ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ

ಬರಹ

ಆತ್ಮಹತ್ಯೆ
ಮಾಡಿಕೊಂಡಿದ್ದರಿಂದ ನಗೆ ಸಾಮ್ರಾಟರ alter ego ನಾಪತ್ತೆಯಾಗಿತ್ತು. ಹಲವರು ಅದು
ಯಮಧರ್ಮರಾಯನದೋ ಇಲ್ಲವೇ ಚಿತ್ರಗುಪ್ತನದೋ ಸಂದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿರಬಹುದು
ಎಂಬ ವದಂತಿಗಳನ್ನು ಹರಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸಾಮ್ರಾಟರನ್ನು ದೇವಲೋಕದಿಂದ
ಒದ್ದೋಡಿಸಿದಾಗ ಅವರು ನಗೆ ನಗಾರಿಯ ಡ್ರೈವರ್ ಸೀಟಿಗೆ ಬಂದು ಕುಳಿತು ತಮ್ಮ alter ego
ಎಲ್ಲಿ ಎಂದು ಹುಡುಕಿದರು. ಆತ ಎಲ್ಲೂ ಕಾಣಲಿಲ್ಲ. ಕಡೆಗೆ ತಮ್ಮ ಅತ್ಯಾಪ್ತ ಚೇಲ
ಕುಚೇಲನನ್ನು ಅಟ್ಟಿ ಆತನ ಇಹಪರಗಳನ್ನು ಪತ್ತೆ ಹಚ್ಚಲು ಓಡಿಸಿದರು. ಆಗ ತಿಳಿಯಿತು,
ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅವರ alter ego ಗಡದ್ದಾಗಿ ನಿದ್ದೆ
ಹೊಡೆಯುತ್ತಿದೆ ಎಂದು!
ಸಾಮ್ರಾಟರು ಆತನನ್ನು ಒದ್ದು ಎಬ್ಬಿಸಿ ಕೆಲಸಕ್ಕೆ ಅಟ್ಟಿದರು. ‘ಹೋದೆಯಾ ಪಿಶಾಚಿ ಎಂದರೆ...’ ಎಂದು ಗೊಣಗುತ್ತಾ ಆತ ಸಂದರ್ಶ ಮಾಡಿಕೊಂಡು ಬಂದಿದ್ದಾನೆ.

ನಗೆ ಸಾಮ್ರಾಟ್: ಈ ಸಂಚಿಕೆಯ ವಿಶೇಷ ಸಂದರ್ಶನದಲ್ಲಿ ನಮ್ಮೊಂದಿಗಿರುವವರು
ನಮ್ಮ ದೇಶದಲ್ಲಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ, ಬಹುಶಃ ಇಡೀ ಬ್ರಹ್ಮಾಂಡದಲ್ಲಿ ಹೆಸರು
ಮಾಡಿರುವ ಪ್ರಖ್ಯಾತ ಧರ್ಮಗುರು ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾ. ಇವರ
ಅನುಯಾಯಿಗಳು ಇವರನ್ನು ಪ್ರೀತಿಯಿಂದ ಧರ್ಮಶ್ರೀ ಎಂದು ಕರೆಯುತ್ತಾರೆ. ಇವರು ಯಾವ
ಸ್ಥಾಪಿತ ಧರ್ಮವನ್ನೂ ಬೋಧಿಸಿಲ್ಲ. ಇವರ ಬೋಧನೆಯಲ್ಲಿನ ಧರ್ಮ ಹಿಂದೂ, ಇಸ್ಲಾಂ,
ಕ್ರೈಸ್ತ ಧರ್ಮಸಾರವನ್ನೆಲ್ಲಾ ಹೊಂದಿದೆ. ಒಟ್ಟಿನಲ್ಲಿ ಹೇಳುವುದಾದರೆ ಧರ್ಮಶ್ರೀಯವರು
ಇಡೀ ಜಗತ್ತಿನ ಎಲ್ಲಾ ಧರ್ಮಗಳ ಪ್ರತಿನಿಧಿ. ಇವರೊಂದಿಗೆ ನಾವು ಇಂದು
ಚರ್ಚಿಸುತ್ತಿರುವುದು ನಮ್ಮ ದೇಶದ ಅತ್ಯಂತ ಹೆಮ್ಮೆಯ ಸಂಸ್ಥೆ ಇಸ್ರೋ ಕೈಗೊಂಡಿರುವ
ಚಂದ್ರಯಾನದ ಬಗ್ಗೆ. ಸ್ವಾಮಿಜೀ ನಿಮಗೆ ಸಂದರ್ಶನಕ್ಕೆ ಸ್ವಾಗತ.

ಧರ್ಮಶ್ರೀ: ಸಂತೋಷ. ಆದರೆ ನೀನು ಕಾರ್ಯಕ್ರಮ ಶುರು ಮಾಡುವ ಮೊದಲು ಒಂದು ಸಂಪ್ರದಾಯ ಪೂರೈಸುವುದು ಒಳಿತು... ಮರೆತೆ ಅಂತ ಕಾಣುತ್ತೆ.

(ತಾವು, ಬಹುದೊಡ್ಡ ಪತ್ರಿಕೆಯ ಸಂಪಾದಕರಾದ ನಗೆ ಸಾಮ್ರಾಟರ alter ego ಆದ ತಾವೇ
ಯಕಶ್ಚಿತ್ ಸ್ವಾಮೀಜಿಗೆ ಬಹುವಚನ ಆರೋಪಿಸಿ ಗೌರವ ಕೊಟ್ಟರೂ ಈ ಸ್ವಾಮಿಜಿ ಮುಲಾಜಿಲ್ಲದೆ
ತಮಗೆ ಏಕವಚನ ಬಳಸಿದ್ದರಿಂದ ಆಘಾತಗೊಂಡ ಸಾಮ್ರಾಟರಿಗೆ ಸ್ವಾಮಿಜಿ ಮಾತಾಡುತ್ತಿರುವುದು
ಯಾವುದರ ಬಗ್ಗೆ ಎಂಬುದು ತಿಳಿಯಲೇ ಇಲ್ಲ. ಪಕ್ಕದಲ್ಲೇ ಇದ್ದ ಸ್ವಾಮೀಜಿಯವರ ಕಿರಿಯ
ಶಿಷ್ಯ ಮೊಳಕೈಯಲ್ಲಿ ತಿವಿದು ಸ್ವಾಮೀಜಿಗಳ ಕಾಲಿಗೆರಗಬೇಕು ಎಂದು ಸನ್ನೆ ಮಾಡಿದ.
ಸಾಮ್ರಾಟರ alter egoಗೆ ಬಹು ಕೋಪ ಬಂದಿತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ, ಇರುವ
ಅಲ್ಪಸ್ವಲ್ಪ ಭಕ್ತಿಯನ್ನು ಮುಖದ ಮೇಲೆ ಪ್ರದರ್ಶಿಸುತ್ತಾ ಸ್ವಾಮಿಜಿಯ ಕಾಲಿಗೆರಗಿದರು.
ಕಾರ್ಯವಾಗಬೇಕಾದರೆ ... ಕಾಲು ಬೇಕಾದರೂ ಹಿಡಿ ಎಂದು ಹಿರಿಯ ವಿವೇಕಿಗಳು ಹೇಳಿಲ್ಲವೇ?)

ಧರ್ಮಶ್ರೀ: ಈಗ ಸಂದರ್ಶನ ಮುಂದುವರೆಸುವಂತವನಾಗು...

(ಮತ್ತೆ ತೂರಿ ಬಂದ ಏಕವಚನದಿಂದ ಅವಮಾನಿತರಾದರೂ ಸಾಮ್ರಾಟರು ಸಂದರ್ಶನ ಮುಂದುವರೆಸಿದರು...)

ನ.ಸಾ: ಹ್ಹ! ಸ್ವಾಮೀಜಿ, ಭಾರತದ ವಿಜ್ಞಾನಿಗಳು ನೂರು ಚಿಲ್ಲರೆ ಕೋಟಿ ಭಾರತೀಯರು
ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದ್ದಾರೆ. ಇದುವರೆಗೂ ಮನೆಯ ಅಂಗಳದಲ್ಲಿ ಮಲಗಿ
ನೋಡುತ್ತಿದ್ದ ಚಂದಿರನನ್ನು ಇನ್ನಷ್ಟು ಹತ್ತಿರವಾಗಿಸುವ ಪ್ರಯತ್ನಕ್ಕೆ ಕೈ
ಹಾಕಿದ್ದಾರೆ. ಚಂದಿರನನ್ನು ಸಮಗ್ರವಾಗಿ, ಒಂದಿಂಚೂ ಬಿಡದೆ ಜಾಲಾಡಿ ಜ್ಞಾನ ಪಡೆಯುವ
ಪ್ರಯತ್ನ ಮಾಡುತ್ತಿದ್ದಾರೆ. ಮುಂದೊಂದು ದಿನ ಮನೆಯ ಅಂಗಳದಲ್ಲಿ ಕುಳಿತು ಚಂದ್ರನ
ನೋಡುತ್ತಿದ್ದವರನ್ನು ಎತ್ತಿಕೊಂಡು ಹೋಗಿ ಚಂದ್ರನ ಮೇಲೆ ಇಳಿಸಿ ಅಲ್ಲಿಂದ ಭೂಮಿಯನ್ನು
ತೋರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದಕ್ಕೆ ಸುಂದರವಾದ ಹೆಸರನ್ನೂ
ಕೊಟ್ಟಿದ್ದಾರೆ, ‘ಚಂದ್ರಯಾನ’ ಅಂತ. ಇದರ ಬಗ್ಗೆ ಏನನ್ನುತ್ತೀರಿ?

hand-your-destiny-over-to-the-swami-conversational-robot_48

ಧರ್ಮಶ್ರೀ: ನೋಡಿ, ಈ ಮಾನವ ಜನುಮವೆಂಬುದು ನಶ್ವರ. ಈ ದೇಹ ನಶ್ವರ, ಈ ಮನಸ್ಸು
ನಶ್ವರ, ಈ ಬುದ್ಧಿ ನಶ್ವರ. ನಮ್ಮ ಕನಸು, ಆಕಾಂಕ್ಷೆ, ಪ್ರಯತ್ನಗಳೆವೂ ನಶ್ವರ. ಯಾವುದೂ
ಶಾಶ್ವತವಲ್ಲ, ಆತ್ಮವೊಂದರ ಹೊರತು. ಇಡೀ ವಿಶ್ವವೇ ಬಹುದೊಡ್ದ ಮಾಯೆ. ಈ ಮಾಯೆಯಲ್ಲಿ
ಬಂಧಿತರಾದ ನರಪ್ರಾಣಿಗಳೆಲ್ಲವೂ ಈ ಜಗತ್ತನ್ನು ಸತ್ಯ ಎಂದು ಭಾವಿಸುತ್ತವೆ. ತಾವು
ನೋಡುತ್ತಿರುವುದು ಮಾಯೆಯನ್ನು ಎಂಬುದನ್ನು ಅರಿಯದೆ ಅಜ್ಞಾನಕ್ಕೊಳಗಾಗಿ ಸಂಸಾರ
ಸಾಗರದಲ್ಲಿ ಮುಳುಗಿ ಹೋಗುತ್ತಾರೆ. ಐಹಿಕ ಸುಖಭೋಗಗಳಲ್ಲಿ ತೇಲುತ್ತಾ ಮುಳುಗುತ್ತಾ
ಲೋಲುಪರಾಗಿ ಕಾಲ ಕಳೆಯುತ್ತಾರೆ. ಆತ್ಮವೊಂದೇ ಸತ್ಯ, ಅದೊಂದೇ ನಿತ್ಯ ಎಂಬುದನ್ನು
ಅರಿಯದೆ ನರಳುತ್ತಾರೆ. ದೇಹವನ್ನು, ಮನಸ್ಸನ್ನು, ಬುದ್ಧಿಯನ್ನು ಪೋಷಿಸುತ್ತಾ,
ಅವುಗಳಿಗೆ ಸುಖವನ್ನು ಧಾರೆಯೆರೆಯುವುದರಲ್ಲೇ ತಲ್ಲೀನರಾಗಿ ತಮ್ಮ ಆತ್ಮವನ್ನು
ಪರಮಾತ್ಮನಲ್ಲಿ ಸೇರಿಸಬೇಕೆಂಬ ಹಂಬಲವನ್ನು ತೊರೆದುಬಿಡುತ್ತಾರೆ. ಪ್ರಾಪಂಚಿಕ ಸುಖ,
ಭೋಗಗಳಲ್ಲಿ ಮುಳುಗಿ ಹೋಗುತ್ತಾರೆ...

