ವಿದಾಯ‌(ನೀಳ್ಗತೆ)‍‍ 6 ‍‍‍ (ಕೊನೆಯ‌ ಭಾಗ‌)

ವಿದಾಯ‌(ನೀಳ್ಗತೆ)‍‍ 6 ‍‍‍ (ಕೊನೆಯ‌ ಭಾಗ‌)

                                                                                                              * * * * *
     ಕೆಮ್ಮುತ್ತಲೇ ಒಳಗೆ ಬಂದ ಹನುಮಂತಯ್ಯನನ್ನು ಕಂಡು ಅಮರ್ ಮತ್ತು ಅನನ್ಯ ಡ್ಯಾಡಿ ಬಂದ್ರು ಎಂದು ಮಂದಹಾಸ ಬೀರಿದರು. ಉಳಿದ ಹುಡುಗರೆಲ್ಲಾ ಅಂಕಲ್ ಬಂದ್ರು ಎಂದು ಸಂಭ್ರಮದಿಂದ ಒಟ್ಟಿಗೆ ಕೂಗಿದರು. ಸೋಫಾದ ಮೇಲೆ ಕುಳಿತಿದ್ದ ಸುಮಿತ್ರಾಳಿಗೆ ತನ್ನ ಗಂಡ ಕೆಮ್ಮುತಿದ್ದುದನ್ನು ಕಂಡು ಈ ಹಾಳು ಕೆಮ್ಮು ಯಾವಾಗಲೂ ಇದ್ದದ್ದೇ.. ಸರಿಯಾಗಿ ಚೆಕ್‍ಅಪ್ ಮಾಡಿಸಿಕೊಂಡು ವಾಸಿ ಮಾಡಿಕೊಳ್ಳಿ ಎಂದು ಒಂದು ಸಾವಿರ ಸರ್ತಿ ಹೇಳಿಯಾಯಿತು.. ಯಾವುದಕ್ಕೂ ಬಿಡುವೇ ಇಲ್ಲ.. ಬರೀ ಕೆಲಸ ಅಷ್ಟೇ.. ಎಂದು ಚಿಂತಿಸಿ ಅಸಮಾಧಾನವಾಯಿತು. ಬಸ್ಸಿನಲ್ಲಿ ಬಂದಿದ್ದರಿಂದ ಹನುಮಂತಯ್ಯನ ಬಟ್ಟೆಗಳು ಸುಕ್ಕಾಗಿದ್ದವು. ಅದನ್ನು ಕಂಡು ‘ಅಕ್ಕಂದಿರು, ಬಾವಂದಿರೆಲ್ಲಾ ಇದ್ದಾರೆ.. ಮನೆಗೆ ಹೋಗಿ ಬಟ್ಟೆಗಳನ್ನಾದರೂ ಬದಲಾಯಿಸಿಕೊಂಡು ಬಂದಿಲ್ಲವಲ್ಲಾ.. ನನ್ನ ಕರ್ಮ’ ಎಂದುಕೊಂಡು ಮತ್ತಷ್ಟು ಅಸಹನೆ ಹುಟ್ಟಿಕೊಂಡಿತು. ಒಂದು ವಾರದ ಹಿಂದೆ ಯುಗಾದಿ ಹಬ್ಬಕ್ಕೆ ನೀನು ಮತ್ತು ಮಕ್ಕಳು ಹೊಸ ಬಟ್ಟೆ ತೆಗೆದುಕೊಳ್ಳಿ ಎಂದು ತನ್ನ ಹೆಂಡತಿಯ ಕೈಯ್ಯಲ್ಲಿ ಹಣ ನೀಡಿದವನನ್ನು ಕಂಡು ಸುಮಿತ್ರಾ ‘ನೀವು ತೆಗೆದುಕೊಳ್ಳುವುದಿಲ್ಲವಾ..’ ಎಂದು ಕೇಳಿದ್ದಳು. ಮೊದಲು ನೀವು ತೆಗೆದುಕೊಳ್ಳಿ, ನಾನು ಆಮೇಲೆ ಇನ್ನೊಂದು ದಿನ ತೆಗೆದುಕೊಳ್ತೀನಿ ಎಂದವನು ಹೊಸಬಟ್ಟೆಗಳನ್ನು ತೆಗೆದುಕೊಂಡಿರಲೇ ಇಲ್ಲ.
   ಅಡುಗೆ ಮನೆಯಲ್ಲಿದ್ದ ಮಹಾಲಕ್ಷ್ಮಮ್ಮನವರಿಗೆ ತನ್ನ ಕೊನೆಯ ಅಳಿಯ ಬಂದ ಸುಳಿವು ಸಿಕ್ಕೊಡನೆ ಸದ್ಯ ಬಂದರಲ್ಲಾ.. ಎಂದು ಸಮಾಧಾನವಾಗಿ ತಕ್ಷಣವೇ ಹಾಲಿಗೆ ಬಂದು ‘ಈಗ ಬಂದಿರಾ.. ಬನ್ನಿ..’ ಎಂದು ತಮ್ಮ ಎಂದಿನ ಕಳಕಳಿಯ ದನಿಯಲ್ಲೇ ಮಾತನಾಡಿಸಿದರು.  ಸುಮಿತ್ರಾ ‘ಮೇಲೆ ಎಲ್ಲಾ ಬಾವಂದಿರು ಇದಾರೆ.. ಹೋಗಿ ಮಾತನಾಡಿಸಿಕೊಂಡು ಬನ್ನಿ..’ ಎಂದು ದಪ್ಪಮೋರೆ ಹಾಕಿಕೊಂಡೇ ಆಜ್ಞಾಪಿಸಿ ಅಕ್ಕಂದಿರು ಎಲ್ಲರೂ ಒಟ್ಟಿಗೆ ಕುಳಿತಿದ್ದ ಮೂರನೆಯ ಅಕ್ಕನ ರೂಮಿನ ಒಳಗೆ ಹೋದಳು. ಹನುಮಂತಯ್ಯ ಅನ್ಯಮನಸ್ಕನಾಗಿ ಮಹಡಿಯ ಮೆಟ್ಟಿಲೇರಿದ. ತನಗಿಂತ ಹಿರಿಯರಾಗಿದ್ದ ತನ್ನ ಷಡ್ಡುಕಂದಿರನ್ನೆಲ್ಲಾ ಅವನು ‘ಸಾರ್..’ ಎಂದೇ ಕರೆಯುತಿದ್ದ. ಅದೇ ರೀತಿಯಾಗಿ ಮಹಡಿಯಲ್ಲಿದ್ದ ಹಾಲಿನಲ್ಲಿ ಇಸ್ಪೀಟು ಆಡುತಿದ್ದ ಎಲ್ಲರನ್ನೂ ಕಂಡು ‘ಎಲ್ಲರಿಗೂ ನಮಸ್ಕಾರ ಸಾರ್..’ ಎಂದವನು ಸಣ್ಣದಾಗಿ ಕೆಮ್ಮಿದ. ಹಿರಿಯ ಷಡ್ಡುಕ ಎಂಜನಿಯರಿಂಗ್ ಕಾಲೇಜಿನ ಪ್ರೊಫೆಸರರು ಅವನನ್ನು ಕಂಡು ‘ಬನ್ರೀ ಹನುಂತಯ್ಯನೋರೆ.. ಯಾಕೆ ಕೆಮ್ಮತ್ತಾ ಇದೀರಲ್ಲಾ.. ಹುಷಾರಿಲ್ಲವಾ..’ ಎಂದು ಕಾಳಜಿ ತೋರಿದರಲ್ಲದೆ ಕುಳಿತುಕೊಳ್ಳಿ ಎಂದು ಪಕ್ಕದಲ್ಲಿದ್ದ ಕುರ್ಚಿಯ ಕಡೆ ಕೈ ತೋರಿದರು. ಅವರೊಬ್ಬರು ಮಾತ್ರ ಯಾವಾಗ ಸಿಕ್ಕಿದರೂ ಹನುಮಂತಯ್ಯನನ್ನು ತುಂಬು ವಿಶ್ವಾಸದಿಂದ ಮಾತನಾಡಿಸುತಿದ್ದರು. ಎರಡನೆಯ ಮತ್ತು ನಾಲ್ಕನೆಯ ಷಡ್ಡುಕಂದಿರು ‘ಚೆನ್ನಾಗಿದೀರೇನ್ರೀ..’ ಎಂದು ಕೈಯ್ಯಲ್ಲಿ ಹಿಡಿದಿದ್ದ ಇಸ್ಪೀಟು ಎಲೆಗಳ ಮೇಲೆ ಕಣ್ಣಾಡಿಸಿಕೊಂಡೇ ಕೇಳಿದರು. ‘ಹೂಂ ಸಾರ್..’ ಎಂದು ಹನುಮಂತಯ್ಯ ಮುಗುಳ್ನಗುತ್ತಲೇ ಉತ್ತರಿಸಿದ. ಮದ್ಯಪಾನದಿಂದ ತುಸು ಚಿತ್ತಾಗಿದ್ದ ಮೂರನೆಯ ಷಡ್ಡುಕ ಅಬಕಾರಿ ಅಧೀಕ್ಷಕರು ಆಟವನ್ನು ಡ್ರಾಪ್ ಮಾಡಿ ಸಿಗರೇಟು ಸೇದಲೆಂದು ಮಹಡಿಯ ಬಾಲ್ಕನಿಗೆ ಹೊರಟವರು ‘ಏನ್ರೀ ಹನುಮಂತಯ್ಯಾ.. ಹಬ್ಬದ ದಿನಾನೂ ರಜಾ ಕೊಡದೇ ಇರೋ ಯಾವ ಸೀಮೆ ಕಂಪೆನೀರಿ ನಿಮ್ಮದು.. ಲೇಬರ್ ಡಿಪಾರ್ಟಮೆಂಟಿಗೆ ಒಂದು ಕಂಪ್ಲೇಂಟು ಕೊಡ್ರೀ..’ ಎಂದು ಉಡಾಫೆ ಮಾತನಾಡಿ ಹೊರಗೆ ಹೋದರು. ಅದಕ್ಕೆ ಹನುಮಂತಯ್ಯನ ಮಂದಹಾಸವೇ ಉತ್ತರವಾಯಿತು.
   ಅಡುಗೆ ಮನೆಯಲ್ಲಿ ಒಬ್ಬಟ್ಟು ಬೇಯಿಸುತಿದ್ದ ಮಹಾಲಕ್ಷ್ಮಮ್ಮನವರಿಗೆ ಬಸವಳಿದಿದ್ದ ತನ್ನ ಅಳಿಯನ ಮುಖವನ್ನು ಜ್ಞಾಪಿಸಿಕೊಂಡು ಮಧ್ಯಾಹ್ನ ಊಟ ಮಾಡಿದ್ದಾರೋ ಇಲ್ಲವೋ ಎಂದು ಯೋಚಿಸಿ ಹೊಟ್ಟೆ ಉರಿದುಹೋಯಿತು. ತಕ್ಷಣವೇ ಹಾಲಿಗೆ ಬಂದು ತಮ್ಮ ಹಿರಿಯ ಮೊಮ್ಮಗಳು ಸುಸ್ಮಿತಾಳಿಗೆ ‘ಸೂಸು.. ಎಲ್ಲರನ್ನೂ ಊಟಕ್ಕೆ ಕರೆಯಮ್ಮಾ.. ಹುಡುಗರನ್ನೆಲ್ಲಾ ಹಾಲಿನಲ್ಲಿಯೇ ಕುಳ್ಳಿರಿಸು..’ ಎಂದು ಹೇಳಿ ಊಟಕ್ಕೆ ಅಣಿ ಮಾಡಲೆಂದು ಮತ್ತೆ ಅಡುಗೆ ಮನೆಗೆ ತೆರಳಿದರು. ಸುಸ್ಮಿತಾ ಎದ್ದು ತನ್ನ ತಂದೆ, ಚಿಕ್ಕಪ್ಪಂದಿರನ್ನೆಲ್ಲಾ ಊಟ ರೆಡಿ.. ಎಲ್ಲರೂ ಬರಬೇಕಂತೆ..  ಎಂದು ಕೂಗಿ ಕರೆದು ಮಕ್ಕಳನ್ನೆಲ್ಲಾ ಹಾಲಿನಲ್ಲಿ ಸಾಲಾಗಿ ಕುಳ್ಳಿರಿಸಿದಳು. ಅವಳ ದನಿ ಕೇಳಿ ರೂಮಿನಲ್ಲಿದ್ದ ಅವಳ ಚಿಕ್ಕಮ್ಮಂದಿರೂ ಹೊರಗೆ ಬಂದು ಅಡುಗೆ ಮನೆಯ ಕಡೆ ಹೋದರು.
   ತನ್ನ ಷಡ್ಡುಕಂದಿರೆಲ್ಲಾ ಡೈನಿಂಗ್ ಹಾಲಿನಲ್ಲಿದ್ದ ಡೈನಿಂಗ್ ಟೇಬಲಿನ ಕುರ್ಚಿಗಳನ್ನೆಳೆದುಕೊಂಡು ಊಟಕ್ಕೆ ಕುಳಿತರೂ ಹನುಮಂತಯ್ಯ ಮಾತ್ರ ಮಕ್ಕಳೊಂದಿಗೆ ಹಾಲಿನಲ್ಲಿಯೇ ಕೆಳಗೆ ಕುಳಿತುಕೊಂಡಿದ್ದನ್ನು ಕಂಡು ಸುಮಿತ್ರಾಳಿಗೆ ಒಳಗೊಳಗೆ ಸಿಟ್ಟು ಬರತೊಡಗಿತು. ಆದರೂ ಅದನ್ನು ತೋರಿಸಿಕೊಳ್ಳದೇ ಹಾಲಿನಲ್ಲಿ ಕುಳಿತಿದ್ದ ಮಕ್ಕಳ ಜೊತೆಗೆ ಅವನಿಗೂ ಊಟಕ್ಕೆ ಬಡಿಸತೊಡಗಿದಳು. ಮಹಾಲಕ್ಷ್ಮಮ್ಮನವರು ಮಾತ್ರ ಆಗಾಗ ಹಾಲಿಗೆ ಬಂದು ಮಕ್ಕಳು ಮತ್ತು ತನ್ನ ಕಿರಿಯ ಅಳಿಯನನ್ನು ತುಂಬುಕಾಳಜಿಯಿಂದ ಊಟದ ಬಗ್ಗೆ ವಿಚಾರಿಸಿಕೊಳ್ಳತೊಡಗಿದರು. 
