ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ

ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ

ಪುಸ್ತಕದ ಲೇಖಕ/ಕವಿಯ ಹೆಸರು
ಡಿ. ಆರ್. ಬಳೂರಗಿ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೩

ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರೆತದ್ದು ಕಡಿಮೆ. ಈ ಕೊರತೆಯನ್ನು ನೀಗಿಸಲು ಲೇಖಕರಾದ ಡಿ ಆರ್ ಬಳೂರಗಿ ಅವರು “ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದ ಲೇಖಕರ ಮಾತಿನಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ... 

“ಕ್ರಿಸ್ತಪೂರ್ವದಲ್ಲಿಯೇ ವಿಜ್ಞಾನದ ಬೀಜಾಂಕುರವಾಗಿತ್ತು. ಆದರೆ ಹದಿನೈದನೆಯ ಶತಮಾನದವರೆಗೆ ಹೇಳಿಕೊಳ್ಳುವಂತಹ ಪ್ರಗತಿಯಾಗಲಿಲ್ಲ. ಕೋಪರ್ನಿಕಸ್, ಗೆಲಿಲಿಯೋ, ನ್ಯೂಟನ್ ಮುಂತಾದವರು ಅದರ ಪ್ರಗತಿಯ ವೇಗವನ್ನು ವರ್ಧಿಸಿದ ವಿಜ್ಞಾನಿಗಳು. ಅದು ನಾಗಾಲೋಟದಲ್ಲಿ ಅಭಿವೃದ್ಧಿಗೊಂಡಿದ್ದು ಹತ್ತೊಂಭತ್ತನೆಯ ಶತಮಾನದಲ್ಲಿ, ಆ ಶತಮಾನದಲ್ಲಾದ ವಿದ್ಯುತ್ತಿನ ಆವಿಷ್ಕಾರವು ಔದ್ಯೋಗಿಕ ಕ್ರಾಂತಿಗೆ ಕಾರಣವಾಯಿತು. ವಿಜ್ಞಾನ ಮತ್ತು ಅದರ ಅನ್ವಯ ಶಾಖೆಯಾದ ತಂತ್ರಜ್ಞಾನ ಇಂದಿನ ಉಚ್ಚಾಯ್ ಸ್ಥಿತಿಯನ್ನು ತಲುಪಲು ಬಹು ಸುದೀರ್ಘ ಪಥವನ್ನು ಕ್ರಮಿಸಿವೆ. ಆ ಪಥದ ಗುಂಟ ಮರುಪಯಣಿಸಿದಾಗ ಅದು ಸಹಸ್ರಾರು ವಿಜ್ಞಾನಿಗಳ ಮತ್ತು ತಂತ್ರಜ್ಞರ ಪರಿಶ್ರಮದ ಫಲವೆಂಬುದು ಅರಿವಾಗುತ್ತದೆ. ಅದರ ನಿರ್ಮಾಣ ಕಾರ್ಯದಲ್ಲಿ ಎಲ್ಲರ ಕೊಡುಗೆಯು ಸಮನಾಗಿರಲಿಕ್ಕಿಲ್ಲ. ಆದರೆ ಪ್ರತಿಯೊಬ್ಬರ ಕೊಡುಗೆಯೂ ಅಷ್ಟೇ ಅಮೂಲ್ಯವಾದದ್ದು. ವಿಜ್ಞಾನ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ, ಕೆಲವರು ಪ್ರಸಿದ್ಧಿಯಿಂದ ಪ್ರಜ್ವಲಿಸುತ್ತಿದ್ದರೆ, ಅನೇಕರು ಅನಾಮಧೇಯರಾಗಿ ಉಳಿದು ಹೋಗುತ್ತಾರೆ.

