ವರ್ತಕರಿಂದ ರೈತರ ಶೋಷಣೆಗೆ ಕೊನೆಯುಂಟೇ?

ವರ್ತಕರಿಂದ ರೈತರ ಶೋಷಣೆಗೆ ಕೊನೆಯುಂಟೇ?

ರೈತರ ಆತ್ಮಹತ್ಯೆಯ ಸುದ್ದಿಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಭಾರತದ ಅಪರಾಧ ದಾಖಲೆ ಬ್ಯೂರೋ (ಎನ್ .ಸಿ.ಆರ್.ಬಿ.) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3 ಲಕ್ಷ ದಾಟಿದೆ.   
“ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹಿರಿಯೂರು ತಾಲೂಕಿನ ಗಂಜಲಗುಂಟೆಯ ಓಬಳಗಿರಿಯಪ್ಪ ಅವರ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ರೈತನ ಶವವಿಟ್ಟು 23 ಫೆಬ್ರವರಿ 2015ರಂದು ಪ್ರತಿಭಟನೆ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಎರಡು ದಿನ ಮುಂಚೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮದ ಅಂದಪ್ಪ ಸಂಗಪ್ಪ ದಿಂಡಿ ಮತ್ತು ಪತ್ನಿ ಗಿರಿಜವ್ವ, ಬೆಳೆನಷ್ಟದಿಂದಾಗಿ ಬೆಳೆಸಾಲ ಹಾಗೂ ಕೈಸಾಲ ತೀರಿಸಲಾಗದ ಸಂಕಟಕ್ಕೆ ಹೊಲದಲ್ಲಿಯೇ ನೇಣು ಹಾಕಿಕೊಂಡದ್ದು ದೊಡ್ಡ ಸುದ್ದಿಯಾಗಲಿಲ್ಲ.
ಇಂತಹ ವರದಿಗಳನ್ನು ಓದಿದಾಗ, ಪ್ರಾಕೃತಿಕ ವಿಕೋಪಗಳು ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿವೆ ಎನಿಸಬಹುದು. ಆದರೆ ಇದಕ್ಕಿಂತ ದೊಡ್ಡ ಕಾರಣ ಎಪಿಎಂಸಿಗಳಲ್ಲಿ ವರ್ತಕರಿಂದ ನಡೆಯುತ್ತಿರುವ ರೈತರ ಶೋಷಣೆ.
ಉದಾಹರಣೆಗೆ ಮಹಾರಾಷ್ಟ್ರದ ಲಾಸಲ್-ಗಾಂವಿನ ಎಪಿಎಂಸಿ. ಅಲ್ಲಿ ಈರುಳ್ಳಿಯದು ಜೋರು ವಹಿವಾಟು. ಬಾಡಿಗೆ ವಾಹನದಲ್ಲಿ ಮಾರಾಟಕ್ಕಾಗಿ ತನ್ನ ಈರುಳ್ಳಿ ತರುವ ರೈತ ಅಲ್ಲಿ ಪ್ರವೇಶ ಶುಲ್ಕ ಪಾವತಿಸಬೇಕು. ಜೊತೆಗೆ ಈರುಳ್ಳಿ ಮೂಟೆಗಳನ್ನು ತೂಕ ಮಾಡಿದ್ದಕ್ಕೆ ಎರಡೆರಡು ಬಾರಿ ಶುಲ್ಕ ಕೊಡಬೇಕು – ವಾಹನದಿಂದ ಇಳಿಸುವಾಗ ಮತ್ತು ಮಾರಾಟ ಮಾಡಿದಾಗ.
ಆದರೆ ಅದೇ ಮಾರುಕಟ್ಟೆಯ ವರ್ತಕರು ತಮ್ಮ ದುಬಾರಿ ಕಾರುಗಳಲ್ಲಿ ಎಪಿಎಂಸಿ ಪ್ರವೇಶಿಸುವಾಗ ಯಾವುದೇ ಶುಲ್ಕ ಪಾವತಿಸ ಬೇಕಾಗಿಲ್ಲ. ಅವರು ಖರೀದಿಸಿದ ಈರುಳ್ಳಿ ಗೋಡೌನ್ ತಲಪುವಂತೆ ಮಾಡುತ್ತಾರೆ ಅವರ ಸಿಬ್ಬಂದಿ (ಇದಕ್ಕೂ ಶುಲ್ಕವಿಲ್ಲ). ನಾಸಿಕದ ಪಿಂಪಲ್-ಗಾಂವಿನ ತರಕಾರಿ ಬೆಳೆಗಾರ ಭಿವಾಜಿ ಭಾವ್ಲೆ ತಮ್ಮ ಅಸಹಾಯಕತೆ ತಿಳಿಸುವ ಪರಿ: “ವರ್ತಕರ ಸಿಬ್ಬಂದಿ ನಮಗೊಂದು ಚೀಟಿ ಕೊಡುತ್ತಾರೆ; ಅದರಲ್ಲಿ ಬರೆದಿರುತ್ತಾರೆ ಮಾರಾಟವಾದದ್ದರ ತೂಕ. ಆದರೆ ಹಣ ತಗೊಳ್ಳಲಿಕ್ಕೆ ಎಂಟು – ಹತ್ತು ದಿನಗಳ ನಂತರ ಬರಬೇಕಂತ ಅವರಿಂದ ನಮಗೆ ತಾಕೀತು”.
