ವಾರಾಂತ್ಯ ಹೇಗಿತ್ತು?

ವಾರಾಂತ್ಯ ಹೇಗಿತ್ತು?

ಬರಹ

ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ವಾರಾಂತ್ಯ ಚೆನ್ನಾಗಿತ್ತು ಎಂಬ ಸಂಕ್ಷೇಪ ಉತ್ತರದಿಂದ ಹಿಡಿದು ನಾನು ಶೋಪ್ಪಿಂಗ್ಗೆ ಹೋಗಿದ್ದೆ, ಫಿಲ್ಮ್ಗೆ ಹೋಗಿದ್ದೆ, ಅಥವಾ ಆ ಹೋಟೆಲ್ ಈ ರೆಸಾರ್ಟ್ಗೆ ಹೋಗಿದ್ದೆ ಮುಂತಾದ ವಿವರವಾದ ಉತ್ತರ ನಿರೀಕ್ಷಿಸಬಹುದು. ಕೆಲವರಿಗೆ ಈ ಪ್ರಶ್ನೆ ಅತ್ಯಂತ ಕಠಿಣದ್ದಾಗಿ ಕಾಣಿಸಬಹುದು, ಅಥವಾ ಇತರರ ಉತ್ತರ ಕೇಳಿ ತಾವು ಮಾಡಿದ್ದನ್ನು ಹೇಳಲು ಸಂಕೋಚವೂ ಆಗಬಹುದು. ಸಂಕೋಚ ಪಡುವಂತಹ ಕೆಟ್ಟ ಕೆಲಸ ಏನೂ ಮಾಡದಿದ್ದರೂ, ಅವರ ವಾರಾಂತ್ಯ ಎಂದಿನ ದಿನಕ್ಕಿಂತ ಭಿನ್ನವಾಗಿಲ್ಲದಿರುವುದೇ ಈ ಸಂಕೋಚಕ್ಕೆ ಕಾರಣ. ನಾನೂ ಈ ಕೊನೆಯ ವರ್ಗಕ್ಕೆ ಸೇರಿದವನಾದ್ದರಿಂದ, ನನಗೆ ಈ ಪ್ರಶ್ನೆ ಎದುರಾದಾಗಲೆಲ್ಲ ಒಂದು ಬಗೆಯ ಮುಜುಗರ. ಆದ್ದರಿಂದಲೇ ನನ್ನ ವೈವಿಧ್ಯಪೂರ್ಣವಲ್ಲದ ವಾರಾಂತ್ಯದ ಚುಟುಕು ಪರಿಚಯ ಈ ಬರಹದ ಮೂಲಕ ಮಾಡಿಕೊಟ್ಟು, ನನಗೆ ಈ ಪ್ರಶ್ನೆ ಕೇಳುವವರಿಗೆ ಉತ್ತರ ಕೊಡುವ ಗೋಜಿಗೆ ಹೋಗದೆ ಈ ಬರಹದ ಕಡೆಗೆ ಬೊಟ್ಟು ಮಾಡಿ ನನ್ನ ಸಮಯದ ಸದುಪಯೋಗ ಪಡಿಸಿಕೊಳ್ಳುವ ದುರಾಲೋಚನೆ.