ವಿದ್ಯುತ್‌ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದವರಲ್ಲಿ ಮೈಕೆಲ್ ಫ್ಯಾರಡೆ ಮತ್ತು ಎಡಿಸನ್ ಪ್ರಮುಖರು. ಅದರಲ್ಲಿ ಎರಡು ಮಾತಿಲ್ಲ. ಬಹುತೇಕ ಪಠ್ಯಪುಸ್ತಕಗಳಲ್ಲಿ ಅವರ ಜೀವನ ಚಿತ್ರಣವನ್ನು ಕಾಣುತ್ತೇವೆ. ಸಾಮಾನ್ಯರಿಗೂ ಸಹ ಅವರ ಹೆಸರು ಸುಪರಿಚಿತ. ಇಂದು ಎಡಿಸನ್‌ನ ಮಹತ್ವದ ಶೋಧಗಳಾದ ತಂತು ದೀಪವಾಗಲೀ, ಗ್ರಾಮಾಫೋನ್ ಆಗಲೀ ಬಳಕೆಯಲ್ಲಿಲ್ಲ; ನೇಪಥ್ಯಕ್ಕೆ ಸರಿದುಹೋಗಿವೆ. ನಾವು ಇಂದಿಗೂ ಬಳಸುತ್ತಿರುವ AC-ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ, ಆದರೆ ಆತನ ಕುರಿತ ವಿವರಗಳು ಯಾವುದೇ ಪಠ್ಯಪುಸ್ತಕಗಳಲ್ಲಿ ಕಾಣುವುದಿಲ್ಲ. ಆತನ ಹೆಸರಿನ ಮಾನದ ಹೊರತಾಗಿ, ವೈಜ್ಞಾನಿಕ ಪ್ರಪಂಚದಲ್ಲಿಯೂ ಆತನಿಗೆ ವಿಶೇಷ ಪ್ರಚಾರ ದೊರೆತಿಲ್ಲ. ಇದೇಕೆ ಹೀಗೆ ಎಂದು ಕುತೂಹಲ ಉಂಟಾಯಿತು. ಟೆಸ್ಲಾನ ಬದುಕು ಮತ್ತು ಸಾಧನೆ ಕುರಿತು ಮಾಹಿತಿ ಸಂಗ್ರಹಿಸಿದೆ. ಆಗ ಆಶ್ಚರ್ಯಕರ ವಿವರಗಳು ದೊರೆತವು. ಆತನ ಬಾಲ್ಯದ ಬದುಕು ಸಂಘರ್ಷಮಯವಾಗಿತ್ತು. ಇಡೀ ಜಗತ್ತಿಗೆ ಅಗ್ಗವಾಗಿ ಶಕ್ತಿಯನ್ನು ಪೂರೈಸಬೇಕೆಂಬುದು ಆತನ ಬಯಕೆಯಾಗಿತ್ತು. ಅದಕ್ಕಾಗಿ ತನ್ನ ಜೀವನವನ್ನು ಮುಡುಪಾಗಿಡುತ್ತಾನೆ. ಆತನ ಸಂಶೋಧನೆಗೆ ಆರ್ಥಿಕ ನೆರವು ನೀಡಲು ಒಪ್ಪಿಕೊಂಡವರು ಮಧ್ಯದಲ್ಲಿ ಕೈಬಿಡುತ್ತಾರೆ.

ಪಟ್ಟಭದ್ರ ಹಿತಾಸಕ್ತಿಗಳು ಟೆಸ್ಲಾ ತನ್ನ ಸಂಶೋಧನೆಯನ್ನು ಮುಂದುವರೆಸದಂತೆ ತಡೆದಿರಬೇಕೆಂದು ಊಹಿಸಲಾಗಿದೆ. ಯಾಕೆಂದರೆ ಎಲ್ಲರಿಗೂ ಅಗ್ಗದಲ್ಲಿ ಶಕ್ತಿ ದೊರೆತರೆ ಸಮಾಜದ ಸಂರಚನೆಯೇ ಬದಲಾಗುತ್ತಿತ್ತು. ಅಂತಹ ಸಮಾಜವು ಬಂಡವಾಳದಾರರಿಗೆ ಹೇಗೆ ಸಹ್ಯವಾದೀತು? ಟೆಸ್ಲಾನ ನಿಧನದ ಬಳಿಕವೂ ಆತನ ಸಂಶೋಧನಾ ದಾಖಲೆಗಳನ್ನು ಅಮೆರಿಕದ ಗುಪ್ತಚರ ಇಲಾಖೆಯು ಉನ್ನತ ರಹಸ್ಯದ ಹೆಸರಿನಲ್ಲಿ ಗುಪ್ತವಾಗಿರಿಸುತ್ತದೆ. ಇವೆಲ್ಲ ವಿವರಗಳು ಟೆಸ್ಲಾನ ಜೀವನ ಚಿತ್ರಣವನ್ನು ರಚಿಸುವಂತೆ ನನ್ನನ್ನು ಪ್ರಚೋದಿಸಿದವು. ಟೆಸ್ಲಾನ ಬದುಕು ಮತ್ತು ಸಾಧನೆ, ಹೆದ್ದಾರಿಗೆ ಬಹು ದೂರದಲ್ಲಿರುವ ಹೂವಿನ ನರುಗಂಪಿನಂತೆ. ಅವಸರದ ಪಯಣಿಗರಿಗೆ ಅದು ಅವೇದ್ಯ.

ಈ ಪುಸ್ತಕವನ್ನು ಬರೆಯಲು ಒತ್ತಾಸೆ ನೀಡಿದವರು ಸ್ನೇಹಿತರಾದ ಶ್ರೀ ಹರೀಶ ಆಮೂರ. ಅವರು ನನಗೆ ಅಗತ್ಯವಿರುವ ಅಧ್ಯಯನ ಸಾಮಗ್ರಿಯನ್ನು ಒದಗಿಸಿದ್ದಾರೆ. ಹಸ್ತಪ್ರತಿ ತಯಾರಿಕೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಅವರ ಸಹಾಯ ಹಸ್ತವಿಲ್ಲದಿದ್ದರೆ ನಾನು ಈ ಪುಸ್ತಕವನ್ನು ಪೂರ್ಣಗೊಳಿಸಲಾಗುತ್ತಿರಲಿಲ್ಲ. ಅವರಿಗೆ ನನ್ನ ಹೃತ್ತೂರ್ವಕ ಕೃತಜ್ಞತೆಗಳು.”