ವಿದಾಯ(ನೀಳ್ಗತೆ) 5
ಮಗ ಅಮರನಿಗೆ ಮೂರು ವರ್ಷ ತುಂಬಿ ಅವನನ್ನು ಪೂರ್ವ ಪ್ರಾಥಮಿಕ ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಅನಾವರಣಗೊಂಡವು. ತನ್ನ ಅಕ್ಕಂದಿರ ಮಕ್ಕಳೆಲ್ಲಾ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿರುವುದರಿಂದ ಅಂತಹ ಶಾಲೆಗೆ ತನ್ನ ಮಗನನ್ನು ಸೇರಿಸಬೇಕೆಂಬುದು ಸುಮಿತ್ರಾಳ ಮಹದಾಸೆಯಾಗಿತ್ತು. ಆದರೆ ಅದಕ್ಕೆ ತದ್ವಿರುದ್ಧವಾಗಿ ಸದ್ಯಕ್ಕೆ ಇಲ್ಲೇ ಎಲ್ಲಾದರೂ ಸಣ್ಣ ಶಾಲೆಗೆ ಸೇರಿಸೋಣ.. ಒಂದನೆಯ ತರಗತಿಗೆ ಸರ್ಕಾರಿ ಶಾಲೆಗೆ ಸೇರಿಸೋಣ.. ಕನ್ನಡ ಮಾಧ್ಯಮದಲ್ಲೇ ಓದಲಿ ಎಂದ ತನ್ನ ಗಂಡನ ಮಾತಿನಿಂದ ಕೆರಳಿದ ಸುಮಿತ್ರಾ ನನ್ನ ಮಗನನ್ನೂ ನಿಮ್ಮಂತೆ ಮಾಡಬೇಕು ಎಂದುಕೊಂಡಿದ್ದೀರಾ.. ಎಂದು ಕಿರುಚಾಡಿ ಮುನಿಸಿಕೊಂಡಳು. ಹನುಮಂತಯ್ಯನೂ ಸೋಲಲಿಲ್ಲ. ನನ್ನ ಬಳಿ ನೀನು ಹೇಳುವ ಶಾಲೆಗೆ ಸೇರಿಸುವಷ್ಟು ಹಣವಿಲ್ಲ ಎಂದು ಸತ್ಯವನ್ನೇ ನುಡಿದಿದ್ದ. ಅಮ್ಮನ ಬಳಿ ತೆಗೆದುಕೊಳ್ಳುತ್ತೇನೆ ಎಂದ ಹೆಂಡತಿಯ ಮಾತಿಗೆ ಅದು ನನಗೆ ಇಷ್ಟವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ. ಕೊನೆಗೆ ಮಹಾಲಕ್ಷ್ಮಮ್ಮನವರು ಮಧ್ಯ ಪ್ರವೇಶಿಸಿ ಅವರ ಮನಸ್ತಾಪವನ್ನು ಬಗೆಹರಿಸಿ ಅಮರನನ್ನು ಶಾಲೆಗೆ ಸೇರಿಸಲು ಡೊನೇಷನ್ನೆಂದು ಕೊಡಬೇಕಾಗಿದ್ದ ನಲವತ್ತು ಸಾವಿರ ರೂಪಾಯಿಗಳನ್ನು ತಂದು ‘ಇದು ಸಾಲವೆಂದು ತಿಳಿಯಿರಿ.. ನಿಮಗೆ ಸಾಧ್ಯವಾದಾಗ ವಾಪಾಸು ಕೊಡಿ..’ ಎಂದು ಹನುಮಂತಯ್ಯನ ಕೈಗಿತ್ತಿದ್ದರು. ನಂತರ ಹನುಮಂತಯ್ಯ ಆ ಹಣವನ್ನು ಕಂತಿನಲ್ಲಿ ತನ್ನ ಅತ್ತೆಯವರಿಗೆ ವಾಪಾಸು ಮಾಡಿದ.
