ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡ ತಗ್ಗಿಸುವಲ್ಲಿ ಹೆತ್ತವರ ಪಾತ್ರ

ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡ ತಗ್ಗಿಸುವಲ್ಲಿ ಹೆತ್ತವರ ಪಾತ್ರ

ಫೆಬ್ರವರಿ ತಿಂಗಳು ಬಂತೆಂದರೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡ ಶುರು. ಮುಂದಿನ ಮೂರು ತಿಂಗಳು ವಿದ್ಯಾರ್ಥಿಗಳಿಗೂ ಹೆತ್ತವರಿಗೂ ದಿನದಿನವೂ ಹೆಚ್ಚುವ ಒತ್ತಡ. ಮುಂದೆ ಏನಾಗುತ್ತದೋ ಎಂಬ ಆತಂಕ.

ಹತ್ತನೆಯ ಮತ್ತು ಪಿಯುಸಿ (ಅಥವಾ 11ನೇ ಹಾಗೂ 12ನೇ) ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗಂತೂ ಇದು ಅಗ್ನಿಪರೀಕ್ಷೆಯ ಕಾಲ. ಯಾಕೆಂದರೆ ವಿದ್ಯಾರ್ಥಿಗಳ ಮುಂದಿನ ಬದುಕು ಈ ಪರೀಕ್ಷೆಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ.

ಈ ಅವಧಿಯಲ್ಲಿ ಹೆತ್ತವರು ಆಡುವ ಕೆಲವು ಮಾತುಗಳು ಅಥವಾ “ಮಗ/ ಮಗಳು ಏನು ಬೇಕಾದರೂ ಮಾಡಿಕೊಳ್ಳಲಿ” ಎಂಬ ತಟಸ್ಥ ಭಾವ ವಿದ್ಯಾರ್ಥಿಗಳ ಒತ್ತಡವನ್ನು ಹೆಚ್ಚಿಸಬಹುದು. ಹಾಗಾದರೆ, ಇದರ ಬದಲಾಗಿ ಹೆತ್ತವರು ಏನು ಮಾಡಬಹುದು? ಇದರ ಬದಲಾಗಿ, ವಿದ್ಯಾರ್ಥಿಗಳಲ್ಲಿ ಬದುಕಿನ ಸವಾಲುಗಳನ್ನು ಎದುರಿಸುವ ಕೌಶಲ್ಯಗಳ ಅಭಿವೃದ್ಧಿಗಾಗಿ ಇದೇ ಅವಧಿಯನ್ನು ಹೆತ್ತವರು ಬಳಸಬಹುದು.

ಅದು ಹೇಗೆ? ಅಂತಹ ಕೆಲವು ದಾರಿಗಳನ್ನು ಪರಿಶೀಲಿಸೋಣ.

ಒತ್ತಡದಿಂದ ಉಂಟಾಗುವ ಪರಿಣಾಮಗಳು ಅದರ ಬಗ್ಗೆ ನಮ್ಮ ನಂಬಿಕೆಗಳನ್ನು ಅವಲಂಬಿಸಿದೆ. ಪರೀಕ್ಷಾ ತಯಾರಿಯ ಸಮಯವೆಂದರೆ ಕೇವಲ ಅಂಕಗಳ ಬಗ್ಗೆ ಚಿಂತೆ ಮಾಡುವ ಸಮಯವಲ್ಲ. ಅದು ಸಮಸ್ಯಾ ಪರಿಹಾರದ, ಸಮಯ ನಿರ್ವಹಣೆಯ ಮತ್ತು ಭವಿಷ್ಯಕ್ಕಾಗಿ ಹೊಸ ಕೌಶಲ್ಯಗಳನ್ನು ಕಲಿಯುವ ಸಮಯ ಎಂದು ಅರ್ಥ ಮಾಡಿಕೊಂಡರೆ, ಆ ಅವಧಿಯ ಬಗ್ಗೆ ನಮ್ಮ ಚಿಂತನೆಯೇ ಬದಲಾಗುತ್ತದೆ.

