ವಸಾಹತುಶಾಹಿ ಮಾನಸಿಕತೆ ಅಂದರೆ ಇದುವೇ ಅಲ್ಲವೇ?

ವಸಾಹತುಶಾಹಿ ಮಾನಸಿಕತೆ ಅಂದರೆ ಇದುವೇ ಅಲ್ಲವೇ?

ಜಿ-೨೦ ದೇಶಗಳ ಪ್ರಮುಖರಿಗೆ ಭೋಜನಕೂಟಕ್ಕೆ ಕಳುಹಿಸಲಾದ ಆಹ್ವಾನಪತ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ಪ್ರಸಿಡೆಂಟ್ ಆಫ್ ಭಾರತ್" ಎಂದು ನಮೂದಿಸಿದ್ದು ಕಾಂಗ್ರೆಸ್ ಮತ್ತಿತರ ವಿರೋಧಿ ಗುಂಪುಗಳಿಗೆ ಉರಿಹತ್ತಿಸಿದೆ. ಹೀಗೆ ಉರಿಸಿಕೊಂಡ ಗುಂಪುಗಳು ನೀಡುತ್ತಿರುವ ಹೇಳಿಕೆಗಳು ಭಾರತೀಯರನ್ನು ಜಾಗೃತಗೊಳಿಸುವ ರೀತಿಯಲ್ಲಿವೆ. ಕಣ್ತೆರೆಸುವಂತೆ ಮಾಡುತ್ತಿವೆ. ಯಾಕೆಂದರೆ, ವಸಾಹತುಶಾಹಿ ಮತ್ತು ಗುಲಾಮಗಿರಿಯ ಮಾನಸಿಕತೆ ಎಂದರೆ ಏನೆಂಬುದಕ್ಕೆ ಈ ಗುಂಪುಗಳು ನೀಡುತ್ತಿರುವ ಹೇಳಿಕೆಗಳು ತಾಜಾ ಸಾಕ್ಷಿಯಾಗುವಂತಿವೆ.

‘ಭಾರತೀಯ ಸಂವಿಧಾನದ ಒಂದನೇ ವಿಧಿಯಲ್ಲಿ ‘ಇಂಡಿಯಾ ದ್ಯಾಟ್ ಈಸ್ ಭಾರತ್' ಎಂದು ಹೇಳಲಾಗಿದೆ. ಹೀಗಿರುವಾಗ ವಿರೋಧಿಗಳಿಗೇಕೆ ಕಸಿವಿಸಿ ಉಂಟಾಗುತ್ತದೆ? ವೃಷಭದೇವನ ಹಿರಿಯ ಪುತ್ರ, ಶ್ರೇಷ್ಟ ಗುಣಗಳಿಂದ ಕೂಡಿದ ಭರತ ಆಳಿದ ದೇಶವನ್ನು ಭಾರತ ಎಂದು ಕರೆಯಲಾಗುತ್ತದೆ ಎಂದು ಭಾಗವತದಲ್ಲಿ (೫-೪-೯) ಹೇಳಲಾಗಿದೆ. ಸ್ವರ್ಗ ಮತ್ತು ಮೋಕ್ಷಕ್ಕೆ ದಾರಿ ತೋರಿಸುವ ಕರ್ಮಭೂಮಿ ಭಾರತ. ಆದ್ದರಿಂದ ಭಾರತದಲ್ಲಿ ಮನುಷ್ಯ ಜನ್ಮ ಪಡೆಯುವುದೇ ಶ್ರೇಷ್ಟ ಎಂಬುದಾಗಿ ದೇವತೆಗಳೇ ಹಾಡಿಹೊಗಳಿರುವುದನ್ನು ನಮ್ಮ ಶಾಸ್ತ್ರಗಳು ಹೇಳುತ್ತವೆ.

ಇಂತಹ ಭಾರತದ ಹೆಸರು ಕೇಳುವಾಗ ಅಸಹನೆ ಉಂಟಾಗುತ್ತದೆ ಎಂದರೆ, ಅದು ವಸಾಹತುಶಾಹಿ ಅಥವಾ ಗುಲಾಮಿ ಮಾನಸಿಕತೆಯಲ್ಲದೆ ಬೇರೇನಾಗಲು ಸಾಧ್ಯ? ಬಹುಷಃ ಮಕಾಲೆ ಇದನ್ನೇ ಹೇಳಿರುವುದಲ್ಲವೇ? ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಬಣ್ಣದಲ್ಲಿ ಮಾತ್ರ ಭಾರತೀಯರಾಗಿದ್ದು, ಮಾನಸಿಕವಾಗಿ ಸ್ವಾಭಿಮಾನ ಶೂನ್ಯ ಜನಗಳಾಗಿರುತ್ತಾರೆಂದು ಮಕಾಲೆ ಅಂದೇ ಭವಿಷ್ಯ ನುಡಿದಿದ್ದನ್ನು ಇಂದು ‘ಭಾರತ' ವಿರೋಧಿಗಳು ನಿಜ ಮಾಡಿ ತೋರಿಸುತ್ತಿರುವುದು ಭಾರತಿಯರನ್ನು ಎಚ್ಚರಿಸಬೆಡವೇ? ಸ್ವತಂತ್ರ ಭಾರತ ಸ್ವತ್ವವನ್ನು ಅಳವಡಿಸಿಕೊಳ್ಲದೇ ಹೋದರೆ ಸ್ವಾಭಿಮಾನಿ, ಸಮೃದ್ಧ, ಸಮರ್ಥ ಭಾರತ ಎದ್ದೇಳುವುದಾದರೂ ಎಂತು? ಸ್ವಾತಂತ್ರ್ಯ ಬಂದಾಗ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ‘ಸ್ವರಾಜ್ಯ' ಎಂದು ಹೇಳಿರುವುದು ಸ್ವಂತಿಕೆಯನ್ನು ಅಳವಡಿಸಿಕೊಳ್ಳಬೇಕೆಂದೇ ಅಲ್ಲವೇ?

