ವಯೋಲಿನ್ ವಾದಕ ಮತ್ತು ಮದುವೆ ನೃತ್ಯಕೂಟ

ವಯೋಲಿನ್ ವಾದಕ ಮತ್ತು ಮದುವೆ ನೃತ್ಯಕೂಟ

ಬ್ರಿಟನಿನ ಸಾಮರಸೆಟ್ಟಿನ ಸ್ಟಾನ್‌ಡನ್ ಡ್ರೂ ಗ್ರಾಮದಲ್ಲಿ ಕಲ್ಲುಗಳ ನಾಲ್ಕು ಗುಂಪುಗಳಿವೆ. ಶತಮಾನಗಳಿಂದ ಅವು ಅಲ್ಲೇ ಇವೆ - ಬಿಸಿಲಿಗೆ ಸುಡುತ್ತಾ, ಮಳೆಗೆ ನೆನೆಯುತ್ತಾ ಇವೆ. ಮೂರು ಗುಂಪು ಕಲ್ಲುಗಳು ವೃತ್ತಾಕಾರದಲ್ಲಿವೆ ಮತ್ತು ಒಂದು ತ್ರಿಕೋನಾಕಾರದಲ್ಲಿದೆ. ಆ ಕಲ್ಲುಗಳು ಯಾಕೆ ಅಲ್ಲಿ ನಿಂತಿವೆಯೆಂದು ಅಲ್ಲಿನ ಜನರು ದಂತಕತೆಯೊಂದನ್ನು ಹೇಳುತ್ತಾರೆ.

ನೂರಾರು ವರುಷಗಳ ಮುಂಚೆ, ಒಂದು ಶನಿವಾರ, ಆ ಹಳ್ಳಿಯಲ್ಲೊಂದು ಮದುವೆ ನಡೆಯಿತು. ಮದುವೆಯ ನಂತರ ಎಲ್ಲರೂ ಭೂರಿ ಭೋಜನ ಸವಿದರು. ಅನಂತರ ಮದುಮಗ-ಮದುಮಗಳ ಸಹಿತ ಎಲ್ಲರೂ ನೃತ್ಯ ಮಾಡಲು ಶುರು ಮಾಡಿದರು. ನೃತ್ಯ ಮಾಡುತ್ತಾಮಾಡುತ್ತಾ ಮಧ್ಯರಾತ್ರಿ ದಾಟಿ ಭಾನುವಾರ ಆಯಿತು. ಆಗ ವಾದ್ಯಗಾರ ವಾದ್ಯ ನುಡಿಸುವುದನ್ನು ನಿಲ್ಲಿಸಿದ.

ಮಧ್ಯರಾತ್ರಿಯ ನಂತರ ತಾನು ನೃತ್ಯಕ್ಕಾಗಿ ವಾದ್ಯ ನುಡಿಸುವುದಿಲ್ಲ ಎಂದ ವಾದ್ಯಗಾರ. ಆದರೆ ಮದುಮಗಳಿಗೆ ನೃತ್ಯವೆಂದರೆ ಪಂಚಪ್ರಾಣ. ಅವಳು ಮತ್ತು ಇನ್ನು ಕೆಲವರು “ಇನ್ನೊಂದಷ್ಟು ಹೊತ್ತು, ನಾವು ನೃತ್ಯ ಮಾಡಿ ದಣಿಯುವ ತನಕ ವಾದ್ಯ ನುಡಿಸು. ನಂತರ ನಾವು ಮನೆಗೆ ಹೋಗ್ತೇವೆ” ಎಂದು ಬೇಡಿಕೊಂಡರು.

ಆದರೆ ವಾದ್ಯಗಾರ ಒಪ್ಪಲೇ ಇಲ್ಲ. ಕೊನೆಗೆ ಮದುಮಗಳು ಭಾರೀ ಸಿಟ್ಟಾದಳು. ನೃತ್ಯಕೂಟ ಮುಂದುವರಿಯಬೇಕೆಂದು ಅವಳು ಪಟ್ಟು ಹಿಡಿದಳು. “ಒಬ್ಬ ಭಿಕಾರಿ ವಾದ್ಯಗಾರನಿಂದಾಗಿ ನನ್ನ ಮದುವೆಯ ಸಂತೋಷಕೂಟ ಹಾಳಾಗಲು ನಾನು ಬಿಡೋದಿಲ್ಲ. ಇಲ್ಲೀಗ ವಾದ್ಯ ನುಡಿಸಲು ಯಾರನ್ನಾದರೂ ಕರೆ ತರುತ್ತೇನೆ - ನರಕದಿಂದ ಭೂತವಾನ್ನಾದರೂ ಸೈ" ಎಂದು ಮದುಮಗಳು ಅಬ್ಬರಿಸಿದಳು.

ಮದುಮಗಳು ಮಾತು ಮುಗಿಸುವಷ್ಟರಲ್ಲಿ ಅಲ್ಲೊಬ್ಬ ಮುದುಕ ಕಾಣಿಸಿಕೊಂಡ. ಉದ್ದದ ಬಿಳಿಗಡ್ಡದ ಅವನು ಕೈಯಲ್ಲಿ ವಯೋಲಿನ್ ಹಿಡಿದಿದ್ದ. "ಆ ಸೊಕ್ಕಿನ ವಾದ್ಯಗಾರನ ಬದಲಾಗಿ ನಾನು ನಿನ್ನ ಮದುವೆಗೆ ವಯೋಲಿನ್ ನುಡಿಸುತ್ತೇನೆ” ಎಂದು ಮದುಮಗಳಿಗೆ ಹೇಳಿದ.

