ವಿಚಾರಧಾರೆ
ಪ್ರಕೃತಿ ನಿಯಮಕ್ಕೆ ತಡೆ ಬೇಲಿ
ವಿಕೃತಿಯ ಮೆರೆಯುವುದು ತರವಲ್ಲ
ಸಮಸ್ಯೆಗಳ ಸಾಗರದ ಉದ್ಭವ
ಉಪ್ಪು ನೀರಿನಂತೆ ಆಗಬಾರದಲ್ಲ
ವರವೋ ಶಾಪವೋ ಅರಿಯದಾದೆವು
ಪರಿಹಾರ ನಮ್ಮಲ್ಲಿ ಇದೆಯಲ್ಲ
ಸುಮ್ಮನೆ ಕೈಕಟ್ಟಿ ಕುಳಿತರೆ
ಬೆಕ್ಕಿಗೆ ಗಂಟೆ ಕಟ್ಟುವರಾರು ಇಲ್ಲಿ
ಹುಟ್ಟಿಸಿದ ದೇವ ಹುಲ್ಲು ಮೇಯಿಸಬಹುದು
ಕಷ್ಟ ಪಡದೆ ಫಲ ನೀಡುವನೇನು
ಕೈಕಾಲುಗಳನ್ನು ಚೆನ್ನಾಗಿ ದಣಿಸು
ಹಣೆಯಲಿ ನಿತ್ಯವೂ ಬೆವರಿಳಿಸು
ಭಗವಂತನೇನು ಬಾಯಿಗೆ ನೀಡಬೇಕೇನು
ನಮ್ಮ ತಲೆ ಅಡಿಗೆ ನಮ್ಮದೇ ಕೈಗಳಲ್ಲವೇನು
ಮಾನವ ಸಂಪನ್ಮೂಲವ ಬಳಸಿದರೆ
ವರವೇ ಆಗಬಹುದು ಕೊಡುಗೆಗಳು
ಬದುಕುವ ದಾರಿ ನೇರವಾಗಿರಲಿ
ವಕ್ರತೆಯ ಬಿಂಬಕೆ ಧಿಕ್ಕಾರವಿರಲಿ
ಅಪರಾಧ ಕೃತ್ಯಗಳಿಗೆ ತೆರೆಯಿತು ರಹದಾರಿ
ಕಳ್ಳ ಖದೀಮರಿಗೆ ಕುಳಿತು ತಿನ್ನುವಾಸೆ
ತ್ವರಿತ ಪ್ರಸಿದ್ಧಿ ಎಂಬ ಮೆಟ್ಟಲೇರಲು
ವಾಮ ಮಾರ್ಗವ ಹಿಡಿದು ಉರುಳಿದರು
ಏರುಗತಿಯ ಜನಸಂಖ್ಯೆ ಇಂದು
ಅಭಿವೃದ್ಧಿಪಥದಿ ಮುಳ್ಳಾಯಿತೆಂದು
ಬೊಬ್ಬಿಟ್ಟು ಬೊಟ್ಟು ಮಾಡಿದರಿಂದು
ಬೆಂಕಿ ಹಿಡಿದ ಮೇಲೆ ಬಾವಿ ತೋಡಿದಂತೆ
ಬಡತನ ಅನಕ್ಷರತೆ ಅಸಮಾನತೆಯ
ಬೇಲಿಯನು ಕಿತ್ತು ಎಸೆಯೋಣ
ಮಕ್ಕಳಿಗೆ ಉತ್ತಮ ಸಂಸ್ಕಾರದರಿವು
ಮೂಡಿಸಿ ನೆಲ ಜಲ ಬುವಿಯ ರಕ್ಷಿಸೋಣ
-ರತ್ನಾ ಕೆ.ಭಟ್, ತಲಂಜೇರಿ
(ವಿಶ್ವ ಜನಸಂಖ್ಯಾ ದಿನಕ್ಕೆ)