ವಿದ್ವಾಂಸನ ಅದೃಷ್ಟ

ವಿದ್ವಾಂಸನ ಅದೃಷ್ಟ

ಅರಬ್ ದೇಶದಲ್ಲಿ ಅಬ್ದುಲ್ಲಾ ಎಂಬ ವಿದ್ವಾಂಸನಿದ್ದ. ಅವನು ಸುಲ್ತಾನನ ಅರಮನೆಯಲ್ಲಿ ಪತ್ರಬರಹಗಾರನಾಗಿದ್ದ. ಅವನ ವೇತನ ತೀರಾ ಕಡಿಮೆಯಾದ ಕಾರಣ ಅವನಿಗೆ ತನ್ನ ಸಂಸಾರದ ಖರ್ಚು ನಿಭಾಯಿಸಲು ಕಷ್ಟವಾಗುತ್ತಿತ್ತು.

ಅವತ್ತು ಸುಲ್ತಾನನ ಹುಟ್ಟುಹಬ್ಬ. ಅಂದಿನ ರುಚಿಕರ ತಿಂಡಿತಿನಿಸುಗಳ ತಯಾರಿಯ ಪರಿಮಳ ಆಸ್ವಾದಿಸಿದ ಅಬ್ದುಲ್ಲಾ ತನ್ನ ಕುಟುಂಬದವರನ್ನು ಔತಣಕ್ಕೆ ಆಹ್ವಾನಿಸಲಾಗುವುದು ಎಂದು ನಿರೀಕ್ಷಿಸಿದ್ದ. ಆದರೆ ಅವನಿಗೆ ನಿರಾಶೆಯಾಯಿತು. ಯಾಕೆಂದರೆ ಅವನನ್ನು ಯಾರೂ ಔತಣಕ್ಕೆ ಆಹ್ವಾನಿಸಲಿಲ್ಲ. "ನನಗೆ ಇಲ್ಲಿ ಬೆಲೆಯೇ ಇಲ್ಲ” ಎಂದುಕೊಂಡ ಅಬ್ದುಲ್ಲಾ.

ಆ ದಿನ ರಾತ್ರಿ ನಿರಾಶೆಯಿಂದಲೇ ಮಲಗಿದ್ದ ಅಬ್ದುಲ್ಲಾ, ಮಧ್ಯರಾತ್ರಿಯಲ್ಲಿ ತನ್ನ ಮಡದಿಯನ್ನು ನಿದ್ದೆಯಿಂದ ಎಬ್ಬಿಸಿ ಹೇಳಿದ, “ನನಗೊಂದು ಐಡಿಯಾ ಹೊಳೆದಿದೆ. ಅದರಿಂದ ನಾನು ಶ್ರೀಮಂತನೂ ಪ್ರಸಿದ್ಧನೂ ಆಗುತ್ತೇನೆ. ನಾನು ಎಲ್ಲವನ್ನೂ ತಿಳಿದ ಜ್ನಾನಿಯಂತೆ ನಟಿಸುತ್ತೇನೆ.”

ಅವನು ಆ ಕಾಳರಾತ್ರಿಯಲ್ಲಿ ಗುಟ್ಟಾಗಿ ಸುಲ್ತಾನನ ಕುದುರೆಲಾಯಕ್ಕೆ ಹೋದ. ಅಲ್ಲಿದ್ದ ಸುಲ್ತಾನನ ಅಚ್ಚುಮೆಚ್ಚಿನ ಬಿಳಿ ಕುದುರೆಯನ್ನು ಕಾಡಿಗೆ ಒಯ್ದು, ಒಂದು ಮರಕ್ಕೆ ಕಟ್ಟಿ ಹಾಕಿದ.

