ವಿಚಿತ್ರ ನಂಬುಗೆಯನ್ನು ಪ್ರತಿಪಾದಿಸುವ 'ಕಿಂಗ್ ಓಕ್' ಮರ
ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೆ ಏನಾದರೊಂದು ಕಾರಣಗಳು ಇದ್ದೇ ಇರುತ್ತವೆ. ಕೆಲವು ಕಾರಣಗಳು ನಮಗೆ ಗೊತ್ತಾಗುತ್ತವೆ, ಕೆಲವು ತಿಳಿಯುವುದಿಲ್ಲ. ಹಲವು ಘಟನೆಗಳೂ ಕೆಲವೊಮ್ಮೆ ಪವಾಡದಂತೆ ನಡೆದು ಬಿಡುತ್ತವೆ. ನಮ್ಮೆದುರೇ ನಡೆದ ಘಟನೆಯಾದರೂ ಅದು ಹೇಗೆ ನಡೆದಿರಬಹುದು ಎಂಬುವುದು ತಿಳಿದೇ ಇರುವುದಿಲ್ಲ. ಆಗಲೇ ನಾವು ಭೂತ ಪ್ರೇತಗಳನ್ನು ನಂಬತೊಡಗುವುದು. ವೈಜ್ಞಾನಿಕವಾಗಿಯೂ ಕೆಲವೊಂದು ಘಟನೆಗಳಿಗೆ ತಾತ್ವಿಕ ಅಂತ್ಯವನ್ನು ಕಂಡುಕೊಳ್ಳಲಾಗುವುದಿಲ್ಲ. ಹೀಗೆ ಪ್ರಪಂಚದಲ್ಲಿ ಹಲವಾರು ಘಟನೆಗಳು ಹಾಗೂ ಸಂಗತಿಗಳಿವೆ.
ಐರ್ಲ್ಯಾಂಡ್ ನಲ್ಲಿ 'ಬರಿ' ಎಂಬ ಹೆಸರಿನ ವಂಶಸ್ಥರಿಗೆ ಸೇರಿದ ಒಂದು ಓಕ್ ಮರವಿದೆ. ಈ ಮರದ ಯಾವುದೇ ಕೊಂಬೆಗಳು ತುಂಡರಿಸಲ್ಪಟ್ಟರೆ ಆ ವಂಶಕ್ಕೆ ಸೇರಿದ ಯಾರಾದರೂ ಒಬ್ಬ ಸದಸ್ಯರು ಸಾವನ್ನಪ್ಪುತ್ತಾರೆ. ಇದು ಕಾಕತಾಳೀಯವೋ ಅಥವಾ ಓಕ್ ಮರದ ಪ್ರಭಾವವೋ ಇನ್ನೂ ತಿಳಿದು ಬಂದಿಲ್ಲ. ಈ ಮರ ಇರುವುದು ಐರ್ಲ್ಯಾಂಡ್ ದೇಶದ 'ಚಾರ್ಲ್ ವಿಲ್ಲೆ ಕ್ಯಾಸಲ್' ಎಂಬ ಖಾಸಗಿ ಎಸ್ಟೇಟ್ ನಲ್ಲಿ.
೧೮೦೧ರಲ್ಲಿ ಇಂಗ್ಲೆಂಡಿನ ಎರಡನೇ ಅರ್ಲ್ ಆದ ವಿಲಿಯಂ ಬರಿ ಎಂಬಾತನಿಗೆ ಹೇರಳವಾದ ಹಣ ದೊರಕುತ್ತದೆ. ಕೆಲವರು ಈ ಹಣವು ಆತನಿಗೆ ಲಂಚದ ರೂಪದಲ್ಲಿ ದೊರಕಿರಬಹುದು ಎಂದು ಸಂಶಯ ಪಡುತ್ತಾರೆ. ಆದರೆ ವಿಲಿಯಂ ಮಾತ್ರ ಈ ಹಣ ತನಗೆ ಪರಿಹಾರದ ರೂಪದಲ್ಲಿ ದೊರೆತದ್ದು ಎಂದು ಹೇಳಿಕೊಂಡು ತಿರುಗಾಡುತ್ತಿರುತ್ತಾನೆ. ಈ ಹಣವನ್ನು ಆತ ಅತ್ಯಂತ ಆಕರ್ಷಕವಾದ ಬಂಗಲೆ (ಕೋಟೆ) ಮನೆಯನ್ನು ಕಟ್ಟಲು ವ್ಯಯಿಸುತ್ತಾನೆ. ಆತ ಚೆಸ್ಟರ್ ವಿಲ್ಲೆ ಎಂಬ ಪ್ರದೇಶದಲ್ಲಿ ಹೇರಳವಾಗಿ ಓಕ್ ಮರಗಳಿದ್ದ ಒಂದು ಪುಟ್ಟ ಕಾಡಿನ ಮಧ್ಯೆ ಈ ಭವ್ಯ ಕೋಟೆಯನ್ನು ಕಟ್ಟುತ್ತಾನೆ. ಆತ ಬಂಗಲೆಯನ್ನು ಕಟ್ಟುವ ಮೊದಲೇ ಆ ಜಾಗದಲ್ಲಿ ಈ 'ಓಕ್' ಮರ ಇತ್ತು. ಈ ಮರವನ್ನು ಯಾರು ನೆಟ್ಟರು ಅಥವಾ ತನ್ನಿಂದ ತಾನೇ ಬೀಜದ ಮುಖಾಂತರ ಸಸಿ ಹುಟ್ಟಿಕೊಂಡಿತೇ? ತಿಳಿದವರು ಯಾರೂ ಇಲ್ಲ.