   ಊಟ ಮುಗಿಸಿದ ಹನುಮಂತಯ್ಯ ‘ಬರ್ತೀನಿ.. ಸ್ವಲ್ಪ ರೆಸ್ಟು ತಗೋಬೇಕು.. ಯಾಕೋ ಸುಸ್ತಾಗ್ತಿದೆ..’ ಎಂದು ಸುಮಿತ್ರಾಳಿಗೆ ಹೇಳಿದ. ಸುಮಿತ್ರಾಳಿಗೆ ಇಲ್ಲೇ ರೂಮಿನಲ್ಲಿ ಮಲಗಿಕೊಳ್ಳಿ ಎಂದು ಹೇಳುವ ಮನಸ್ಸಾದರೂ ಅವನು ಕೆಮ್ಮುತಿದ್ದುದನ್ನು ಕಂಡು ಮನೆಗೆ ಹೋಗಿ ಮಾತ್ರೆ ನುಂಗಿ ಮಲಗಿಕೊಳ್ಳಲಿ ಎನಿಸಿತು.  ಅವಳಿಗೆ ತನ್ನ ಬಾವಂದಿರೊಂದಿಗೆ ಒಂದು ಆಟ ಇಸ್ಪೀಟು ಆಡಲೇ ಬೇಕಾಗಿತ್ತು. ತನ್ನ ಬಳಿ ಹಣವಿದ್ದರೂ ‘ಒಂದು ಸಾವಿರ ರೂಪಾಯಿ ಕೊಡಿ ಇಲ್ಲಿ.. ನಾನು ಒಂದು ಆಟ ರಮ್ಮಿ ಆಡಬೇಕು..’ ಎಂದು ತನ್ನ ಗಂಡನನ್ನು ಕೇಳಿದಳು. ಮನಸ್ಸಿಲ್ಲದ ಮನಸ್ಸಿನಿಂದಲೇ ಜೇಬಿನಲ್ಲಿದ್ದ ಪರ್ಸ್ ತೆಗೆದು ತಾನು ತಿಂಗಳ ವೈಯುಕ್ತಿಕ ಖರ್ಚಿಗಾಗಿ ಇಟ್ಟುಕೊಂಡಿದ್ದ ಎರಡು ಸಾವಿರ ರೂಪಾಯಿಗಳಲ್ಲಿ ಒಂದು ಸಾವಿರ ರೂಪಾಯಿ ತೆಗೆದುಕೊಟ್ಟು ಅವನು ಷಡ್ಡುಕಂದಿರಿಗೆ, ಅತ್ತೆ, ನಾದಿನಿಯರಿಗೆ ‘ಬರ್ತೀನಿ..’ ಎಂದು ಸೌಜನ್ಯದ ನುಡಿ ಹೇಳಿ ತನ್ನ ಮನೆಯ ಕಡೆ ಹೊರಟುಹೋದ.
   ಎಲ್ಲರ ಊಟವಾದ ಮೇಲೆ ಸುಸ್ಮಿತಾ ಹಾಲಿನಲ್ಲಿ ಮಕ್ಕಳಿಗೆಲ್ಲಾ ಮಲಗಲು ವ್ಯವಸ್ಥೆ ಮಾಡಿ ತಾನು ಸೋಫಾದ ಮೇಲೆ ಮಲಗಿಕೊಂಡು ಟೀವಿಯಲ್ಲಿ ಬರುತಿದ್ದ ಇಂಗ್ಲೀಷು ಸಿನೆಮಾವೊಂದನ್ನು ನೋಡತೊಡಗಿದಳು. ಮಹಾಲಕ್ಷಮ್ಮನವರು ತಮ್ಮ ರೂಮಿನಲ್ಲಿ ಹಿರಿಯ ಮಗಳು ಪ್ರಭಾ, ಎರಡನೆಯ ಮಗಳು ಕುಸುಮಾ, ಮೂರನೆಯ ಮಗಳು ಪರಿಮಳಾರ ಜೊತೆ ಕುಳಿತು ಎಲೆ ಅಡಿಕೆ ಹಾಕಿಕೊಂಡು ತಮ್ಮ ಹೆಣ್ಣುಮಕ್ಕಳ ಸಾಂಸಾರಿಕ ಕಷ್ಟಸುಖಗಳನ್ನು ವಿಚಾರಿಸಿಕೊಂಡು, ಬಂಧು-ಬಾಂಧವರ ವಿಷಯಗಳನ್ನು ಸಾವಕಾಶವಾಗಿ ಮಾತನಾಡುತ್ತಾ ಕುಳಿತಿದ್ದರು. 