ಮರುದಿನ ಬೆಳಗ್ಗೆ ಅವನು ತನ್ನ ಮಡದಿಗೆ ಹೇಳಿದ, "ನೀನೀಗ ಅರಮನೆಗೆ ಹೋಗಿ, ನಾನು ಜ್ನಾನಿ ಎಂಬ ಸುದ್ದಿ ಹರಡಬೇಕು.” ಅವನ ಮಡದಿ ಅರಮನೆಗೆ ಹೋದಾಗ ಸುಲ್ತಾನ ಚಿಂತೆಯಲ್ಲಿ ಮುಳುಗಿದ್ದ. "ಸುಲ್ತಾನರೇ, ಏನು ಚಿಂತೆಯಲ್ಲಿರುವಂತೆ ಕಾಣುತ್ತೀರಿ” ಎಂದು ಕೇಳಿದಳು ಅವಳು. "ನನ್ನ ಅತ್ಯುತ್ತಮ ಕುದುರೆ ನಿನ್ನೆ ರಾತ್ರಿ ಕಾಣೆಯಾಗಿದೆ. ಅದು ಎಲ್ಲಿದೆಯೆಂದು ಯಾರಿಗೂ ತಿಳಿದಿಲ್ಲ” ಎಂದು ಉತ್ತರಿಸಿದ ಸುಲ್ತಾನ.

"ನನ್ನ ಪತಿ ಅಬ್ದುಲ್ಲಾ ಮಹಾಜ್ನಾನಿ. ಅವನಿಗೆ ಎಲ್ಲವೂ ತಿಳಿದಿದೆ. ಆದರೆ ಇವತ್ತು ಅವನು ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದಾನೆ” ಎಂದಳು ಅಬ್ದುಲ್ಲಾನ ಮಡದಿ. "ಹೌದೇನು? ಆದರೂ ಅವನು ನನ್ನೊಡನೆ ಮಾತನಾಡಲು ಸಾಧ್ಯವಾದೀತು” ಎನ್ನುತ್ತಾ ಸುಲ್ತಾನ ಅಬ್ದುಲ್ಲಾನ ಮನೆಗೆ ಹೊರಟ.

ಸುಲ್ತಾನ ಮನೆಗೆ ಬಂದಾಗ ಅಬ್ದುಲ್ಲಾ ಹಾಸಿಗೆಯಲ್ಲಿ ನಿಶ್ಶಕ್ತಿಯಿಂದ ಮಲಗಿಕೊಂಡೇ ಇದ್ದ. ಸುಲ್ತಾನ ತನ್ನ ಕುದುರೆಯ ಬಗ್ಗೆ ಕೇಳಿದಾಗ, ಅಬ್ದುಲ್ಲಾ ಕ್ಷೀಣ ಸ್ವರದಲ್ಲಿ ಪಿಸುಗುಟ್ಟಿದ, "ಸುಲ್ತಾನ, ನಿಮ್ಮ ಕುದುರೆಯನ್ನು ದಟ್ಟ ಕಾಡಿನಲ್ಲಿ ಒಂದು ಮರಕ್ಕೆ ಕಟ್ಟಿ ಹಾಕಲಾಗಿದೆ.”

ಅಂತೆಯೇ ಕುದುರೆಯನ್ನು ಹುಡುಕಲಿಕ್ಕಾಗಿ ಸುಲ್ತಾನ ತನ್ನ ಸೇವಕರನ್ನು ಕಾಡಿಗೆ ಕಳುಹಿಸಿದ. ಕಾಡಿನಲ್ಲಿ ಬಿಳಿ ಕುದುರೆ ಪತ್ತೆಯಾದಾಗ ಸುಲ್ತಾನನಿಗೆ ಬಹಳ ಸಂತೋಷವಾಯಿತು. ಅವನು ಅಬ್ದುಲ್ಲಾನಿಗೆ ಉಡುಗೊರೆಗಳನ್ನು ಕಳುಹಿಸಿಕೊಟ್ಟ. ಅದರಿಂದಾಗಿ ಕೆಲವು ದಿನಗಳು ಅಬ್ದುಲ್ಲಾ ಮತ್ತು ಅವನ ಮಡದಿ-ಮಕ್ಕಳು ಹೊಟ್ಟೆತುಂಬ ತಿನ್ನುವಂತಾಯಿತು. ಅದಲ್ಲದೆ, ಅಬ್ದುಲ್ಲಾ ಎಂಬ ಜ್ನಾನಿ ಸುಲ್ತಾನನ ಕುದುರೆಯ ಪತ್ತೆಗೆ ಕಾರಣನಾದ ಸುದ್ದಿ ನಗರದಲ್ಲೆಲ್ಲ ಹಬ್ಬಿತು.

