ವಿನೋಬಾ ಭಾವೆ ಹಾಗು ಭೂದಾನ ಚಳವಳಿ (ಓಷೋ ರಜನೀಶ್ ಚಿಂತನೆಗಳು)

ವಿನೋಬಾ ಭಾವೆ ಹಾಗು ಭೂದಾನ ಚಳವಳಿ (ಓಷೋ ರಜನೀಶ್ ಚಿಂತನೆಗಳು)

          ಬಂಡವಾಳಶಾಹಿಯನ್ನು ಮೀರಲು ಎರಡು ಮಾರ್ಗಗಳಿವೆ: ಒಂದು, ಅದನ್ನು ಮೀರಿ ಮುಂದೆ ಹೋಗುವುದು; ಇನ್ನೊಂದು, ಹಾಗೆ ದಾಟದೇ ಹಿಂದಕ್ಕೆ ಸರಿದುಬಿಡುವುದು. ಸರ್ವೋದಯವು ಬಂಡವಾಳಶಾಹಿಯನ್ನು ಮೀರುವ ಉದ್ದೇಶದ್ದಲ್ಲ, ಅದು ಮರಳಿ ಭೂತಕಾಲಕ್ಕೆ ಹಿಂದಿರುಗಲು ಬೋಧಿಸುತ್ತದೆ. ವಿನೋಬಾ, ಗಾಂಧೀ ಮೊದಲಾದವರನ್ನು ಮನೋವಿಜ್ಞಾನದ ನೆಲೆಯಿಂದ ವಿಶ್ಲೇಷಿಸಬೇಕಾಗುತ್ತದೆ. ಕಷ್ಟ ಬಂದಾಗ ಒಂದು ಹೆಜ್ಜೆ ಹಿಂದಿಡುವುದು, “ಹಳೆಯ ಕಾಲವೇ ಚೆನ್ನಾಗಿತ್ತು” ಎಂದು ಹಲುಬುವುದು ನಮ್ಮ ಮನಸ್ಸಿನ ಅನಾದಿಕಾಲದ ಪ್ರವೃತ್ತಿಯಾಗಿದೆ. ಆದ್ದರಿಂದಲೇ ನಗರ ಪ್ರದೇಶಗಳಿಗಿಂತ ನೂರಾರು ವರ್ಷಗಳಷ್ಟು ಹಿಂದುಳಿದ ಸ್ಥಿತಿಯಲ್ಲಿರುವ ಹಳ್ಳಿಗಳೇ ಚೆಂದ ಎಂದು ಗಾಂಧೀವಾದಿಗಳು ಯೋಚಿಸುವುದು. ಹಳ್ಳಿಗಳಲ್ಲಿ ಒಂದು ಸಲ ಸುಮ್ಮನೆ ಸುತ್ತಾಡಿ ಬರುವುದು ಬೇರೆ, ಅಲ್ಲೇ ಇದ್ದು ವಾಸಿಸುವುದು ಬೇರೆ. ’ನಗರಕ್ಕಿಂತ ಹಳ್ಳಿಗಳೇ ಚಂದ’ ಎಂದು ಯಾವ ಹಳ್ಳಿಗನೂ ಹೇಳುವುದಿಲ್ಲ. ನಗರ ಪ್ರದೇಶಗಳಲ್ಲಿ ವಾಸಿಸುವ ಗಾಂಧಿಯಂಥವರು ಗ್ರಾಮಸ್ವರಾಜ್ಯ, ಗ್ರಾಮೀಣ ಪಂಚಾಯಿತಿಗಳ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ವಿರೋಧಾಭಾಸ. ಹಳ್ಳಿಯ ಬದುಕಿನಲ್ಲಿ ಭವಿಷ್ಯವಿರುವುದಿಲ್ಲ. ಇದು ಪ್ರತಿಯೊಬ್ಬ ಹಳ್ಳಿಗನಿಗೂ ಗೊತ್ತು. ನಮ್ಮ ಸಮಾಜ ಸರಿಯಾದ ದಾರಿಯಲ್ಲಿ ನಡೆದರೆ ಮುಂದೆ ಹಳ್ಳಿಗಳು ಕಣ್ಮರೆಯಾಗುವವು. ಏಕೆಂದರೆ ಅಭಿವೃದ್ಧಿಯಾದಂತೆ ಭೂಮಿಯನ್ನು ನಂಬಿ ಬದುಕುವ ಕಾಲ ಹೊರಟುಹೋಗುವುದು. ಈವರೆಗಿನ ಮನುಷ್ಯ ಸಂಸ್ಕೃತಿಯು ಹಂತ ಹಂತವಾಗಿ ಭೂಮಿಯಿಂದ ವಿಮೋಚನೆ ಪಡೆಯುವ ಹಾದಿಯಲ್ಲೇ ನಡೆದು ಬಂದು ಈ ದಿನ ತಂತ್ರಜ್ಞಾನದ ನೆಲೆಯಲ್ಲಿ ನಿಂತಿದೆ. ಆಹಾರಗಳನ್ನು ಭೂಮಿಯಲ್ಲಿ ಬೆಳೆಯದೇ ರಾಸಾಯನಿಕ ವಸ್ತುಗಳನ್ನು ಬಳಸಿ ಕಾರ್ಖಾನೆಗಳಲ್ಲಿ ತಯಾರಿಸುವ ಕಾಲ ದೂರವಿಲ್ಲ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಇಂದಿನ ಮನುಷ್ಯನು ಸಾವಿರಾರು ವರ್ಷಗಳ ಕೃಷಿ ಪದ್ಧತಿಯನ್ನು ಇನ್ನು ಬಹುಕಾಲ ಮುಂದುವರೆಸಲಾರ. ಮುಂಬರುವ ದಿನಗಳಲ್ಲಿ ಗಾಳಿಯ ನೆರವಿನಿಂದ, ಸೌರಶಕ್ತಿಯ ಹಾಗು ಸಮುದ್ರಗಳ ನೆರವಿನಿಂದ ಆಹಾರಗಳನ್ನು ಉತ್ಪತ್ತಿ ಮಾಡಲಿದ್ದಾನೆ. ಭೂಮಿಯನ್ನು ನಂಬಿ ಬದುಕುವವರೆಗೂ ನಮಗೆ ಬಡತನದಿಂದ ಬಿಡುಗಡೆಯಿಲ್ಲ.