ನ.ಸಾ: (ತಲೆ ಕೆರೆದುಕೊಂಡು, ಪ್ಯಾದೆ ನಗು ನಗುತ್ತಾ...) ಕ್ಷಮಿಸಿ
ಸ್ವಾಮೀಜಿ, ನೀವು ನಿಮ್ಮ ಸಾಯಂಕಾಲದ ಉಪನ್ಯಾಸವನ್ನು ಈಗಲೇ ಶುರು ಮಾಡಿದಂತಿದೆ... ನಾನು
ಕೇಳಿದ್ದು ಇಸ್ರೋದ ವಿಜ್ಞಾನಿಗಳು ಕೈಗೊಂಡಿರುವ ಚಂದ್ರಯಾನದ ಬಗ್ಗೆ ನಿಮ್ಮ
ಅಭಿಪ್ರಾಯವೇನು ಎಂದು...

ಧರ್ಮಶ್ರೀ: ನಿನ್ನಂತಹ ಅವಿವೇಕಿಗೆ ಮಾತ್ರ ಇಷ್ಟು ಅವಸರ ಇರುವುದಕ್ಕೆ ಸಾಧ್ಯ. ನಾವು
ನಿನ್ನ ಪ್ರಶ್ನೆಯನ್ನು ಸರಿಯಾಗಿಯೇ ಕೇಳಿಸಿಕೊಂಡಿದ್ದೇವೆ. ನಮ್ಮನ್ನು ಲೇವಡಿ ಮಾಡುವ
ಧಾರ್ಷ್ಟ್ಯವನ್ನು ತೋರಬೇಡ. ನಾವು ಹೇಳುವುದನ್ನು ಸುಮ್ಮನೆ ಕೇಳಬೇಕು. ನಾವು ಮಾತು
ಮುಗಿಸಿ ಪ್ರಶ್ನೆ ಕೇಳಲು ಅವಕಾಶ ಕೊಟ್ಟಾಗ ಮಾತ್ರ ಪ್ರಶ್ನಿಸಬೇಕು. ನಾವು ಹೇಳುವುದನ್ನು
ಕೇಳಿ ಬರೆಯುವುದಕ್ಕಾಗಿಯೇ ಸಂದರ್ಶನ ನಡೆಸುವುದು. ಕರಣ್ ಥಾಪರ್ ನಂತಹ ಅನನುಭವಿ,
ಅವಿವೇಕಿಯಂತೆ ವರ್ತಿಸಬೇಡ. ನೀವು ಕೇಳಿದ್ದಕ್ಕೆಲ್ಲಾ ಉತ್ತರಿಸುವುದು ನಮ್ಮ ಕೆಲಸವಲ್ಲ.
ನಾವು ಹೇಳಿದ್ದನ್ನು ಕೇಳುವುದು ಮಾತ್ರ ಸಂದರ್ಶಕನಾದ ನಿನ್ನ ಕೆಲಸ ತಿಳಿಯಿತೋ?

ನ.ಸಾ: (ಜೀವವನ್ನು ಅಂಗೈಯಲ್ಲಿರಿಸಿಕೊಂಡು) ಕ್ಷಮಿಸಬೇಕು ಮಹಾ ಸ್ವಾಮಿ... ಮಹಾ ಪ್ರಮಾದವಾಯ್ತು... (ಮತ್ತೊಮ್ಮೆ ಕಾರ್ಯ ಸಾಧಿಸಲು... ಕಾಲು ಹಿಡಿ ತತ್ವ ಪ್ರತಿಪಾದನೆ)