   ಸುಮಿತ್ರಾ ತನ್ನ ನಾಲ್ಕನೆಯ ಅಕ್ಕ ಶುಭಾಳೊಂದಿಗೆ ಮಹಡಿಯಲ್ಲಿದ್ದ  ತನ್ನ ಬಾವಂದಿರನ್ನು ಸೇರಿಕೊಂಡು ರಮ್ಮಿ ಆಟವನ್ನು ಆಡತೊಡಗಿದಳು. ಅದು ಈ ಯುಗಾದಿ ಹಬ್ಬದ ಕೊನೆಯ ಆಟವೆಂದೂ, ಹಣದ ಮೊತ್ತ ತಲಾ ಒಂದು ಸಾವಿರ ರೂಪಾಯಿಗಳೆಂಬುದು ಮೊದಲೇ ನಿರ್ಧಾರವಾಗಿತ್ತು. ಹೇಗಾದರೂ ಮಾಡಿ ಆಟವನ್ನು ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಆಟವನ್ನು ಪ್ರಾರಂಭಿಸಿ ಅತೀವ ಎಚ್ಚರಿಕೆ ಮತ್ತು ಜಾಣ್ಮೆಗಳಿಂದ ಇಸ್ಪೀಟಿನ ಎಲೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಬಿಡುವುದು ಮಾಡುತಿದ್ದಳು. ಆಟದಲ್ಲಿ ಏನೂ ಶಕ್ತಿಯಲ್ಲವೆಂದೆನಿಸಿದಾಗ ಡ್ರಾಪ್ ಮಾಡಿ ಮುಂದಿನ ಆಟಕ್ಕಾಗಿ ಸಹನೆಯಿಂದ ಕಾಯುತ್ತಾ ಕುಳಿತಿರುತಿದ್ದಳು. ಅಕ್ಕ ಶುಭಾ ಐದು ಆಟಗಳು ಮುಗಿದಾಗ ಆಟದಿಂದ ನಿರ್ಗಮಿಸಿ ನಿದ್ರೆ ಬರುತ್ತಿದೆಯೆಂದು ಹೇಳಿ ತನ್ನ ರೂಮಿಗೆ ತೆರಳಿದಳು. ಕೊನೆಯ ಆಟದವರೆಗೂ ತನ್ನ ಬಾವಂದಿರಿಗಿಂತ ಕಡಿಮೆ ಕೌಂಟನ್ನು ಹೊಂದಿದ್ದ ಸುಮಿತ್ರಾಳಿಗೆ ತನ್ನ ಗೆಲುವು ಖಚಿತವೆಂದುಕೊಂಡು ಇನ್ನಿಲ್ಲದ ಸಂತಸವಾಗತೊಡಗಿತು. ಕೊನೆಯ ಆಟದಲ್ಲಿ ಒಂದು ಸುತ್ತು ಮುಗಿಯುವುದರೊಳಗಾಗಿ ಹಿರಿಯ ಬಾವ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರರು ಆಟವನ್ನು ಮುಗಿಸಿದರು.  ಉಳಿದ ಎಲ್ಲಾ ಬಾವಂದಿರೊಂದಿಗೆ ಸುಮಿತ್ರಾ ಕೂಡ ಬುಕ್ ಆಗಿ ಸೋತು ಹೋದಳು. ಇನ್ನಿಲ್ಲದ ನಿರಾಶಾ ಭಾವದಿಂದ ಅವಳ ಮುಖ ಸಪ್ಪಗಾಯಿತು. ಪೂರ್ತಿ ಹಣವನ್ನು ಗೆದ್ದ ಹಿರಿಯ ಬಾವ ‘ಈ ಆಟದ ಪೂರ್ತಿ ಹಣ ನನ್ನ ಚಿಕ್ಕ ನಾದಿನಿಗೆ ಯುಗಾದಿ ಹಬ್ಬದ ಗಿಫ್ಟ್..’ ಎಂದು ಹೇಳಿ ನಕ್ಕು ಹಣವನ್ನು ಕೊಡಲು ಹೋದಾಗ ಸುಮಿತ್ರಾಳ ಮನಸ್ಸಿಗೆ ಇನ್ನಷ್ಟು ಘಾಸಿಯಾಯಿತು. ‘ಬೇಡಾ ಬಾವಾ..’ ಎಂದು ಎದ್ದವಳೇ ತಿರುಗಿಯೂ ನೋಡದೆ ಮೆಟ್ಟಿಳಿದು ತನ್ನ ರೂಮು ಸೇರಿ ಬಾಗಿಲು ಮುಚ್ಚಿ ಹಾಸಿಗೆಯಲ್ಲಿ ಮಲಗಿದಳು. ನಾನೊಬ್ಬ ನತದೃಷ್ಟೆ.. ನನಗೆ ಯಾವುದರಲ್ಲೂ ಅದೃಷ್ಟವಿಲ್ಲವೆಂದುಕೊಂಡು ಪರಿತಪಿಸಿ ಅವಳಿಗೆ ಅತೀವ ದುಃಖವಾಯಿತು. ಕಣ್ಣುಗಳಿಂದ ಅನೈಚ್ಛಿಕವಾಗಿ ಕಣ್ಣೀರು ಹರಿಯತೊಡಗಿ ಮಲಗಿದ ದಿಂಬು ಒದ್ದೆಯಾಯಿತು.
                                      * * * * *
   ಯುಗಾದಿ ಹಬ್ಬ ಮುಗಿದು ಸರಿಯಾಗಿ ಮೂರು ತಿಂಗಳುಗಳಾಗಿತ್ತು. ತಾತ್ಕಾಲಿಕವಾಗಿ ಶಮನಗೊಂಡಿದ್ದ ಹನುಮಂತಯ್ಯನ ಕೆಮ್ಮಿನ ಸಮಸ್ಯೆ ಮತ್ತೆ ಪ್ರಾರಂಭವಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಕೋಲಾರದಲ್ಲಿ ನಡೆಯುತಿದ್ದ ರಸ್ತೆನಿರ್ಮಾಣದ ಕೆಲಸ ಮುಗಿಯುತ್ತದೆ.. ಕಂಪೆನಿಯ ಮಾಲೀಕರು ಬೆಂಗಳೂರಿನಲ್ಲಿನ ಮುಖ್ಯ ಕಛೇರಿಗೆ ವರ್ಗ ಮಾಡುವುದಾಗಿ ಭರವಸೆ ನೀಡಿದ್ದಾರೆ.. ಅದಾದ ಮೇಲೆ ನನ್ನ ಆರೋಗ್ಯದ ಬಗೆಗೆ ಕಾಳಜಿ ವಹಿಸಿ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಿ ದಿನ ಕಳೆಯತೊಡಗಿದ.
   ಕೋಲಾರದ ರಸ್ತೆಯ ಕೆಲಸ ಮುಗಿದು ಅದರ ಪರಿವೀಕ್ಷಣೆಗಾಗಿ ಮೂಲ ಕಂಪೆನಿಯ ಅಧಿಕಾರಿಗಳು ಬಂದು ದೃಢೀಕರಣ ಪತ್ರ ನೀಡಿದ ದಿನ ಕಂಪೆನಿಯ ಮಾಲೀಕರು ಹನುಮಂತಯ್ಯನನ್ನು ನಮ್ಮ ಕಂಪೆನಿಯ ನಿಷ್ಠಾವಂತ, ಪ್ರಾಮಾಣಿಕ ಮತ್ತು ದಕ್ಷ ಎಂಜಿನಿಯರ್ ಎಂದು ಹೊಗಳಿದರಲ್ಲದೆ ಕಂಪೆನಿಯ ಮುಖ್ಯ ಕಛೇರಿಗೆ ವರ್ಗ ಮಾಡಿದ ಆದೇಶವನ್ನೂ ನೀಡಿದರು. ಮುಖ್ಯ ಕಛೇರಿಯಲ್ಲಿ ಪ್ಲಾನಿಂಗ್ ವಿಭಾಗದ ಎಂಜಿನಿಯರಾಗಿ ಕೆಲಸ ಮಾಡಲಿದ್ದ ಹನುಮಂತಯ್ಯನ ಸಂಬಳವನ್ನೂ ಮೆಲ್ದರ್ಜೆಗೆ ಏರಿಸಲಾಗಿತ್ತು. ಅವನ ಒಟ್ಟು ಸಂಬಳ ನಲವತ್ತು ಸಾವಿರ ರೂಪಾಯಿಗಳಾಗಲಿದ್ದವು.  ಅದೇ ಸಂತಸದಲ್ಲಿ ಮನೆಗೆ ಬಂದ ಹನುಮಂತಯ್ಯನಿಗೆ ಇನ್ನಿಲ್ಲದ ದೈಹಿಕ ಆಯಾಸ ಕಾಣಿಸಿಕೊಂಡಿತು. ಆದರೂ ಅದನ್ನು ತನ್ನ ಹೆಂಡತಿ ಮಕ್ಕಳೊಂದಿಗೆ ತೋರಿಸಿಕೊಳ್ಳದೆ ಎಂದಿನಂತೆ ಊಟ ಮಾಡಿ ಮಲಗಿಕೊಂಡ.