ಅಷ್ಟರಲ್ಲಿ ಅಬ್ದುಲ್ಲಾನಿಗೆ ಸುಲ್ತಾನನಿಂದ ಕರೆ ಬಂತು. ಅರಮನೆಗೆ ಬಂದ ಅಬ್ದುಲ್ಲಾನಿಗೆ ಸುಲ್ತಾನ ಆದೇಶಿಸಿದ, "ನಮ್ಮ ಅರಮನೆಯ ಆಭರಣಗಳನ್ನು ಯಾರೋ ಕಳ್ಳ ಕದ್ದಿದ್ದಾನೆ. ನಿನಗೆ ಮಾತ್ರ ಕಳ್ಳನನ್ನು ಪತ್ತೆ ಮಾಡಲು ಸಾಧ್ಯ. ನಾಳೆ ಬೆಳಗ್ಗೆ ಅದ್ಯಾರೆಂದು ನೀನು ಹೇಳಬೇಕು. ಇಲ್ಲವಾದರೆ ನಿನಗೆ ಕಠಿಣ ಶಿಕ್ಷೆ ಕೊಡಲಾಗುವುದು.”

ಸುಲ್ತಾನನ ಸೈನಿಕರು ಅಬ್ದುಲ್ಲಾನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿದರು. ರಾಜಾಭರಣಗಳ ಕಳ್ಳನನ್ನು ಹೇಗೆ ಪತ್ತೆ ಮಾಡುವುದೆಂದು ತಿಳಿಯದೆ ಅಬ್ದುಲ್ಲಾ ತಲೆಗೆ ಕೈಹೊತ್ತು ಕುಳಿತ.

ರಾಜಾಭರಣಗಳನ್ನು ಕದ್ದವಳು ಗಿವಾ ಎಂಬ ಹೆಸರಿನ ಒಬ್ಬಳು ಸೇವಕಿ. ಕಳ್ಳನನ್ನು ಪತ್ತೆ ಮಾಡಲು ಜ್ನಾನಿಯನ್ನು ಕರೆಸಲಾಗಿದೆ ಎಂದು ತಿಳಿದ ಅವಳು, ಅಬ್ದುಲ್ಲಾನನ್ನು ಬಂಧಿಸಿಟ್ಟಿದ್ದ ಕೋಣೆಯ ಹತ್ತಿರ ಹೋದಳು. ಕೋಣೆಯೊಳಗೆ ಅಬ್ದುಲ್ಲಾ ಮಂಡಿಯೂರಿ ಕುಳಿತು ಬಿಕ್ಕಳಿಸುತ್ತಿದ್ದ, “ಇದೆಲ್ಲ ನನ್ನ ನಾಲಗೆಯಿಂದಾದ ತಪ್ಪು. ಅದುವೇ ಸತ್ಯ. ಇದೆಲ್ಲ ತಪ್ಪಿಗೆ ಕಾರಣ ಗಿವಾ."   ವಿದ್ವಾಂಸನಾದ ಅಬ್ದುಲ್ಲಾ, ನಾಲಗೆ ಎಂಬ ಅರ್ಥದ ಪ್ರಾಚೀನ ಅರಬ್ ಭಾಷೆಯ ಪದ “ಗಿವಾ" ಎಂಬುದನ್ನು ಬಳಸಿ ತನ್ನ ನಾಲಗೆಗೆ ತಾನೇ ಶಪಿಸಿಕೊಳ್ಳುತ್ತಿದ್ದ.