ಧರ್ಮಶ್ರೀ: ಇರಲಿ ಏಳು ಮಗು... ತಪ್ಪು ಮಾಡುವುದು ಸಹಜ. ನಮ್ಮಂತಹ ಹಿರಿಯರು,
ಶಾಸ್ತ್ರ ಸಂಪನ್ನರು, ವಿವೇಕಿಗಳು ತಿದ್ದಿದಾಗ ವಿನಯದಿಂದ ತಲೆಬಾಗಿ ಒಪ್ಪುವುದು ವಿವೇಕ.
ನೀನು ಅಂಥ ವಿವೇಕಿಯಾಗು ಇಲ್ಲವಾದರೆ ಅವಿವೇಕಿ ಸಲ್ಮಾನ್ ರಶ್ದಿಯ ಹಾಗೆ
ಭೂಗತನಾಗಬೇಕಾಗುತ್ತದೆ.
ಇರಲಿ, ನಿನ್ನ ಪ್ರಶ್ನೆಗೆ ಉತ್ತರಿಸುತ್ತೇವೆ. ನೋಡು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ,
ಶಾಸ್ತ್ರಗಳಲ್ಲಿ ಎಲ್ಲವನ್ನೂ ಹೇಳಿಯಾಗಿದೆ. ಕುರಾನ್ ಸಾಕ್ಷಾತ್ ಭಗವಂತನ ವಾಣಿ. ವೇದಗಳು
ಅಮಾನುಷೇಯ. ಗೀತೆ ಸಾಕ್ಷಾತ್ ಶ್ರೀಕೃಷ್ಣನ ಬಾಯಿಂದ ಬಂದದ್ದು. ಬೈಬಲು ಆ ಪಿತನ ಸಂದೇಶ.
ಇಡೀ ಜಗತ್ತನ್ನೇ ಸೃಷ್ಠಿ ಮಾಡಿದ ಭಗವಂತನೇ ಹೇಳಿದ ಸತ್ಯಗಳು ಇವುಗಳಲ್ಲಿವೆ. ಇಡೀ
ವಿಶ್ವದ ರಹಸ್ಯವನ್ನು ಭಗವಂತ ನಮಗೆ ಇವುಗಳ ಮುಖಾಂತರ ಕೊಟ್ಟಿದ್ದಾನೆ. ಸೂರ್ಯ
ಹೇಗಿದ್ದಾನೆ, ಚಂದ್ರ ಹೇಗಿದ್ದಾನೆ, ನಕ್ಷತ್ರಗಳು ಹೇಗಿವೆ ಎಂಬುದನ್ನೆಲ್ಲಾ ನಮಗೆ
ಭಗವಂತನೇ ಹೇಳಿಯಾಗಿದೆ. ಸೃಷ್ಟಿ ನಡೆದದ್ದು ಹೇಗೆ ಎಂದು ಸಾಕ್ಷಾತ್ ಸೃಷ್ಟಿಕರ್ತನೇ
ಹೇಳಿರುವಾಗ ಇನ್ನ್ಯಾರದೋ ಮಾತನ್ನು ಕೇಳುವುದು ಉದ್ಧಟತನವಲ್ಲವೇ? ಜನ್ಮ ನೀಡಿದ
ಭಗವಂತನಿಗೆ ಎಸಗುವ ಮೋಸವಲ್ಲವೇ? ಹುಟ್ಟಿಸಿದ ತಂದೆಯನ್ನೇ ಪ್ರಶ್ನಿಸುವ, ಸಂಶಯಿಸುವ ಮಗ
ಬದುಕಿದರೆಷ್ಟು, ಸತ್ತರೆಷ್ಟು? ಅಲ್ಲವೇನಯ್ಯ?