ಹನುಮಂತಯ್ಯ ತನ್ನ ವೃತ್ತಿಯಲ್ಲಿ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದ. ಮಗ ಅಮರ್ ನಾಲ್ಕನೆಯ ತರಗತಿಯಲ್ಲಿ ಮತ್ತು ಮಗಳು ಅನನ್ಯ ಅದೇ ಶಾಲೆಯಲ್ಲಿ ಎರಡನೆಯ ತರಗತಿಯಲ್ಲಿ ಓದುತಿದ್ದರು. ಇಬ್ಬರೂ ಪ್ರತಿಬಾವಂತ ವಿದ್ಯಾರ್ಥಿಗಳಾಗಿದ್ದರು. ಹನುಮಂತಯ್ಯನಿಗೆ ತನ್ನ ತಲೆಯ ಮೇಲೆ ಸ್ವಂತ ಸೂರೊಂದನ್ನು ನಿರ್ಮಿಸಿಕೊಳ್ಳಬೇಕು ಎಂಬ ಆಸೆಯೊಂದು ಗರಿಗೆದರಿ ಐದು ವರ್ಷಗಳ ಹಿಂದೆಯೇ ಯಾವುದೋ ಗೃಹನಿರ್ಮಾಣ ಸಂಸ್ಥೆಯೊಂದಕ್ಕೆ ಸದಸ್ಯನಾಗಿ ಕಂತಿನಲ್ಲಿ ಹಣ ಕಟ್ಟಿ ಬೆಂಗಳೂರಿನ ಹೊರವಲಯದಲ್ಲಿದ್ದ ಕೆಂಗೇರಿಯಲ್ಲಿ ಒಂದು ಮೂವತ್ತು ನಲವತ್ತರ ನಿವೇಶನ ಕೊಂಡುಕೊಂಡಿದ್ದ. ನಿವೇಶನವನ್ನು ನೋಡಿದ ಸುಮಿತ್ರಾಳಿಗೆ ಈ ಬಡಾವಣೆ ನನ್ನ ಮಕ್ಕಳ ಕಾಲಕ್ಕಾದರೂ ಅಭಿವೃದ್ಧಿಯಾದರೆ ಪುಣ್ಯ ಎನಿಸಿತ್ತು. ಬ್ಯಾಂಕಿನಲ್ಲಿ ಸಾಲ ಪಡೆದು ಅಲ್ಲಿಯೇ ಒಂದು ಪುಟ್ಟ ಮನೆಯನ್ನು ನಿರ್ಮಿಸುವ ಯೋಚನೆಯನ್ನು ಹನುಮಂತಯ್ಯ ಹೆಂಡತಿಯೊಂದಿಗೆ ಹಂಚಿಕೊಂಡಾಗ ಅವಳು ಸುತಾರಾಂ ಒಪ್ಪಲಿಲ್ಲ. ಅಲ್ಲಿ ಮನೆ ಕಟ್ಟಿಸುವುದು ಸುಮ್ಮನೆ ದುಡ್ಡು ದಂಡ.. ಅಪ್ಪ ಕೊಟ್ಟಿರುವ ಸೈಟಿನಲ್ಲಿಯೇ ಮನೆ ಕಟ್ಟಿಸೋಣ ಎಂದು ಹಟ ಹಿಡಿದಳು. ಹನುಮಂತಯ್ಯ ಅದು ತಮ್ಮ ತಾತನ ಆಸ್ತಿಯೆಂದು ನಮ್ಮ ಮಕ್ಕಳಿಗೆ ಇರಲಿ.. ನಮ್ಮದೆಂದು ಈ ಮನೆ ಕಟ್ಟಿಸೋಣ ಎಂದು ಮನವೊಲಿಸಿ ಎರಡು ಕೊಠಡಿಯ ಪುಟ್ಟ ಮನೆಯೊಂದನ್ನು ಕಟ್ಟಿಸಿ ಸ್ವಲ್ಪ ಮೊತ್ತದ ಬಾಡಿಗೆಗೆ ನೀಡಿದ್ದ. ನೋಡುನೋಡುತ್ತಲೇ ಬಡಾವಣೆ ವಿಶಾಲವಾಗಿ ಬೆಳೆದು ಅಲ್ಲಿ ನಿವೇಶನಗಳ ಬೆಲೆಯೂ ಸಾಮಾನ್ಯ ಜನರಿಗೆ ಕೈಗೆಟುಕದಂತಾಗಿತ್ತು. ಆದರೂ ತನ್ನ ತಂದೆಯ ವಿಶಾಲವಾದ ಬಂಗಲೆಯಲ್ಲಿ ಬೆಳೆದಿದ್ದ ಸುಮಿತ್ರಾಳಿಗೆ ಆ ಮನೆ ಒಂದು ಚಿಕ್ಕ ಬಾಡಿಗೆ ಮನೆಯಂತೆ ಭಾಸವಾಗುತಿತ್ತೇ ಹೊರತು ತಮ್ಮ ಸ್ವಂತದ್ದೆಂಬ ಅಭಿಮಾನ ಮೂಡಿರಲೇ ಇಲ್ಲ.
ಹನುಮಂತಯ್ಯ ಕೆಲಸ ಮಾಡುತಿದ್ದ ಕಂಪೆನಿಯ ಲಾಭಾಂಶ ಪ್ರತಿ ವರ್ಷವೂ ಹೆಚ್ಚಾಗುತಿತ್ತು. ಹತ್ತು ವರ್ಷಗಳ ದುಡಿಮೆಯ ನಂತರ ಅವನ ಸಂಬಳ ಇಪ್ಪತ್ತೈದು ಸಾವಿರಕ್ಕೇರಿತ್ತು. ಆದರೆ ಮಾಡುತಿದ್ದುದು ಮಾತ್ರ ಅದೇ ಕೆಲಸ. ಅವನಿಗೆ ಯಾವುದೇ ಬಡ್ತಿಯೂ ಸಿಕ್ಕಿರಲಿಲ್ಲ. ಬಡ್ತಿಯನ್ನು ಕೇಳುವ ಧೈರ್ಯವೂ ಅವನಿಗೆ ಇರಲಿಲ್ಲ. ನನ್ನಂತಹವನಿಗೆ ಕಂಪೆನಿ ಕೈತುಂಬಾ ಸಂಬಳ ನೀಡುತ್ತಿದೆಯೆಂಬ ಆತ್ಮತೃಪ್ತಿಯಿಂದ ಎಂದಿನಂತೆ ಕಷ್ಟಪಟ್ಟು ಕೆಲಸ ಮಾಡುತಿದ್ದ.