 ಆದರೆ ಅದನ್ನು ಕೇಳಿದ ಸೇವಕಿ ಗಿವಾ ನಡುಗಿ ಹೋದಳು. ಅವನು ತನ್ನ ಬಗ್ಗೆಯೇ ಮಾತಾಡುತ್ತಿದ್ದಾನೆ ಎಂದು ಅವಳು ಭಾವಿಸಿದಳು. ತಕ್ಷಣವೇ ಅವಳು ಕೋಣೆಯ ಒಳಹೋಗಿ, ಅಬ್ದುಲ್ಲಾನ ಎದುರು ಮಂಡಿಯೂರಿ ಕುಳಿತು, ಹೀಗೆ ಬೇಡಿಕೊಂಡಳು: “ನೀವು ಹೇಳಿದ್ದು ಸತ್ಯ. ರಾಜಾಭರಣಗಳನ್ನು ಕದ್ದವಳು ನಾನೇ. ನನ್ನ ಜೀವ ಉಳಿಸಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಆಭರಣಗಳನ್ನು ಅರಮನೆಯ ಉದ್ಯಾನದ ದಾಳಿಂಬ ಮರದ ಬುಡದಲ್ಲಿ ಹೂತಿಟ್ಟಿದ್ದೇನೆ.”

"ನಿನಗೆ ಶಿಕ್ಷೆ ಆಗಲೇ ಬೇಕು. ಆದರೂ, ನೀನು ಈಗಲೇ ದೇಶ ಬಿಟ್ಟು ಹೋಗುವುದಾದರೆ ನಿನ್ನನ್ನು ಉಳಿಸಲು ಪ್ರಯತ್ನಿಸುತ್ತೇನೆ” ಎಂದ ಅಬ್ದುಲ್ಲಾ. ಅವಳು ಇದಕ್ಕೆ ಒಪ್ಪಿ, ಕೋಣೆಯಿಂದ ಹೊರನಡೆದಳು.

ಮರುದಿನ ಅಬ್ದುಲ್ಲಾನನ್ನು ಸುಲ್ತಾನನ ಎದುರು ತಂದು ನಿಲ್ಲಿಸಿದಾಗ, ಆತ ಧೈರ್ಯದಿಂದ ಹೇಳಿದ, “ಜಹಾಂಪನಾ, ನಿಮ್ಮ ಆಭರಣಗಳನ್ನು ಅರಮನೆಯ ಉದ್ಯಾನದ ದಾಳಿಂಬ ಮರದ ಬುಡದಲ್ಲಿ ಹುಗಿದಿಡಲಾಗಿದೆ. ಆದರೆ, ಅದನ್ನು ಕದ್ದವರನ್ನು ಯಾವತ್ತೂ ಹಿಡಿಯಲು ಸಾಧ್ಯವಿಲ್ಲ.” ಸುಲ್ತಾನ ತಕ್ಷಣವೇ ನಂಬಿಕಸ್ಥ ಸೇವಕನನ್ನು ಅಲ್ಲಿಗೆ ಕಳಿಸಿ ಪರೀಕ್ಷಿಸಿದ. ಎಲ್ಲ ಆಭರಣಗಳೂ ಅಲ್ಲಿಯೇ ಸಿಕ್ಕವು.

ಈಗ ಸುಲ್ತಾನನಿಗೆ ಅಚ್ಚರಿಯೋ ಅಚ್ಚರಿ. ಆದರೆ ಸುಲ್ತಾನನ ಮಂತ್ರಿಯೊಬ್ಬ ಅಬ್ದುಲ್ಲಾನ ಜ್ನಾನಕ್ಕೆ ಇನ್ನಷ್ಟು ಪುರಾವೆ ಬೇಕೆಂದು ಭಾವಿಸಿದ. ಅವನು ಸುಲ್ತಾನನ ಕಿವಿಯಲ್ಲಿ ಉಸುರಿದ, “ಜಹಾಂಪನಾ, ಈ ಮನುಷ್ಯ ಆಭರಣಗಳ ಕಳ್ಳನ ಜೊತೆ ಷಾಮೀಲಾಗಿರ ಬಹುದು. ಇವನನ್ನು ನಾವು ಪುನಃ ಪರೀಕ್ಷಿಸಬೇಕು.”