ನ.ಸಾ: ಹಾಗಲ್ಲ ಮಹಾಸ್ವಾಮಿ, ಧಾರ್ಮಿಕ ಗ್ರಂಥಗಳು ಭಗವಂತನಿಂದಲೇ ಬಂದದ್ದು
ಎಂಬುದಕ್ಕೆ ಸಾಕ್ಷಿಯೇ ಇಲ್ಲ ಎಂದು ಕೆಲವರು ಹೇಳುತ್ತಾರೆ. (‘ನಾನಲ್ಲ’ ಎಂಬ ಭಾವವನ್ನು
ನಟಿಸುತ್ತಾ) ಬೈಬಲ್ಲಿನಲ್ಲಿ ಹೇಳಿದ ಹಾಗೆ ಜಗತ್ತನ್ನು ಏಳು ದಿನದಲ್ಲಿ ದೇವರು ಸೃಷ್ಟಿ
ಮಾಡಿಲ್ಲ. ಮನುಷ್ಯ ಕೋತಿ,ಚಿಂಪಾಂಜಿಯಂತಹ ಪ್ರಾಣಿಗಳಿಂದ ವಿಕಾಸವಾಗಿದ್ದಾನೆ. ಹಾಗೆಯೇ
ಭೂಮಿ ಇಡೀ ವಿಶ್ವದ ಕೇಂದ್ರವಲ್ಲ. ಸೂರ್ಯ, ಚಂದ್ರರು ಭೂಮಿಯ ಸುತ್ತ ಸುತ್ತುವುದಿಲ್ಲ.
ವಿಶ್ವದಲ್ಲಿರು ಅಸಂಖ್ಯಾತ ನಕ್ಷತ್ರಗಳಲ್ಲಿ ಸೂರ್ಯ ಕೂಡ ಒಂದು. ಭೂಮಿ ಅಲ್ಲದೆ ಇತರ
ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ. ಚಂದ್ರ ಭೂಮಿಗೆ ಪ್ರದಕ್ಷಿಣೆ ಹಾಕುತ್ತದೆ.
ನಕ್ಷತ್ರಗಳು ಭೂಮಿಯನ್ನು ಪ್ರದಕ್ಷಿಣೆ ಹಾಕುವುದಿಲ್ಲ. ಹಾಗೆಯೇ ವೇದ, ಕುರಾನ್‌ಗಳಲ್ಲಿ
ಹೇಳಿದ್ದೆಲ್ಲವೂ ಸತ್ಯವಲ್ಲ ಎಂದು ಅನೇಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ...