ಸುಮಿತ್ರಾಳಿಗೆ ಇಬ್ಬರೂ ಮಕ್ಕಳು ಬೆಳೆದು ಶಾಲೆಗೆ ಹೋಗತೊಡಗಿದ ಮೇಲೆ ಮನೆಗೆಲಸಗಳು ಬೇಗ ಮುಗಿದು ತುಸು ವಿಶ್ರಾಂತಿ ಸಿಗತೊಡಗಿತು. ಆದರೂ ಕರೆಂಟು ಬಿಲ್ಲು ಕಟ್ಟವುದು, ಗ್ಯಾಸು ತರಿಸುವುದು, ತರಕಾರಿ ತರುವುದು, ಅಂಗಡಿಗೆ ಹೋಗುವುದು, ಮಿಲ್ಲಿಗೆ ಹೋಗಿ ಬರುವುದು, ಒಟ್ಟಿನಲ್ಲಿ ಮನೆಯ ಎಲ್ಲಾ ಕೆಲಸಗಳನ್ನೂ ಒಬ್ಬಳೇ ಮಾಡಬೇಕಾಗಿದ್ದುರಿಂದ ಕೆಲವೊಮ್ಮೆ ಅತ್ಯಂತ ಬೇಸರವಾಗುತಿತ್ತು. ಅವೆಲ್ಲಾ ಕೆಲಸಗಳಿಗೆ ನಡೆದುಕೊಂಡು ಇಲ್ಲವೇ ಆಟೋದಲ್ಲಿ ಹೋಗಬೇಕಾಗಿದ್ದಿತು. ತನ್ನ ಗಂಡನ ಸಂಬಳ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಏರಿದಾಗ ಸುಮಿತ್ರಾಳ ಮನದಲ್ಲಿ ಡ್ರೈವಿಂಗ್ ಕಲಿತುಕೊಂಡು ಪುಟ್ಟ ಕಾರೊಂದನ್ನು ಖರೀದಿಸಿಬೇಕೆಂಬ ಆಕಾಂಕ್ಷೆ ಮೂಡಿತು. ಅಕ್ಕಂದಿರೆಲ್ಲಾ ಅವರ ಮಕ್ಕಳೊಂದಿಗೆ ಅಮ್ಮನ ಮನೆಗೆ ಬಂದಾಗ ಸ್ವಂತ ಕಾರುಗಳಲ್ಲಿಯೇ ಬರುತಿದ್ದರು. ಅವರಷ್ಟು ದೊಡ್ಡ ಕಾರು ಖರೀದಿಸುವುದು ನಮ್ಮಿಂದ ಸಾದ್ಯವಿಲ್ಲದ ಮಾತು.. ಒಂದು ಪುಟ್ಟ ಕಾರು ಖರೀದಿಸೋಣ ಎಂದು ತನ್ನ ಗಂಡನ ಬಳಿ ವಿಚಾರ ಪ್ರಸ್ತಾಪ ಮಾಡಿದಳು. ಹನುಮಂತಯ್ಯನಿಗೆ ತನ್ನ ಹೆಂಡತಿಯ ಮಾತು ರುಚಿಸಲಿಲ್ಲ. ‘ನೋಡು ಸುಮೀ, ಜೀವನ ಒಂದು ಬೆಟ್ಟದಂತೆ.. ಒಂದೊಂದೇ ಮೆಟ್ಟಿಲುಗಳನ್ನು ಹತ್ತಬೇಕು.. ಇನ್ನೂ ಮನೆಯ ಸಾಲ ತೀರಿಲ್ಲ.. ಮಕ್ಕಳ ಓದಿನ ಖರ್ಚು ಬಹಳಷ್ಟು ಬರಬಹುದು.. ಇನ್ನೊಂದು ಏಳೆಂಟು ವರ್ಷಗಳು ಕಳೆಯಲಿ.. ಸಂಬಳವೂ ಇನ್ನಷ್ಟು ಜಾಸ್ತಿಯಾಗುತ್ತದೆ.. ಆಗ ನೋಡೋಣ.. ಈಗ ನಿನ್ನ ಓಡಾಟಕ್ಕೆ ಅನುಕೂಲವಾಗಲು ಒಂದು ಸ್ಕೂಟರನ್ನು ಖರೀದಿಸೋಣ.. ಹಾಸಿಗೆ ಇದ್ದಷ್ಟು ಕಾಲು ಚಾಚೋಣ.. ತೋರಿಕೆಗೆ ಬದುಕುವುದು ಬೇಡ..’ ಎಂದು ಅನುನಯದಿಂದಲೇ ಹೇಳಿದರೂ ಸುಮಿತ್ರಾಳಿಗೆ ಆದ ನಿರಾಸೆ ಹೇಳತೀರದು. ‘ಸ್ಕೂಟರೂ ಬೇಡ.. ಏನೂ ಬೇಡ.. ಸಾಯುವವರೆಗೂ ನನಗೆ ಸಿಟ್ಟಿಬಸ್ಸೇ ಗತಿ..’ ಎಂದು ಸಿಟ್ಟಿನಿಂದ ಉತ್ತರಿಸಿ ಇವನ ಬಳಿ ಏನನ್ನಾದರೂ ಕೇಳುವ ಬದಲು ಸುಮ್ಮನಿರುವುದೇ ವಾಸಿ.. ಸಮಾಜದಲ್ಲಿ ಪ್ರತಿಷ್ಠೆಯಿಂದ ಬದುಕಬೇಕೆಂಬುದನ್ನು ತಿಳಿಯದ ಮೂಢ.. ಎಂದು ಹತಾಶೆಗೊಂಡು ತನ್ನ ಗಂಡನೊಂದಿಗೆ ಮೂರು ದಿನ ಮಾತು ಬಿಟ್ಟಿದ್ದಳು. ಮಹಾಲಕ್ಷ್ಮಮ್ಮನವರು ಮಧ್ಯ ಪ್ರವೇಶಿಸಿ ಇಬ್ಬರ ನಡುವೆ ರಾಜಿ ಮಾಡಿಸಿದ್ದಲ್ಲದೇ ಸದ್ಯಕ್ಕೆ ಒಂದು ಸ್ಕೂಟರನ್ನು ತೆಗೆದುಕೋ.. ಎಂದು ಮಗಳ ಮನವೊಲಿಸಿ, ಬೇಡವೆಂದರೂ ಕೇಳದೆ ಅಳಿಯನಿಗೆ ಒಂದಷ್ಟು ಹಣವನ್ನು ನೀಡಿದರು. ಆದರೆ ಆ ಹಣ ಅಲ್ಪ ಕಾಲದಲ್ಲಿಯೇ ಅವರಿಗೆ ವಾಪಾಸಾಗಿತ್ತು.
ಮನೆಗೆ ಸ್ಕೂಟರು ಬಂದರೂ ಸುಮಿತ್ರಾಳಿಗೆ ಹೆಚ್ಚಿನ ತೃಪ್ತಿಯೇನೂ ಆಗಲಿಲ್ಲ. ಅವಳ ಏಕಾಂಗಿ ಬದುಕಿಗೆ ಅದೊಂದು ಸ್ನೇಹಿತನಂತೆ ಜೊತೆಯಾಯಿತು ಅಷ್ಟೇ. ಈಗ ಹನುಮಂತಯ್ಯನೊಂದಿಗೆ ಅವಳು ಮದುವೆಯಾಗಿ ಹದಿನಾರು ವರ್ಷಗಳು ಕಳೆದಿದ್ದವು. ಸ್ಥಿತಿವಂತರ ಕುಟುಂಬದಲ್ಲಿ ಬೆಳೆದಿದ್ದ ಅವಳಿಗೆ ಸಾಮಾನ್ಯ ಮಧ್ಯಮ ವರ್ಗದ ಜೀವನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿಯೇ ಇರಲಿಲ್ಲ. ಮಗ ಅಮರ್ ಎಂಟನೆಯ ತರಗತಿಯಲ್ಲಿ ಮಗಳು ಅನನ್ಯ ಆರನೆಯ ತರಗತಿಯಲ್ಲಿ ಓದುತಿದ್ದರಲ್ಲದೆ ಪ್ರತಿ ವರ್ಷವೂ ಶಾಲೆಗೇ ಹೆಚ್ಚು ಅಂಕ ಗಳಿಸಿ ಮೊದಲಿಗರಾಗಿ ಉತ್ತೀರ್ಣರಾಗುತ್ತಿದ್ದರು. ಇದರಿಂದಾಗಿ ಅವಳಿಗೆ ಜೀವನದಲ್ಲಿ ಸ್ವಲ್ಪ ಮಟ್ಟಿನ ತೃಪ್ತಿ ಸಿಕ್ಕಿದ್ದಿತು. ಅವರನ್ನು ಅವಳು ತನ್ನ ಎರಡು ಕಣ್ಣುಗಳಂತೆ ನೋಡಿಕೊಳ್ಳುತಿದ್ದಳು. ಇನ್ನುಳಿದಂತೆ ಅವಳ ಅಕ್ಕಂದಿರ ಐಷಾರಾಮಿ ಜೀವನ ಶೈಲಿ, ಅವರು ಮತ್ತು ಅವರ ಮಕ್ಕಳು ತೊಡುತಿದ್ದ ದುಬಾರಿ ಬೆಲೆಯ ಉಡುಗೆತೊಡುಗೆ, ಆಭರಣಗಳು, ಅವರ ಮನೆಯಲ್ಲಿದ್ದ ಐಷಾರಾಮಿ ಭೌತಿಕ ಸಾಧನಗಳನ್ನು