ಸರ್ವೋದಯವಾದರೂ ಭೂದಾನಕ್ಕೆ ಮಹತ್ವ ನೀಡುವ ಚಳವಳಿಯಾಗಿದೆ. ಭೂಮಿಯನ್ನು ನಂಬಿಕೊಂಡ ಯಾವ ಚಳವಳಿಯೂ ಪ್ರಗತಿಪರ ಎನಿಸದು. ಅಲ್ಲದೆ ಭೂದಾನ ಚಳವಳಿಯು ತ್ಯಾಗ, ಸಮರ್ಪಣೆ, ಸರಳ ಜೀವನಗಳ ಮೇಲೆ ನಿಂತಿದೆ. ಇಂತಹ ಮೌಲ್ಯಗಳನ್ನು ಈತನಕ ಭೂಮಿಯಲ್ಲಿ ಯಾರೂ ಪಾಲಿಸಿದವರಿಲ್ಲ. ಇವರಿಗೆ ಚರಿತ್ರೆಯ ಪ್ರಾಥಮಿಕ ತಿಳುವಳಿಕೆಯೂ ಇಲ್ಲವಲ್ಲ! ಸರಳಜೀವಿಗಳು ಎನಿಸಿಕೊಂಡವರ ಮನಸ್ಸು ಬುದ್ಧಿಗಳೂ ತುಂಬ ಸಂಕೀರ್ಣವಾಗಿ ಕೆಲಸ ಮಾಡುತ್ತಿರುವುದರಿಂದ ನಿಜವಾದ ಅರ್ಥದಲ್ಲಿ ಸರಳಜೀವಿಗಳು ಎಂಬ ವರ್ಗ ಎಲ್ಲೂ ಇರುವುದಿಲ್ಲ. ಬದುಕಿನ ಸ್ವಭಾವವೇ ಸರಳವಾದುದಲ್ಲ, ಅದು ಸಂಕೀರ್ಣವಾದುದು, ನಿಗೂಢವಾದುದು. ವಿಕಾಸವೆಂಬುದು ಸರಳತೆಯಿಂದ ಸಂಕೀರ್ಣತೆಯತ್ತ ಸಾಗುತ್ತಿರುತ್ತದೆ. ಅಮೀಬಾದಿಂದ ಈವರೆಗಿನ ವಿಕಾಸವನ್ನು ಗಮನಿಸಿದರೆ ಇದೆಲ್ಲ ತಿಳಿಯುತ್ತದೆ. ಮುಂಬಯಿಯಂಥ ನಗರದಲ್ಲಿ ವಾಸಿಸುವವನು ಹಳ್ಳಿಗನಿಗಿಂತ ಹೆಚ್ಚು ಸಂಕೀರ್ಣನಾಗಿರುತ್ತಾನೆ. ಸಂಕೀರ್ಣತೆ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.