ಮರ ಬೃಹತ್ ಆಕಾರವಾಗಿದ್ದು, ಬಹಳ ಸುಂದರವಾಗಿದೆ. ಈ ಮರಕ್ಕೆ ಕನಿಷ್ಟ ೪೦೦ ಗರಿಷ್ಟ ೮೦೦ ವರ್ಷಗಳಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಹಿಂದಿನ ಭೂತದ ಚಲನ ಚಿತ್ರಗಳಲ್ಲಿ ಕಂಡು ಬರುವ ಭಯಾನಕ ಮರದಂತೆ ಇದು ಗೋಚರಿಸುತ್ತಿತ್ತು. ವಿಲಿಯಂ ಬರಿಯ ಕಾವಲುಗಾರರು ಈ ಮರದ ಮೇಲೆ ರಕ್ಷಣಾ ಗೋಪುರವನ್ನು ನಿರ್ಮಾಣ ಮಾಡಿ ಕಾವಲು ಕಾಯುತ್ತಿದ್ದರಂತೆ.
ವಿಲಿಯಂ ಬರಿಯ ನಂತರ ಎರಡು ಶತಮಾನಗಳು ಕಳೆದ ಬಳಿಕವೂ ಮರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಸುಮಾರು ಎರಡು ಶತಮಾನಗಳ ನಿರಂತರ ಪ್ರಕೃತಿ ವಿಕೋಪ ಹಾಗೂ ಚಳಿಗಾಳಿಗಳನ್ನು ಎದುರಿಸಿಯೂ ತಲೆ ಎತ್ತಿ ನಿಂತಿದೆ. ಈ ಓಕ್ ಮರದ ವೈಜ್ಞಾನಿಕ ಹೆಸರು 'ಕ್ವೈರ್ಕಸ್ ರೋಬರ್’ (Quercus robur). ಲ್ಯಾಟಿನ್ ಭಾಷೆಯಲ್ಲಿ ರೋಬರ್ ಎಂದರೆ ಗಡಸು ಎಂದರ್ಥ. ಈ ಓಕ್ ಮರದ ತಳದ ಸುತ್ತಳತೆ ಸುಮಾರು ೨೬-೨೭ ಅಡಿಗಳಿವೆ. ಐರ್ಲ್ಯಾಂಡ್ ನಲ್ಲಿರುವ ಓಕ್ ಮರಗಳ ಪೈಕಿ ಈ ಮರ ಅತ್ಯಂತ ಹಳೆಯದ್ದೆಂದು ಗುರುತಿಸಲಾಗಿದೆ.
ತನ್ನ ಕಬಂಧ ಬಾಹುಗಳನ್ನು ಚಾಚಿ ನಿಂತಿರುವ ಈ ಮರ ನೋಡಲು ಬಹಳ ಸುಂದರವೂ, ಆಕರ್ಷಣೀಯವೂ ಆಗಿದೆ. ವಿಶಾಲವಾಗಿ ಚಾಚಿರುವ ರೆಂಬೆಗಳ ಸುತ್ತಳತೆಯು ಸುಮಾರು ೩೦ ಗಜಗಳಷ್ಟು ಪ್ರದೇಶವನ್ನು ಆವರಿಸಿದೆ. ಈ ಮರದ ಕೊಂಬೆಯೊಂದು ಮುರಿದು ಬಿದ್ದಲ್ಲಿ ಈ ಕುಟುಂಬದ ಸದಸ್ಯರೊಬ್ಬರ ನಿಧನವಾಗುವುದು ಹಲವಾರು ಸಮಯದಿಂದ ಕಾಕತಾಳೀಯ ರೀತಿಯಲ್ಲಿ ನಡೆದು ಬಂದಿದೆ. ಈ ಕಾರಣಕ್ಕೆ ಹೆದರಿ ಆ ಕುಟುಂಬದ ಸದಸ್ಯರೆಲ್ಲಾ ಸೇರಿ ಆ ಮರದ ರೆಂಬೆಗಳನ್ನು ಮುರಿದು ಹೋಗದ ರೀತಿಯಲ್ಲಿ ಆಧಾರ ಸ್ಥಂಭಗಳನ್ನು ನೀಡಿ ರಕ್ಷಣೆ ಮಾಡುತ್ತಿದ್ದಾರೆ. ಆದರೂ ೧೯೬೩ರಲ್ಲಿ ಭಾರೀ ಸಿಡಿಲು ಬಡಿದು ಮರದ ಮುಖ್ಯ ಕಾಂಡವು ಇಬ್ಭಾಗವಾಗಿ ಸೀಳಿ ಹೋಯಿತು. ಅಷ್ಟಾದರೂ ಮರ ಬದುಕಿತು. ಆದರೆ ಬರಿ ಕುಟುಂಬದ ಹಿರಿಯ ಸದಸ್ಯರಾಗಿದ್ದ ಹೋವರ್ಡ್ ಬರಿ ನಿಧನ ಹೊಂದಿದರು. ಅದಕ್ಕೇ ಆಗುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಇದೆಲ್ಲಾ ಕಾಕತಾಳೀಯವೆಂಬಂತೆ ಕಂಡು ಬಂದರೂ ಮರದ ರೆಂಬೆ ಮುರಿದಾಗಲೆಲ್ಲಾ ಕುಟುಂಬದ ಸದಸ್ಯರೊಬ್ಬರ ನಿಧನವಾಗುವುದು ಶತಮಾನಗಳಿಂದಲೂ ನಡೆಯುತ್ತಾ ಬಂದಿದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