ಕಂಡು ತನ್ನ ಜೀವನ ನಿರರ್ಥಕವೆನಿಸುತಿತ್ತು. ಮದುವೆಯಾಗಿ ಇಷ್ಟು ವರ್ಷವಾದರೂ ಗಂಡ-ಮಕ್ಕಳ ಜೊತೆ ಒಂದು ಪ್ರವಾಸ ಹೋಗಲಿಲ್ಲ.. ಅಕ್ಕಂದಿರೆಲ್ಲಾ ಈಗಾಗಲೇ ಸಾಕಷ್ಟು ಬಾರಿ ಕುಟುಂಬಸಮೇತರಾಗಿ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ ಎಂಬುದನ್ನು ನೆನೆನೆನೆದು ಅವಳು ಹತಾಶಳಾಗುತಿದ್ದಳು. ನಾನು ಮತ್ತು ನನ್ನ ಮಕ್ಕಳು ದುರದೃಷ್ಟವಂತರು ಎಂದೆನಿಸಿ ತನ್ನ ಅಮ್ಮನೊಂದಿಗೆ ‘ಅಮ್ಮಾ ಇಂತಹ ಗಂಡನನ್ನು ನನ್ನ ಕುತ್ತಿಗೆಗೆ ಕಟ್ಟಿದೆಯಲ್ಲಮ್ಮಾ.. ನಾನು ಮತ್ತು ನನ್ನ ಮಕ್ಕಳು ಜೀವನದಲ್ಲಿ ಏನೂ ಸುಖವನ್ನು ಅನುಭವಿಸಲಿಲ್ಲವಲ್ಲಾ..’ ಎಂದು ಗೋಳಿಡುತಿದ್ದಳು. ತನ್ನ ಅಳಿಯನ ಜೀವನವನ್ನು ಹತ್ತಿರದಿಂದ ನೋಡಿ ಅವನೊಬ್ಬ ಕರ್ಮಜೀವಿ ಎಂದು ತಿಳಿದಿದ್ದ ವಯೋವೃದ್ಧರಾದ ಮಹಾಲಕ್ಷ್ಮಮ್ಮನವರಿಗೆ ಇದರಿಂದ ಅಗಾಧವಾದ ಸಿಟ್ಟು ಬಂದರೂ ತೋರಿಸಿಕೊಳ್ಳುತ್ತಿರಲಿಲ್ಲ. ಮದುವೆಯಾಗಿ ಇಷ್ಟು ವರ್ಷಗಳಾಗಿ ಎರಡು ಮಕ್ಕಳ ತಾಯಿಯಾದರೂ ನನ್ನ ಮಗಳು ಗಂಡನನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದಾಳಲ್ಲಾ ಎಂದು ವ್ಯಥೆಯೂ ಆಯಿತು. ‘ಸುಮೀ.. ಜೀವನ ಎಂದರೆ ಸುಖದ ಸುಪ್ಪತ್ತಿಗೆಯಲ್ಲ.. ಐದೂ ಬೆರಳು ಒಂದೇ ಸಮನೆ ಇರಲು ಸಾಧ್ಯವೇನೇ.. ನಿನ್ನ ಅಕ್ಕಂದಿರ ಸಮಸ್ಯೆಗಳು ನಿನಗೆ ತಿಳಿದಿವೆಯಾ.. ದೂರದ ಬೆಟ್ಟ ಯಾವಾಗಲೂ ನುಣ್ಣಗೇ ಕಾಣಿಸುತ್ತದೆ.. ಹತ್ತಿರ ಹೋದಾಗಲೇ ಅದರ ನಿಜಸ್ವರೂಪ ತಿಳಿಯುವುದು.. ನಿನ್ನ ಬಳಿ ಹಣ, ಐಶ್ವರ್ಯ ಇಲ್ಲದಿರಬಹುದು.. ಇಬ್ಬರು ಮುದ್ದಾದ ಮಕ್ಕಳು.. ಹಗಲು ರಾತ್ರಿ ಸಂಸಾರಕ್ಕಾಗಿ ದುಡಿಯುತ್ತಿರುವ ಗಂಡ.. ನಿನ್ನ ಗಂಡ ನಿನಗೆ ಕೊಟ್ಟಿರುವ ಸ್ವಾತಂತ್ರ್ಯ, ಇದಕ್ಕೆಲ್ಲಾ ಬೆಲೆ ಕಟ್ಟಲಾದೀತೇ..’ ಎಂದು ಬುದ್ಧಿವಾದ ಹೇಳಿ ಸುಮ್ಮನಾಗುತ್ತಿದ್ದರು.