ಗಾಂಧೀ, ವಿನೋಬಾರಿಗೆ ಸಂಕೀರ್ಣತೆ ಎಂದರೇನೆಂದು ಅರ್ಥವಾಗಿಲ್ಲ. ನೇಕಾರರನ್ನು ಅವಲಂಬಿಸದೇ ಚರಕದಿಂದ ತನ್ನ ಬಟ್ಟೆಯನ್ನು ತಾನೇ ನೇಯ್ದುಕೊಳ್ಳುವುದೇ ಬೆಳವಣಿಗೆ ಎಂದು ಇವರು ಭಾವಿಸಿದಂತಿದೆ. ಯಂತ್ರಗಳ ವಿರೋಧ ಖಂಡಿತ ಪ್ರಗತಿಪರವಾದುದಲ್ಲ, ಮರಳಿ ಮಣ್ಣಿಗೆ ಹಿಂದಿರುಗುವುದು ಪ್ರಕೃತಿಯ ನಿಯಮಕ್ಕೇ ವಿರುದ್ಧವಾದುದು. “ನಿಮ್ಮ ಬದುಕಿನ ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳಿ” ಎಂದು ಇವರು ಬೋಧಿಸುತ್ತಾರೆ. ಸಾಯುವ ಸಂಕಲ್ಪ ಮಾಡಿಕೊಂಡವರು ಮಾತ್ರ ಹಾಗೆ ಅಗತ್ಯಗಳನ್ನು ತಗ್ಗಿಸಿಕೊಳ್ಳುತ್ತಾರೆ. ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳುವುದು ಆತ್ಮಹತ್ಯೆಯ ಲಕ್ಷಣಗಳಲ್ಲೊಂದಾಗಿದೆ. ಅಗತ್ಯಗಳು ಹೆಚ್ಚಾದಾಗಲೇ ಮನುಷ್ಯ ಪಶುತ್ವವನ್ನು ಮೀರಲು ಸಾಧ್ಯವಾಗುವುದು. ಪಶುಗಳ ಅಗತ್ಯ ಎಂದಿಗೂ ಹೆಚ್ಚಾಗುವುದಿಲ್ಲ. ಮನುಷ್ಯನ ಮನಸ್ಸನ್ನು, ಪ್ರಕೃತಿಯ ಮೂಲ ತತ್ವಗಳನ್ನು ಸರಿಯಾಗಿ ಗ್ರಹಿಸದೇ ಹೋದಾಗ ಮಾತ್ರ ಸರ್ವೋದಯದಂಥ ಪರಿಕಲ್ಪನೆಗಳು ಹುಟ್ಟಿಕೊಳ್ಳುತ್ತವೆ.

ಸರ್ವೋದಯ ಬಾಲ್ಯಾವಸ್ಥೆಯನ್ನೇ ಸದಾ ಮೆಚ್ಚುತ್ತದೆ. ತನ್ನ ಮನೆ ಹೊತ್ತಿ ಉರಿಯುವಾಗ ವಯಸ್ಸಾದ ಮುದುಕನೂ ಚಿಕ್ಕ ಮಕ್ಕಳ ಹಾಗೆ ರೋದಿಸುತ್ತಾನೆ. ಇದನ್ನು ಮನೋವಿಜ್ಞಾನದ ಪರಿಭಾಷೆಯಲ್ಲಿ ರಿಗ್ರೆಷನ್ ಎನ್ನುತ್ತಾರೆ. ಮನೆ ಹೊತ್ತಿ ಉರಿಯುವುದು ಎಂತಹ ಸಂಕೀರ್ಣ ಸಂದರ್ಭವನ್ನು ನಿರ್ಮಿಸಿಬಿಡುತ್ತದೆ ಎಂದರೆ ಅವನು ಮತ್ತೆ ತನ್ನ ಬಾಲ್ಯಾವಸ್ಥೆಗೆ ಹಿಂದಿರುಗಿದಲ್ಲದೆ ಆ ಸಂದರ್ಭವನ್ನು ನಿಭಾಯಿಸಲಾರ. ಗಾಂಧೀವಾದ, ಸರ್ವೋದಯಗಳೂ ಹೀಗೆ ಸಂದರ್ಭವನ್ನು ನಿಭಾಯಿಸಲಾಗದೇ ಹುಟ್ಟಿರುವ ಬಾಲಿಶ ಸಿದ್ಧಾಂತಗಳಾಗಿವೆ. ನಿಜವೇನೆಂದರೆ ಒಂದು ಸಂಕೀರ್ಣ ಸನ್ನಿವೇಶ ನಿರ್ಮಾಣವಾದಾಗ ನಮ್ಮ ಮನಸ್ಸು ಅದನ್ನು ಪರಿಶೀಲಿಸಲು ಪ್ರಬುದ್ಧವಾಗಿ ಯೋಚಿಸಲು ತೊಡಗುತ್ತದೆ. ಆದರೆ ಯಾವ ಪ್ರಬುದ್ಧ ನೆಲೆಗೂ ಅರ್ಥವಾಗದ ಸನ್ನಿವೇಶ ನಿರ್ಮಾಣವಾಗಿಬಿಟ್ಟರೆ ಮರುಕ್ಷಣವೇ ಮನಸ್ಸು ಪ್ರಬುದ್ಧ ನೆಲೆಯಿಂದ ಜಾರಿ ಪ್ರಾಥಮಿಕ ನೆಲೆಗೆ ಬಂದುಬಿಡುತ್ತದೆ. ಇದು ಸಹಜ ಕೂಡ, ಆದರೆ ಇದು ಒಂದು ಬಗೆಯ ಪಲಾಯನವಾದ. ಬದುಕು ನಿರಂತರವಾಗಿ ಹೊಸ ಹೊಸ ಸವಾಲುಗಳನ್ನು ತರುತ್ತಿರುತ್ತದೆ. “ಮುಂಬಯಿ, ನ್ಯೂಯಾರ್ಕ್, ಮಾಸ್ಕೋ ನಗರಗಳೆಲ್ಲ ಏಕೆ ಬೇಕು? ಹಳ್ಳಿ ಗಾಡುಗಳಲ್ಲಿ, ಕಾಡು ಮೇಡುಗಳಲ್ಲಿ, ಬದುಕಿದರೆ ಏನಂತೆ” ಎನ್ನುವುದು ಇದರ ವಾದ. ಬಟ್ಟೆಯನ್ನೂ ಹಾಕದೇ ಬೆತ್ತಲೆ ಓಡಾಡಿಕೊಂಡಿದ್ದರೆ ಇನ್ನೂ ಒಳ್ಳೆಯದು, ಆಗ ಚರಕ ತಿರುಗಿಸುವ ಪ್ರಮೇಯವೂ ಇರುವುದಿಲ್ಲ! ನಿಜಕ್ಕೂ ಮರಳಿ ಮಣ್ಣಿಗೆ ಹೋಗುವ ಈ ತುಡಿತದ ಮೂಲವೇನು?

