿತು. ಎಲ್ಲಾ ಸರ್ಕಾರಗಳೂ ಪಶ್ಚಿಮ ಘಟ್ಟದ ಕಾಳಜಿಯನ್ನು ಮರೆತವು. ಇಂದು ಅದೇ ಪಶ್ಚಿಮ ಘಟ್ಟ ಜಾರುತ್ತಿದೆ. ಎಲ್ಲಾ ರಾಜಕಾರಣಿಗಳಿಗೆ ತನ್ನ ಅವಧಿಯಲ್ಲಿ ಮೈಲಿಗಲ್ಲುಗಳನ್ನು ನೆಟ್ಟುಹೋಗಬೇಕೆಂಬ ಮಹತ್ವಾಕಾಂಕ್ಷೆ ಇರುತ್ತದೆ. ಅದಕ್ಕೆ ಯಾವಾಗಲೂ ಪ್ರಕೃತಿಯೇ ಬಲಿಯಾಗುತ್ತವೆ. ಅದು ಯಾವತ್ತೂ ತಾನಷ್ಟೇ ನಾಶವಾಗುವುದಿಲ್ಲ. ಅದು ತನ್ನನ್ನು ನಾಶಪಡಿಸಿದವರನ್ನೂ ನಾಶಪಡಿಸಿಯೇ ಹೋಗುತ್ತದೆ. ಆದ್ದರಿಂದ ವಯನಾಡ್ ದುರಂತ ಎಲ್ಲರಿಗೂ ಎಚ್ಚರಿಕೆಯ ಗಂಟೆ. ವಯನಾಡ್ ಸಮೀಪದ ಜಿಲ್ಲೆಗಳಲ್ಲೂ ಪರಿಸ್ಥಿತಿ ವಯನಾಡಿಗಿಂತ ಭಿನ್ನವಾಗಿಲ್ಲ ಎನ್ನುವುದನ್ನು ಮರೆಯಬಾರದು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೧-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