ವಿಕಲ ಚೇತನರಿಗೂ ಸ್ವಾಭಿಮಾನದಿಂದ ಬಾಳುವ ಅವಕಾಶ ನೀಡೋಣ
ಡಿಸೆಂಬರ್ ೩ ವಿಶ್ವ ಅಂಗವಿಕಲರ (ವಿಕಲಚೇತನ) ದಿನ. ಒಂದು ಮಾತಿದೆ, ದೇವರು ಮಾನವನ ಯಾವುದಾದರೂ ಒಂದು ಅಂಗವನ್ನು ಕಿತ್ತುಕೊಂಡರೆ ಅದರ ಬದಲು ಇನ್ನೊಂದು ಅಂಗದ ಶಕ್ತಿ ದ್ವಿಗುಣಗೊಳಿಸುತ್ತಾನೆ ಅಂತ. ಇದು ನಿಜಕ್ಕೂ ವಿಕಲಚೇತನರ ವಿಷಯದಲ್ಲಿ ಸತ್ಯ. ನಾನು ನನ್ನ ಜೀವನ ಪಯಣದಲ್ಲಿ ಪರಿಚಿತರಾಗಿರುವ ಇಬ್ಬರು ವಿಕಲ ಚೇತನರ ಬಗ್ಗೆ ತಿಳಿಸುವೆ.
ಒಮ್ಮೆ ನನಗೆ ಶ್ರೀಯುತ ಧನಂಜಯ ಅರಸೀಕೆರೆ ಎಂಬವರ ಪರಿಚಯ ಆಯಿತು. ಇವರು ಅಂಧರು. ನಾನು ಇವರನ್ನು ನನ್ನ ಪರಿಚಯದವರೊಬ್ಬರ ಮನೆಯಲ್ಲಿ ಭೇಟಿಯಾದೆ. ಆದರೆ ಅವರಿಗೆ ಕಣ್ಣು ಕಾಣುವುದಿಲ್ಲ ಎಂದು ಒಂದು ವಿಷಯ ಬಿಟ್ಟರೆ ಉಳಿದ ಎಲ್ಲಾ ವಿಷಯದಲ್ಲೂ ಅವರು ಸಬಲರು. ಮಂಗಳೂರಿನ ಪೊಳಲಿಯಲ್ಲಿ ಇವರ ವಾಸ. ಇವರನ್ನು ಒಬ್ಬರು ಸಹೃದಯಿ ಭಟ್ಟರು ತಮ್ಮ ಮನೆಯಲ್ಲಿ ವಾಸ್ತವ್ಯ ಇರಿಸಿ, ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪೊಳಲಿ ಪರಿಸರದಲ್ಲಿ ಧನಂಜಯಣ್ಣ ಎಂದರೆ ಎಲ್ಲರಿಗೂ ಗೊತ್ತು. ಯಕ್ಷಗಾನದ ಪ್ರೇಮಿಗಳಿಗಂತೂ ಇವರ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ ಇವರು ಸೊಗಸಾಗಿ ತಾಳಮದ್ದಳೆ, ಭಾಗವತಿಕೆ ಮಾಡುತ್ತಾರೆ. ಇವರೊಬ್ಬ ಯಕ್ಷ ಕಲಾ ಪ್ರೇಮಿ. ಯಕ್ಷಗಾನದ ಎಲ್ಲಾ ಪ್ರಸಂಗಗಳು ಇವರಿಗೆ ಕಲತಲಾಮಲಕ. ಸೊಗಸಾಗಿ ಜಾನಪದ ಗೀತೆಗಳನ್ನು ಹಾಡುತ್ತಾರೆ. ಅದರ ಅರ್ಥವನ್ನೂ ವಿವರಿಸುತ್ತಾರೆ. ಸಾಮಾನ್ಯ ಮೊಬೈಲ್ ಬಳಸುತ್ತಾರೆ. ಅದರಲ್ಲಿ ರೇಡಿಯೋ ಕೇಳುತ್ತಾರೆ. ಆಕಾಶವಾಣಿಯವರ ಕೋರಿಕೆ ಕಾರ್ಯಕ್ರಮಕ್ಕೆ ತಮ್ಮ ಹಾಗೂ ಪರಿಚಿತರ ಹೆಸರನ್ನು ಕಳಿಸುತ್ತಾರೆ. ಇವರ ಅದ್ಭುತ ಶಕ್ತಿ ಎಂದರೆ ಒಮ್ಮೆ ಇವರ ಜೊತೆ ಮಾತನಾಡಿ, ಪರಿಚಯ ಮಾಡಿಕೊಂಡರೆ ಇವರು ಧ್ವನಿಯನ್ನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ನಿಮ್ಮ ಕೈ ಹಿಡಿದು ಮಾತನಾಡಿ, ಮುಂದಿನ ಸಲ ನಿಮ್ಮ ಕೈ ನೀಡಿದರೆ ಇದು ನೀವೇ ಎಂದು ಹೇಳುತ್ತಾರೆ. ನಿಮಗೆ ಅವರ ನೆನಪು ಉಳಿಯುತ್ತದೋ, ಇಲ್ಲವೋ ಆದರೆ ಅವರು ನಿಮ್ಮನ್ನು ನೆನಪು ಮಾಡಿಕೊಂಡು ಆಗಾಗ ಫೋನ್ ಮಾಡುತ್ತಾರೆ. ನಿಮ್ಮ ಹೆಸರನ್ನು ಅವರಿಗೆ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ, ಬೇರೆಯವರಿಗೆ ಹೇಳಿಸಿ ಮೊಬೈಲ್ ನಲ್ಲಿ ದಾಖಲಿಸಿ ಸೇವ್ ಮಾಡಿ ಇಡುತ್ತಾರೆ. ಇದು ಇವರ ಹೆಗ್ಗಳಿಕೆ.
ಮೂರು ದಿನಗಳ ಹಿಂದೆ ನನ್ನ ಪರಿಚಿತರ ಮನೆಯಲ್ಲಿ ಮತ್ತೊಮ್ಮೆ ಅವರ ಭೇಟಿಯಾಯಿತು. ಅವರೇ ಹಲವಾರು ಸಲ ಕೊರೋನಾ ಸಮಯದಲ್ಲಿ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಬಹುತೇಕ ಅವರೇ ಕರೆ ಮಾಡುವುದು. (ಈ ಬಗ್ಗೆ ನನಗೆ ಸದಾ ನನ್ನ ಬಗ್ಗೆಯೇ ಬೇಸರವಾಗುವುದೂ ಇದೆ.) ಈ ಸಲ ಅವರನ್ನು ಭೇಟಿಯಾದಾಗ, ಅವರು ನನಗಾಗಿ ಪೊಳಲಿಯಿಂದ ಅಪ್ಪದ ಪ್ರಸಾದ ಹಾಗೂ ದೇವರ ಕುಂಕುಮವನ್ನು ನೆನಪಿನಿಂದ ತಂದಿದ್ದರು. ಅವರ ಪ್ರೀತಿಗೆ ನಾನು ಗದ್ಗದಿತನಾದೆ. ಅವರದೊಂದು ಜೋಳಿಗೆ ಇದೆ. ಅದರ ಒಳಗೆ ಕೈ ಹಾಕಿ, ಅವರೇ ಹುಡುಕಿ ಪ್ರಸಾದ ತೆಗೆದುಕೊಟ್ಟರು. ಕಣ್ಣಿರುವ ನಮಗೆ ಇಷ್ಟೊಂದು ಪ್ರೀತಿ, ಆಸಕ್ತಿ ಮತ್ತು ಬದ್ಧತೆ ಇರುವುದಿಲ್ಲ ಎಂದು ನನಗೆ ಬಹಳ ಸಲ ಅನಿಸಿದೆ.