ಅಲ್ಲಿ ರೈತರಿಗೆ ಕೊಡುವ ಚೀಟಿಯಲ್ಲಿ ಬರೆದ ಮೊತ್ತದ ಶೇಕಡಾ 70-75 ಮಾತ್ರ ರೈತರ ಕೈಸೇರುತ್ತದೆ. ಯಾಕೆಂದರೆ ಪಾವತಿಸಬೇಕಾದ ಹಣದಿಂದ ಶೇ. 25ರಿಂದ 27ರಷ್ಟು ವರ್ತಕರು ಕಡಿತ ಮಾಡುತ್ತಾರೆ. ಫಸಲಿನ ಗ್ರೇಡೇಷನಿಗಾಗಿ ಶೇ.10, ಫಸಲಿನ ತೂಕ, ಲೋಡಿಂಗ್ ಮತ್ತು ಅನ್ಲೋಡಿಂಗಿಗಾಗಿ ಶೇ.8ರಿಂದ 10 ಮತ್ತು ಶೇ.7 ಕಮಿಷನ್. ಹಾಗಾಗಿ ಚೀಟಿಯಲ್ಲಿ ಬರೆದ ಫಸಲಿನ ಹಣ ರೂ.5,000 ಆಗಿದ್ದರೆ ರೈತನಿಗೆ ಸಿಗುವುದು ರೂ.3,600 ಮಾತ್ರ!
ಇನ್ನೊಂದು ಉದಾಹರಣೆ ಕೊಲ್ಹಾಪುರದ ಎಪಿಎಂಸಿ. ಅಲ್ಲಿ ವಹಿವಾಟಿನ ಮುಖ್ಯ ಐಟಂ ಬೆಲ್ಲ. 10 ಅಥವಾ 25 ಕಿಲೋ ತೂಕದ ಬೆಲ್ಲದ ಗಟ್ಟಿಗಳನ್ನು 100 ಕಿಲೋ ಗುಂಪುಗಳಾಗಿ ಏಲಂಗೆ ಜೋಡಿಸಿ ಇಟ್ಟಿರುತ್ತಾರೆ. ಅಲ್ಲಿ ನಡೆಯುವ ಏಲಂನಲ್ಲಿ ಎಲ್ಲವೂ ನ್ಯಾಯಬದ್ಧ ಎಂಬಂತೆ ಕಾಣುತ್ತದೆ. ಆದರೆ ರೈತರ ಜೊತೆ ಮಾತಾಡಿದರೆ ಮಾತ್ರ ನಿಜ ಸಂಗತಿ ಕಾಣಿಸುತ್ತದೆ. “ನಮ್ಮ ತೂಕದ ಯಂತ್ರದಲ್ಲಿ 10 ಕಿಲೋ ತೂಗುವ ಬೆಲ್ಲದ ಗಟ್ಟಿ ವರ್ತಕರ ತೂಕದ ಯಂತ್ರದಲ್ಲಿ 9.8 ಕಿಲೋ ಮಾತ್ರ ತೂಗುತ್ತದೆ. ಅದಲ್ಲದೆ ಸುಮಾರು 20 ವರ್ತಕರು ಬೆಲ್ಲದ ಗಟ್ಟಿಗಳ ರುಚಿ ನೋಡಲಿಕ್ಕಾಗಿ ಅದರಿಂದ ತುಂಡುತುಂಡು ಬೆಲ್ಲ ತೆಗೆಯುತ್ತಲೇ ಇರುತ್ತಾರೆ. ಕೊನೆಗೆ ರೈತನಿಗೆ ಸಿಗೋದು ಕೇವಲ 9 ಕಿಲೋದ ಹಣ ಮಾತ್ರ” ಎನ್ನುತ್ತಾರೆ, ಸ್ವಾಭಿಮಾನಿ ಶೇತ್ಕಾರಿ ಸಂಘಟನೆಯ ನಾಯಕರೂ ರೈತರೂ ಆದ ಶ್ರೀಕಾಂತ ಘಾಟ್ಗೆ.