ಮದುಮಗಳು ಖುಷಿಯಿಂದ ಚಪ್ಪಾಳೆ ತಟ್ಟಿದಳು. ಅವಳು "ಮುಂಜಾವದ ವರೆಗೆ ವಯೋಲಿನ್ ನುಡಿಸು” ಎನ್ನುತ್ತಲೇ ಆ ಮುದುಕ ವಯೋಲಿನ್ ನುಡಿಸಲು ಶುರು ಮಾಡಿದ. ಮೊದಲ ಹಾಡು ನಿಧಾನಗತಿಯಲ್ಲಿತ್ತು. ಎಲ್ಲ ಅತಿಥಿಗಳೂ ಅದರ ಬದಲಾಗಿ ವೇಗಗತಿಯ ಹಾಡು ನುಡಿಸಲು ಅವನಿಗೆ ಹೇಳಿದರು. ಅವನೊಂದು ದೊಡ್ಡ ಕಲ್ಲಿನಲ್ಲಿ ಕುಳಿತು ವಯೋಲಿನ್ ವಾದನ ಮುಂದುವರಿಸಿದ. ಅನಂತರ ಅವನು ನುಡಿಸಿದ ಹಾಡುಗಳು ಉಲ್ಲಾಸದ ಹಾಗೂ ಉತ್ಸಾಹದ ಅಲೆಗಳನ್ನು ಎಬ್ಬಿಸಿದವು. ಅಲ್ಲಿದ್ದವರೆಲ್ಲ ವೇಗವಾಗಿ, ಇನ್ನಷ್ಟು ವೇಗವಾಗಿ ಸುತ್ತು ಹೊಡೆಯುತ್ತಾ ನೃತ್ಯ ಮಾಡತೊಡಗಿದರು.

ಕೊನೆಗೆ, ಸುತ್ತಿಸುತ್ತಿ ಸುಸ್ತಾದ ಅತಿಥಿಗಳೆಲ್ಲರೂ ವಯೋಲಿನ್ ನುಡಿಸುವುದನ್ನು ನಿಲ್ಲಿಸಬೇಕೆಂದು ಅವನಿಗೆ ಹೇಳಿದರು. ಆದರೆ ಆತ ನಿಲ್ಲಿಸಲಿಲ್ಲ. ಬದಲಾಗಿ ಅವನು ಇನ್ನಷ್ಟು ವೇಗಗತಿಯಲ್ಲಿ ವಯೋಲಿನ್ ಬಾರಿಸಿದ ಮತ್ತು ಅಲ್ಲಿದ್ದವರೆಲ್ಲಾ ನಿಂತಲ್ಲಿ ನಿಲ್ಲಲಾಗದೆ ಅವನ ಸುತ್ತಲೂ ಗಿರಗಿರನೆ ಸುತ್ತತೊಡಗಿದರು.

ಅಂತಿಮವಾಗಿ, ಆ ಮುದುಕನ ಆಕಾರ ಬದಲಾಗತೊಡಗಿತು; ಆತ ನಿಜಕ್ಕೂ ವಾದ್ಯಗಾರನಾಗಿ ರೂಪಪಲ್ಲಟ ಮಾಡಿದ್ದ ಒಂದು ಭೂತವಾಗಿದ್ದ ಅನ್ನೋದನ್ನು ಕಂಡಾಗ ಅಲ್ಲಿದ್ದವರ ಜೀವ ಬಾಯಿಗೆ ಬಂತು. ವಾದನ ನಿಲ್ಲಿಸಬೇಕೆಂದು ಅಲ್ಲಿದ್ದವರು ಎಷ್ಟು ಬೇಡಿಕೊಂಡರೂ ಕೇಳದೆ ಆತ ರಾತ್ರಿಯಿಡೀ ವಯೋಲಿನ್ ನುಡಿಸಿದ. ದಿಗಂತದಲ್ಲಿ ಸೂರ್ಯನ ಕಿರಣಗಳು ಮೂಡಿದಾಗ ಭೂತ ಅಲ್ಲಿಂದ ಕಣ್ಮರೆಯಾಯಿತು. ಆ ಬಯಲಿನಲ್ಲಿ ಸ್ಮಶಾನಮೌನ ನೆಲೆಸಿತು.

ಬೆಳಗಾದಾಗ ಕೆಲವು ಹಳ್ಳಿಗರು ಅಲ್ಲಿಗೆ ಬಂದಾಗ, ಅಲ್ಲಿ ಮದುವೆಯ ಸಂತೋಷಕೂಟದ ಯಾವ ಚಿಹ್ನೆಯೂ ಇರಲಿಲ್ಲ; ಬದಲಾಗಿ ಹಲವಾರು ದೊಡ್ಡ ಕಲ್ಲುಬಂಡೆಗಳು ಅಲ್ಲಿದ್ದವು. ಆಗ ಅಲ್ಲಿ ಒಂದು ಪೊದೆಯ ಹಿಂದೆ ಬಚ್ಚಿಟ್ಟುಕೊಂಡಿದ್ದ ಹಳ್ಳಿಯ ವಾದ್ಯಗಾರ ಹೊರಬಂದ. ರಾತ್ರಿಯಿಡೀ ಅಲ್ಲಿ ನಡೆದದ್ದನ್ನು ಹಳ್ಳಿಗರಿಗೆ ಹೆದರುತ್ತಾ ಹೇಳಿದ.