   ಪಕ್ಕದಲ್ಲಿ ಮಲಗಿದ ಗಂಡನ ದೇಹ ಬೆಂಕಿಯಂತೆ ಸುಡುತಿದ್ದುದು ಸುಮಿತ್ರಾಳ ಗಮನಕ್ಕೆ ಬಂದು ಗಾಬರಿಯಾಗಿ ಅವನನ್ನು ಎಬ್ಬಿಸಿದಳು. ತೀವ್ರ ಜ್ವರದಿಂದ ಬಳಲುತಿದ್ದ ಹನುಮಂತಯ್ಯ ಬೆಳಿಗ್ಗೆ ಡಾಕ್ಟರ ಹತ್ತಿರ ಹೋಗೋಣ ಎಂದು ತನ್ನ ಹೆಂಡತಿಗೆ ಧೈರ್ಯ ಹೇಳಿ ದೇಹದ ಉಷ್ಣಾಂಶ ಕಡಿಮೆಯಾಗುವ ಮಾತ್ರೆ ನುಂಗಿ ಮಲಗಿದ. 
   ಬೆಳಿಗ್ಗೆ ಅವನಿಗೆ ಹಾಸಿಗೆಯಿಂದ ಏಳುವಷ್ಟು ತ್ರಾಣವಿರಲಿಲ್ಲ. ಎಡಬಿಡದ ಕೆಮ್ಮು, ಎದೆ ನೋವು, ಜ್ವರದಿಂದ ಅವನು ಬಳಲುತಿದ್ದ. ಅಂದು ಅವರ ಕುಟುಂಬ ವೈದ್ಯರು ಊರಿನಲ್ಲಿರಲಿಲ್ಲ. ಸುಮಿತ್ರಾ ಹನುಮಂತಯ್ಯನನ್ನು ಅಲ್ಲೇ ಹತ್ತಿರವಿದ್ದ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋದಳು. ವೈದ್ಯರು  ಹೇಳಿದ ಔಷಧಿ ಸೇವನೆ ಮಾಡಿ ಮೂರು ದಿನಗಳಾದರೂ ಕೆಲವು ಗಂಟೆಗಳ ಕಾಲ ಬಿಡುತಿದ್ದ ಜ್ವರ ಮತ್ತೆ ಮರುಕಳಿಸತೊಡಗಿತು. ವಿಷಯ ತಿಳಿದ ಮಹಾಲಕ್ಷ್ಮಮ್ಮನವರು ತನ್ನ ಮಗಳ ಮನೆಗೆ ಧಾವಿಸಿ ತಮ್ಮೊಳಗಿನ ಆತಂಕವನ್ನು ಮರೆಮಾಚಿಕೊಂಡು ‘ಏನೂ ಆಗುವುದಿಲ್ಲ.. ಸುಮ್ಮನಿರು..’ ಎಂದು ಮಗಳಿಗೆ ಧೈರ್ಯ ನೀಡಿದರು. ನಾಲ್ಕನೆಯ ದಿನ ಹನುಮಂತಯ್ಯನಿಗೆ ತೀವ್ರ ಉಸಿರಾಟದ ತೊಂದರೆ ಪ್ರಾರಂಭವಾಯಿತು. ತೀವ್ರ ಆತಂಕಕ್ಕೆ ಒಳಗಾದ ಸುಮಿತ್ರಾ ಮತ್ತು ಮಹಾಲಕ್ಷಮ್ಮನವರು ಮತ್ತೆ ಅವನನ್ನು ವೈದ್ಯರ ಬಳಿ ಕರೆದುಕೊಂಡು ಹೋದರು. ಹನುಮಂತಯ್ಯನ ಆರೋಗ್ಯದ ಇತಿಹಾಸವನ್ನು ತಿಳಿಯದ ವೈದ್ಯರು ಈ ಬಾರಿ ಅವನನ್ನು ಪರೀಕ್ಷಿಸಿ, ಆಗ ತಾನೇ ನಗರದಲ್ಲಿ ಹರಡುತಿದ್ದ ಎಚ್1ಎನ್1 ರೋಗದ ಲಕ್ಷಣಗಳಿರಬಹುದೆಂದು ಭಾವಿಸಿ ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಹೋಗಲು ತಿಳಿಸಿದರು. 
   ಎಚ್1ಎನ್1 ರೋಗದ ತಪಾಸಣೆ ನಡೆಸಿದ ಬೌರಿಂಗ್ ಆಸ್ಪತ್ರೆಯ ವೈದ್ಯರು  ಆ ರೋಗಕ್ಕೆ ಸಂಬಂಧಪಟ್ಟ ಟೆಸ್ಟುಗಳೆಲ್ಲಾ ನೆಗೆಟಿವ್ ಎಂಬುದನ್ನು ದೃಢಪಡಿಸಿಕೊಂಡು ಹನುಮಂತಯ್ಯನ ಎದೆಯ ಎಕ್ಸರೇ ತೆಗೆದು ಪರೀಕ್ಷಿಸಿದರು. ಶ್ವಾಸಕೋಶದ ಸುತ್ತ ಎದೆಯಲ್ಲಿ ನೀರು ತುಂಬಿಕೊಂಡಿದೆಯೆಂದು ತಿಳಿಸಿ ನೀರನ್ನು ಹೊರತೆಗೆದು ಉಸಿರಾಟ ತಾತ್ಕಾಲಿಕವಾಗಿ ಸರಾಗವಾಗಲು ಬೇಕಾದಷ್ಟು ಅವನನ್ನು ಉಪಚರಿಸಿದರು. ಆ ನಂತರ ಹೆಚ್ಚಿನ ಪರೀಕ್ಷೆ ಮತ್ತು ಚಿಕೆತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು. ಇದೆಲ್ಲಾ ಆಗುವಷ್ಟರಲ್ಲಿ ಮೂರು ದಿನಗಳು ಕಳೆದಿದ್ದವು. ಕಿದ್ವಾಯಿ ಆಸ್ಪತ್ರೆ ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದ ಆಸ್ಪತ್ರೆ ಎಂಬುದನ್ನು ತಿಳಿದಿದ್ದ ಸುಮಿತ್ರಾ ಮತ್ತು ಮಹಾಲಕ್ಷಮ್ಮನವರಿಗೆ ತೀವ್ರ ಆಘಾತವಾಯಿತು. ಆದರೂ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡು ಹನುಮಂತಯ್ಯನನ್ನು ಅಂದೇ ಕಿದ್ವಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ತುಸು ಚೇತರಿಸಿಕೊಂಡಿದ್ದ ಹನುಮಂತಯ್ಯ ನಾಳೆ ಹೋಗೋಣ ಎಂದು ಅಲವತ್ತುಕೊಂಡ. ಇದರಿಂದಾಗಿ ಅವನನ್ನು ಮನೆಗೆ ಕರೆದುಕೊಂಡು ಬಂದರು. 