ರೈತರು ಆಕ್ಷೇಪಣೆ ಮಾಡಿದರೆ, ಎಪಿಎಂಸಿ ಅಧಿಕಾರಿಗಳು ಏಲಂ ನಿಲ್ಲಿಸುತ್ತಾರೆ ಎಂಬುದೇನೋ ನಿಜ. “ಆದರೆ, ಮಾರಲು ತಂದ ಉತ್ಪನ್ನಗಳನ್ನು ರೈತ ವಾಪಾಸು ಒಯ್ಯಲಾರ. ಮಾತ್ರವಲ್ಲ, ಉತ್ಪನ್ನವನ್ನು ಎಪಿಎಂಸಿಯಲ್ಲಿ ಇಟ್ಟು ಹೋಗಲು ಉಗ್ರಾಣದ ವ್ಯವಸ್ಥೆಯೂ ಅಲ್ಲಿಲ್ಲ. ಹಾಗಾಗಿ ವರ್ತಕರ ಒತ್ತಡದ ತಂತ್ರಗಳಿಗೆ ರೈತರು ಸುಲಭವಾಗಿ ಬಲಿ” ಎಂದು ವಿವರಿಸುತ್ತಾರೆ ಕೊಲ್ಹಾಪುರ ಜಿಲ್ಲಾ ಸ್ವಾಭಿಮಾನಿ ಶೇತ್ಕಾರಿ ಸಂಘಟನೆಯ ಅಧ್ಯಕ್ಷರಾದ ಭಗವಾನ್ ಕಾಟೆ.
ಕೊಲ್ಹಾಪುರದಲ್ಲಿ ಬೆಲ್ಲ ತಯಾರಿಸುವ 1,200 ಘಟಕಗಳಿದ್ದವು. ಈಗ ಉಳಿದಿರುವುದು ಕೇವಲ 400 ಘಟಕಗಳು. “ರೈತರು ಹತಾಶರಾಗಿದ್ದಾರೆ. ಆದರೆ ನಮಗೆ ಪರಿಹಾರದ ದಾರಿಗಳಿಲ್ಲ. ವರ್ತಕರ ಅನ್ಯಾಯದ ವ್ಯವಹಾರಗಳಿಗೆ ನಾವು ಬೆಳೆದದ್ದನ್ನು ಒಪ್ಪಿಸಬೇಕಾಗಿದೆ. ನಮ್ಮ ಸಂಕಟ ಕೇಳುವವರು ಯಾರೂ ಇಲ್ಲ” ಎಂದು ನೊಂದು ನುಡಿಯುತ್ತಾರೆ ಕಾಟೆ.
ಮೆಂತೆ ಮತ್ತು ಹಸುರು ತರಕಾರಿಗಳ ಏಲಂನಲ್ಲಿ ಇನ್ನೊಂದು ರೀತಿಯ ಶೋಷಣೆ. ಏಲಂ ನಡೆಯುವುದು ತಲಾ 117 ಬಂಡಲುಗಳಿಗೆ. ಆದರೆ ರೈತರಿಗೆ ಪಾವತಿ ಕೇವಲ 100 ಬಂಡಲುಗಳಿಗೆ! “ಸಾಗಾಟದ ಸಮಯದಲ್ಲಿ ಆಗಬಹುದಾದ ನಷ್ಟದ ಬಾಬ್ತು ಪ್ರತಿ 100 ಬಂಡಲುಗಳಿಗೆ 17 ಬಂಡಲ್ ಹೆಚ್ಚುವರಿಯಾಗಿ ರೈತರಿಂದ ವರ್ತಕರು ಕಿತ್ತುಕೊಳ್ಳುತ್ತಾರೆ.
ಹೀಗೆ ಎಪಿಎಂಸಿಯಲ್ಲಿ ರೈತರ ಬಗೆಬಗೆಯ ಶೋಷಣೆ. ಲಾಸಲ್-ಗಾಂವಿನಲ್ಲಿ 2015ರ ಮೇ ತಿಂಗಳಿನಲ್ಲಿ ಒಂದು ದಿನ ಕೇವಲ ಎಂಟು ಗಂಟೆಗಳ ಅವಧಿಯಲ್ಲಿ ಟೊಯೋಟಾದ 7೦ ದುಬಾರಿ ಕಾರುಗಳನ್ನು ಖರೀದಿಸಿದವರಲ್ಲಿ ಬಹುಪಾಲು ಯಾರು ಗೊತ್ತೇ? ಎಪಿಎಂಸಿ ಕಮಿಟಿಯ ಸದಸ್ಯರು. ಶೋಷಣೆಗೆ ಕೊನೆಯಿಲ್ಲ, ರೈತರ ಬೆವರಿಗೆ ಬೆಲೆಯಿಲ್ಲ ಎಂಬುದಕ್ಕೆ ಇನ್ನೇನು ಪುರಾವೆ ಬೇಕು?