ವಿದೂಷಕ

ವಿದೂಷಕ

ನೋಬೆಲ್ ಪುರಸ್ಕೃತ ಖ್ಯಾತ ಕವಿ ರವೀಂದ್ರನಾಥ ಠಾಕೂರ್ (ಟಾಗೋರ್) ಇವರು ಹಲವಾರು ಸಣ್ಣ ಕಥೆಗಳನ್ನೂ ಬರೆದಿದ್ದಾರೆ ಎಂಬ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಇವರ ಹನ್ನೆರಡು ಕಥೆಗಳನ್ನು ಸಂಗ್ರಹಿಸಿ ‘ಹಸಿದ ಕಲ್ಲು ಮತ್ತು ಇತರ ಕಥೆಗಳು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಶ್ರೀನಿವಾಸ್ ವಿ.ಸುತ್ರಾವೆ ಇವರು. ಈ ಪುಸ್ತಕದ ಬಗ್ಗೆ ಮಾಹಿತಿಯನ್ನು ನೀವು ಈಗಾಗಲೇ ‘ಪುಸ್ತಕ ಸಂಪದ' ದಲ್ಲಿ ಓದಿರುವಿರಿ ಎಂಬ ನಂಬಿಕೆ ನಮ್ಮದು. ರವೀಂದ್ರರು ಬರೆದ ಎಲ್ಲ ಕಥೆಗಳು ಸೊಗಸಾಗಿವೆ. ಪುಸ್ತಕವನ್ನು ಕೊಂಡು ಓದಿ ಎಂಬ ಕೋರಿಕೆ ನಮ್ಮದು.

***

ವಿದೂಷಕ

೧.

ಕಂಚಿಯ ರಾಜನು ಕರ್ನಾಟಕವನ್ನು ಗೆಲ್ಲಲು ಹೊರಟನು, ಗೆದ್ದನು. ಅವನ ಆನೆಗಳು ಶ್ರೀಗಂಧ, ದಂತ, ಬಂಗಾರ, ಒಡವೆಗಳನ್ನು ಹೊತ್ತುಕೊಂಡು ಹೊರಟವು. 

ತನ್ನ ರಾಜ್ಯಕ್ಕೆ ಮರಳುವಾಗ ಅವನು ದೇಗುಲದಲ್ಲಿ ಬಲಿಕೊಟ್ಟನು. ರಕ್ತಸಿಂಚನವಾಯಿತು.

ಆ ವಿಧಿಯನ್ನು ಮುಗಿಸಿ ಬರುವಾಗ ಅವನು ಕೆಂಪುಬಟ್ಟೆಯನ್ನು ಧರಿಸಿದ್ದನು. ಕೊರಳಲ್ಲಿ ದಾಸವಾಳದ ಮಾಲೆ ಇತ್ತು. ಹಣೆಯ ಮೇಲೆ ಕೆಂಪುಬಣ್ಣದ ಗಂಧದ ತಿಲಕವಿತ್ತು. ಅವನ ಜೊತೆ ಇದ್ದವರು ಅವನ ಮಂತ್ರಿ ಮತ್ತು ವಿದೂಷಕ ಮಾತ್ರ.

ಹೋಗುತ್ತಿರುವಾಗ, ಒಂದು ಕಡೆ ಅವನು ದಾರಿ ಬದಿಯಲ್ಲಿನ ಒಂದು ಮಾವಿನ ತೋಪಿನಲ್ಲಿ, ಕೆಲವು ಹುಡುಗರು ಆಟವಾಡುತ್ತಿರುವುದನ್ನು ಕಂಡನು. ರಾಜನು ತನ್ನ ಇಬ್ಬರು ಸಂಗಾತಿಗಳಿಗೆ ಹೇಳಿದ :

“ಅವರು ಏನು ಆಡ್ತಾ ಇದ್ದಾರೆ, ನೋಡ್ಕೊಂಡು ಬರ್ತೀನಿ.”

೨.

ಹುಡುಗರು ಗೊಂಬೆಗಳ ಎರಡು ಸಾಲುಗಳನ್ನು ಮಾಡಿ, ಯುದ್ಧದ ಆಟ ಆಡುತ್ತಿದ್ದರು. 

“ಯಾರು ಯಾರ ಜೊತೆ ಯುದ್ಧ ಮಾಡ್ತಾ ಇದಾರೆ?” ಎಂದು ರಾಜನು ಕೇಳಿದನು.

ಅವನು ಹೇಳಿದ: “ಕರ್ನಾಟಕವು ಕಂಚಿಯ ಮೇಲೆ ಯುದ್ಧ ಮಾಡುತ್ತಿದೆ.”

“ಯಾರು ಗೆದ್ದದ್ದು?” ಎಂದು ರಾಜನು ಕೇಳಿದನು. “ಮತ್ತು ಸೋತಿದ್ದು ಯಾರು?”

