ವಿಕಾಸವಾದ…

ವಿಕಾಸವಾದ…

ಕವನ

ನೀರು ಕಂಡಲ್ಲಿ ನಿಂತು 

ಮಣ್ಣೊಂದಿಗೆ ಬೆರೆತು

ಗುಹೆಪೊಟರೆಗಳೇ ಮನೆಯೆಂದವನು

ನಿರಂಕುಶ ಅಲೆಮಾರಿ 

ಮನುಕುಲದ ನಿರಹಂಕಾರಿ 

 

ಗೆಡ್ಡೆಗೆಣಸುಗಳೇ ಆಹಾರ

ಬದುಕನರಸುತ ವಿಹಾರ

ಶಿಲೆಗೆ ಶಿಲೆಯುಜ್ಜಿ ಕಿಡಿಯಚ್ಚಿದವನು

ಖಗಮೃಗಗಳ ಸಹಜೀವಿ

ಬೇಟೆಯಲ್ಲಿವ ಮೇಧಾವಿ

 

ವೃಕ್ಷದ ದಿಮ್ಮಿಯಿಂದಲೇ ಗಾಲಿ

ಹುಟ್ಟಿತು ಧಾನ್ಯ ಮೆಲ್ಲುವ ಖಯ್ಯಾಲಿ

ನೆಲೆ ನಿಲ್ಲುವ ಮೋಹಕ್ಕೆ ಮೆಲ್ಲಗಿಳಿದನು

ಎಲೆತೊಗಟೆಗಳೀಗ ಉಡುಗೆ

ಬಿದಿರಿನ ಬೊಂಬುಗಳಗಳು ವಸತಿಗೆ 

 

ಧುಮುಕಿದನು ಸಂಸಾರ ಸಾಗರಕೆ

ಸಹಬಾಳ್ವೆ ಸಹಕಾರಗಳ ಸಂಗಡಕೆ

ನವಜೀವನದತ್ತ ಇಟ್ಟು ದಾಪುಗಾಲನು

ಅಂದಿಗಷ್ಟೇ ಅಂದು ಬೇಕಿತ್ತು

ನಾಳೆಯ ಅವಶ್ಯಕತೆ ಸತ್ತಿತ್ತು

 

ಬೆಂದ ಅನ್ನ ಭಾವವನ್ನೇ ಬದಲಿಸಲು

ಬೆಚ್ಚನೆಯ ತೊಡುಗೆ ಬಿಸಿಯೇರಿಸಲು

ತಳ ಬಿಗಿಯಾದಂತೆ ಪರಿವರ್ತಿತನಿವನು

ಕಲಿರಾಯನ ಆಟ ಸಾಗಿತು ಎಗ್ಗಿಲ್ಲದೆ

ನಾನು ನನ್ನದು ನುಸುಳಿತು ಸದ್ದಿಲ್ಲದೆ

 

ಕಾಲನ ಗಡಿಯಾರಕ್ಕೆ ಮುಂಚಲನೆ ಸಲೀಸು

ಅದಕ್ಕೆಲ್ಲಿದೆ ಹಿಂದಿರುಗುವ ಖಯಾಸು

ತಪ್ಪೋ ಒಪ್ಪೋ ಅಪ್ಪಿದ್ದೇವೆ ವಿಕಾಸವನು

ಕತ್ತಲಿಂದ ಬೆಳಕಿನೆಡೆಗೆಂಬುದೇ ತಿರುಳು

ಎಚ್ಚರಗೊಳ್ಳದಿರೆ ಇದಾದೀತು ಉರುಳು …

-ಸತ್ಯರಂಗಸುತ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್