ಅವರೊಮ್ಮೆ ಪೊಳಲಿಯಲ್ಲಿ ಕಟೀಲು ಮೇಳದ ಯಕ್ಷಗಾನ ಮಾಡಿಸಿದ್ದರು. ಆ ಸಮಯ ನನ್ನನ್ನು ಖುದ್ದು ಫೋನ್ ಮಾಡಿ ಬರಲು ಹೇಳಿದ್ದರು. ನಾನಂದು ಅಲ್ಲಿ ಹೋಗಿದ್ದೆ. ಯಕ್ಷಗಾನದ ಕಲೆಯ ಮೇಲೆ ನನಗೆ ಅಪಾರ ಗೌರವ ಇದೆ. ಆದರೆ ಯಕ್ಷಗಾನವನ್ನು ರಾತ್ರಿ ಇಡೀ ಜಾಗರಣೆ ಮಾಡಿ ನೋಡುವುದು ನನಗೆ ಕಷ್ಟ ಸಾಧ್ಯ. ಆದರೂ ಅವರ ಆಹ್ವಾನದ ಮೇರೆಗೆ ನಾನು ಪೊಳಲಿ ಹೋಗಿ ಅವರನ್ನು ಭೇಟಿಯಾದೆ. ನಾನು ‘ಧನಂಜಯಣ್ಣ, ನಮಸ್ಕಾರ’ ಎಂದು ಹೇಳಿದೊಡನೆಯೇ ನನ್ನ ಹೆಸರು ಹೇಳಿ, ಮಂಗಳೂರಿನಿಂದ ಬಂದದ್ದು ತುಂಬಾನೇ ಖುಷಿಯಾಯಿತು ಎಂದು ಹೇಳಿ ಅವರ ಜೊತೆ ಇದ್ದವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಈ ಘಟನೆಗಿಂತ ಮೊದಲು ನಾನು ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೆ. ಆದರೆ ಅವರ ಅಂತರ್ ದೃಷ್ಟಿ ಹಾಗೂ ಗ್ರಹಣ ಶಕ್ತಿ ಬಹಳ ಚೆನ್ನಾಗಿದೆ. ಅವರೇ ನನಗೆ ದಾರಿ ಹೇಳಿ (ಅಂಧರು ಯಾರು?) ಆ ಕಡೆಯಲ್ಲ, ಈ ಕಡೆ ಎಂದೆಲ್ಲಾ ನಿರ್ದೇಶನ ನೀಡಿ ಚೌಕಿ ಪೂಜೆಗೆ ಕರೆದುಕೊಂಡು ಹೋದರು. ಕಣ್ಣಿದ್ದ ನನಗೇ ನಾಚಿಕೆಯಾಗುವಂತೆ ಲವಲವಿಕೆಯಿಂದ ಸ್ಥಳಗಳ ಪರಿಚಯ ಹೇಳಿದರು. ಟೀ ಕುಡಿಯಿರಿ, ಊಟ ಮಾಡಿರಿ ಎಂದೆಲ್ಲಾ ಹೇಳುತ್ತಲೇ ಇದ್ದರು. ಇದು ನಾ ಕಂಡ ವಿಕಲಚೇತರರೋರ್ವರ ಪ್ರತಿಭಾ ಗುಣ. ಎಲ್ಲಾ ಅಂಗಗಳು ಸರಿಯಾಗಿದ್ದರೂ ನಮಗೇ ಒಮ್ಮೆ ಸಿಕ್ಕ ವ್ಯಕ್ತಿ ಮತ್ತೊಮ್ಮೆ ಸಿಕ್ಕಾಗ ಹೆಸರು ಯಾಕೆ, ಅವರ ಮುಖ ಚಹರೆಯೇ ಮರೆತು ಹೋಗಿರುತ್ತದೆ. ಧನಂಜಯರು ಯಾರ ಸಹಾಯವಿಲ್ಲದೇ ಬಸ್ ನಲ್ಲಿ ಪ್ರಯಾಣ ಮಾಡುತ್ತಾರೆ. ಜನರ ಜೊತೆ ಬೆರೆಯುತ್ತಾರೆ. ತಮಗೆ ದೃಷ್ಟಿ ದೋಷ ಇದೆಯೆಂಬುದನ್ನೂ ಮರೆಸುವಂತೆ ಚುರುಕಾಗಿದ್ದಾರೆ.