   ಮರುದಿನ ಬೆಳಕು ಮೂಡುವ ಹೊತ್ತಿಗೆ ಹನುಮಂತಯ್ಯನಿಗೆ ತೀವ್ರ ಉಸಿರಾಟದ ತೊಂದರೆ ಮತ್ತೆ ಪ್ರಾರಂಭವಾಯಿತು. ತಕ್ಷಣವೇ ಸುಮಿತ್ರಾ ಮತ್ತು ಮಹಾಲಕ್ಷಮ್ಮನವರು ಅವನನ್ನು ಕಿದ್ವಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಅವನನ್ನು ಪರೀಕ್ಷಿಸಿದ ತಜ್ಞ ವೈದ್ಯರು ಏನನ್ನೂ ಹೇಳದೆ ಮುಖದಲ್ಲಿ ನಿರ್ಲಿಪ್ತ ಭಾವವನ್ನು ತುಂಬಿಕೊಂಡಿದ್ದನ್ನು ಕಂಡು ಸುಮಿತ್ರಾಳಿಗೆ ಹೆದರಿಕೆಯಾಗತೊಡಗಿತು. ‘ಈಗ ಅಡ್ಮಿಟ್ ಮಾಡಿ.. ಮೊದಲು ಉಸಿರಾಟದ ತೊಂದರೆಗೆ ಟ್ರೀಟುಮೆಂಟು ನೀಡೋಣ..’ ಎಂದರು. ಆಸ್ಪತ್ರೆಯ ವಿಶೇóಷ ವಾರ್ಡಿನಲ್ಲಿ ಹನುಮಂತಯ್ಯನನ್ನು ಅಡ್ಮಿಟ್ ಮಾಡಲಾಯಿತು. ವಿಷಯ ತಿಳಿದ ಸುಮಿತ್ರಾಳ ಅಕ್ಕಂದಿರು, ಬಾವಂದಿರು ಮತ್ತು ಹನುಮಂತಯ್ಯನ ಕಂಪೆನಿಯ ಕೆಲವು ಕಾರ್ಮಿಕ ವರ್ಗದವರು ಬಂದು ಅವನನ್ನು ಮಾತನಾಡಿಸಿಕೊಂಡು ಹೋದರು. ಕಂಪೆನಿಯ ಮಾಲೀಕರು ಮಾತ್ರ ಬರಲೇ ಇಲ್ಲ.
   ವೈದ್ಯರು ಎಷ್ಟೇ ಉಪಚರಿಸಿದರೂ ಹನುಮಂತಯ್ಯನ ಉಸಿರಾಟದ ತೊಂದರೆ ನಿವಾರಣೆಯಾಗಲಿಲ್ಲ. ಕೆಲವು ಗಂಟೆಗಳ ಕಾಲ ಉಸಿರಾಟ ಸರಾಗವಾದರೂ ಮತ್ತೆ ಉಸಿರಾಡಲು ಅವನು ಬಹಳ ಕಷ್ಟಪಡುತಿದ್ದ. ಇದನ್ನು ಕಣ್ಣಾರೆ ಕಂಡ ಸುಮಿತ್ರಾ ಮತ್ತು ಮಹಾಲಕ್ಷಮ್ಮನವರಿಗೆ ತೀವ್ರ ದುಃಖÀವಾಗತೊಡಗಿತು. ‘ಅಮ್ಮಾ ಅವರಿಗೆ ಏನಾಗಿಹೋಯಿತಮ್ಮಾ..’ ಎಂದು ಕಣ್ಣೀರಿಡುತಿದ್ದ ಮಗಳಿಗೆ ಮಹಾಲಕ್ಷಮ್ಮನವರೇ ‘ಅವರು ದೇವರಂತಹ ಮನುಷ್ಯ.. ಯಾರಿಗೂ ಕೆಟ್ಟದು ಬಗೆದವರಲ್ಲಾ.. ಏನೂ ಆಗೋದಿಲ್ಲಾ.. ಸುಮ್ಮನಿರು ಅಳಬೇಡ..’ ಎಂದು ಧೈರ್ಯ ತುಂಬಿ ‘ಏನೇ ಆಗಿದ್ದರೂ ವಾಸಿಯಾಗುವಂತದು ಆಗಿದ್ದರೆ ಸಾಕು ಭಗವಂತಾ..’ ಎಂದು ಮನದಲ್ಲಿಯೇ ದೇವರನ್ನು ಪ್ರಾರ್ಥಿಸಿಕೊಳ್ಳುತಿದ್ದರು. 
   ಒಂದು ವಾರ ಕಳೆದ ಮೇಲೆ ಹನುಮಂತಯ್ಯನ ಶ್ವಾಸಕೋಶದ ಬಯೋಪ್ಸಿಯ ವರದಿ ವೈದ್ಯರಿಗೆ ತಲುಪಿತು. ಅವರು ಸುಮಿತ್ರಾಳೊಬ್ಬಳನ್ನೇ ಕರೆದು ಹನುಮಂತಯ್ಯನಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದನ್ನು ದೃಢಪಡಿಸಿದರಲ್ಲದೆ ವಾಸಿಯಾಗುವ ಹಂತವನ್ನು ಮೀರಿದೆಯೆಂದು ಕೈಚೆಲ್ಲಿದರು. ವೈದ್ಯರ ಮಾತುಗಳನ್ನು ಕೇಳಿದ ಸುಮಿತ್ರಾ ಕಂಗಾಲಾಗಿ ಹೋದಳು. ‘ಡಾಕ್ಟ್ರೆ.. ಅವರಿಗೆ ಯಾವುದೇ ದುರಭ್ಯಾಸಗಳು ಇರಲಿಲ್ಲಾ ಡಾಕ್ಟ್ರೇ.. ಅವರಿಗೆ ಯಾಕೆ ಬಂತು ಈ ಕಾಯಿಲೆ..’ ಎಂದು ಗೋಳಿಡುತ್ತಾ ಕುಳಿತಲ್ಲಿಯೇ ಕುಸಿದಳು. 