ಹಿಂದೆ ದೇಶದಾದ್ಯಂತ ಎರಡೇ ವಿಶ್ವವಿದ್ಯಾಲಯಗಳಿದ್ದವು. ಹಾಗು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದರು. ಇಂದು ನೂರಾರು ವಿಶ್ವವಿದ್ಯಾಲಯಗಳಿವೆ, ಒಂದೊಂದರಲ್ಲೂ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ನಿಸ್ಸಂಶಯವಾಗಿ ಸಮಸ್ಯೆಗಳು ಹುಟ್ಟುತ್ತವೆ. ಒಂದೇ ಕ್ಯಾಂಪಸ್ಸಿನಲ್ಲಿ ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಒಟ್ಟಿಗೆ ಓದುವಂಥ ಪರಿಸ್ಥಿತಿ ಮನುಷ್ಯನ ಇತಿಹಾಸದಲ್ಲಿ ಹಿಂದೆಂದೂ ನಿರ್ಮಾಣವಾಗಿರಲಿಲ್ಲ. ಇಲ್ಲಿ ಹುಟ್ಟುವ ಸಮಸ್ಯೆಗಳಿಗೆ ನಮ್ಮ ಹಳೆಯ ಸಿದ್ಧಾಂತಗಳಲ್ಲಿ ಉತ್ತರಗಳು ಖಂಡಿತ ಸಿಗುವುದಿಲ್ಲ. ಹಿಂದೆ ಮಕ್ಕಳಿದ್ದರು, ವಯಸ್ಕರಿದ್ದರು ಆದರೆ ಇಂದು ’ಯುವಪೀಳಿಗೆ’ ಎಂಬ ಹೊಸದೊಂದು ತಲೆಮಾರು ಸೃಷ್ಟಿಯಾಗಿದೆ. ಹಿಂದೆಲ್ಲ ಮಕ್ಕಳು ಬಾಲ್ಯಾವಸ್ಥೆ ಕಳೆದಂತೆ ಮದುವೆಯಾಗಿ ವಯಸ್ಕರಾಗಿಬಿಡುತ್ತಿದ್ದರು. ಹತ್ತು ವರ್ಷಕ್ಕೆ ಮದುವೆಯಾಗುವವನು ಯುವಕ ಹೇಗಾದಾನು? ಯುವಪೀಳಿಗೆ ಇತ್ತೀಚೆಗೆ ಹುಟ್ಟಿಕೊಂಡಿರುವ ಹೊಸ ಪೀಳಿಗೆಯಾಗಿದೆ. ಇಪ್ಪತ್ತು ಸಾವಿರ ಯುವಪೀಳಿಗೆ ಒಂದು ಸೂರಿನಡಿ ವಾಸಿಸಲಾರಂಭಿಸಿದರೆ ಹೊಸ ಸಮಸ್ಯೆಗಳು ಹುಟ್ಟದೇ ಇರುವುದೇ? ಈ ಸಮಸ್ಯೆಗೆ ಸರ್ವೋದಯದಲ್ಲಿ ಪರಿಹಾರವೇನಿದೆ? “ವಿಶ್ವವಿದ್ಯಾಲಯಗಳನ್ನೆಲ್ಲ ಮುಚ್ಚಿ ಈ ಯುವಜನತೆಯನ್ನು ಹಳ್ಳಿಗಳಿಗೆ ಕಳುಹಿಸಿ, ಮೂಲಭೂತ ಶಿಕ್ಷಣ ನೀಡಿ” ಎಂದು ಗಾಂಧೀ ಹೇಳುತ್ತಾರೆ. ಅವರು ತಮ್ಮ ಸ್ವಂತ ಮಕ್ಕಳನ್ನೂ ವಿಶ್ವವಿದ್ಯಾಲಯದ ಮೆಟ್ಟಿಲುಗಳನ್ನೇರಲು ಬಿಟ್ಟವರಲ್ಲ. ಅವರ ದೃಷ್ಟಿಯಲ್ಲಿ ಇಂದಿನ ಯುವಪೀಳಿಗೆ ಬಡಗಿ ಕೆಲಸ, ನೇಯ್ಗೆ, ಚಮ್ಮಾರಿಕೆ, ಇಂಥವುಗಳನ್ನು ಕಲಿತರೆ ಸಾಕು. ಇವೆಲ್ಲ ಮೂಲಭೂತ ಶಿಕ್ಷಣವೇ? ಇವೆಲ್ಲ ಶಿಕ್ಷಣದಿಂದ ಪಾರಾಗುವ ಉಪಾಯಗಳು ಅಷ್ಟೆ. ಹೊಸ ಸಮಸ್ಯೆಗಳಿಗೆ ಉತ್ತರವಿಲ್ಲದಾಗ ಮಾತ್ರ ಹಳೆಯದರ ಮೊರೆ ಹೋಗುವುದು. ಇಂದು ಯುವಪೀಳಿಗೆಯ ಸಮಸ್ಯೆಗಳು ಬರೀ ಭಾರತದ ಸಮಸ್ಯೆಯಲ್ಲ, ಇದೊಂದು ಜಾಗತಿಕ ಸಮಸ್ಯೆಯಾಗಿದೆ. ಇಂದು ಜಗತ್ತಿನಾದ್ಯಂತ ಯುವಜನತೆಯೇ ಒಂದು ಪ್ರತ್ಯೇಕ ವರ್ಗವಾಗಿದೆ. ಗುರುಕುಲಗಳನ್ನು ನಿರ್ಮಾಣ ಮಾಡುವುದರಿಂದ ಪ್ರಯೋಜನವಿಲ್ಲ. ಇಂದು ಜ್ಞಾನ ಎಷ್ಟು ವೇಗವಾಗಿ ನಿರ್ಮಾಣವಾಗುತ್ತಿದೆ ಎಂದರೆ ಅದನ್ನು ನಿಭಾಯಿಸಲು ಈಗಿನ ವಿಶ್ವವಿದ್ಯಾಲಯಗಳಿಗೂ ಸಾಧ್ಯವಾಗುತ್ತಿಲ್ಲ.

೨೦ ವರ್ಷಗಳ ಕಾಲ ದೇಶದಾದ್ಯಂತ ಬರಿಗಾಲಲ್ಲಿ ಸಂಚರಿಸಿದ ವಿನೋಬಾಭಾವೆಯ ತಿರುಗಾಟವನ್ನೇ ನಿಜವಾದ ಕ್ರಾಂತಿ ಎಂಬಂತೆ ಬಿಂಬಿಸಲಾಯಿತು. ವಿನೋಬಾ ಭಾರತದ ಪ್ರತಿ ಹಳ್ಳಿಗೂ ಹೋಗಿ ಭಜನೆ ಮಾಡುತ್ತ, ಗೀತೆ, ರಾಮಾಯಣಗಳನ್ನು ತಪ್ಪು ತಪ್ಪಾಗಿ ವ್ಯಾಖ್ಯಾನಿಸುತ್ತ ಹಳ್ಳಿಯ ಜಮೀನುದಾರರನ್ನು, ಹಿಡುವಳಿದಾರರನ್ನು, ಭೂರಹಿತರನ್ನು ಒಟ್ಟು ಗೂಡಿಸಿದರು. ’ನಿಮಗೆ ಐವರು ಮಕ್ಕಳಿದ್ದರೆ ನನ್ನನ್ನು ಆರನೆಯವನೆಂದು ತಿಳಿದು ನಿಮ್ಮ ಆಸ್ತಿಯಲ್ಲಿ ಒಂದು ಪಾಲನ್ನು ನನಗೂ ನೀಡಿರಿ, ಅದನ್ನು ನಾನು ಬಡವರಿಗೆ ಹಂಚುತ್ತೇನೆ’ ಎಂದು ಕೇಳುತ್ತಿದ್ದರು. ಹೀಗೆ ಲಕ್ಷಾಂತರ ಎಕರೆ ಭೂಮಿಯನ್ನು ಸಂಗ್ರಹಿಸಲಾಯಿತು. ಆಗ ಎಲ್ಲ ರಾಜಕಾರಿಣಿಗಳೂ ವಿನೋಬಾರನ್ನು ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದರು. ಸ್ವಾತಂತ್ರ್ಯಕ್ಕೆ ಮುನ್ನ ವಿನೋಬಾರನ್ನು ಅಷ್ಟು ಇಷ್ಟ ಪಡದಿದ್ದ ನೆಹರೂ ಕೂಡ ಅವರ ಸಭೆಗಳಿಗೆ ಹೋಗಲಾರಂಭಿಸಿದರು. ನೆಹರೂ ನಿಜಕ್ಕೂ ವರ್ಣರಂಜಿತ ವ್ಯಕ್ತಿತ್ವದವರು. ಗಾಂಧೀವಾದಿಯಾಗಿದ್ದರೂ ಆಧುನಿಕ ಅಭಿವೃದ್ಧಿಯಲ್ಲಿ ಆಸಕ್ತರಾಗಿದ್ದವರು, ಬ್ರಾಹ್ಮಣರಾಗಿದ್ದರೂ ಅವರು ಸಸ್ಯಾಹಾರಿಯೇನಾಗಿರಲಿಲ್ಲ. ವಿನೋಬಾ ಭಾವೆಯಾದರೂ ಹಳೆಯ ಮೌಲ್ಯಗಳ ಪಳೆಯುಳಿಕೆಯಂತಿದ್ದರು. ಹೀಗೆ ಇವರಿಬ್ಬರಿಗೂ ಯಾವ ನೆಲೆಯಲ್ಲೂ ಹೊಂದಾಣಿಕೆಯೇ ಆಗುತ್ತಿರಲಿಲ್ಲವಾದರೂ ಗಾಂಧಿಯ ಹೆಸರಿನಲ್ಲಿ ಇವರನ್ನು ನೆಹರೂ ಸಹಿಸಿಕೊಂಡಿದ್ದರು. ಸಾವಿರಾರು ಜನ ನೆರೆದಿರುತ್ತಿದ್ದ ಸಭೆಗಳಲ್ಲಿ ತಾನೂ ವಿನೋಬಾರನ್ನು ಬೆಂಬಲಿಸುತ್ತೇನೆ ಎಂದು ನೆಹರೂಗೆ ತೋರಿಸಿಕೊಳ್ಳಬೇಕಾಗಿತ್ತು, ಅಲ್ಲದೆ ನನ್ನಂಥವನ ಸಭೆಗೆ ಪ್ರಧಾನಿಯೂ ಹಾಜರಾಗುತ್ತಾನೆ ಎಂಬ ಹೆಮ್ಮೆ ವಿನೋಬಾಗೂ ಬೇಕಿತ್ತು. ಕೇಳಿದ ಕೂಡಲೆ ಭೂಮಿ ಸಿಕ್ಕುವುದಾದರೆ ಕ್ರಾಂತಿ ಹೋರಾಟಗಳನ್ನೇಕೆ ಮಾಡಬೇಕು? ಎಂದು ಬಡವರೂ ಆಲೋಚಿಸಲಾರಂಭಿಸಿದರು. ಜನ ಸುಲಭವಾಗಿ ಖಾಸಗಿ ಆಸ್ತಿಯನ್ನು ಬಿಟ್ಟುಕೊಡುವವರಲ್ಲ, ರಕ್ತಕ್ರಾಂತಿಯೇ ಏಕಮೇವ ಮಾರ್ಗ ಎಂದು ಪ್ರಚಾರ ಮಾಡುತ್ತಿದ್ದ ಕಮ್ಯುನಿಸ್ಟರು ಸಹ ವಿನೋಬಾ ಎದುರು ಮುಖಭಂಗ ಅನುಭವಿಸಿದರು. ಆದರೆ ವಾಸ್ತವ ಬೇರೆಯೇ ಆಗಿತ್ತು.

         ವ್ಯವಸಾಯಕ್ಕೆ ಬರೀ ಭೂಮಿ ಇದ್ದರಾಗುವುದೇ? ವ್ಯವಸಾಯಕ್ಕೆ ಎತ್ತುಗಳು ಬೇಕು, ಕೃಷಿ ಪರಿಕರಗಳು ಬೇಕು, ಬೀಜ, ಗೊಬ್ಬರಗಳು ಬೇಕು. ಬರೀ ನೆಲವನ್ನು ಇಟ್ಟು ಕೊಂಡು ಏನು ಮಾಡುವುದು? ಆ ನೆಲವಾದರೂ ಎಂತಹುದು. ನೀರಾವರಿಯನ್ನೇ ಕಾಣದ, ಬರೀ ಕಲ್ಲು, ಬಂಡೆಗಳಿಂದ ತುಂಬಿದ ಬಂಜರು ನೆಲ ಅದು. ಟ್ರ್ಯಾಕ್ಟರ್‌ನ ನೆರವಿಲ್ಲದೆ ಆ ಭೂಮಿಯಲ್ಲಿ ಕೆಲಸ ಮಾಡಲು ಆಗುತ್ತಲೇ ಇರಲಿಲ್ಲ. ಇವೆಲ್ಲ ಸಾಲದೆಂಬಂತೆ ಭೂದಾನ ಪಡೆದವರು ಅನಂತರ ಪ್ರತಿವರ್ಷ ಆಸ್ತಿ ತೆರಿಗೆಯನ್ನು ಕಟ್ಟಬೇಕಾಯಿತು. ಆಸ್ತಿ ತೆರಿಗೆಯನ್ನು ನೀಡಲಾರದೆ ಸಾವಿರಾರು ಭೂರಹಿತರು ತಮ್ಮ ಭೂಮಿಯನ್ನು ವಿನೋಬಾರ ಭೂದಾನ ಸಮಿತಿಗೆ ಹಿಂದಿರುಗಿಸಿದರು. ಆದರೆ ಮೂವತ್ತು ವರ್ಷಗಳ ಕಾಲ ಈ ಸಮಾಜವಾದಿಗಳು, ಬಂಡವಾಳಶಾಹಿಗಳು ವಿನೋಬಾ ಹಾಗು ಅವರ ಚಳವಳಿಗೆ ಇಲ್ಲದ ಪ್ರಚಾರ ನೀಡಿ ತಮ್ಮ ಬೇಳೆ ಬೇಯಿಸಿಕೊಂಡರು. ಅಲ್ಲದೆ ವ್ಯವಸಾಯ ಭೂಮಿ ಹೀಗೆ ತುಂಡುಗಳಾಗಿ ಹರಿದು ಹಂಚಿ ಹೋದರೆ ಬಡತನ ಇನ್ನೂ ದ್ವಿಗುಣಿತವಾಗುತ್ತದೆ ಎಂಬ ಪ್ರಾಥಮಿಕ ತಿಳುವಳಿಕೆಯೂ ಇಲ್ಲದೆ ಭೂದಾನ ಚಳವಳಿಯಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ದಾನ ಮಾಡಲಾಯಿತು. ವಿನೋಬಾ ಲೆಕ್ಕಾಚಾರವೂ ವಿಚಿತ್ರ! ನೂರು ಎಕರೆಗಳ ಜಮೀನುದಾರ ಇಪ್ಪತ್ತು ಎಕರೆ ದಾನ ಮಾಡಿದರೆ ಅದನ್ನು ಮಹಾದಾನ ಎನ್ನುತ್ತಿರಲಿಲ್ಲ. ಐದು ಎಕರೆಯ ಹಿಡುವಳಿದಾರ ತನ್ನ ಭೂಮಿಯಲ್ಲಿ ಅರ್ಧದಷ್ಟನ್ನು ದಾನ ಮಾಡಿದರೆ ಅದನ್ನು ಮಹಾದಾನ ಎಂದು ಸ್ತುತಿಸುತ್ತಿದ್ದರು. ಇದು ನಿಜಕ್ಕೂ ಅಪಾಯಕಾರೀ ಅರ್ಥಶಾಸ್ತ್ರ. ಐದು ಎಕರೆಯನ್ನು ಎರಡುವರೆ ಎಕರೆಗಳಲ್ಲಿ ತುಂಡು ಮಾಡಿದರೆ ಆ ಭೂಮಿಯ ವರಮಾನವೂ ಅದೇ ಅನುಪಾತದಲ್ಲಿ ಕ್ಷೀಣಿಸುತ್ತದೆ. ಕೊನೆಗೆ ಇದನ್ನೆಲ್ಲ ಬಗೆಹರಿಸಲಾಗದೆ ವಿನೋಬಾ ನಿರಾಶೆಗೊಂಡು ವಾರ್ಧಾ ಬಳಿ ಇದ್ದ ತಮ್ಮ ಪಾವನಾರ್ ಆಶ್ರಮಕ್ಕೆ ಹಿಂದಿರುಗಿದರು.

ಇತ್ತೀಚೆಗೆ ನಾಗಪುರ್ ವಿಶ್ವವಿದ್ಯಾಲಯ ಒಂದು ಸಮೀಕ್ಷೆ ನಡೆಸಿತು. ಭೂದಾನದಲ್ಲಿ ದಾನವಾದ ಭೂಮಿಯಲ್ಲಿ ಶೇ.೯೦ರಷ್ಟು ಭೂಪ್ರದೇಶವು ಸರ್ಕಾರಕ್ಕೆ ಸೇರಿದ್ದಂತೆ. ಉಳಿದ ಶೇ.೧೦ರಲ್ಲಿ ಶೇ.೭ರಷ್ಟು ವ್ಯವಸಾಯ ಯೋಗ್ಯ ಭೂಮಿಯೇ ಅಲ್ಲವಂತೆ. ಹಾಗು ಉಳಿದ ಶೇ.೩ರಲ್ಲಿ ಶೇ.೧ ಭೂಮಿಯ ಮೇಲೆ ನ್ಯಾಯಾಲಯದಲ್ಲಿ ಹಲವು ಮೊಕದ್ದಮೆಗಳು ದಾಖಲಾಗಿದ್ದವಂತೆ. ಹಾಗಿದ್ದರೆ ವಿನೋಬಾ ಚಳವಳಿ ಸಾಧಿಸಿದ್ದೇನು? ಆದರೆ ಗಾಂಧೀವಾದಿಗಳಿಗೆ ಇದೆಲ್ಲ ಮುಖ್ಯವಲ್ಲ, ದೊಡ್ಡ ದೊಡ್ಡ ಅಂಕಿ ಸಂಖ್ಯೆಗಳು ಇವರಿಗೆ ಮುಖ್ಯ. ಆ ಭೂಮಿ ನ್ಯಾಯವಾದುದೇ, ದಾನ ಮಾಡಲಾದ ಭೂಮಿ ನಿಜವಾಗಿಯೂ ಭೂಮಿಯ ಮೇಲಿರುವುದೇ ಇದಾವುದೂ ಅವರಿಗೆ ಬೇಕಾಗಿಲ್ಲ. ಒಂದು ಇಂಚು ಭೂಮಿ ಇಲ್ಲದವರೂ ಚಳುವಳಿಯಲ್ಲಿ ಭೂದಾನ ಮಾಡಿದ ಉದಾಹರಣೆಗಳು ಸಮೀಕ್ಷೆಯಲ್ಲಿ ಸಿಕ್ಕಿವೆಯಂತೆ.