ಧರ್ಮಶ್ರೀ: ಧರ್ಮ ದ್ರೋಹಿ! ಅಂಥ ಆರೋಪಗಳನ್ನು ಮಾಡುವವರನ್ನು ಸೈತಾನ
ಆವರಿಸಿಕೊಂಡಿರುತ್ತಾನೆ. ಅಂಥವರ ಮಾತುಗಳನ್ನು ನೀವು ನಂಬುತ್ತೀರಿ. ಇದನ್ನೇ ಮಾಯೆ ಎಂದು
ಕರೆಯುವುದು. ಮಾಯಾ ಜಿಂಕೆಯನ್ನು ಬೆನ್ನಟ್ಟಿ ಹೋಗುವವರಿಗೆ ಅದು ಅಸತ್ಯ, ಮಾಯೆ
ಎಂಬುದನ್ನು ಎಷ್ಟು ವಿವರಿಸಿದರೂ ಅರ್ಥವಾಗುವುದಿಲ್ಲ. ಅವರ ಕಣ್ಣಿಗೆ ಮಾಯಾ ಜಿಂಕೆ
ಕಾಣಿಸುತ್ತಿರುತ್ತದೆ. ಅದರ ಆಕಾರ, ರೂಪ ಎಲ್ಲವೂ ಸ್ಪಷ್ಟವಾಗಿರುತ್ತದೆ. ಅದರ
ಕೊಂಬುಗಳು, ಗೊರಸು, ಮೈ ಮೇಲಿನ ಮಚ್ಚೆ ಎಲ್ಲವನ್ನೂ ನಿಖರವಾಗಿ ಕಾಣಬಹುದು. ಹಾಗಂತ
ಅದನ್ನು ಬೆನ್ನಟ್ಟಿದರೆ ಅದೆಂದೂ ಕೈಗೆ ಸಿಕ್ಕದು. ಇದೇ ಮಾಯೆ.
ದೇವರು ಹೇಳಿದ್ದನ್ನು ಸಂಶಯಿಸುವವರು ರೌರವ ನರಕದಲ್ಲಿ ಬೇಯುತ್ತಾರೆ. ಚಾರ್ಲ್ಸ್
ಡಾರ್ವಿನ್ನನ ಗತಿಯೇನಾಯಿತು ಎಂಬುದು ನಮಗೆ ಗೊತ್ತಿದೆ. ವಿಜ್ಞಾನ ಮನುಷ್ಯನನ್ನು
ಭ್ರಷ್ಠನನ್ನಾಗಿಸುತ್ತದೆ. ಅಂತಿಮ ಸತ್ಯವಾದ ಆತ್ಮ ಸಾಕ್ಷಾತ್ಕಾರದಿಂದ ವಿಮುಖನನ್ನಾಗಿಸಿ
ಆತನನ್ನು ಇಂದ್ರಿಯ ಲೋಕದಲ್ಲಿ ಬಂಧಿಯಾಗಿಸುತ್ತದೆ. ಭೂಮಿಯನ್ನು ದಾಟಿ ಹೋಗುವ
ಸಾಮರ್ಥ್ಯವಿಲ್ಲದ ಮನುಷ್ಯ ಅದು ಹೇಗೆ ಸೂರ್ಯ, ನಕ್ಷತ್ರಗಳು ಭೂಮಿಯ ಸುತ್ತ
ಸುತ್ತುವುದಿಲ್ಲ ಎಂದು ವಾದಿಸುತ್ತಾರೆ? ಜೀವ ಎಂದರೇನು ಎಂದು ಅರ್ಥ ಮಾಡಿಕೊಳ್ಳಲಾಗದ
ಜೀವ ವಿಜ್ಞಾನಿ, ಒಂದು ಕೀಟಕ್ಕೆ ಜೀವ ಕೊಡುವ ತ್ರಾಣವಿಲ್ಲದ ತಜ್ಞ ಸೃಷ್ಟಿ ನಡೆದದ್ದು
ವಿಕಾಸವಾದದಿಂದ ಎಂದು ಹೇಗೆ ಹೇಳಬಲ್ಲ? ಇಡೀ ವಿಶ್ವವನ್ನು ನಿರ್ಮಿಸಿದವ, ಪ್ರತಿಯೊಂದು
ಜೀವಿಗೂ ಜೀವವನ್ನು ಕೊಡುವ ಆ ಭಗವಂತ ಹೇಳಿದ್ದಕ್ಕಿಂತ ಈ ಅಶಕ್ತ ಹುಲು ಮಾನವರು
ಹೇಳಿದ್ದು ಹೆಚ್ಚಾಗುತ್ತದೆ ನಿಮಗೆ. ಇದೇ ಮಾಯೆ.

ನ.ಸಾ: ಅಲ್ಲ.. ಹಾಗಲ್ಲ! ವಿಜ್ಞಾನಿಗಳು ಪ್ರಯೋಗಳನ್ನ ಮಾಡಿ ಹೇಳಿದ್ದಾರೆ...