ಇಷ್ಟಕ್ಕೂ, ಇಂಡಿಯಾ ಎಂದರೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಈಗ ರಾಜಕೀಯ ಅಧಿಕಾರ ಗಳಿಕೆಯ ಸಾಧನವಷ್ಟೇ ಆಗಿರುವುದನ್ನು ದೇಶದ ಜನತೆ ಗಮನಿಸಬೆಡವೇ? ಇಲ್ಲವಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಬಿಜೆಪಿಯನ್ನು ಹೇಗಾದರೂ ಅಧಿಕಾರದಿಂದ ಕೆಳಗಿಳಿಸಬೇಕೆಂಬ ಏಕಾಂಶ ಅಜೆಂಡಾದೊಂದಿಗೆ ಐ.ಎನ್. ಡಿ. ಐ. ಎ. ಕೂಟ ರಚನೆ ಮಾಡಿ ಅದನ್ನು ‘ಇಂಡಿಯಾ’ ಎಂದು ಕರೆಯುವುತ್ತಿರುವುದು ದೇಶಕ್ಕೆ ಮಾಡುವ ಅಪಚಾರವಲ್ಲವೇ?

ಎಷ್ಟು ಅಭಾಸಕಾರಿಯೆಂದರೆ, ಐ ಎನ್ ಡಿ ಐ ಎ ಕೂಟವನ್ನು ಇಂಡಿಯಾ ಎಂದು ಪ್ರಚುರ ಪಡಿಸಲು ಯತ್ನಿಸಲಾಗುತ್ತದೆ. ಅಂದರೆ ‘ಇಂಡಿಯಾ’ ಎನ್ನುವ ಮೂಲಕ ಭಾರತೀಯ ಮತದಾರರಲ್ಲಿನ ರಾಷ್ಟ್ರೀಯ ಭಾವವನ್ನು ರಾಜಕೀಯ ಸ್ವಾರ್ಥಕ್ಕೆ ದುರ್ಬಳಸಿಕೊಳ್ಳುವುದೇ ಇವರ ಉದ್ಡೇಶವಲ್ಲವೇ? ಇಷ್ಟಕ್ಕೂ ಐ ಎನ್ ಡಿ ಐ ಎ ಯನ್ನು ಕನ್ನಡ ಮಾಧ್ಯಮಗಳು, ಪತ್ರಕರ್ತರೂ ಕೂಡ ‘ಇಂಡಿಯಾ’ ಎಂದು ವಿವೇಚನೆಯಿಲ್ಲದೆ ಬಳಸುತ್ತಿರುವುದು ಏನನ್ನು ಹೇಳುತ್ತದೆ? ಆಂಗ್ಲ ಭಾಷೆಯಲ್ಲಿನ ‘ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟ್ ಇನ್ ಕ್ಲೂಸಿವ್ ಅಲಯನ್ಸ್’ ಅನ್ನು ಕನ್ನಡ ಪತ್ರಿಕೆಗಳು ಇಂಡಿಯಾ (ಆರಂಭದ ಐ ಇಲ್ಲಿ ಇ ಆಗುವುದು ಹೇಗೆ?) ಎಂದು ಕರೆಯುತ್ತಿರುವುದು ಚೋದ್ಯವೆನಿಸುವುದಿಲ್ಲವೇ?

ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ದೇಶದ ವಸಾಹತುಶಾಹಿ ಕುರುಹುಗಳನ್ನು ಅಳಿಸಿ, ಸ್ವಂತಿಕೆಯ ಅಂಶಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಎಲ್ಲ ರಾಜಕೀಯ ಪಕ್ಷಗಳೂ ರಾಜಕೀಯ ಮೀರಿ ಸ್ವಾಗತಿಸಬೇಕಿತ್ತು. ಆದರೆ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಈ ಪಕ್ಷಗಳ ಕೂಟಗಳ ಮಾನಸಿಕತೆ ಹೇಗಿದೆ ಎಂಬುದನ್ನು ಗುರುತಿಸಲು ಭಾರತೀಯರಿಗೆ ಅವಕಾಶ ಮಾಡಿಕೊಟ್ಟಿದೆ ಎಂದೇ ಹೇಳಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೬-೦೯-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