ಛಿದ್ರ ಛಿದ್ರವಾಗಿರುವ ಭೂಮಿಗಳನ್ನು ಒಗ್ಗೂಡಿಸಿ ಬೃಹತ್ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡುವುದು ಹೇಗೆ ಎಂದು ಈಗ ಯೋಚಿಸಬೇಕಾಗಿದೆ. ಒಂದು ಹಳ್ಳಿಯ ಎಲ್ಲ ಭೂಮಿಗಳನ್ನು ಒಗ್ಗೂಡಿಸಿದರೆ ಸಮರೋಪಾದಿಯಲ್ಲಿ ಕೃಷಿಯನ್ನು ಒಂದು ಉದ್ಯಮದಂತೆ ನಡೆಸಬಹುದು. ದಾನದಿಂದ ಸಮಸ್ಯೆ ಬಗೆಹರಿಯುವ ಕಾಲ ಹಿಂದೆಂದೋ ಇತ್ತು. ಆದರೆ ಇಂದು ಅದೇ ಸವಕಲು ಸಿದ್ಧಾಂತವನ್ನು ನಂಬಿ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಬಾರದು. ಸಮಸ್ಯೆಯ ಆಳಕ್ಕೆ ಹೋಗದೇ ಸಮಸ್ಯೆಯಲ್ಲಿ ಮುಳುಗಿರುವವನಿಗೆ ಅರೆಹೊಟ್ಟೆ ಊಟಮಾಡೆಂದು ಪರಿಹಾರ ಬೋಧಿಸುವುದು ಸರಿಯಲ್ಲ. ಒಂದು ತುಂಡು ಬಟ್ಟೆ ಹಾಗು ತುಂಡು ರೊಟ್ಟಿಗಳಿಂದ ಮನುಷ್ಯನ ಜ್ವಲಂತ ಸಮಸ್ಯೆಗಳು ಬಗೆಹರಿಯವು. ಅವನಿಗೆ ತುಂಡು ಬಟ್ಟೆ, ರೊಟ್ಟಿ ಸಿಗುವವರೆಗೂ ಗಾಂಧೀ ಮಾತಿಗೆ ತಲೆಯಾಡಿಸುತ್ತಾನೆ. ಆಮೇಲೆ ಆತ ಸುಮ್ಮನಿರುವುದಿಲ್ಲ, ಇನ್ನೂ ಹೆಚ್ಚು ಕೇಳುತ್ತಾನೆ. ಇದನ್ನು ತಪ್ಪು ಎನ್ನಲಾಗದು. ಒಂದು ಸಮಾಜ ಸರಳವಾದಷ್ಟೂ ಕ್ಷೀಣಿಸತೊಡಗುತ್ತದೆ, ಯಾವ ಪ್ರತಿಭೆಗೂ ಜನ್ಮನೀಡದ ಬಂಜೆಯಾಗುತ್ತದೆ, ಮೃತಪ್ರಾಯವಾಗುತ್ತದೆ. ಸರ್ವೋದಯ ಸಿದ್ಧಾಂತಕ್ಕೆ ಭವಿಷ್ಯದೃಷ್ಟಿಯಿಲ್ಲ. ಗಾಂಧೀ ಕಲ್ಪನೆಯ ಸಮಾಜವಾದ ಹೇಗೆ ಅತ್ಯಂತ ಧಾರ್ಮಿಕ ಸಮಾಜವಾದೀತು ಎಂದು ನನಗಂತೂ ಅರ್ಥವಾಗುತ್ತಿಲ್ಲ. ಬಡತನ ಬಲಹೀನತೆಗಳು ಈತನಕ ಯಾವ ಉದಾತ್ತ ಧರ್ಮಕ್ಕೂ ಜನ್ಮ ನೀಡಿಲ್ಲ ಎಂಬುದು ನನ್ನ ಅಭಿಪ್ರಾಯ. ಧರ್ಮ ಹೊಟ್ಟೆ ತುಂಬಿದವರಿಗೆ ಮಾತ್ರ ಅರ್ಥವಾಗುತ್ತದೆ, ಧರ್ಮ ಮನುಷ್ಯನ ಕಟ್ಟ ಕಡೆಯ ಆಕಾಂಕ್ಷೆ. ಹಸಿದ ಹೊಟ್ಟೆಗೆ ಧರ್ಮ ಬೋಧಿಸುವುದು ನಿಜಕ್ಕೂ ಅಮಾನವೀಯ.

Comments