ನನಗೆ ಮೊದಲಿನಿಂದ ಬೆಳಿಗ್ಗೆ ಬೇಗ ಏಳುವ ದುರಭ್ಯಾಸ. ಹಾಗಂತ ೪, ೫ ಗಂಟೆಗೆಲ್ಲ ಏಳುತ್ತೇನೆ ಎಂದು ತಪ್ಪು ತಿಳಿಯಬೇಡಿ. ನನ್ನ ಬೇಗ ಎಂದರೆ ಬೆಂಗಳೂರಿನ ಸೂರ್ಯ ವಂಶದವರಿಗೆ ಹೋಲಿಸಿದರೆ. ಸಾಮನ್ಯವಾಗಿ ಇವರು ಗಡಿಯಾರ ೧೧, ೧೨ ಗಂಟೆ ತೋರಿಸುತ್ತಿದ್ದು, ಸೂರ್ಯ ನಡು ನೆತ್ತಿಯ ಮೇಲೆ ಬಂದಾಗಲಷ್ಟೇ ಮುಸುಕು ತೆಗೆಯುವ ಪ್ರಯತ್ನ ಮಾಡುತ್ತಾರೆ. ಹಾಗಂತ ಅದು ತಪ್ಪು ಅಂತ ನನ್ನ ಭಾವನೆಯಲ್ಲ, ವಾರದ ಉಳಿದ ದಿನಗಳಲ್ಲಿ ಬೆಳಿಗ್ಗೆ ಬೇಗ ಎದ್ದು ಆಫೀಸಿಗೆ ಹೋಗಿ ಮಧ್ಯರಾತ್ರಿಯವರೆಗೂ ದುಡಿಯುವ ಇವರಿಗೆ ವಾರದಲ್ಲಿ ಎರಡು ದಿನ ರಿಯಾಯಿತಿ ಕೊಡುವುದು ತಪ್ಪಲ್ಲವೇನೋ. ನಾನು ಮಾತ್ರ ಲೆಕ್ಕಾಚಾರಕ್ಕೆ ಸರಿಯಾಗಿ ದಿನಕ್ಕೆ ೮ ಗಂಟೆ ಕೆಲಸ ಮಾಡುತ್ತೇನೆ ಎಂದು ಇತರರೂ ನನ್ನಂತೆಯೇ ಶುದ್ಧ ಸೋಮಾರಿಗಳು ಎಂದು ಭಾವಿಸುವುದು ತಪ್ಪು. ಹೋಗಲಿ ಬಿಡಿ ವಿಷಯ ಎಲ್ಲೆಲ್ಲಿಗೋ ಹೋಯಿತು, ನನ್ನ ಬೇಗ ಎಂದರೆ ಸುಮಾರು ೬ ಗಂಟೆ, ನಾನು ಪ್ರತಿನಿತ್ಯ ಏಳುವ ಸಮಯ.

ಶೌಚಾದಿಗಳೆಲ್ಲ ಮುಗಿದ ನಂತರ ನನ್ನ ಮೊದಲ ಕೆಲಸ ಎಂದರೆ ಮನೆಯ ಪಕ್ಕದಲ್ಲೇ ಇರುವ ವಿವೇಕಾನಂದ ಪಾರ್ಕ್ನಲ್ಲಿ ಕೆಲವು ಸುತ್ತು ಹೊಡೆಯುವುದು. ಕೇವಲ ಒಲಂಪಿಕ್ಸ್ ಮುಂತಾದ ಕ್ರೀಡೆಯನ್ನು ನೋಡಿ ಕೆಲವು ದಿನ ಹುರುಪುಗೊಂಡು ನನ್ನ ಕಾಲುಗಳು ಓಡುವುದಾದರೂ ಸಾಮಾನ್ಯವಾಗಿ ಅದು ವಿರಾಮದಲ್ಲಿ ನಡೆಯುವುದೇ ಜಾಸ್ತಿ. ವಾರಾಂತ್ಯ ಎಂದು ದಿನನಿತ್ಯ ನೋಡುವ ಹಕ್ಕಿಗಳಲ್ಲೋ, ಮುಂಜಾನೆಯ ಅರುಣೋದಯದ ಗುಲಾಬಿ ವರ್ಣದಲ್ಲೋ , ಪಾರ್ಕಿನಲ್ಲಿ ಆಡುವ ಮಕ್ಕಳಲ್ಲೋ, ಅಸಹಜವಾಗಿ ನಗುವ ವಯೋವೃದ್ಧರ ಗುಂಪಿನಲ್ಲೋ, ಗುಡಾಣದ ಹೊಟ್ಟೆ ಕರಗಿಸುವ ಸಲುವಾಗಿ ವ್ಯಾಯಾಮ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಡುವಯಸ್ಕರಲ್ಲೋ ಯಾವುದೇ ಬಗೆಯ ವ್ಯತ್ಯಯ ನಿಮಗೆ ಕಾಣಿಸುವುದು ತೀರ ದುರ್ಲಭ.