ನಾ ಕಂಡ ಮತ್ತೊರ್ವ ವಿಕಲ ಚೇತನ ವ್ಯಕ್ತಿ ಎಂದರೆ ಪುತ್ತೂರಿನ ಎಸ್ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ಮಾಲಕರಾದ ಶ್ರೀಯುತ ಕೇಶವ ಇವರು. ಇವರಿಗೂ ದೃಷ್ಟಿಯ ಸಮಸ್ಯೆ ಇದೆ. ಆದರೂ ಇವರು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ತಮ್ಮ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪರಿ ಗಮನಾರ್ಹ. ಕರ್ನಾಟಕ ರಾಜ್ಯದಾದ್ಯಂತ ಇವರ ತಯಾರಿಕೆಗಳಾದ ಮರ ಏರುವ ಏಣಿಗಳು, ಕೇರ್ಪುಗಳು, ಮನೆ ಬಳಕೆಯ ಏಣಿಗಳು, ತೋಟದಲ್ಲಿ ಬಳಸುವ ದೋಟಿಗಳು, ಕೈಗಾಡಿಗಳು, ಕತ್ತಿ ಕೊಕ್ಕೆಗಳು ಮುಂತಾದ ಹಲವಾರು ಕೃಷಿ ಸಂಬಂಧಿ ಹಾಗೂ ಗೃಹ ಬಳಕೆಯ ಉಪಕರಣಗಳನ್ನು ತಯಾರು ಮಾಡಿದ್ದಾರೆ. ಇವರ ಸಾಧನೆಯ ಬಗ್ಗೆ ವಿವರವಾಗಿ ಮುಂದೆಂದಾದರೂ ಬರೆದೇನು.
ಇಂದು ವಿಶ್ವ ಅಂಗವಿಕಲ ದಿನ. ೧೯೯೨ರಲ್ಲಿ ವಿಶ್ವ ಸಂಸ್ಥೆ ಡಿಸೆಂಬರ್ ೩ ನ್ನು ವಿಶ್ವ ಅಂಗವಿಕಲರ ದಿನ ಎಂದು ಘೋಷಿಸಿತು. ಹಲವಾರು ಮಂದಿ ಕಣ್ಣಿನಂತೆಯೇ, ಕೈ ಕಾಲು, ಶ್ರವಣ ಶಕ್ತಿ ಮೊದಲಾದುವುಗಳನ್ನೆಲ್ಲಾ ಕಳೆದುಕೊಂಡಿರುತ್ತಾರೆ. ಯಾವುದೇ ಅಂಗಕ್ಕೆ ಪರ್ಯಾಯ ಎಂಬುವುದಿಲ್ಲ. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಹೊಸ ಹೊಸ ತಾಂತ್ರಿಕ ಅವಿಷ್ಕಾರಗಳು ಬಂದಿವೆ. ಇವುಗಳನ್ನು ಬಳಸಿ ವಿಕಲ ಚೇತನರು ತಮ್ಮ ಬದುಕನ್ನು ಇನ್ನಷ್ಟು ಹಸನು ಮಾಡಿಕೊಳ್ಳ ಬಹುದಾಗಿದೆ. ವಿಕಲ ಚೇತನರಿಗೆ ಬೇಕಾಗಿರುವುದು ‘ಅಯ್ಯೋ ಪಾಪ’ ಎಂಬ ಅನುಕಂಪವಲ್ಲ, ಅವರಿಗೆ ಬೇಕು ಒಂದು ಅವಕಾಶ. ನಾವು ಅವರನ್ನು ಮುಖ್ಯವಾಹಿನಿಗೆ ಕರೆತರಬೇಕು. ಅವರಲ್ಲಿ ಕೀಳಿರಿಮೆ ಬೆಳೆಯದಂತೆ ನೋಡಿಕೊಳ್ಳಬೇಕು. ಅವರಲ್ಲಿ ಸ್ವಾಭಿಮಾನಿ ಚಿಂತನೆಯನ್ನು ಬೆಳೆಸಬೇಕು. ಸಮಾಜದಲ್ಲಿ ಎಲ್ಲಾ ವಿಭಾಗಗಳಲ್ಲಿ ಸಮಾನ ಅವಕಾಶ ದೊರೆಯಬೇಕು. ಸಮಾಜದಲ್ಲಿ ಅಂಗವಿಕಲರ ಬಗ್ಗೆ ಬೇರೂರಿರುವ ತಾತ್ಸಾರ ಮನೋಭಾವನೆಯನ್ನು ಹೋಗಲಾಡಿಸಿ ಅವರೂ ನಮ್ಮಂತೇ ಎನ್ನುವ ಭಾವನೆಯನ್ನು ನಾವೆಲ್ಲಾ ಹುಟ್ಟುಹಾಕಬೇಕಾಗಿದೆ. ಅವರು ಅಂಗವಿಕಲರಲ್ಲ, ವಿಕಲ ‘ಚೇತನರು’ ಎನ್ನುನ ಮಾತು ಸದಾ ಕಾಲ ಸತ್ಯ.
ಚಿತ್ರ ಕೃಪೆ: ಅಂತರ್ಜಾಲ ತಾಣ