ವಿವಿಗಳಿಗೆ ಹಗರಣದ ಕಪ್ಪುಚುಕ್ಕಿ

ವಿವಿಗಳಿಗೆ ಹಗರಣದ ಕಪ್ಪುಚುಕ್ಕಿ

ಜ್ಞಾನವನ್ನು ಪಸರಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಾದ ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಿಗೆ ಹಗರಣಗಳ ಕಪ್ಪು ಮಸಿ ಅಂಟಿದೆ. ಸ್ವಾಯತ್ತ ಸಂಸ್ಥೆಗಳಾದರೂ ರಾಜಕೀಯ ಮರ್ಜಿಯಲ್ಲಿ ಮುಳುಗೇಳುತ್ತಿದ್ದು ಭ್ರಷ್ಟಾಚಾರದ ಕೂಪಗಳಾಗುತ್ತಿವೆ. ಅದರಲ್ಲೂ ರಾಷ್ಟ್ರಕವಿ ಕುವೆಂಪು ಹೆಸರಿನಲ್ಲಿ ಸುಂದರ ಪರಿಸರದಲ್ಲಿ ಮೈದಾಳಿರುವ ಕುವೆಂಪು ವಿಶ್ವವಿದ್ಯಾನಿಲಯ ಇತ್ತೀಚೆಗೆ ಹಗರಣ, ವಿವಾದಗಳ ಕುಖ್ಯಾತಿಗೆ ಸಿಲುಕಿ ನಲುಗಿದೆ.

ಇಲ್ಲಿ ಸ್ಮಾರ್ಟ್ ಕ್ಲಾಸ್ ಕಾಮಗಾರಿಯೊಂದರಲ್ಲೇ ಬಹುಕೋಟಿ ಹಗರಣ ಬೆಳಕಿಗೆ ಬಂದಿದ್ದು, ಈ ಹಿಂದಿನ ಕುಲಪತಿ, ಕುಲ ಸಚಿವರು ಸೇರಿದಂತೆ ೫ ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಇದು ವಿವಿಯ ಪ್ರತಿಷ್ಟೆಯನ್ನೆ ಮಣ್ಣುಪಾಲು ಮಾಡಿದೆ.

‘ಸ್ಮಾರ್ಟ್ ಕ್ಲಾಸ್ ರೂಂ’ ಒದಗಿಸಲು ಸರಕಾರ ೨೦೨೨ರ ಜನವರಿ ೧೪ರಂದು ೫ ಕೋಟಿ ರೂ. ಮಂಜೂರು ಮಾಡಿತ್ತು. ಇದರಲ್ಲಿ ೪.೨೫ಕೋಟಿ ಅನುದಾನ ಎರಡು ಹಂತಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಕಾಮಗಾರಿಯನ್ನೇ ಮಾಡದೆ ಬಿಲ್ ಪಾವತಿಸಿದ್ದು, ಅನುದಾನ ದುರ್ಬಳಕೆ ಆಗಿರುವುದನ್ನು ತನಿಖಾ ಸಮಿತಿ ಧೃಢಪಡಿಸಿದೆ.

ಕುಲಪತಿ, ಕುಲಸಚಿವ ಸ್ಥಾನಕ್ಕೆ ಅರ್ಹತೆ ಆಧಾರದ ಮೇಲೆ ದಕ್ಷರನ್ನು ನೇಮಕ ಮಾಡದಿರುವುದೇ ವಿವಿಗಳ ಗುಣಮಟ್ಟ ಕುಸಿಯಲು ಕಾರಣ. ಕುಲಪತಿ ಹುದ್ದೆಗೆ ಹಣದ ಥೈಲಿಯೇ ಮಾನದಂಡ. ೨ ರಿಂದ ೫ ಕೋಟಿ ರೂ. ಗಳಿಲ್ಲದೆ ಕುಲಪತಿ ಹುದ್ದೆ ಒಲಿಯುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಣಕೊಟ್ಟು ಅಧಿಕಾರ ಖರೀದಿ ಮಾಡಿದವರಿಂದ ಸುಧಾರಣೆಯ ನಿರೀಕ್ಷೆ ಮಾಡುವುದು ಕಷ್ಟಕರ.

ಸ್ಥಳೀಯ ಸಂಸ್ಥೆಗಳಲ್ಲಿ ಇಂತಹ ಭಷ್ಟಾಚಾರ ಪ್ರಕರಣಗಳು ಯಥೇಚ್ಛವಾಗಿ ನಡೆಯುತ್ತವೆ. ಇವುಗಳ ಹಣೆಬರಹವೇ ಇಷ್ಟು ಎಂದು ಜನ ಗೊಣಗಿ ಸುಮ್ಮನಾಗುತ್ತಾರೆ. ಇಂತಹ ಹಣ ದುರ್ಬಳಕೆ ಪ್ರಕರಣಗಳು ಸರಕಾರದ ವಿವಿಧ ಇಲಾಖೆಗಳಲ್ಲೂ ಹೆಗ್ಗಿಲ್ಲದೇ ನಡೆಯುತ್ತಿದೆ. ಇಂಥ ಹಾದಿಯನ್ನೇ ನೈತಿಕ ಶಿಸ್ತು, ಶಿಕ್ಷಣ ಬೋಧಿಸುವ ಉನ್ನತ ವಿಶ್ವವಿದ್ಯಾನಿಲಯಗಳು ತುಳಿಯುತ್ತಿವೆ ಎಂದರೆ ಗತಿ ಏನು? ಕಳಂಕಿತ ವಿವಿಗಳು ಸಮಾಜಕ್ಕೆ ನೀಡುವ ಸಂದೇಶವೇನು? ಅಡ್ಡದಾರಿಯಲ್ಲಾದರೂ ದುಡ್ಡು ಗಳಿಸುವುದು ಮುಖ್ಯ ಎನ್ನುವ ಪರೋಕ್ಷ ಸಂದೇಶ ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ರವಾನೆಯಾಗುತ್ತದೆ. ಇದರಿಂದ ಭ್ರಷ್ಟಾಚಾರದ ಕೆನ್ನಾಲಿಗೆ ವಿಸ್ತರಿಸುತ್ತಾ ಹೋಗುತ್ತದೆ. ಅಂತಿಮವಾಗಿ ಕೆಟ್ಟ ಕಳಪೆ ವ್ಯವಸ್ಥೆಯೊಂದು ನಿರ್ಮಾಣವಾಗುತ್ತಿದೆ.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರಕಾರ, ವಿವಿಗಳಲ್ಲಿನ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕಿದೆ. ವಿವಿಗಳ ಪ್ರತಿಷ್ಟೆಗೆ ಹಗರಣ, ವಿವಾದಗಳ ಮಸಿ ಬಳಿಯುವವರ ವಿರುದ್ಧ ಕಠಿಣ ಕ್ರಮ ಜರುಗಿದರೆ ಮಾತ್ರ ವಿವಿಗಳು ಜ್ಞಾನ ದೇಗುಲಗಳಾಗಿ ಉಳಿಯಲು ಸಾಧ್ಯ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೮-೦೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