ಇಂತಹ ಭಾವನೆಗಳನ್ನು ಮನದಲ್ಲಿ ತುಂಬಿಕೊಂಡಿದ್ದ ಸುಮಿತ್ರಾಳದೂ ಇದರಲ್ಲಿ ತಪ್ಪೇನೂ ಇರಲಿಲ್ಲ. ಪ್ರಗತಿಪಥದತ್ತ ಸಾಗುತ್ತಿರುವ ದೇಶದ ಆರ್ಥಿಕ ಬೆಳವಣಿಗೆ, ಜಾಗತೀಕರಣ, ಹೊಸ ಹೊಸ ತಂತ್ರಜ್ಞಾನಗಳು ಪ್ರತಿದಿನವೂ ಸೃಷ್ಟಿಸಿ ಮಾರುಕಟ್ಟೆಗೆ ಬಿಸಾಡುತ್ತಿರುವ ತರಹೇವಾರಿ ಐಷಾರಾಮಿ ಭೌತಿಕ ಸಾಧನಗಳು, ಹಣದ ಪ್ರಾಬಲ್ಯ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳು ಮಧ್ಯಮ ವರ್ಗದ ಕುಟುಂಬಗಳ ಸಂಬಂಧಗಳಲ್ಲಿ ಬಿರುಕನ್ನು ಮೂಡಿಸಿ ಮನುಷ್ಯನನ್ನು ಭ್ರಮಾತ್ಮಕ ಜೀವನದತ್ತ ತಳ್ಳುತಿದ್ದವು. ಇದಕ್ಕೆ ಬಲಿಯಾಗುತ್ತಿರುವ ಮನುಷ್ಯರಲ್ಲಿ ಸುಮಿತ್ರಾಳೂ ಒಬ್ಬಳಾಗಿದ್ದಳು ಅಷ್ಟೇ.
ಇನ್ನು ಮದುವೆಯಾಗಿ ಹದಿನಾರು ವರ್ಷಗಳು ಕಳೆದಿದ್ದ ಹನುಮಂತಯ್ಯನ ಜೀವನದ ಗತಿಯೇ ಬದಲಾಗಿತ್ತು. ತನ್ನ ಹೆಂಡತಿ ಮಕ್ಕಳ ಒಳಿತಿಗಾಗಿ ದುಡಿಯುವುದನ್ನು ಹೊರತುಪಡಿಸಿ ಬದುಕಿನಲ್ಲಿ ಬೇರೆಯ ಸುಖ ಸಂತೋಷಗಳನ್ನು ಪಡೆದುಕೊಳ್ಳಬೇಕೆಂಬ ಹಂಬಲವೇ ಅವನಿಗೆ ಇರಲಿಲ್ಲ. ತನ್ನ ಬಿಡುವಿಲ್ಲದ ಕೆಲಸದಿಂದಾಗಿ ತನ್ನ ಮಕ್ಕಳಿಗೆ ಸಮಯವನ್ನು ನೀಡಲಾಗದೆ ಅವರÀ ಒಲವನ್ನೂ ಗಳಿಸಿಕೊಳ್ಳುವಲ್ಲಿ ಅವನು ವಿಫಲನಾಗಿದ್ದ. ಅಪ್ಪನೆನ್ನುವ ಗೌರವ ಮಾತ್ರ ಅವರಲ್ಲಿತ್ತು. ಇಬ್ಬರೂ ಮಕ್ಕಳು ಯಾವಾಗಲೂ ಹತ್ತಿರವಿರುತಿದ್ದ ತಮ್ಮ ತಾಯಿಯ ಮೇಲೆ ಅಪಾರವಾದ ಸಲಿಗೆ, ಪ್ರೀತಿ, ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು.
ಹನುಮಂತಯ್ಯನಿಗೆ ಕಷ್ಟಪಟ್ಟು ನಿಷ್ಠೆಯಿಂದ ಕೆಲಸ ಮಾಡದೇ ಕೆಲಸ ಕಳೆದುಕೊಂಡರೆ ಎನ್ನುವ ಕೆಲಸದ ಅಭದ್ರತೆಯ ಆತಂಕ ಯಾವಾಗಲೂ ಅವನನ್ನು ಕಾಡುತ್ತಲೇ ಇತ್ತು. ಇದರಿಂದಾಗಿ ತನ್ನ ವೃತ್ತಿಯೊಂದಿಗೆ ಬೆಸೆದುಕೊಂಡಿದ್ದ ಕಲುಷಿತ ವಾತಾವರಣವಾಗಲೀ, ಪರಿಶ್ರಮದ ಕೆಲಸವಾಗಲೀ ಅವನಿಗೆ ಮುಂದೊಂದು ದಿನÀ ನನ್ನ ಬದುಕಿಗೆ ಮುಳುವಾದೀತೆಂದು ಅರಿವಾಗಲಿಲ್ಲ. ಈಗ ಎರಡು ವರ್ಷಗಳ ಹಿಂದಿನಿಂದ ಅವನ ಆರೋಗ್ಯದಲ್ಲಿ ಏರಪೇರಾಗತೊಡಗಿತ್ತು. ಅವನ ವೃತ್ತಿಯ ಋಣಾತ್ಮಕ ಅಂಶಗಳು ಅವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸಿದ್ದವು. ಆಗಾಗ್ಗೆ ಬರುವ ಕೆಮ್ಮು, ಕೆಲಸ ಮುಗಿಸಿಕೊಂಡು