ಧರ್ಮಶ್ರೀ: ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ನಿಮ್ಮ ವಿಜ್ಞಾನಿಗಳು
ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲದ ಸತ್ಯಗಳಿವೆ. ಈ ಜಗತ್ತಿನಲ್ಲಿ ಬಿಲಿಯನ್ ಗಟ್ಟಲೆ
ನಕ್ಷತ್ರಗಳಿವೆ ಅವುಗಳಿಗೆಲ್ಲ ಭೂಮಿಯಂತಹ ಅದೆಷ್ಟೋ ಗ್ರಹಗಳಿವೆ ಎಂದು ಹೇಳಿದರೆ ಹೇಗೆ
ನಂಬುತ್ತೀರಿ? ನೀವು ಖುದ್ದಾಗಿ ಅವನ್ನೆಲ್ಲಾ ನೋಡುವುದಿಲ್ಲ. ಯಾರೋ ಹೇಳಿದ್ದನ್ನು ಕೇಳಿ
ಹೌದೆಂದು ಒಪ್ಪಿಕೊಳ್ಳುತ್ತೀರಿ. ಆತ ಹೇಳಿದ ಮಾತನ್ನು ಪರೀಕ್ಷಿಸುವುದಕ್ಕೆ ಆತನೇ ಹೇಳಿದ
ಪ್ರಯೋಗಗಳನ್ನು ಮಾಡುತ್ತೀರಿ ಎಂಥಾ ಮೂರ್ಖರು ನೀವು! ಹೆಚ್ಚು ವಾದಿಸಲು ಬಂದರೆ
ವಿಜ್ಞಾನದ ಸಿದ್ಧಾಂತವನ್ನು ತಪ್ಪು ಎಂದು ಪ್ರಯೋಗದ ಮೂಲಕ ಸಾಬೀತು ಮಾಡಿ ಎನ್ನುತ್ತೀರಿ.
ನಾವೂ ಅದೇ ಪ್ರಶ್ನೆಯನ್ನು ಕೇಳುತ್ತೇವೆ. ನಮ್ಮ ಧಾರ್ಮಿಕ ಗ್ರಂಥಗಳು ಹೇಳಿರುವುದನ್ನು
ಒಪ್ಪಿಕೊಳ್ಳಿ, ಅವುಗಳು ಸತ್ಯ ಎನ್ನುವುದಕ್ಕೆ ನಾವು ಹೇಳಿದ ಪ್ರಯೋಗಗಳನ್ನು ಮಾಡಿ.
ನಾವು ಹೇಳಿದಂತೆ ನಡೆದುಕೊಳ್ಳಿ. ಹೆಚ್ಚು ವಾದಿಸುವ ಶಕ್ತಿಯಿದ್ದರೆ ಧಾರ್ಮಿಕ ಗ್ರಂಥಗಳು
ಹೇಳಿದ್ದನ್ನು ಅಲ್ಲಗಳೆಯಲು ಪ್ರಯೋಗಳಿಂದ ಪ್ರಯತ್ನಿಸಿ. ಉದಾಹರಣೆಗೆ ನಮ್ಮ ಗ್ರಂಥಗಳ
ಪ್ರಕಾರ ದೇವರು ಇದ್ದಾನೆ. ಆತ ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞ. ವಿಜ್ಞಾನ
ದೇವರು ಇಲ್ಲ ಎನ್ನುತ್ತದೆ. ಸಾಬೀತು ಪಡಿಸಲಿ ನೋಡೋಣ. ವಿಜ್ಞಾನದ ಪ್ರಕಾರ ಒಂದು ಪ್ರಯೋಗ
ಯಾರ ಎದುರು ಮಾಡಿದರೂ ಒಂದೇ ಫಲಿತಾಂಶ ಬರಬೇಕು. ನಾವು ಸೂಚಿಸುವ ಜನರಿಗೆ ದೇವರು ಇಲ್ಲ
ಎಂದು ಸಾಬೀತು ಪಡಿಸಿ ತೋರಿಸಲಿ ವಿಜ್ಞಾನ.
ನಾವು ಸಾವಿರಾರು ವರ್ಷಗಳಿಂದ ಕೋಟ್ಯಂತರ ಜನರಿಗೆ ದೇವರ ಇರುವಿಕೆಯನ್ನು ಸಾಬೀತು
ಮಾಡುತ್ತಾ ಬಂದಿದ್ದೇವೆ. ಜಗತ್ತಿನಲ್ಲಿ ಇಷ್ಟು ಧರ್ಮಗಳಿರುವುದಕ್ಕೆ, ಇಷ್ಟು ಧರ್ಮೀಯರು
ಇರುವುದೇ ಇದಕ್ಕೆ ಸಾಕ್ಷಿ... ನೋಡಿ ನೀವು ವಿಜ್ಞಾನಿಗಳು ಎಷ್ಟು ಮಂದಿಗೆ ದೇವರು ಇಲ್ಲ
ಎಂದು ಸಾಬೀತು ಮಾಡಿ ತೋರಿಸಿದ್ದೀರಿ? ಜಗತ್ತಿನಲ್ಲಿ ಯಾರು ಮೆಜಾರಿಟಿ ಇರುವವರು?
ದೇವರನ್ನು ನಂಬುವವರೋ ಅಥವಾ ನಂಬದವರೋ? ಉತ್ತರಿಸಿ...

ನ.ಸಾ: .... ಉಂ, ಅದೂ... ದೇವರನ್ನು ನಂಬುವವರೇ ಹೆಚ್ಚು ಮಂದಿಯಿದ್ದಾರೆ... ಆದರೆ...

(ಮುಂದುವರೆಯುವುದು...)