ಮಕ್ಕಳೊಂದಿಗೆ ಹೆತ್ತವರ ಮುಕ್ತ ಸಂಭಾಷಣೆ ಮತ್ತು ಸಂವಹನ, ಮಕ್ಕಳ ಆತಂಕಗಳನ್ನು ಬಹುಪಾಲು ಕಡಿಮೆ ಮಾಡಲು ಸಹಕಾರಿ. ಇವತ್ತು ಏನನ್ನು ಓದಿದ್ದಿ? ಅದರಲ್ಲಿ ಅತ್ಯಂತ ಆಸಕ್ತಿದಾಯಕ ಸಂಗತಿ ಯಾವುದು? ಇಂತಹ ಮುಕ್ತ ಪ್ರಶ್ನೆಗಳನ್ನು ಹೆತ್ತವರು ಕೇಳಿದರೆ, ವಿದ್ಯಾರ್ಥಿಗಳಲ್ಲಿ ನಿರಾಳ ಭಾವ ಮೂಡಲು ಸಹಕಾರಿ. ಇದರ ಬದಲಾಗಿ, “ಏನು ಇವತ್ತು ಪರೀಕ್ಷೆಗಾಗಿ ಓದಿದ್ದಿಯಾ? ಅಥವಾ ಮೊಬೈಲ್ ನೋಡುತ್ತಲೇ ಕಾಲ ಕಳೆದಿದ್ದೀಯಾ?” ಎಂದು ಅಪ್ಪ ಇಲ್ಲವೆ ಅಮ್ಮ ಕೇಳಿದರೆ, ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿಗೆ ಏನು ಅನಿಸಬಹುದು?

ಒಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರಿಸಿದ ದಿನ, ಅವನ ತಂದೆ ಮನೆಯ ಹತ್ತಿರದ ಮಳಿಗೆಯಿಂದ ಮನೆಮಂದಿಗೆಲ್ಲರಿಗೂ ಕಬ್ಬಿನ ಹಾಲು ಅಥವಾ ಐಸ್-ಕ್ರೀಮ್ ತಂದು ಕೊಟ್ಟು ಸಂಭ್ರಮಿಸುತ್ತಿದ್ದರು. ಹತ್ತನೇ ತರಗತಿಯ ಗಣಿತ ಪರೀಕ್ಷೆಯಲ್ಲಿ ಅವನು ಚೆನ್ನಾಗಿ ಉತ್ತರಿಸಲಿಲ್ಲ. ಆ ದಿನ ತನಗೆ ತಂದೆಯಿಂದ ಬಯ್ಗುಳ ಖಂಡಿತ ಎಂದು ಅವನು ಭಾವಿಸಿದ್ದ. ಆದರೆ ಆ ದಿನವೂ ಅವನ ತಂದೆ ಎಲ್ಲರಿಗೂ ಐಸ್-ಕ್ರೀಮ್ ತಂದು ಕೊಟ್ಟಾಗ ಅವನಿಗೆ ಅಚ್ಚರಿ. ಅವತ್ತು ಅವನೊಂದು ದೊಡ್ಡ ಪಾಠ ಕಲಿತ: ನನ್ನ ತಂದೆಯ ಪ್ರೀತಿ ಮತ್ತು ಪ್ರೋತ್ಸಾಹ ಪರೀಕ್ಷೆಯಲ್ಲಿ ನಾನು ಗಳಿಸುವ ಅಂಕಗಳನ್ನು ಅವಲಂಬಿಸಿಲ್ಲ.