ಮನೆಗೆ ಹೋದರೆ ಎಂತಹುದೋ ಸುಸ್ತು ಎಲ್ಲವನ್ನೂ ಅವನು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ. ಕೆಮ್ಮು ಬಂದಾಗ ಅಲ್ಲೇ ಹತ್ತಿರವಿದ್ದ ತಮ್ಮ ಕುಟುಂಬ ವೈದ್ಯರ ಬಳಿ ಒಬ್ಬನೇ ಹೋಗುವುದು, ಅವರು ನೀಡುತಿದ್ದ ಮಾತ್ರೆಗಳನ್ನು ನುಂಗಿ ತಾತ್ಕಾಲಿಕವಾಗಿ ಪರಿಹಾರ ಪಡೆದುಕೊಳ್ಳುವುದು ಮಾಡುತಿದ್ದ. ಸುಮಿತ್ರಾ ಅವನಿಗೆ ಆಗಾಗ್ಗೆ ಬರುತಿದ್ದ ಕೆಮ್ಮನ್ನು ಗಮನಿಸಿ ಒಂದಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಒಳ್ಳೆಯ ವೈದ್ಯರ ಬಳಿ ಆರೋಗ್ಯ ಪರೀಕ್ಷಿಸಿಕೊಳ್ಳಿ ಎಂದು ಅಲವತ್ತುಕೊಂಡಿದ್ದಳು. ಕುಟುಂಬ ವೈದ್ಯರೂ ಕೂಡ ಒಂದು ಬಾರಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಂಪೂರ್ಣವಾಗಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಪದೇ ಪದೇ ಸಲಹೆ ನೀಡುತಿದ್ದರು. ಆದರೆ ಅವನು ತನ್ನ ಹೆಂಡತಿ ಮತ್ತು ಕುಟುಂಬ ವೈದ್ಯರ ಮಾತುಗಳನ್ನು ಎಂದೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ವೈದ್ಯರು ನಿಮ್ಮ ವೃತ್ತಿಜೀವನ ನಿಮ್ಮ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದೆ, ನಿಮ್ಮ ಕೆಲಸವನ್ನು ಬಿಟ್ಟುಬಿಡುವುದು ಅಥವಾ ಬದಲಾಯಿಸಿಕೊಳ್ಳುವುದು ಸೂಕ್ತ, ಇಲ್ಲವಾದರೆ ಎಂದಾದರೊಂದು ದಿನ ತೀವ್ರ ಅಪಾಯವನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಹನುಮಂತಯ್ಯನಿಗೆ ವೈದ್ಯರ ಮಾತು ಕೇಳಿ ನಗು ಬರುತಿತ್ತು. ಈಗ ಕೆಲಸ ಬಿಟ್ಟರೆ ಮನೆ ಕಟ್ಟಿಸಲು ಮಾಡಿರುವ ಸಾಲ, ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಹಣ, ಸಂಸಾರವನ್ನು ಸಾಗಿಸಲು ತಗಲುವ ಖರ್ಚು, ಎಲ್ಲವೂ ಎಲ್ಲಿಂದ ಬರುತ್ತದೆ.. ನನ್ನಂತಹ ದಡ್ಡನಿಗೆ ಇಷ್ಟು ಸಂಬಳ ನೀಡುವ ಬೇರೆಯ ಉದ್ಯೋಗ ದೊರೆಯುವುದುಂಟೇ.. ಎಂಬ ನಿರಾಶಾ ಭಾವನೆ ಮೂಡುತಿತ್ತು. ಅದಲ್ಲದೆ ತಜ್ಞ ವೈದ್ಯರ ಬಳಿ ಪರೀಕ್ಷೆಗೆ ತೆರಳಿದರೆ ಮತ್ತಿನ್ನೇನೋ ಹೇಳಿ ಔಷಧಿ ಸೇವನೆಯ ಜೊತೆಗೆ ದೀರ್ಘಕಾಲದ ವಿಶ್ರಾಂತಿಯನ್ನು ಸೂಚಿಸಿದರೆ ನನ್ನ ಕೆಲಸದ ಗತಿಯೇನು.. ಎಂಬ ಭೀತಿ ಅವನನ್ನು ಕಾಡುತಿತ್ತು.