   ‘ನೋಡಿ ಅಮ್ಮಾ.. ಗಣಿ ಕೆಲಸ ಮಾಡುವುದು, ಕಲ್ಲು ಒಡೆಯುವುದು, ರಸ್ತೆ ಮತ್ತು ಕಟ್ಟಡ ನಿರ್ಮಾಣ, ಇಂತಹ ವೃತ್ತಿಗಳಲ್ಲಿ ನಿರತರಾದ ಕಾರ್ಮಿಕರು ದೇಹರಕ್ಷಣೆಗಾಗಿ ಸೂಕ್ತ ಉಸಿರಾಟದ ಸಾಧನಗಳನ್ನು ಉಪಯೋಗಿಸದೇ  ಸುಮಾರು ಹತ್ತರಿಂದ ಇಪ್ಪತ್ತು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದರೆ ಅಂತಹವರಲ್ಲಿ ಕೆಲವರಿಗೆ ಯಾವುದೇ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳದೆ ಈ ಕಾಯಿಲೆ ಬರುವ ಸಾಧ್ಯತೆಯಿದೆ..’ ಎಂದು ಹೇಳಿದುದು ಸುಮಿತ್ರಾಳ ಕಿವಿಗಳಿಗೆ ಬೀಳುತಿದ್ದಂತೆಯೇ ಅವಳು ಕುಳಿತಿದ್ದ ಕುರ್ಚಿ ಗರಗರನೆ ತಿರುಗುತ್ತಿರುವಂತೆ ಭಾಸವಾಯಿತು. ಅಲ್ಲಿಂದ ಎದ್ದು ಬಂದವಳೇ ತನ್ನ ತಾಯಿಯನ್ನು ತಬ್ಬಿಕೊಂಡು ಇನ್ನಿಲ್ಲದಂತೆ ರೋದಿಸತೊಡಗಿದಳು.
   ಒಳಗೆ ರೂಮಿನಲ್ಲಿ ಮಲಗಿದ್ದ ಹನುಮಂತಯ್ಯನ ಸ್ಥಿತಿ ಚಿಂತಾಜನಕವಾಗಿತ್ತು. ಅವನು ಉಸಿರಾಡಲು ತೀವ್ರವಾಗಿ ಹೆಣಗಾಡುತಿದ್ದುದನ್ನು ನೋಡಲಾಗದೇ ಸುಮಿತ್ರಾ ‘ಅಮ್ಮಾ.. ಬೇರೆ ಆಸ್ಪತ್ರೆಗಾದ್ರೂ ಕರೆದುಕೊಂಡು ಹೋಗಿ ವೆಂಟಿಲೇಟರ್ ಆದರೂ ಹಾಕಿಸಮ್ಮಾ..’ ಎಂದು ಕೂಗಿಕೊಂಡು ಗೋಳಿಟ್ಟಳು. ಅದನ್ನು ಕೇಳಿಸಿಕೊಂಡ ಹನುಮಂತಯ್ಯ ಬೇಡಾ.. ಬೇಡಾ ಎಂದು ಕೈಯ್ಯನ್ನು ಅಲುಗಿಸುತ್ತಾ ದಿಂಬಿನ ಕೆಳಗಿದ್ದ ಪತ್ರವೊಂದನ್ನು ಸುಮಿತ್ರಾಳಿಗೆ ನೀಡಿದ. ಅಷ್ಟರಲ್ಲಿ ಸುಮಿತ್ರಾಳ ಕೂಗನ್ನು ಕೇಳಿ ಅಲ್ಲಿಗೆ ಬಂದ ಕಿರಿಯ ವೈದ್ಯರೊಬ್ಬರು ಸುಮಿತ್ರಾ ಮತ್ತು ಮಹಾಲಕ್ಷ್ಮಮ್ಮನವರನ್ನು ರೂಮಿನಿಂದ ಹೊರಗೆ ಕಳುಹಿಸಿ ಹನುಮಂತಯ್ಯನನ್ನು ಉಪಚರಿಸತೊಡಗಿದರು.
   ರೂಮಿನ ಹೊರಗಿದ್ದ ಬೆಂಚಿನ ಮೇಲೆ ಕುಳಿತ ಸುಮಿತ್ರಾ ಹನುಮಂತಯ್ಯ ನೀಡಿದ ಪತ್ರವನ್ನು ಬಿಚ್ಚಿದಳು. ಕಣ್ಣೀರಿನಿಂದ ತುಂಬಿದ್ದ ಅವಳ ಕಣ್ಣುಗಳಿಗೆ ಅವನ ಹಸ್ತಾಕ್ಷರಗಳು ಮಸುಕಾಗಿ ಕಾಣತೊಡಗಿದವು.
   ‘ಪ್ರೀತಿಯ ಸುಮೀ..
   ಬೌರಿಂಗ್ ಆಸ್ಪತ್ರೆಯ ವೈದ್ಯರು ನನ್ನನ್ನು ಪರೀಕ್ಷಿಸುವಾಗ ಇದು ಕೊನೆಯ ಹಂತದ ಶ್ವಾಸಕೋಶದ ಕ್ಯಾನ್ಸರ್ ಇರಬಹುದು ಎಂದು ತಮ್ಮ ಸಹೋದ್ಯೋಗಿಯೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡಿಕೊಳ್ಳುವಾಗ ಕೇಳಿಸಿಕೊಂಡ ನನಗೆ ನನ್ನ ಕೊನೆಯ ದಿನಗಳು ಹತ್ತಿರವಾಗಿವೆ ಎಂದು ದೃಢವಾಯಿತು. ನೀನು ಇಷ್ಟು ದಿನಗಳ ಕಾಲ ನಮ್ಮ ಮಕ್ಕಳೊಂದಿಗೆ ನನ್ನನ್ನೂ ಮಗುವಿನಂತೆ ನೋಡಿಕೊಂಡೆ. ಆದರೆ ನಾನು ನನ್ನ ಕೆಲಸದಲ್ಲಿಯೇ ಮುಳುಗಿಹೋಗಿ ನಿನಗೆ ಜೀವನದಲ್ಲಿ ಯಾವ ಸುಖ, ಸಂತೋಷಗಳನ್ನೂ ನೀಡಲಿಲ್ಲವೆಂಬ ಚಿಂತೆ ನನ್ನನ್ನು ಕಾಡುತ್ತಿದೆ. ನನ್ನ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಎರಡು ಲಕ್ಷ ಹಣವಿದೆ. ನನ್ನ  ಕಂಪೆನಿಯ ಪಿ. ಎಫ್ ಖಾತೆಯಲ್ಲಿ ಹತ್ತು ಲಕ್ಷ ರೂಪಾಯಿಗಳಿವೆ. ನಮ್ಮ ಮನೆಯ ಸಾಲದ ಮೇಲೆ ವಿಮೆಯಿರುವುದರಿಂದ ನೀನು ಉಳಿದಿರುವ ಸಾಲವನ್ನು ಕಟ್ಟಬೇಕಾಗಿಲ್ಲ. ಆ ಮನೆಯೂ ಈಗ ಅರವತ್ತು-ಎಪ್ಪತ್ತು ಲಕ್ಷ ರೂಪಾಯಿಗಳಿಗೆ ಮಾರಾಟವಾಗಬಹುದು. ಇದನ್ನೆಲ್ಲಾ ಬ್ಯಾಂಕಿನಲ್ಲಿಟ್ಟು ಬರುವ ಬಡ್ಡಿಯ ಹಣದಿಂದ ಸಂಸಾರ ನಡೆಸಿಕೊಂಡು, ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕೆಂಬುದೇ ನನ್ನ ಮೊದಲ ಬಯಕೆಯಾಗಿದೆ.