ಈ ಸಲಹೆಗೆ ಸುಲ್ತಾನ ಒಪ್ಪಿದ. ಅಬ್ದುಲ್ಲಾನನ್ನು ಇನ್ನೊಂದು ಕೋಣೆಗೆ ಕಳಿಸಿದ. ಅನಂತರ ಚಿನ್ನದ ಪಾತ್ರೆಯಲ್ಲಿ ಒಂದು ಕಪ್ಪೆಯನ್ನು ಹಾಕಿ ಅದರ ಮುಚ್ಚಳ ಮುಚ್ಚಿಸಿದ. ಈಗ ಅಬ್ದುಲ್ಲಾನನ್ನು ಸುಲ್ತಾನನ ಎದುರು ಪುನಃ ಕರೆತರಲಾಯಿತು. “ಓ ಬುದ್ಧಿವಂತನೇ, ಈ ಪಾತ್ರೆಯೊಳಗೆ ಏನಿದೆ ಹೇಳು” ಎಂದು ಆದೇಶಿಸಿದ ಸುಲ್ತಾನ.

ಈಗ ಅಬ್ದುಲ್ಲಾ ಭಯದಿಂದ ತತ್ತರಿಸಿ ಹೋದ. “ಓ ಕಪ್ಪೆಯೇ, ನಿನ್ನ ಕತೆ ಮುಗಿಯಿತು” ಎಂದವನು ಯೋಚಿಸಿದ; ಯಾಕೆಂದರೆ ತನ್ನ ತಂದೆ ಬಾಲ್ಯದಲ್ಲಿ ತನ್ನನ್ನು “ಕಪ್ಪೆ" ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದದ್ದು ಅವನಿಗೆ ನೆನಪಾಯಿತು. ಅವನು ಪುನಃ ತನ್ನಲ್ಲೇ ಗೊಣಗುಟ್ಟಿದ, “ಓ ಕಪ್ಪೆಯೇ, ನೀನೀಗ ತಪ್ಪಿಸಿಕೊಳ್ಳಲಾಗದಂತೆ ಸಿಕ್ಕಿ ಬಿದ್ದಿದ್ದಿ.”

ಸುಲ್ತಾನನ ಸಹಿತ ಅಲ್ಲಿದ್ದ ಹಲವರು ಈ ಮಾತುಗಳನ್ನು ಕೇಳಿಸಿಕೊಂಡರು. ಸುಲ್ತಾನ ತನ್ನ ಮಂತ್ರಿಗಳನ್ನು ಉದ್ದೇಶಿಸಿ ಹೇಳಿದ, "ಈಗ ನೀವು ನಂಬಲೇ ಬೇಕು - ಈ ಮನುಷ್ಯ ನಮ್ಮ ರಾಜ್ಯದ ಅತಿ ಬುದ್ಧಿವಂತ ಎಂಬುದನ್ನು.”

ಅನಂತರ ಅಬ್ದುಲ್ಲಾನಿಗೆ ಅವನ ಜೀವಮಾನಕ್ಕೆ ಸಾಲುವಷ್ಟು ಬೆಲೆಯ ಉಡುಗೊರೆಗಳನ್ನಿತ್ತು ಸುಲ್ತಾನ ಸನ್ಮಾನಿಸಿದ. ಅವನ್ನೆಲ್ಲ ಹೇರಿಕೊಂಡು ಅಬ್ದುಲ್ಲಾ ಬೇಗಬೇಗನೇ ಮನೆ ಸೇರಿಕೊಂಡ. ಯಾಕೆಂದರೆ ಅವನಿಗೆ ಚೆನ್ನಾಗಿ ಗೊತ್ತಿತ್ತು - ತನ್ನ ಅದೃಷ್ಟವೇ ತನ್ನನ್ನು ಕಾಪಾಡಿತು ಎಂಬ ಸತ್ಯ.