ಹೀಗೆಯೇ ಸುಮಾರು ೩೦ ನಿಮಿಷ ಸಮಯ ಕೊಂದು ವೃತ್ತ ಪತ್ರಿಕೆ, ಹಾಲಿನೊಂದಿಗೆ ಮನೆಗೆ ಬಂದರೆ ಬಿಸಿಯಾದ ಚಹಾದೊಂದಿಗೆ ವರ್ತಮಾನ ತಿಳಿದುಕೊಳ್ಳುವ ಆತುರವಾಗುತ್ತದೆ. ನನಗೆ ಮೊದಲಿನಿಂದ ಎರಡೆರಡು ಕೆಲಸ ಒಟ್ಟಿಗೆ ಮಾಡಿ ಅಭ್ಯಾಸವಿಲ್ಲದ್ದರಿಂದ, ಮೊದಲು ತಂದ ಹಾಲನ್ನು ಕಾಯಿಸಿ ಚಹಾ ಮಾಡಿ ನಂತರ ಚಹಾದ ಗುಟುಕಿನೊಂದಿಗೆ ಪತ್ರಿಕೆಯ ಸಮಾಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಿಮಗೆ ಆಶ್ಚರ್ಯವಾದರೂ ಆಗಬಹುದು, ಎರಡೆರಡು ಕೆಲಸ ಒಟ್ಟಿಗೆ ಮಾಡದ ಇವನು ಚಹಾ ಕುಡಿಯುತ್ತ ಹೇಗೆ ಪತ್ರಿಕೆ ಓದುತ್ತಾನೆ ಎಂದು. ಚಹಾ ಕುಡಿಯುವುದೊಂದು ಕೆಲಸವಲ್ಲ ಎನ್ನುವ ಉತ್ತರ ನಿಮಗೆ ಸಮಾಧಾನ ತಂದರೂ ಎಲ್ಲರಿಗೂ ತರುವುದಿಲ್ಲ. ಅದಕ್ಕೆಂದೇ ಹಿಂದೆ ಎಲ್ಲೋ ಝೆನ್ ಕತೆಗಳಲ್ಲಿ ಓದಿದ್ದ ಚಹಾ ಕುಡಿಯುತ್ತ ಪತ್ರಿಕೆ ಓದುವುದು ನನ್ನ ಒಂದು ಕೆಲಸ ಎಂದು ಹೇಳಿ ಸಮಾಧಾನ ಪಡಿಸುತ್ತೇನೆ.

ಇಷ್ಟು ಹೊತ್ತಿಗೆ ಹಸಿವಿನ ಕೂಗು ಪ್ರಭಲವಾಗಿ, ಮೆದುಳು ಪತ್ರಿಕೆಯ ವಿಷಯವನ್ನು ಇನ್ನು ಗ್ರಹಿಸಲಾರೆ ಎಂದು ಸಂಪು ಹೂಡುತ್ತದೆ. ಬೆಳಿಗ್ಗಿನ ತಿಂಡಿ ಮಾಡುವುದು ದೊಡ್ಡ ಕೆಲಸ ಅಲ್ಲದಿದ್ದರೂ ಯಾವ ತಿಂಡಿ ಮಾಡುವುದು ಎಂದು ನಿರ್ಣಯಿಸುವುದು ಮಾತ್ರ ತುಂಬಾ ಕಠಿಣದ ಕೆಲಸ. ಅಡುಗೆ ಮನೆಯಲ್ಲಿ ಇದೆಯೆಂದು ಭ್ರಮಿಸಿದ ಸಾಮಾನನ್ನು ನೆನಪಿಸಿಕೊಂಡು, ಪುನರಾವರ್ತನೆ ಆಗದಂತೆ ಇತ್ತೀಚಿನ ದಿನಗಳಲ್ಲಿ ಮಾಡಿದ ತಿಂಡಿಯನ್ನು ನೆನಪಿಸಿಕೊಂಡು, ನಾಲಗೆ ಚಪಲವನ್ನು ಗಮನದಲ್ಲಿ ಇರಿಸಿಕೊಂಡು ನಿರ್ಣಯಿಸಬೇಕಾಗುತ್ತದೆ. ಅಂತೂ ಕಷ್ಟ ಪಟ್ಟು ಅಕ್ಕಿ ರೊಟ್ಟಿ ಜೊತೆಗೆ ಕಾಯಿ ಚಟ್ನಿ ಮಾಡಬೇಕು ಅಂತ ನಿರ್ಧಾರ ಮಾಡಿದೆ ಅಂದುಕೊಳ್ಳಿ, ಚಟ್ನಿಗೆ ಒಗ್ಗರಣೆ ಹಾಕುವ ಸಮಯದಲ್ಲಷ್ಟೇ ಹಿಂದಿನ ದಿನ ಖಾಲಿಯಾದ ಸಾಸಿವೆಯ ನೆನಪು ಬರುತ್ತದೆ. ಬಾಯ ಚಪಲ ಹಸಿವನ್ನು ಹಿಂದಿಕ್ಕಿ, ಕಾಲು ಹತ್ತಿರದ ಅಂಗಡಿಯ ಹಾದಿ ಹಿಡಿಯುತ್ತದೆ.