   ಇನ್ನು ನೀನು ನನಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ಚಿಕ್ಕವಳು. ನಿನ್ನ ಮುಂದೆ ಇನ್ನೂ ವಿಶಾಲವಾದ ಬದುಕಿದೆ. ನೀನು ಬಹಳಷ್ಟು ಕಾಲ ಬದುಕಿ ಬಾಳಬೇಕಾಗಿದೆ. ಬದುಕಿನಲ್ಲಿ ಸಂಗಾತಿಯಿಲ್ಲದೆ ಒಂಟಿಯಾಗಿ ಪಯಣಿಸುವುದು ಬಹಳ ಕಷ್ಟದ ಕೆಲಸ. ನಮ್ಮ ಮಕ್ಕಳನ್ನೂ, ನಿನ್ನನ್ನೂ ಚೆನ್ನಾಗಿ ನೋಡಿಕೊಳ್ಳುವ ಸಂಗಾತಿ ಸಿಕ್ಕಿದರೆ ಮತ್ತೆ ಮದುವೆಯಾಗಿ ನಿನ್ನ ಬಾಳಪಯಣವನ್ನು ಮುಂದುವರೆಸಬೇಕೆಂಬುದು ನನ್ನ ಎರಡನೆಯ ಬಯಕೆಯಾಗಿದೆ.
   ಮುಂದಿನ ಜನ್ಮವೊಂದಿರುವುದು ನಿಜವಾದರೆ ಆ ಜನ್ಮದಲ್ಲಿಯೂ ನೀನೇ ನನಗೆ ಸಂಗಾತಿಯಾಗಿರಲಿ ಎಂಬುದೇ ನನ್ನ ಕೊನೆಯ ಬಯಕೆಯಾಗಿದೆ. ಇಷ್ಟು ಬೇಗ ನಿನ್ನನ್ನು ಒಂಟಿಯಾಗಿ ಬಿಟ್ಟು ನನ್ನ ಬದುಕಿಗೆ ವಿದಾಯ ಹೇಳುತ್ತಿರುವುದಕ್ಕೆ ಕ್ಷಮೆಯಿರಲಿ... ಇದು ನನ್ನ ಸ್ವಯಂಕೃತ ಅಪರಾಧವೆಂದು ನನಗೆ ಈಗ ಅರಿವಾಗಿದೆ.. ನಲವತ್ತ ಮೂರು ವರ್ಷ ಸಾಯುವ ವಯಸ್ಸೇನೂ ಅಲ್ಲ.. ಆದರೇನು ಮಾಡುವುದು.. ಈಗ ಕಾಲ ಮಿಂಚಿಹೋಗಿದೆ.. ಬದುಕು ಜಟಕಾ ಬಂಡಿ.. ವಿಧಿಯದರ ಸಾಹೇಬ.. ದಯವಿಟ್ಟು ನಗುನಗುತ್ತಲೇ ನನ್ನನ್ನು ಕಳುಹಿಸಿಕೊಡು...
   ಪತ್ರವನ್ನು ಓದಿದ ಸುಮಿತ್ರಾಳಿಗೆ ಸಂಕಟವನ್ನು ತಡೆಯಲಾಗಲಿಲ್ಲ. ‘ಅಮ್ಮಾ.. ನೀನು ಕೊಡುವ ಮನೆ, ಕೊಟ್ಟಿರುವ ಸೈಟು ಯಾವುದೂ ಬೇಡವಮ್ಮಾ.. ಹೇಗಾದರೂ ಮಾಡಿ ಅವರನ್ನು ಉಳಿಸಿಕೊಡಮ್ಮಾ.. ಅವರು ಕೆಲಸ ಮಾಡುವುದೂ ಬೇಡ.. ನನಗೆ ಗಂಡನಾಗಿ, ನನ್ನ ಮಕ್ಕಳಿಗೆ ತಂದೆಯಾಗಿದ್ದರೆ ಸಾಕು..’ ಎಂದು ಪಕ್ಕದಲ್ಲಿ ಕುಳಿತಿದ್ದ ತನ್ನ ತಾಯಿಯ ಎದಿರು ಕೈಮುಗಿದು ದುಃಖಿಸುತ್ತಾ ಬೇಡಿಕೊಂಡಳು. ಅದನ್ನು ಕಂಡ ಮಹಾಲಕ್ಷಮ್ಮನವರಿಗೆ ದುಃಖ ತಡೆಯಲಾಗದೆ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತಿದ್ದ ನೀರನ್ನು ಸೀರೆಯ ಅಂಚಿನಿಂದ ಒರೆಸಿಕೊಂಡರು. ಬೇರೆಯ ಆಸ್ಪತ್ರೆಗಾದರೂ ಶಿಫ್ಟ್ ಮಾಡಿಸಿ ಕೈಲಾದ ಪ್ರಯತ್ನ ಮಾಡೋಣ ಎಂದು ನಿರ್ಧರಿಸಿ ಬೆಂಗಳೂರಿನಲ್ಲಿಯೇ ಇದ್ದ ತಮ್ಮ ಹಿರಿಯ ಮಗಳು ಮತ್ತು ಅಳಿಯನಿಗೆ ಫೋನು ಮಾಡಲೆಂದು ಫೋನು ಕೈಗೆತ್ತಿಕೊಂಡರು.
   ಅಷ್ಟರಲ್ಲಿ  ಹನುಮಂತಯ್ಯನ ಪ್ರಾಣಪಕ್ಷಿ ಹಾರಿಹೋಗಿತ್ತು. ರೂಮಿನಿಂದ ಹೊರಗೆ ಬಂದ ವೈದ್ಯರು ಅದನ್ನು ಘೋಷಿಸಿದರು. ಸುಮಿತ್ರಾ ‘ಅಮ್ಮಾ...’ ಎಂದು ಕೂಗಿಕೊಂಡು ತಾಯಿಯನ್ನು ತಬ್ಬಿ ಕುಸಿದಳು. ಅವಳನ್ನು ಬಿಗಿಯಾಗಿ ತಬ್ಬಿಹಿಡಿದು ಕಂಬನಿ ಮಿಡಿಯುತಿದ್ದ  ಮಹಾಲಕ್ಷಮ್ಮನವರು ‘ಅಯ್ಯೋ ದೇವರೇ.. ಇದ್ದ ಒಬ್ಬ ಮಗನನ್ನೂ ಕಸಿದುಕೊಂಡೆಯಲ್ಲಪ್ಪಾ..’ ಎಂದು ಮನದಲ್ಲಿಯೇ ತೀವ್ರವಾಗಿ ಮರುಗಿದರು.   (ಮುಗಿಯಿತು)
                           *********************************