ಈಗ ಹದಿನೈದು ವರ್ಷಗಳು ತನ್ನ ವೃತ್ತಿಯಲ್ಲಿ ಕೆಲಸ ಮಾಡಿ ಮೂವತ್ತೈದು ಸಾವಿರ ಸಂಬಳ ಪಡೆಯುತಿದ್ದ ಹನುಮಂತಯ್ಯನಿಗೆ ತನ್ನ ಕಂಪೆನಿಯ ಬಗೆಗೆ ಸಂಪೂರ್ಣ ತೃಪ್ತಿಯಿತ್ತು. ಆದರೆ ಇತ್ತಿಚೆಗೆ ತನ್ನ ದೇಹದಲ್ಲಿ ಮೊದಲಿನಷ್ಟು ತ್ರಾಣವಿಲ್ಲ.. ಏನೋ ಬದಲಾವಣೆಯಾಗುತ್ತಿದೆ ಎನಿಸುತಿತ್ತು. ಬೇರೆ ಕೆಲಸ ಹುಡುಕುವುದು ಸಾಧ್ಯವಾಗದ ಮಾತು.. ಕಂಪೆನಿಯ ಮಾಲೀಕರನ್ನು ಕೇಳಿ ಮುಖ್ಯ ಕಛೇರಿಯಲ್ಲಿನ ಪ್ಲಾನಿಂಗ್ ವಿಭಾಗಕ್ಕೆ ಬದಲಾವಣೆ ನೀಡುವಂತೆ ಕೋರಿಕೊಳ್ಳಬೇಕು ಎಂದು ಬಲವಾಗಿ ಅನ್ನಿಸಿತು. ಈಗ ಅವನು ಕೋಲಾರದಲ್ಲಿ ಒಂದು ರಾಜ್ಯ ಹೆದ್ದಾರಿಯನ್ನು ನಿರ್ಮಿಸುವ ಕೆಲಸದಲ್ಲಿ ಸೈಟ್ ಎಂಜನಿಯರಾಗಿ ಕೆಲಸ ಮಾಡುತಿದ್ದ. ಇನ್ನೇನು ಮೂರು ತಿಂಗಳಲ್ಲಿ ಆ ಕೆಲಸ ಸಂಪೂರ್ಣವಾಗುವ ಹಂತದಲ್ಲಿತ್ತು. ಒಂದು ದಿನ ಧೈರ್ಯ ಮಾಡಿ ‘ನನ್ನ ಆರೋಗ್ಯ ಯಾಕೋ ಉತ್ತಮವಾಗಿಲ್ಲ.. ದಯಮಾಡಿ ನನಗೆ ಮುಖ್ಯ ಕಛೇರಿಯ ಪ್ಲಾನಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಮಾಡಿಕೊಡಿ ಸ್ವಾಮೀ..’ ಎಂದು ತನ್ನ ಮಾಲೀಕರಲ್ಲಿ ವಿನಂತಿಸಿಕೊಂಡಿದ್ದ. ಅವನನ್ನು ನೋಡಿ ಮಾಲೀಕರಿಗೆ ಏನನ್ನಿಸಿತೋ ‘ಸರಿ.. ಈ ಕೆಲಸ ಮುಗಿದ ನಂತರ ಮುಖ್ಯ ಕಚೇರಿಯ ಪ್ಲಾನಿಂಗ್ ವಿಭಾಗಕ್ಕೆ ನಿಮ್ಮನ್ನು ವರ್ಗ ಮಾಡಲಾಗುತ್ತದೆ..’ ಎಂದು ಭರವಸೆ ಕೊಟ್ಟಿದ್ದರು.
ಅಂದು ಯುಗಾದಿ ಹಬ್ಬ. ತಮ್ಮ ಕಂಪೆನಿಗೆ ಉಪಗುತ್ತಿಗೆ ನೀಡಿದ್ದ ಮೂಲ ಗುತ್ತಿಗೆದಾರ ಕಂಪೆನಿಯ ಹಿರಿಯ ಅಧಿಕಾರಿಗಳು ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲನೆಗಾಗಿ ಬರುತಿದ್ದರು. ಹನುಮಂತಯ್ಯನ ಉಪಸ್ಥಿತಿ ಅನಿವಾರ್ಯವಾಗಿತ್ತು. ಅದರಿಂದಾಗಿ ಅವನಿಗೆ ರಜೆ ಇರಲಿಲ್ಲ. ಅವನ ಹೆಂಡತಿ ವರ್ಷಕ್ಕೊಂದು ಹಬ್ಬದ ದಿನವೂ ನಿಮಗೆ ಬಿಡುವಿಲ್ಲ ಎಂದು ಗೊಣಗಿಕೊಂಡು ಬೇಗ ಬನ್ನಿ ಎಂದು ಹೇಳಿ ಮಕ್ಕಳನ್ನು ಕರೆದುಕೊಂಡು ತಾಯಿಯ ಮನೆಗೆ ಹೋಗಿದ್ದಳು. ಆದರೆ ಅಧಿಕಾರಿಗಳು ಬಂದಾಗಲೇ ಸಂಜೆಯಾಗಿತ್ತು. ಅವರನ್ನು ಬೀಳ್ಕೊಟ್ಟು, ಕೋಲಾರದಲ್ಲಿ ಬಸ್ಸು ಹತ್ತಿ ಬೆಂಗಳೂರು ತಲುಪಿ, ತಡವಾದೀತು.. ಹೆಂಡತಿ ಬೇಸರಿಸಿಕೊಂಡಾಳೆಂದು ತನ್ನ ಮನೆಗೂ ಹೋಗದೆ ಉಟ್ಟ ಬಟ್ಟೆಯಲ್ಲಿಯೇ ಅತ್ತೆಯ ಮನೆ ತಲುಪಿದಾಗ ರಾತ್ರಿ ಒಂಬತ್ತೂವರೆ ಗಂಟೆಯಾಗಿತ್ತು. (ಮುಂದುವರಿಯುವುದು..)