ಹೆತ್ತವರಿಗೆ ಹೆಗ್ಗಣ ಮುದ್ದಂತೆ, ಹಾಗೆಯೇ ನಾನು ಮಾಡಿದ ಅರೆಬೆಂದ, ಇಲ್ಲವೇ ಕರಟಿ ಹೋದ ರೊಟ್ಟಿ ನನಗೆ ಆಪ್ಯಾಯಮಾನವಾಗಿ ತೋರಿ ಒಮ್ಮೊಮ್ಮೆ ನನ್ನನ್ನು ನಾನು ನಳ ಮಹಾರಾಜನಿಗೆ ಹೋಲಿಸುವುದಿದೆ! ನನ್ನ ಸ್ನೇಹಿತರೋ ಬಂಧುಗಳೋ ನಮ್ಮ ಮನೆಗೆ ಬಂದು ನಾನು ಮಾಡಿದ ನಳ ಪಾಕವನ್ನು ಬಹಳ ಕಷ್ಟದಿಂದ ಗಂಟಲೊಳಗೆ ತುರುಕುವಾಗ ಅವರ ಮುಖದಲ್ಲಿನ ಸಂಕಟದಿಂದಷ್ಟೇ ನನಗೆ ತಿಳಿಯುವುದು ನನ್ನ ಪಾಕದ ಗುಣಮಟ್ಟ!

ಇವೆಲ್ಲ ದಿನನಿತ್ಯದ ಕೆಲಸವಾದರೆ ವಾರಾಂತ್ಯಕ್ಕೆ ಮೀಸಲಾದ ಕೆಲಸ ಕಾದಿರುತ್ತದೆ. ಶನಿವಾರ ಬೆಳಿಗ್ಗೆ ನಮ್ಮ ಮನೆ ಶುಚಿಗೊಳಿಸುವ ದಿವಸ. ವಾರಕ್ಕೊಮ್ಮೆಯಾದರೂ ಮನೆಯನ್ನು ಶುಚಿಗೊಳಿಸುವುದರಿಂದ ಇತರ ಅವಿವಾಹಿತರಿಗಿಂತ ನಾನೇ ಮೇಲು ಎಂದು ಗರ್ವದಿಂದ ಹೇಳಬಹುದು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗುವ ಹುಡುಗಿಯರೂ ಕೂಡ ಪಿ.ಜಿ. ಎಂದು ಹಣ ಕೊಟ್ಟು ಅತಿಥಿಗಳಾಗಿ ಈ ಜವಾಬ್ದಾರಿಯಿಂದ ಪಾರಾಗುತ್ತಿದ್ದಾರೆ. ಅವರ ಗಂಡಂದಿರ ಬಗ್ಗೆ ಒಮ್ಮೊಮ್ಮೆ ಅನುಕಂಪವೂ ಮೂಡುತ್ತದೆ.

ಮೊದಲಿನ ಕೆಲಸ ಗುಡಿಸುವುದು, ಒಂದು ವಾರದಿಂದ ಮನೆಯೊಳಗೆ ನುಗ್ಗಿರಬಹುದಾದ ಧೂಳು, ಮಣ್ಣು, ಉದುರಿ ಹೋದ ತಲೆಕೂದಲು, ತರಕಾರಿ ಸಿಪ್ಪೆ, ಮೂಲೆಯಲ್ಲಿ ಬೆಳೆದಿರಬಹುದಾದ ಜೇಡರ ಬಲೆ, ಪ್ಲಾಸ್ಟಿಕ್, ಮನೆಯಲ್ಲಿ ನನ್ನೊಂದಿಗೆ ವಾಸಿಸುತ್ತಿರುವ ಜಿರಳೆ ಹಾಗೂ ಇತರ ಜೀವಿಗಳ ಮೃತ ಶರೀರ, ಒಂದೇ ಎರಡೇ ಹಲವು ಬಗೆಯ ವೈವಿಧ್ಯಗಳನ್ನು ನೀವು ಇಲ್ಲಿ ಕಾಣಬಹುದು.

