ವಿಕಾಸದ ಮಜಲು

ವಿಕಾಸದ ಮಜಲು

ಕವನ

 

ಸೃಷ್ಟಿಯ ಆದಿಯ ಪೃಥ್ವಿಯ ಸ್ಥಿತಿಯಲಿ |

ಜೀವಿಯ ಉಗಮಕೆ ಜಲಧಿಯೆ ಮೂಲ |

ಜೀವಿಯ ವಿಕಾಸದ ವಿಧಿ ವಿಧಾನದಿ |

ಧರಣಿಯ ಗರ್ಭದ ಅಗ್ನಿಯ ಸಿಡಿತದಿ |

ಜಲಧಿಯ ಮೇಲೆಯೆ ಉರಿಯುವ ನೆಲವು  

ಆರಿದ ನೆಲದಲಿ ಮನುವಿನ ಆಳ್ವಿಕೆ   || 1 ||

 

ಜಲಪ್ರಳಯದಿ ಭೂಮಿಯ ಮುಳುಗಡೆ |

ಮನುವಿನ ಮೀನಲಿ ಜೀವಿಯ ಉಳಿಕೆ |

ಜೀವ ವಿಕಾಸದ ಭೂಮಿಯ ಪಾತ್ರಕೆ |

ಜಲಧಿಯ ಕಡೆಯಲು ಆಮೆಯ ಕೊಡುಗೆ |

ಮುಗಿಯದು ಇನ್ನೂ ಮೇದಿನಿ ವೇದನೆ    |

ದಾನವ ಹರಣದ ದಾರುಣ ಧರಣಿಗೆ |

ದೈತ್ಯನ ಮೌಢ್ಯದಿ ಜಲಧಿಯ ಕಬಳಿಕೆ |

ವರಾಹ ಕೊಂಬಲಿ ತಂದನು ಮೇಲಕೆ    || 2 ||

 

 

 

ಜೀವ ವಿಕಾಸದ ಮಜಲಿನ ಧರೆಯಲಿ |

ಧರೆಯೊಳು ಉರಿಯುವ ಸೂರ್ಯನ ಬಿಸಿಲು |

ಬಿಸಿಲಿನ ಬೇಗೆಗೆ ನೀರಿನ ಆವಿಯು |

ಆವಿಯ ತೇವದಿ  ತೇಲುವ ಮೋಡವು |

ಮೋಡದಿ ಸಂಚಿತ ಮಿಂಚಿನ ಮಳೆಯು |

ಮಳೆಯಲಿ ನೆನೆಯಲು ಇಳೆಯಲಿ ಛಳಿಯು |

ಛಳಿಯನು ತಣಿಸಲು ಬಿಸಿಲಿನ ಝಳವು |

ಇಳೆಯಲಿ ಕಾಲದ ಋತುಗಳ ಪಾಳಿಯು |

ಮಣ್ಣಿನ ನೆಲದಲು ಜೀವಿಯ ನಲಿವು |

ತಿರೆಯಲಿ ತರತರ ಜೀವದ ಕಳೆಯು      || 3 ||