ಮಕ್ಕಳು ತಮ್ಮನ್ನು ಹದ್ದಿನ ಕಣ್ಣುಗಳಿಂದ ಗಮನಿಸುತ್ತಾರೆ ಎಂಬುದನ್ನು ಹೆತ್ತವರು ನೆನಪಿಟ್ಟುಕೊಳ್ಳಬೇಕು. ತಮ್ಮ ಜೀವನದ ಅನುಭವವನ್ನು ಭಟ್ಟಿ ಇಳಿಸಿ, ಮನ ಮುಟ್ಟುವ ಮಾತುಗಳ ಮೂಲಕ ಹೆತ್ತವರು ಮಕ್ಕಳಿಗೆ “ಉಪದೇಶ” ನೀಡಬಹುದು. ಆದರೆ, ಮಕ್ಕಳು ಆ ಉಪದೇಶಗಳಿಗೆ ಕಿವಿಗೊಡದೆ ಇರಬಹುದು ಅಥವಾ ಸ್ಪಂದಿಸದೇ ಇರಬಹುದು!

ಹೆತ್ತವರು ಸಕಾರಾತ್ಮಕವಾಗಿ ವರ್ತಿಸಿದರೆ ಮಕ್ಕಳು ಅದನ್ನೇ ಕಲಿಯುತ್ತಾರೆ. ಅದರ ಬದಲಾಗಿ, ಹೆತ್ತವರು ಯಾವಾಗಲೂ ಒತ್ತಡದಲ್ಲಿ, ಆತಂಕದಲ್ಲಿ ಇದ್ದರೆ, ಮಕ್ಕಳೂ ಅದನ್ನೇ ಕಲಿಯುತ್ತಾರೆ. ಗಮನಿಸಿ: ಮಗ/ ಮಗಳು ಪರೀಕ್ಷೆಗಾಗಿ ಓದುತ್ತಿರುವಾಗ
ತಂದೆಯೂ ಒಂದು ನಿಯತಕಾಲಿಕ ಅಥವಾ ಪುಸ್ತಕ ಓದುತ್ತಿದ್ದರೆ ಎಷ್ಟು ಚೆನ್ನ! ಅದರ ಬದಲಾಗಿ, ತಂದೆ ಮೊಬೈಲ್ ಅಥವಾ ಟಿವಿ ನೋಡುತ್ತಿದ್ದರೆ ಮಗ/ ಮಗಳ ಮೇಲೆ ಏನು ಪರಿಣಾಮ ಆದೀತು?

ಹೆತ್ತವರು ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಯ ಅಂಕಗಳ ಬಗ್ಗೆ ಮಾತನಾಡುವುದರ ಬದಲಾಗಿ ಮಗ/ ಮಗಳು ಹೇಗೆ ಕ್ರಮಬದ್ಧವಾಗಿ ಮತ್ತು ಶ್ರದ್ಧೆಯಿಂದ ಓದಿದ್ದಾರೆ ಎಂಬುದರ ಬಗ್ಗೆ ಮಾತನಾಡುವುದು ಅವಶ್ಯ. ಪ್ರಾಮಾಣಿಕವಾಗಿ ಪರೀಕ್ಷೆಗೆ ತಯಾರಿ ಮತ್ತು ಕಲಿಕೆಯ ಬಗ್ಗೆ ಸಕಾರಾತ್ಮಕ ಭಾವ ಪರೀಕ್ಷೆಗಳ ಆತಂಕವನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ. ಯಾಕೆಂದರೆ, ಬದುಕಿನ ಸಾಲುಸಾಲು ಸವಾಲುಗಳಲ್ಲಿ ಪರೀಕ್ಷೆಯೂ ಒಂದು ಸವಾಲು ಎಂದು ಪರಿಗಣಿಸಿದರೆ, ಮುಂದಿಡುವ  ಪ್ರತಿಯೊಂದು ಹೆಜ್ಜೆಯೂ ನಮ್ಮನ್ನು ಸರಿಯಾದ ದಿಕ್ಕಿನಲ್ಲೇ ಮುನ್ನಡೆಸುತ್ತದೆ, ಅಲ್ಲವೇ?