ಹೀಗೆ ಕೆಲವೊಮ್ಮೆ ಗುಡಿಸುವಾಗ ಹಲವು ತಿಂಗಳಿಂದ ಸಂಗ್ರಹಿಸಿದ್ದ ಹಾಲಿನ ಪ್ಲಾಸ್ಟಿಕ್ ಅಟ್ಟದ ಮೇಲೆ ಅಸ್ತವ್ಯಸ್ತವಾಗಿ ಹರಡಿ, ಅದರಿಂದ ಹೊರಡುತ್ತಿದ್ದ ಗಂಧಕ್ಕೆ ನುಸಿ ಮುತ್ತಿ ಗುಂಯಿಕಾರ ಮಾಡುವ ದನಿಯೋ, ಅಥವಾ ಪ್ರತಿನಿತ್ಯ ಸಂಗ್ರಹಿಸಿ ಚಿಕ್ಕ ಗುಡ್ದದೆತ್ತರಕ್ಕೆ ಬೆಳೆದ ಪತ್ರಿಕೆಯ ರಾಶಿಯನ್ನೋ ನೋಡಿದಾಗ ಮತ್ತೆ ೧ ಗಂಟೆಯ ಕಾಲ ಹರಣ ಮಾಡುವ ಮನಸ್ಸಾಗುತ್ತದೆ. ಇದನ್ನೆಲ್ಲಾ ಸರಿಯಾಗಿ ಜೋಡಿಸಿ ಹತ್ತಿರದಲ್ಲಿರುವ ಗುಜರಿಗೆ ಕೊಟ್ಟರೆ ಬರುವ ಹಣ ಸುಮಾರು ೩೦ ರಿಂದ ೪೦ ರೂಪಾಯಿ. ಅದರಿಂದ ಬರುವ ಹಣ ಅಲ್ಪವಾದರೂ ಪ್ಲಾಸ್ಟಿಕ್ ಮರು ಬಳಕೆಗೆ ನನ್ನದೂ ಒಂದು ಕೊಡುಗೆಯಿರಲಿ ಎಂಬ ಒಂದು ಆಸೆ!

ಇನ್ನು ಮುಂದಿನ ಕೆಲಸ ಫಿನೈಲ್, ನೀರನ್ನು ಬಳಸಿ ನೆಲ ಒರೆಸುವುದು. ಗುಡಿಸಲು ಬಾರದ ಧೂಳಿನ ಚಿಕ್ಕ ಕಣಗಳು ಇದರಿಂದ ತೊಲಗುತ್ತದೆ. ಆದರೆ ಅಡುಗೆ ಮನೆಗೆ ಹೋದಾಗ ಮಾತ್ರ ಇತರ ಬಗೆಯ ಕೊಳೆ ಕಾಣಿಸಬಹುದು. ಕಳೆದ ಒಂದು ವಾರದ ಸಾಧನೆಯೋ ಎಂಬಂತೆ ಒಲೆ, ಮಿಕ್ಸರ್ಗಳಲ್ಲಿ ಹಿಡಿದ ಅಡುಗೆಯ ಮಾದರಿಗಳೆಲ್ಲವೂ ಇಲ್ಲಿ ದೊರಕುತ್ತದೆ.