“ಕರ್ನಾಟಕ ಗೆದ್ದಿದ್ದು" ಎಂದು ಹುಡುಗರು ಹೆಮ್ಮೆಯಿಂದ ಹೇಳಿದರು. “ಕಂಚಿ ಸೋತಿದ್ದು.”

ಮಂತ್ರಿಯ ಮುಖ ಗಂಭೀರವಾಯಿತು; ರಾಜನ ಕಣ್ಣುಗಳು ಕೆಂಪಾದವು; ವಿದೂಷಕ ನಗಲು ಪ್ರಾರಂಭಿಸಿದನು.

೩.

ರಾಜನು ತಮ್ಮ ಯೋಧರೊಡನೆ ಹಿಂದಿರುಗಿ ಬಂದಾಗ, ಹುಡುಗರು ಇನ್ನೂ ಆಡುತ್ತಿದ್ದರು.

ರಾಜನು ಆಜ್ಞೆ ಮಾಡಿದ : “ಪ್ರತಿಯೊಬ್ಬ ಹುಡುಗನಿಗೂ ಸರದಿಯಂತೆ ಮರಕ್ಕೆ ಕಟ್ಟಿಹಾಕಿ, ಬೆತ್ತ ತಗೊಂಡು ಬಾರಿಸಿ.”

ಆ ಹುಡುಗರ ತಂದೆ-ತಾಯಿಗಳು ಹಳ್ಳಿಯಿಂದ ಓಡಿ ಬಂದರು - “ಅವರು ದಡ್ಡರು. ಸುಮ್ಮನೆ ಆಡ್ತಾ ಇದ್ದರು. ಅವರನ್ನು ಕ್ಷಮಿಸಿ" ಎಂದರು.

ರಾಜನು ಸೇನಾಪತಿಯನ್ನು ಕರೆದು “ಕಂಚಿಯ ರಾಜನನ್ನು ಯಾವತ್ತೂ ಮರೆಯದಂಥ ಪಾಠ ಕಲಿಸು ಈ ಹಳ್ಳಿಗೆ" ಎಂದನು. ಹೀಗೆ ಹೇಳಿ ಅವನು ತನ್ನ ಡೇರೆಗೆ ಹೋದನು.

೪.

ಸಂಜೆ ಸೇನಾಪತಿಯು ಬಂದು, ರಾಜನ ಮುಂದೆ ನಿಂತು, ತಲೆಬಾಗಿ ನಮಸ್ಕರಿಸಿ ಹೇಳಿದ : “ಚಕ್ರವರ್ತಿಗಳೇ, ನರಿನಾಯಿಗಳ ಹೊರತಾಗಿ ಈ ಹಳ್ಳಿಯಲ್ಲಿ ಈಗ ಯಾವ ಶಬ್ದವೂ ಇಲ್ಲದಂತೆ ಮಾಡಿದ್ದೇನೆ.”

“ಚಕ್ರವರ್ತಿಗಳ ಮರ್ಯಾದೆ ಎಂದಿನಂತೆ ಉಳಿದಿದೆ.” ಎಂದನು ಮಂತ್ರಿ.

“ಸರ್ವಶಕ್ತ ಭಗವಂತನು ನಮ್ಮ ಚಕ್ರವರ್ತಿಗಳ ಮಿತ್ರ ರಾಜನಿದ್ದಾನೆ.” ಎಂದ ಪುರೋಹಿತ.

ವಿದೂಷಕ ಹೇಳಿದ : “ಚಕ್ರವರ್ತಿಗಳೇ, ನನಗೆ ಹೋಗಲು ಅನುಮತಿ ಕೊಡಿ.”

“ಯಾಕೆ?” ಎಂದು ರಾಜನು ಆಶ್ಚರ್ಯದಿಂದ ಕೇಳಿದನು.

ಅದಕ್ಕೆ ವಿದೂಷಕ ಹೇಳಿದ:

“ನನ್ನಲ್ಲಿ ಕೊಲ್ಲುವ ಶಕ್ತಿಯಾಗಲೀ, ನಾಶ ಮಾಡುವ ಶಕ್ತಿಯಾಗಲಿ ಇಲ್ಲ. ದೇವರ ದಯೆಯಿಂದ ನನಗೆ ಸಾಧ್ಯವಿರುವುದೆಂದರೆ ನಗುವುದು ಮಾತ್ರ. ನಾನು ಚಕ್ರವರ್ತಿಗಳ ಆಸ್ಥಾನದಲ್ಲೇ ಉಳಿದರೆ, ನಗೋದು ಹ್ಯಾಗೆ ಅನ್ನೋದೇ ನನಗೆ ಮರೆತುಹೋಗುತ್ತದೆ.”

***

(‘ಹಸಿದ ಕಲ್ಲು ಮತ್ತು ಇತರ ಕಥೆಗಳು’ ಪುಸ್ತಕದಿಂದ ಆಯ್ದ ಕಥೆ)