ಇಷ್ಟೆಲ್ಲಾ ಮುಗಿಯಬೇಕಾದರೆ ಗಂಟೆ ೧೨ ಹೊಡೆದು ಹೊಟ್ಟೆ ಮತ್ತೆ ತಾಳ ಹಾಕಲು ಆರಂಭಿಸಿರುತ್ತದೆ. ಕೊಳೆಯಾದ ಮೈಯನ್ನು ನೀರಿಗೊಡ್ಡಿ ಸ್ನಾನ ಮುಗಿಸಿಕೊಂಡು ಬಂದರೆ ಮತ್ತೆ ಅಡುಗೆಯ ಚಿಂತೆ ಹುಟ್ಟುತ್ತದೆ. ತಿಂಡಿ ಮಾಡುವಾಗಿನ ಸಮಸ್ಯೆಗಳು ಇಲ್ಲಿಯೂ ಕಾಣಿಸುತ್ತದೆ. ಅಂತೂ ಯಾವುದೋ ಅಡುಗೆ, ಅನ್ನ ಮಾಡಿ ಹೊಟ್ಟೆಯನ್ನು ತೃಪ್ತಿ ಪಡಿಸಿದ ನಂತರ, ಮೆದುಳಿನ ಹಸಿವನ್ನು ತೃಪ್ತಿ ಪಡಿಸುವ ಚಪಲದಿಂದ ಚಾಪೆಯನ್ನು ಹಾಸಿ ಒಂದು ಪುಸ್ತಕ ಹಿಡಿದುಕೊಳ್ಳುವುದರೊಳಗಾಗಿ ಮಂದವಾದ ನಿದ್ರೆ ಓದುವ ಹಸಿವನ್ನು ಮೂಲೆಗೊತ್ತುತ್ತದೆ.

ಎದ್ದ ನಂತರ ಮತ್ತೆ ಚಹವನ್ನು ಕುಡಿದು, ಓದಬೇಕೆಂದಿದ್ದ ಪುಸ್ತಕ ಹಿಡಿದರೋ, ಸ್ನೇಹಿತರ ಭೇಟಿಗೋ ಹೋದರೆ ಅಲ್ಲಿಗೆ ದಿನ ಮುಗಿದಿರುತ್ತದೆ. ಅಪರಾನ್ಹವೇ ಮಾಡಿದ ಭೋಜನ ಉಂಡು ಮಲಗಿದರೆ, ವಾರಾಂತ್ಯದ ಎರಡನೇ ದಿನ ಮತ್ತೆ ಇದರ ಪುನರಾವರ್ತನೆ. ಇಲ್ಲಿ ಮನೆ ಶುಚಿಗೊಳಿಸುವ ಕೆಲಸದ ಬದಲು ಬಟ್ಟೆ ಒಗೆಯುವ, ಇಸ್ತ್ರಿ ಹಾಕುವ ಕೆಲಸ ಬಿಟ್ಟರೆ ಉಳಿದೆಲ್ಲ ಹಿಂದಿನ ದಿನದ ಪುನರಾವರ್ತನೆ.

ಇದೆಲ್ಲ ಓದಿದ ನಂತರ ಈ ಮನುಷ್ಯ ಎಂತಹ ಅರಸಿಕ ಎಂಬ ಭಾವನೆ ನಿಮಗೆ ಬರಬಹುದು. ಆದರೆ ಅದಕ್ಕೆ ನಾನು ಹೊಣೆಯಲ್ಲ! ನಾನು ವಾರಾಂತ್ಯದಲ್ಲಿ ಏನು ಮಾಡುತ್ತೀನೋ ಅದನ್ನು ಪ್ರಾಮಾಣಿಕವಾಗಿ ಬರೆದಿದ್ದೇನೆ. ಅಲ್ಲದೆ ಇದರಲ್ಲಿ ಒಮ್ಮೊಮ್ಮೆ ಕೆಲವು ಬದಲಾವಣೆ ಆಗುವುದೂ ಉಂಟು. ನಮ್ಮ ಮನೆಯ ಗ್ಯಾಸ್ ಖಾಲಿಯಾದಾಗ ಹೋಟೆಲ್ಗೂ, ಓದಲು ಏನೂ ಇಲ್ಲದಿದ್ದಾಗ ಚಲನಚಿತ್ರಕ್ಕೂ, ವಾರಾಂತ್ಯದ ಜೊತೆ ಬೇರೆ ರಜೆ ಬಂದರೆ ತಿರುಗಾಟಕ್ಕೂ ಹೋಗುವುದಿದೆ. ಆದರೆ ಇವೆಲ್ಲ ಕ್ರಮವಾಗಿ ವರ್ಷಕ್ಕೆ ೨, ೧, ೧೦ ಒಟ್ಟಿಗೆ ೧೩ ಬಾರಿ ಆಗುವುದರಿಂದ ನನಗೆ "ವಾರಾಂತ್ಯ ಹೇಗಿತ್ತು?" ಎಂಬ ಪ್ರಶ್ನೆ ಎದುರಾದಾಗಲೆಲ್ಲ ಮುಜುಗರವಾಗುತ್ತದೆ... ನಿಮಗೆ?